Advertisement

ದಕ್ಷಿಣ ಪದವೀಧರ ಕ್ಷೇತ್ರ ಉಳಿಸಿಕೊಳ್ಳಲಿದೆಯೇ ಜೆಡಿಎಸ್‌?

12:48 AM Jun 11, 2022 | Team Udayavani |

ಮೈಸೂರು: ಬಿಜೆಪಿಗೆ ಹೇಗಾದರೂ ಮಾಡಿ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿಸುವ ಉಮೇದು, ಜೆಡಿಎಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ಹೋರಾಟ, ಕಾಂಗ್ರೆಸ್ಸಿಗೆ ಕ್ಷೇತ್ರದಲ್ಲಿ ಗೆದ್ದು ಇತಿಹಾಸ ನಿರ್ಮಿಸುವ ತವಕ, ರೈತ ಸಂಘ, ದಲಿತ ಸಂಘರ್ಷ ಸಮಿತಿಗಳು, ಆಮ್‌ ಆದ್ಮಿ ಪಕ್ಷಕ್ಕೆ ಪರ್ಯಾಯ ರಾಜಕಾರಣದ ಪ್ರಯೋಗದಲ್ಲಿ ಯಶಸ್ವಿಯಾಗಬೇಕೆಂಬ ತುಡಿತ..

Advertisement

ದಕ್ಷಿಣ ಪದವೀಧರ ಕ್ಷೇತ್ರದಿಂದ ರಾಜ್ಯ ವಿಧಾನಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಸ್ಥಿತಿ ಇದು. ಮೈಸೂರು, ಚಾಮರಾಜ ನಗರ, ಮಂಡ್ಯ, ಹಾಸನ ಜಿಲ್ಲೆಗಳನ್ನೊಳ ಗೊಂಡ ಈ ಕ್ಷೇತ್ರದಲ್ಲಿ 19 ಮಂದಿ ಕಣದಲ್ಲಿದ್ದಾರೆ.

ಬಿಜೆಪಿಯ ಮೈ.ವಿ. ರವಿಶಂಕರ್‌, ಜೆಡಿಎಸ್‌ ಎಚ್‌.ಕೆ. ರಾಮು, ಕಾಂಗ್ರೆಸ್‌ ಮಧು ಜಿ. ಮಾದೇಗೌಡ ಹಾಗೂ ರೈತ ಸಂಘ, ದಲಿತ ಸಂಘರ್ಷ ಸಮಿತಿಗಳು, ಪ್ರಗತಿಪರ ಸಂಘಟನೆಗಳು, ಆಮ್‌ ಆದ್ಮಿ ಪಕ್ಷದ ಬೆಂಬಲಿತ ಅಭ್ಯರ್ಥಿ ಪ್ರಸನ್ನ ಎನ್‌. ಗೌಡ ಅವರ ನಡುವೆಯೇ ಸೆಣಸಾಟ ಏರ್ಪಟ್ಟಿದೆ. ರಾಮು, ಮಧು ಜಿ.ಮಾದೇ ಗೌಡ, ಪ್ರಸನ್ನ ಎನ್‌. ಗೌಡ ಮೂವರು ಒಕ್ಕಲಿಗ ಸಮಾಜದವರು. ರವಿಶಂಕರ್‌ ಬ್ರಾಹ್ಮಣ ಸಮಾಜಕ್ಕೆ ಸೇರಿದ್ದಾರೆ. ಮಾಜಿ ಶಾಸಕ ವಾಟಾಳ್‌ ನಾಗರಾಜ್‌, ಎಸ್‌.ಡಿ.ಪಿ.ಐ. ರಫತ್‌ ಉಲ್ಲಾಖಾನ್‌, ಆರ್‌ಪಿಐ ಪಕ್ಷದಿಂದ ಎನ್‌. ವೀರಭದ್ರಸ್ವಾಮಿ, ಪಕ್ಷೇತರ ಅಭ್ಯರ್ಥಿ ವಿನಯ್‌ ಕಣದಲ್ಲಿದ್ದಾರೆ. ಬಿಎಸ್‌ಪಿಯ ಡಾ| ಬಿ. ಎಚ್‌. ಚನ್ನಕೇಶವಮೂರ್ತಿ ಅವರಿಗೆ ಸಕಾಲದಲ್ಲಿ ಬಿ ಫಾರಂ ಸಿಗದೆ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.

