ಶಿಡ್ಲಘಟ್ಟ: ರೇಷ್ಮೆ ನಗರ ಶಿಡ್ಲಘಟ್ಟ ಕ್ಷೇತ್ರದಲ್ಲಿ ಚುನಾವಣ ಕಾವು ದಿನೇ ದಿನೆ ಏರುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿ ಆಗಲು ಪೈಪೋಟಿ ನಡೆಯುತ್ತಿದೆ. ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಬಯಸಿ ಶಾಸಕ ವಿ. ಮುನಿಯಪ್ಪ, ಭೂ ಅಭಿವೃದ್ಧಿ ಬ್ಯಾಂಕ್‌ನ ನಿರ್ದೇಶಕ ದೊಗರನಾಯಕನಹಳ್ಳಿ ವೆಂಕಟೇಶ್, ಎಸ್‌ಎನ್ ಕ್ರಿಯಾ ಟ್ರಸ್ಟ್‌ನ ಅಧ್ಯಕ್ಷ ಆಂಜಿನಪ್ಪ (ಪುಟ್ಟು), ಎಬಿಡಿ ಸಂಸ್ಥೆಯ ಅಧ್ಯಕ್ಷ ರಾಜೀವ್‌ಗೌಡ ಅವರು ಈಗಾಗಲೇ ಕೆಪಿಸಿಸಿ ಕಚೇರಿಗೆ ಅರ್ಜಿ ಸಲ್ಲಿಸಿ ಕ್ಷೇತ್ರಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ಮಧ್ಯೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಬದಲಿಗೆ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಿದರೂ ಅವರು ಸ್ಪರ್ಧಿಸಲು ಲೆಕ್ಕಾಚಾರ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕೊರೊನಾ ಸೋಂಕಿನ ಪ್ರಭಾವದಿಂದ ಸಂಕಷ್ಟದ ಅವ ಧಿಯಲ್ಲಿ ಜನರಿಗೆ ಆಹಾರದ ಸಾಮಗ್ರಿಗಳು ಮತ್ತು ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಿ ಕ್ಷೇತ್ರದ ಜನರ ವಿಶ್ವಾಸ ಗಳಿಸಲು ಪ್ರಯತ್ನ ಮಾಡಿರುವ ಎಬಿಡಿ ಸಂಸ್ಥೆಯ ಅಧ್ಯಕ್ಷ ರಾಜೀವ್ ಗೌಡ, ಎಸ್‌ಎನ್ ಕ್ರಿಯಾ ಟ್ರಸ್ಟ್‌ನ ಅಧ್ಯಕ್ಷ ಆಂಜಿನಪ್ಪ ಪುಟ್ಟು ಅವರು ತಮ್ಮ ರಾಜಕೀಯ ಗಾಡ್ ಫಾದರ್‌ಗಳ ಮೂಲಕ ಟಿಕೆಟ್ ಪಡೆಯಲು ಕಸರತ್ತು ಮಾಡುತ್ತಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರು ನೇರವಾಗಿ ಎಬಿಡಿ ಸಂಸ್ಥೆ ಅಧ್ಯಕ್ಷ ರಾಜೀವ್‌ಗೌಡ ಅವರ ಪರವಾಗಿ ಬ್ಯಾಟಿಂಗ್ ಮಾಡಿ, ಸ್ಕ್ರೀನಿಂಗ್ ಸಮಿತಿ ಅಧ್ಯಕ್ಷರನ್ನು ಭೇಟಿ ಮಾಡಿ ಕಾಂಗ್ರೆಸ್ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ. ಮತ್ತೂಂದೆಡೆ ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಡಾ| ಎಂ.ಸಿ.ಸುಧಾಕರ್ ಅವರು ಹಾಗೂ ಬ್ಯಾಟರಾಯ ನಪುರ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣಬೈರೇಗೌಡ ಅವರು ಎಸ್‌ಎನ್ ಕ್ರಿಯಾ ಟ್ರಸ್ಟ್‌ನ ಅಧ್ಯಕ್ಷ ಆಂಜಿನಪ್ಪ ಪುಟ್ಟು ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಹೀಗಾಗಿ ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನಡೆಯುತ್ತಿದ್ದು, ಕಾರ್ಯಕರ್ತರು ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಗೊಂದಲದಲ್ಲಿ ಇದ್ದಾರೆ. ಕೊನೆ ಗಳಿಗೆಯಲ್ಲಿ ಹಾಲಿ ಶಾಸಕ ವಿ.ಮುನಿಯಪ್ಪ ಅವರು ಒಂದು ವೇಳೆ ತಮಗೆ ಟಿಕೆಟ್ ಸಿಗದಿದ್ದರೆ ತಮ್ಮ ಪುತ್ರ ಶಶಿಧರ್ ಮುನಿಯಪ್ಪಗೆ ಕೊಡಿಸಲು ತೀವ್ರ ಕಸರತ್ತು ನಡೆಸುವ ಸಾಧ್ಯತೆ ಇದೆ.
ಜೆಡಿಎಸ್‌ನಲ್ಲಿ ಪೈಪೋಟಿ ಇಲ್ಲ: ಇನ್ನು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಮೇಲೂರು ರವಿಕುಮಾರ್ ಅವರನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆಯ ವೇಳೆಯಲ್ಲಿ ಘೋಷಣೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಮೇಲೂರು ರವಿಕುಮಾರ್ ಅವರು ಚುನಾವಣ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿದೆ.
