Advertisement

ಎ.ಮಂಜು ಕಾಂಗ್ರೆಸ್ ಗೆ ಬಂದರೂ ನಾವು ಸೇರಿಸಿಕೊಳ್ಳುವುದಿಲ್ಲ: ಸಿದ್ದರಾಮಯ್ಯ

01:21 PM Nov 27, 2021 | Team Udayavani |

ಮೈಸೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿರುವ ಟೆಂಡರ್ ಗಳ ಬಗ್ಗೆಯೂ ಸರ್ಕಾರ ತನಿಖೆ ನಡೆಸಲಿ. ಇದಕ್ಕೆ ನಮ್ಮ ಆಕ್ಷೇಪ ಏನನೂ ಇಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

Advertisement

ಮೈಸೂರಿನಲ್ಲಿ‌ ಇಂದು ಮಾಧ್ಯಮ ಪ್ರತಿನಿಧಿಗಳ‌ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯ ಟೆಂಡರ್ ಗಳ ಬಗ್ಗೆಯೂ ತನಿಖೆ ನಡೆಸುವ ಮುಖ್ಯಮಂತ್ರಿಗಳ ಹೇಳಿಕೆಗೆ ಪ್ರತಿಕ್ರಿಯಿಸಿದರು. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ. ಅವರು ಯಾವುದೇ ಪಕ್ಷದವರಾಗಲಿ ಎಂದರು.

ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಹೊಂದಾಣಿಕೆ ಇಲ್ಲ. ನಾವು ಯಾವ ಕ್ಷೇತ್ರದಲ್ಲೂ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ನಮ್ಮ ಬೆಂಬಲಿತರಿಗೆ ಪಕ್ಷದ ಅಭ್ಯರ್ಥಿಗೆ ಸಿಂಗಲ್ ವೋಟ್ ಹಾಕಲು ಸೂಚನೆ ಕೊಟ್ಟಿದ್ದೇನೆ. ಬಿಜೆಪಿ – ಜೆಡಿಎಸ್ ನಡುವೆ ಒಳ ಒಪ್ಪಂದ ಇದ್ದೇ ಇದೆ. ಈ ಚುನಾವಣೆಯಲ್ಲಿ ಮಾತ್ರ ಅಲ್ಲ. ವಿಧಾನಸಭೆಯ ಎರಡು ಕ್ಷೇತ್ರಗಳಿಗೆ ಇತ್ತೀಚೆಗೆ ನಡೆದ ಉಪ ಚುನಾವಣೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲೂ ಅವರಿಬ್ಬರೂ ಒಳ ಒಪ್ಪಂದ ಮಾಡಿಕೊಂಡೇ ಚುನಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ:ಲಸಿಕೆ ಹಾಕಲು ಬಂದ ಆರೋಗ್ಯ ಸಿಬ್ಬಂದಿಯನ್ನು ಕಂಡು, ಮೈಯಲ್ಲಿ ದೇವರು ಬಂದಂತೆ ನಟಿಸಿದ ಭೂಪ.!

ಬೆಳಗಾವಿ ವಿಧಾನ ಪರಿಷತ್ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಇರುವುದು ಬಿಜೆಪಿಯಲ್ಲಿ. ಅವರು ಪಕ್ಷೇತರವಾಗಿ ಕಣಕ್ಕೆ ಇಳಿದಿರೋದು ಬಿಜೆಪಿಗೆ ವ್ಯತ್ಯಾಸ ಆಗಲಿದೆ. ನಮ್ಮವರು ನಮ್ಮ ಅಭ್ಯರ್ಥಿ ಪರ ಕೆಲಸ ಮಾಡ್ತಿದ್ದಾರೆ. ಲಖನ್ ಜಾರಕಿಹೋಳಿ ಬಿಜೆಪಿಯಲ್ಲೇ ಇದ್ದವರು. ಹೀಗಾಗಿ ಗೊಂದಲ ಇರೋದು ಬಿಜೆಪಿಯಲ್ಲಿ. ಕೊಡಗಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೇ ನೇರ ಹಣಾಹಣಿ ಇದೆ. ನಾವು ಕಳೆದ ಬಾರಿ ಅಲ್ಪ ಮತದಿಂದ ಸೋತಿದ್ದೇವೆ. ಈ ಬಾರಿ ನಮ್ಮ ಅಭ್ಯರ್ಥಿ ಗೆಲ್ಲಿಸಲು ಎಲ್ಲ ಪ್ರಯತ್ನ ಮಾಡುತ್ತೇವೆ ಎಂದರು.