ಬಿಜೆಪಿಯ ಗೋ. ಮಧುಸೂದನ್‌ ಹಾಗೂ ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಇಬ್ಬರೂ ಸ್ಪರ್ಧಿಸಿಲ್ಲ. ಮಧುಸೂದನ್‌ ಅವರಿಗೆ ಟಿಕೆಟ್‌ ಸಿಗಲಿಲ್ಲ. ಶ್ರೀಕಂಠೇ  ಗೌಡ ಸ್ಪರ್ಧಿಸಲು ಒಲ್ಲೆ ಎಂದರು. ಬಿಜೆಪಿ ಕಳೆದ ಬಾರಿ ಅತ್ಯಲ್ಪ ಮತಗಳ ಅಂತರದಿಂದ ಪರಾಭವಗೊಂಡ ರವಿಶಂಕರ್‌ ಅವರನ್ನೇ ಮತ್ತೆ ಕಣಕ್ಕಿಳಿಸಿದೆ.ರವಿಶಂಕರ್‌ ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರ ಆಪ್ತರು. ಆರೆಸ್ಸೆಸ್‌ ಹಿನ್ನೆಲೆಯ ರವಿಶಂಕರ್‌ ಮೈಸೂರು ವಿಭಾಗದಲ್ಲಿ ಪಕ್ಷದ ಸಂಘಟನೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡವರು.

ಜೆಡಿಎಸ್‌ನಲ್ಲಿ ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇ ಗೌಡರ ಆಪ್ತ ನಿವೃತ್ತ ಪ್ರಾಂಶುಪಾಲ ಕೀಲಾರ ಜಯರಾಂ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಅವರಿಗೆ ಟಿಕೆಟ್‌ ನಿರಾಕರಿಸಿ ರಾಜ್ಯ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್‌.ಕೆ.ರಾಮು ಅವರನ್ನು ಕಣಕ್ಕೆ ಇಳಿಸಿದೆ. ಮರಿತಿಬ್ಬೇಗೌಡ, ಜಯರಾಂ ಇದನ್ನು ವಿರೋಧಿಸಿ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದಾರೆ.

Advertisement

ಕ್ಷೇತ್ರದಲ್ಲಿ ಜೆಡಿಎಸ್‌ಗೆ ನೆಲೆ ಇದೆ. ಮರಿತಿಬ್ಬೇ ಗೌಡ ಹಾಗೂ ಕೀಲಾರ ಜಯರಾಂ ಅವರು ಜೆಡಿಎಸ್‌ ವೋಟು ಬ್ಯಾಂಕ್‌ನಿಂದ ಎಷ್ಟು ಮತಗಳನ್ನು ಸೆಳೆದು ಕಾಂಗ್ರೆಸ್ಸಿಗೆ ವರ್ಗಾಯಿಸಬಲ್ಲರು ಎಂಬ ಪ್ರಶ್ನೆ ಇದೆ. ಕಾಂಗ್ರೆಸ್‌ಗೆ ಜೆಡಿಎಸ್‌ ಹಾಗೂ ಬಿಜೆಪಿ ಪ್ರಮುಖ ಎದುರಾಳಿಯಾಗಿದ್ದರೂ ರೈತ ಸಂಘ, ಪ್ರಗತಿಪರ ಸಂಘಟನೆಗಳ ಬೆಂಬಲಿತ ಹಾಗೂ ಬಿಎಸ್‌ಪಿ ಬೆಂಬಲಿತ ಅಭ್ಯರ್ಥಿಗಳು ಕಣದಲ್ಲಿರುವುದು ಚಿಂತೆಗೀಡು ಮಾಡಿದೆ.

ಕಾಂಗ್ರೆಸ್ಸಿನ ಮಧು ಮಾದೇಗೌಡ ಪಕ್ಷದ ಸಾಂಪ್ರದಾಯಕ ಮತಗಳು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವರ್ಚಸ್ಸು, ತಮ್ಮ ತಂದೆ ಮಾಜಿ ಸಂಸದ ಜಿ. ಮಾದೇಗೌಡರ ನಾಮಬಲವನ್ನು ನಂಬಿದ್ದಾರೆ. ಈ ಬಾರಿ 1.4 ಲಕ್ಷ ಮತದಾರರಿದ್ದಾರೆ.

