Advertisement

ಸಹಜ ಸ್ಥಿತಿಗೆ ಪಾದರಾಯನಪುರ ಮರಳುವುದೆಂದು?

01:30 PM May 08, 2020 | Suhan S |

ತರಕಾರಿ, ಹಣ್ಣು, ಪ್ಲಾಸ್ಟಿಕ್‌ ವಸ್ತು, ಬಟ್ಟೆ ವ್ಯಾಪಾರ, ತಳ್ಳುಗಾಡಿ, ಬೀದಿಬದಿ ವ್ಯಾಪಾರ, ಮಾಂಸ-ಮೀನು ಮಾರಾಟ, ಆಟೋ ಚಾಲನೆ ಪಾದರಾಯನಪುರದ ಬಹಳಷ್ಟು ಮಂದಿಯ ಜೀವನೋಪಾಯವಾಗಿದೆ. ಗುಜರಿ ವ್ಯಾಪಾರ, ಕಾರು ಇತರೆ ವಾಹನ ಬಿಡಿ ಭಾಗಗಳು ಸೇರಿದಂತೆ ಹತ್ತುಹಲವು ಆರ್ಥಿಕ ಚಟುವಟಿಕೆ ಇಲ್ಲಿ ನಡೆಯುತ್ತದೆ. ಸೀಲ್‌ಡೌನ್‌ ಆಗಿರುವ ಪಾದರಾಯನಪುರದ ಜನ, ಮನೆ ಬಿಟ್ಟು ಹೊರ ಹೋಗುವಂತಿಲ್ಲ ಹಾಗೆಯೇ ಬೇರೆ ಪ್ರದೇಶದವರು ಪ್ರವೇಶಿಸುವಂತಿಲ್ಲ. ಹೀಗಾಗಿ ಆರ್ಥಿಕ ಚಟುವಟಿಕೆಯಲ್ಲಿ ಏರುಪೇರಾಗಿದೆ. ಮುಂದೆ ಸೀಲ್‌ಡೌನ್‌ ಮುಕ್ತವಾದ ಬಳಿಕ ಕಾರ್ಯ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳುವುದೇ ಎಂಬ ಪ್ರಶ್ನೆ ಮೂಡಿದೆ.

Advertisement

ಬೆಂಗಳೂರು: ಪಾದರಾಯನಪುರದಲ್ಲಿ ಶ್ರಮಿಕ ವರ್ಗವೇ ದೊಡ್ಡ ಸಂಖ್ಯೆಯಲ್ಲಿದ್ದು, ಪ್ರತಿದಿನದ ದುಡಿಮೆಯ ಗಳಿಕೆಯೇ ಜೀವನಕ್ಕೆ ಆಧಾರವಾಗಿರುವ ಕುಟುಂಬಗಳೇ ಹೆಚ್ಚಿನ ಪ್ರಮಾಣದಲ್ಲಿವೆ. ಸದ್ಯ ಪಾದರಾಯನಪುರ ವಾರ್ಡ್‌ ಸೀಲ್‌ಡೌನ್‌ ಆಗಿದ್ದು, ಸ್ಥಳೀಯರು ಗೃಹ ಬಂಧನದಲ್ಲಿದ್ದರೆ, ಇಲ್ಲಿನ ಜನರನ್ನೇ ಅವಲಂಬಿಸಿದ್ದ ಹಲವು ಆರ್ಥಿಕ ಚಟುವಟಿಕೆಯಲ್ಲಿ ವ್ಯತ್ಯಯವಾಗಿದೆ. ನಿರ್ಬಂಧದ ನಡುವೆ ಜನಜೀವನ ನಡೆಸುವುದು ಕಷ್ಟವಾಗುತ್ತಿದೆ. ದಿನಗೂಲಿಗೆ ಕೆಲಸ ಮಾಡುವವರಿಗೆ ಜೀವನ ಬೀದಿಗೆ ಬಂದಿದೆ.

ಮಾರುಕಟ್ಟೆಯಲ್ಲಿ ದುಡಿಮೆ :  ಪಾದರಾಯನಪುರದ ಬಹಳಷ್ಟು ಮಂದಿ ಕೆ.ಆರ್‌.ಮಾರುಕಟ್ಟೆಯಲ್ಲಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಹೂವು, ಹಣ್ಣು, ತರಕಾರಿ, ದಿನಸಿ ಪದಾರ್ಥ ಮಾರಾಟ ಮಳಿಗೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬೀದಿಬದಿ ವ್ಯಾಪಾರಿಗಳಲ್ಲೂ ಪಾದರಾಯನಪುರದವರೇ ಹೆಚ್ಚು. ಪಕ್ಕದಲ್ಲೇ ಇರುವ ಪಾಲಿಕೆ ಮಾಂಸದ ಮಾರುಕಟ್ಟೆಯಲ್ಲಿ ಶೇ. 50ಕ್ಕೂ ಹೆಚ್ಚು ಮಂದಿ ಕೆಲಸಗಾರರು ಇಲ್ಲಿಯವರು. ಸೀಲ್‌ಡೌನ್‌ನಿಂದಾಗಿ ಮಾರುಕಟ್ಟೆಗೆ ಸುಳಿಯಂದಾತಾಗಿದೆ ಎನ್ನುತ್ತಾರೆ ಸ್ಥಳೀಯರಾದ ಎಂ.ಬಿ. ಆದಿನಾರಾಯಣ. ತರಕಾರಿ, ಹಣ್ಣು, ಮೀನು ಇತರೆ ಪದಾರ್ಥಗಳನ್ನು ತಳ್ಳುಗಾಡಿಯಲ್ಲಿ ಸುತ್ತಮುತ್ತಲ ಪ್ರದೇಶದಲ್ಲಿ ಮಾರಾಟ ಮಾಡುವುದು ಹಲವರ ನಿತ್ಯದ ಕಸುಬು. ವಿಜಯನಗರ, ಪೈಪ್‌ ಲೈನ್‌, ಹಂಪಿನಗರ, ಬಾಪೂಜಿ ನಗರ, ಹಳೆ ಗುಡ್ಡದಹಳ್ಳಿ, ಮೈಸೂರು ರಸ್ತೆ, ಮಾಗಡಿ ರಸ್ತೆ, ಹೊಸಹಳ್ಳಿ ಕಡೆಗೆ ವ್ಯಾಪಾರಕ್ಕೆ ಹೋಗಿ ಬರುತ್ತಿದ್ದರು. ಇದೀಗ ಅವರ ಕೈಗಳಿಗೆ ಕೆಲಸ ಇಲ್ಲದಂತಾಗಿದೆ.