ಬಿಜೆಪಿ ಟಿಕೆಟ್‌ಗೆ ತೀವ್ರ ಪೈಪೋಟಿ: ಶಿಡ್ಲಘಟ್ಟ ಕ್ಷೇತ್ರದಲ್ಲಿ ಮಾಜಿ ಶಾಸಕ ಎಂ.ರಾಜಣ್ಣ, ಉದ್ಯಮಿ ಹಾಗೂ ಸಮಾಜ ಸೇವಕ ಸೀಕಲ್ ರಾಮಚಂದ್ರಗೌಡ ಅವರ ನಡುವೆ ಬಿಜೆಪಿ ಟಿಕೆಟ್‌ಗಾಗಿ ತೆರೆಮರೆ ಯಲ್ಲಿ ಪೈಪೋಟಿ ನಡೆಯುತ್ತಿದೆ. ಕ್ಷೇತ್ರದಲ್ಲಿ ಹಿಡಿತ ಸಾಧಿ ಸಿರುವ ಮಾಜಿ ಶಾಸಕ ರಾಜಣ್ಣ ಅವರು, ಈ ಬಾರಿ ಆರೋಗ್ಯ ಸಚಿವ ಡಾ| ಕೆ.ಸುಧಾಕರ್ ಅವರ ಕೃಪಾಶೀರ್ವಾದದಿಂದ ಬಿಜೆಪಿ ಟಿಕೆಟ್ ದೊರೆಯಲಿದೆ ಎಂದು ವಿಶ್ವಾಸ ಹೊಂದಿದ್ದಾರೆ. ಮತ್ತೂಂದೆಡೆ ಅಲ್ಪಾವಧಿಯಲ್ಲಿ ಕ್ಷೇತ್ರದ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಮತ್ತು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿಸಿರುವ ಸೀಕಲ್ ರಾಮಚಂದ್ರ ಗೌಡ ಅವರು ಸಹ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಏನೇ ಆದರೂ ಇಬ್ಬರೂ ನಾಯಕರು ಸಂಘಟಿತರಾಗಿ ಕ್ಷೇತ್ರದಲ್ಲಿ ಬಿಜೆಪಿ ಕಟ್ಟುವ ಕಾರ್ಯದಲ್ಲಿ ತೊಡಗಿದ್ದಾರೆ. ಇದರಿಂದ ಕಾಂಗ್ರೆಸ್- ಜೆಡಿಎಸ್ ಪಾಳಯದಲ್ಲಿ ಕೊಂಚ ಮಟ್ಟದಲ್ಲಿ ನಡುಕ ಸೃಷ್ಟಿಸಿದೆ.
ಕಾಂಗ್ರೆಸ್‌ನಲ್ಲಿ ಹಾಲಿ ಶಾಸಕ ವಿ.ಮುನಿಯಪ್ಪ, ಇವರ ಪುತ್ರ ಡಾ| ಶಶಿಧರ್ ಮನಿಯಪ್ಪ ಸಹಿತ ನಾಲ್ವರು ಟಿಕೆಟ್ ಆಕಾಂಕ್ಷಿಗಳು ಇರುವ ಕಾರಣ, ಕಾರ್ಯಕರ್ತರಿಗೆ ಕ್ಷೇತ್ರದ ಪಕ್ಷದ ಅಭ್ಯರ್ಥಿ ಯಾರು ಆಗುತ್ತಾರೆ ಎಂಬ ಗೊಂದಲ ಇದೆ. ಪ್ರಚಾರ ಸಭೆ, ಸಮಾರಂಭದಲ್ಲಿ ಯಾರ ಪರ ಪ್ರಚಾರ ನಡೆಸಬೇಕು, ಮತದಾರರಿಗೆ ಯಾರ ಹೆಸರು ಹೇಳಬೇಕು ಎಂಬ ಗೊಂದಲ ಇದೆ. ಈಗಾಗಲೇ ಇತರ ಪಕ್ಷಗಳ ಅಭ್ಯರ್ಥಿಗಳು ಪ್ರಚಾರ ನಡೆಸುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಮೊದಲು ಪಕ್ಷದ ಅಭ್ಯರ್ಥಿ ಯಾರು ಎಂಬುದು ವರಿಷ್ಠರು ಸ್ಪಷ್ಟಪಡಿಸಬೇಕು ಎಂದು ಒತ್ತಡ ಹಾಕುತ್ತಿದ್ದಾರೆ. ಈ ಮಧ್ಯೆ ಬಿಜೆಪಿ, ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದು, ಹೈಕಮಾಂಡ್ ಟಿಕೆಟ್ ನೀಡಿದ್ದರೆ, ಆಪ್ ಅಥವಾ ಬಿಎಸ್‌ಪಿಯಿಂದ ಸ್ಪರ್ಧೆ ಮಾಡಲು ಯೋಜನೆ ರೂಪಿಸಿಕೊಂಡಿದ್ದಾರೆ.
ಕೊನೆ ಗಳಿಗೆಯಲ್ಲಿ “ಸಿ” ಫಾರಂ
ಶಿಡ್ಲಘಟ್ಟ ಕ್ಷೇತ್ರದ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಮಾಜಿ ಶಾಸಕ ಎಂ.ರಾಜಣ್ಣ ಹಾಗೂ ಯುವ ಮುಖಂಡ ಮೇಲೂರು ರವಿಕುಮಾರ್ ಅವರಿಗೆ ಸ್ಪರ್ಧಿಸಲು ಎರಡು ಬಾರಿ ಬಿ ಫಾರಂ ನೀಡಲಾಗಿತ್ತು. ಕೊನೆಯದಾಗಿ ಮೇಲೂರು ರವಿಕುಮಾರ್‌ಗೆ ಸಿ ಫಾರಂ ನೀಡಿ, ಅಧಿಕೃತ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು ವಿಶೇಷ.
~ ಎಂ.ಎ.ಅಬ್ದುಲ್ ವಹಾಬ್