Advertisement

Nandini ದೇಶದಲ್ಲೇ ನಂಬರ್ ಒನ್ ಬ್ರ್ಯಾಂಡ್ ಮಾಡುತ್ತೇವೆ: ಸಿಎಂ ಬೊಮ್ಮಾಯಿ

06:16 PM Apr 08, 2023 | Team Udayavani |

ನವದೆಹಲಿ: ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ನಂದಿನಿ ಬ್ರಾಂಡ್ ಅನ್ನು ಹೆಚ್ಚು ಸ್ಪರ್ಧಾತ್ಮಕವಾಗಿ ಮತ್ತು ದೇಶದಲ್ಲೇ ನಂಬರ್ ಒನ್ ಬ್ರಾಂಡ್ ಮಾಡಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಹೇಳಿದ್ದಾರೆ.ಅಮುಲ್ ತನ್ನ ಹಾಲು ಮತ್ತು ಮೊಸರನ್ನು ಕರ್ನಾಟಕದಲ್ಲಿ ಮಾರಾಟ ಮಾಡುವುದಾಗಿ ಘೋಷಿಸಿದ ಬಳಿಕ ವಿಪಕ್ಷಗಳು ಮತ್ತು ಕೆಲ ಸಂಘಟನೆಗಳಿಂದ ವಿರೋಧ ವ್ಯಕ್ತವಾದ ಬಳಿಕ ಮುಖ್ಯಮಂತ್ರಿ ಅವರ ಹೇಳಿಕೆ ನೀಡಿದ್ದಾರೆ.

Advertisement

ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ನಂದಿನಿ ಬ್ರಾಂಡ್ ಅನ್ನು ಮುಗಿಸುವ ಯತ್ನ ಸರಕಾರ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ, ‘ಕಾಂಗ್ರೆಸ್ ಈ ವಿಷಯವನ್ನು ರಾಜಕೀಯಗೊಳಿಸುತ್ತಿದೆ. ಮುಲ್ ಬ್ರಾಂಡ್ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಂದಿನಿಯನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಲು ನಾವು ಕ್ರಮಗಳನ್ನು ಪ್ರಾರಂಭಿಸುತ್ತೇವೆ. ನಂದಿನಿ ದೇಶದಲ್ಲೇ ನಂಬರ್ ಒನ್ ಬ್ರ್ಯಾಂಡ್ ಆಗಲಿದೆ’ ಎಂದರು.

ರಾಜ್ಯ ಆರೋಗ್ಯ ಸಚಿವ ಕೆ.ಸುಧಾಕರ್ ಮಾತನಾಡಿ, ಬಿಜೆಪಿ ಸರ್ಕಾರ ರಾಜ್ಯದ ಹಾಲು ಉತ್ಪಾದಕರಿಗೆ ಸಹಾಯಧನ ನೀಡಿದೆ. ರೈತರಿಗೆ ಪ್ರತಿ ಲೀಟರ್ ಹಾಲಿಗೆ 5 ರೂ.ಗಳನ್ನು ಸಬ್ಸಿಡಿಯಾಗಿ ನೀಡಿದೆ. ಕೆಎಂಎಫ್‌ನ ಆದಾಯದಿಂದ ರೈತರಿಗೆ ಪ್ರಯೋಜನಗಳನ್ನು ನೀಡುವ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ. ನಂದಿನಿ ಬ್ರಾಂಡ್ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ನಂದಿನಿ ಹಾಲನ್ನು ಸೇನೆ, ತಿರುಪತಿ, ತಿರುಮಲ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತದೆ ಎಂದರು.

“ಇತರ ಬ್ರಾಂಡ್‌ಗಳನ್ನು ರಾಜ್ಯದಲ್ಲಿ ಬಹಳ ಹಿಂದಿನಿಂದಲೂ ಮಾರಾಟ ಮಾಡಲಾಗುತ್ತಿದೆ. ಅಮುಲ್ ಬಿಜೆಪಿ ಬ್ರ್ಯಾಂಡ್, ನಂದಿನಿ ಕಾಂಗ್ರೆಸ್ ಬ್ರ್ಯಾಂಡಾ’ ಎಂದು ಸುಧಾಕರ್ ಪ್ರಶ್ನಿಸಿದ್ದಾರೆ.

ಅಮುಲ್ ಹಾಲು ಮತ್ತು ಇತರ ಉತ್ಪನ್ನಗಳ ಮಾರಾಟದ ವಿರುದ್ಧ ಕಾಂಗ್ರೆಸ್ ರಾಜ್ಯದಲ್ಲಿ ಅಭಿಯಾನವನ್ನು ಪ್ರಾರಂಭಿಸಿದ್ದು, ವಿಲೀನದ ಹೆಸರಿನಲ್ಲಿ ನಮ್ಮವರು ಕಟ್ಟಿದ ಬ್ಯಾಂಕ್‌ಗಳನ್ನು ನುಂಗಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಈಗ ಕರ್ನಾಟಕದ ರೈತರ ಜೀವನಾಡಿಯಾಗಿರುವ ನಂದಿನಿ ಬ್ರ್ಯಾಂಡ್ ಅನ್ನು ಮುಚ್ಚಲು ಮುಂದಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

Advertisement

ಅಮುಲ್ ಬ್ರಾಂಡ್ ಅನ್ನು ರಾಜ್ಯದ ಮೇಲೆ ಹೇರಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇದರ ಹಿಂದಿನ ಉದ್ದೇಶ ಗುಜರಾತ್‌ನ ಪ್ರಗತಿ ಮತ್ತು ಕರ್ನಾಟಕ ಬ್ರಾಂಡ್ ಅನ್ನು ಮುಗಿಸುವುದು ಎಂದು ಅವರು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಅಮುಲ್ ಹಾಲು ಮಾರಾಟ ಮಾಡುತ್ತಿರುವ ಕ್ರಮವನ್ನು ಜನರು ವಿರೋಧಿಸಬೇಕು ಎಂದು ಮಾಜಿ ಮುಖ್ಯಮಂತ್ರಿ  ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next