ಆಟೋ ಚಾಲನೆ :  ನೂರಾರು ಮಂದಿ ಆಟೋ ಚಾಲನೆ ನೆಚ್ಚಿಕೊಂಡವರಿದ್ದಾರೆ. ಇದರಲ್ಲಿ ಬಹುಪಾಲು ಮಂದಿ ಬೇರೆ ಪ್ರದೇಶಗಳಿಗೆ ಬಾಡಿಗೆ ಹೋಗುವುದು ಕಡಿಮೆ. ಬಹುತೇಕ ಆಟೋಗಳು ಪಾದರಾಯನಪುರದಿಂದ ಕೆ.ಆರ್‌. ಮಾರುಕಟ್ಟೆ ನಡುವೆಯೇ ಪ್ರಯಾಣಿಕರನ್ನು ಕರೆದೊಯ್ಯುತ್ತವೆ. ಇದಕ್ಕೆ ಮೀಟರ್‌ ಹಾಕುವುದಿಲ್ಲ. ಬದಲಿಗೆ 10 ಇಲ್ಲವೇ 15 ರೂ. ಪಡೆಯುತ್ತಾರೆ. ಸದ್ಯ ಆಟೋಗಳ ಸದ್ದು ಪಾದರಾಯನಪುರದಲ್ಲಿ ಕೇಳದಂತಾಗಿದೆ. ಜೆ.ಸಿ. ರಸ್ತೆಯಲ್ಲಿನ ಕಾರು ಇತರೆ ವಾಹನಗಳ ಬಿಡಿ ಭಾಗ, ಆಕ್ಸೆಸರಿಗಳು, ಟೈರ್‌ ಇತರೆ ವಸ್ತುಗಳ ಮಾರಾಟ ಮಳಿಗೆಗಳಲ್ಲಿ ಪಾದರಾಯನಪುರದ ಬಹಳಷ್ಟು ಯುವಕರು ಕೆಲಸ ಮಾಡುತ್ತಿದ್ದಾರೆ. ಗ್ಯಾರೇಜ್‌ಗಳಲ್ಲೂ ದುಡಿಯುತ್ತಿದ್ದಾರೆ.

ಸೆಕೆಂಡ್ಸ್‌ ಕಾರು, ದ್ವಿಚಕ್ರ ವಾಹನ ಮಾರಾಟ ಮಳಿಗೆಗಳಲ್ಲಿ ಕೆಲಸದಲ್ಲಿದ್ದಾರೆ. ಎಸ್‌ಜೆಪಿ ರಸ್ತೆಯಲ್ಲಿರುವ ಮೊಬೈಲ್‌, ಎಲೆಕ್ಟ್ರಾನಿಕ್‌ ವಸ್ತುಗಳ ಮಾರಾಟ, ರಿಪೇರಿ ಮಳಿಗೆಗಳಲ್ಲೂ ದೊಡ್ಡ ಸಂಖ್ಯೆಯಲ್ಲಿ ಕೆಲಸಕ್ಕಿದ್ದರು. ಲಾಕ್‌ಡೌನ್‌ ಬಳಿಕ ಮತ್ತೆ ಕೆಲಸಗಳಿಗೆ ಮರಳಬಹುದು ಎನ್ನುತ್ತಾರೆ ಪಾದರಾಯನಪುರದ ಅನಿಲ್‌. ಹೋಟೆಲ್‌, ಟೀ ಅಂಗಡಿ, ದಿನಸಿ ಅಂಗಡಿಯಲ್ಲಿ ಕೆಲಸ, ಸಣ್ಣಪುಟ್ಟ ಕೈಗಾರಿಕೆಗಳಲ್ಲಿ ನೌಕರರಾಗಿ ಕೆಲಸ ಮಾಡುವವರು ಇದ್ದಾರೆ. ಹೀಗೆ ಪಾದರಾಯನಪುರದಲ್ಲಿ ನೆಲೆಸಿದ ಬಹುಪಾಲು ಜನರ ಬದುಕು ಸುತ್ತಮುತ್ತಲ ಪ್ರದೇಶದಲ್ಲಿಯೇ ಹೆಣೆದುಕೊಂಡಿದೆ. ಸೀಲ್‌ಡೌನ್‌ ಮುಗಿದ ಬಳಿಕ ಅವರ ಜೀವನ ದಲ್ಲಿ ಆರ್ಥಿಕ ಸುಧಾರಣೆ ಸಾಧ್ಯವೇ ಕಾದುನೋಡಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next