ಕಾಂಗ್ರೆಸ್‌ ಗೆಲುವನ್ನೇ ಕಂಡಿಲ್ಲ
ಈ ಕ್ಷೇತ್ರದಲ್ಲಿ ಮೊದಲಿನಿಂದಲೂ ಜನಸಂಘ, ಬಿಜೆಪಿ, ಜನತಾ ಪರಿವಾರದ್ದೇ ಗೆಲುವು. ಕಾಂಗ್ರೆಸ್‌ ಜಯದ ಮುಖವನ್ನೇ ಕಂಡಿಲ್ಲ. ಈ ಹಿಂದೆ ಇದು ನೈಋತ್ಯ ಪದವೀಧರ ಕ್ಷೇತ್ರ. 1992ರಿಂದ ದಕ್ಷಿಣ ಪದವೀಧರ ಕ್ಷೇತ್ರವಾಗಿದೆ. ಕಾಲಕಾಲಕ್ಕೆ ಈ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳು ಬದಲಾಗಿವೆ. ಈ ಕ್ಷೇತ್ರದಲ್ಲಿ 1968, 1974, 1980ರಲ್ಲಿ ಜನಸಂಘ, ಬಿಜೆಪಿಯ ಎ.ಕೆ.ಸುಬ್ಬಯ್ಯ ವಿಜಯ ಸಾಧಿಸಿದ್ದರು. ಜನತಾಪಕ್ಷದ ಎಂ.ಸತ್ಯನಾರಾಯಣರಾವ್‌ 1986ರಲ್ಲಿ ಜಯದ ನಗೆ ಬೀರಿದ್ದರು. ಬಿಜೆಪಿಯಿಂದ 1992ರಿಂದ ಬಿ.ಆರ್‌. ಕೃಷ್ಣಮೂರ್ತಿ ಗೆದ್ದರು. ಅವರ ನಿಧನದ ಬಳಿಕ 1997ರಲ್ಲಿ ಉಪ ಚುನಾವಣೆ ನಡೆದು ಬಿಜೆಪಿಯ ಗೋ. ಮಧುಸೂದನ್‌ ಜಯ ಸಾಧಿಸಿದರು. ಮಧುಸೂದನ್‌ ಅವರಿಗೆ ಮತ್ತೆ 1998ರಲ್ಲಿ ಗೆಲುವು. 2004ರಲ್ಲಿ ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ, 2010ರಲ್ಲಿ ಬಿಜೆಪಿಯ ಮಧುಸೂದನ್‌, 2016ರಲ್ಲಿ ಜೆಡಿಎಸ್‌ನ ಶ್ರೀಕಂಠೇಗೌಡ ವಿಜಯದ ಮಾಲೆ ಧರಿಸಿದರು.

ಎಲ್ಲ ಮತದಾರರನ್ನು ಭೇಟಿ ಮಾಡುವ ಪ್ರಯತ್ನ ಮಾಡಿದ್ದೇನೆ. ಪದವೀಧರರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ. ಸದಾ ಪದವೀಧರರ ಧ್ವನಿಯಾಗಿರುತ್ತೇನೆ.
-ಮಧು ಜಿ.ಮಾದೇಗೌಡ, ಕಾಂಗ್ರೆಸ್‌ ಅಭ್ಯರ್ಥಿ

70 ಸಾವಿರ ಮತದಾರರನ್ನು ಖುದ್ದಾಗಿ ಭೇಟಿ ಮಾಡಿದ್ದೇನೆ. ರಾಜ್ಯ ಸರಕಾರದಿಂದ ಪದವೀಧರರಿಗೆ ದೊರೆಯುವ ಎಲ್ಲ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸಲು ಪ್ರಯತ್ನಿಸುತ್ತೇನೆ.
-ಮೈ.ವಿ. ರವಿಶಂಕರ್‌, ಬಿಜೆಪಿ ಅಭ್ಯರ್ಥಿ

ಸರಕಾರಿ ನೌಕರರ ಸಂಘದ ಅಧ್ಯಕ್ಷನಾಗಿ ನೌಕರರ ಬೇಡಿಕೆಗಳ ಈಡೇರಿಕೆಗೆ ಹೋರಾಡಿದ್ದೇನೆ. ಅವಕಾಶ ಕಲ್ಪಿಸಿ ಕೊಟ್ಟರೆ ಎಲ್ಲರನ್ನೂ ಒಟ್ಟುಗೂಡಿಸಿ ಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.
-ಎಚ್‌.ಕೆ.ರಾಮು, ಜೆಡಿಎಸ್‌ ಅಭ್ಯರ್ಥಿ

-ಕೂಡ್ಲಿ ಗುರುರಾಜ

 

Advertisement

Udayavani is now on Telegram. Click here to join our channel and stay updated with the latest news.

Next