Advertisement

ಮಾಜಿ ಸಚಿವ ಎ.ಮಂಜು ಕಾಂಗ್ರೆಸ್ ಸೇರಲ್ಲ‌. ಅವರು ಕಾಂಗ್ರೆಸ್‌ಗೆ ಬರುವುದಾಗಿಯೂ ಕೇಳಿಲ್ಲ. ಬಂದರೂ ನಾವು ಸೇರಿಸಿಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಸರ್ಕಾರ ವಜಾ ಮಾಡಲಿ: ರಾಜ್ಯ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಪ್ರಧಾನಿ ಮೋದಿ ಪ್ರಾಮಾಣಿಕರಾಗಿದ್ದರೆ ಸರ್ಕಾರ ವಜಾ ಮಾಡಲಿ. ಗುತ್ತಿಗೆದಾರರ ಸಂಘದವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮುಖ್ಯ ಕಾರ್ಯದರ್ಶಿ ತನಿಖೆಗೆ ಆದೇಶ ಮಾಡಿದ್ದಾರೆ. ಆದರೆ ಯಾವ ಇಲಾಖೆ ವಿರುದ್ದ ಭ್ರಷ್ಟಾಚಾರದ ಆರೋಪ ಇದೆಯೋ ಅದೇ ಇಲಾಖೆಯ ಅಧಿಕಾರಿಗಳನ್ನು ತನಿಖೆಗೆ ನೇಮಿಸಿದರೆ ಹೇಗೆ? ಇದರಿಂದ ಸತ್ಯ ಹೊರಬರಲು ಸಾಧ್ಯವೆ? ಆದ್ದರಿಂದ ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿದ್ದೇವೆ ಎಂದರು.

ಒಂದು ಲಕ್ಷ ಗುತ್ತಿಗೆದಾರರು ಸದಸ್ಯರಾಗಿರುವ ಸಂಘದವರು ಪತ್ರ ಬರೆದಿದ್ದಾರೆ. ಸಂಘದ ಅಧ್ಯಕ್ಷ‌ ಕೆಂಪಣ್ಣ ಸುದ್ದಿಗೋಷ್ಠಿ ನಡೆಸಿ ಈ ಹೇಳಿಕೆ ಕೊಟ್ಟಿದ್ದಾರೆ. ಕೆಂಪಣ್ಣನವರ ಆರೋಪ ಸತ್ಯ. 35 ರಿಂದ 40 ಪರ್ಸೆಂಟ್ ಸರ್ಕಾರ ಇದು. ಸಚಿವರು, ಶಾಸಕರು, ಸಂಸದರು ಪರ್ಸೆಂಟೆಜ್ ತೆಗೆದುಕೊಂಡಿದ್ದಾರೆ. ಕೆಂಪಣ್ಣ ಅವರು ಕೊಟ್ಟಿರುವ ಹೇಳಿಕೆಯನ್ನು ಆಧರಿಸಿ ನಾನು ರಾಜ್ಯಪಾಲರಿಗೆ ಕೊಟ್ಟಿದ್ದೇನೆ. ಮೊದಲು ಈ ಸರ್ಕಾರ ವಜಾ ಮಾಡಿ ಅಂತ ಪ್ರಧಾನಿಗೆ ಆಗ್ರಹ ಮಾಡುತ್ತೇನೆ. ಪರ್ಸೆಂಟೆಜ್ ಏನು ತೆಗೆದುಕೊಂಡಿಲ್ಲ ಅಂತ ಸರ್ಕಾರ ಹೇಳುವುದಾರೆ ಕಾರ್ಯದರ್ಶಿ ಬಳಿ ತನಿಖೆ ಮಾಡಿಸುವುದಾಗಿ ಸಿಎಂ ಏಕೆ ಹೇಳಬೇಕಿತ್ತು ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next