ಚೆನ್ನೈ: ಕರ್ನಾಟಕದಿಂದ ಕಾವೇರಿ ನೀರಿ ಪಡೆಯಲು ಅಗತ್ಯ ಬಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗುವ ಬಗ್ಗೆ ತಮಿಳುನಾಡಿನ ಸರ್ವಪಕ್ಷ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿ(CWRC) ಆದೇಶದಂತೆ ನಿತ್ಯ 1 ಟಿಎಂಸಿ ನೀರು ಬಿಡಲು ಕರ್ನಾಟಕ ಸರ್ಕಾರವು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಸಿಎಂ ಎಂ.ಕೆ. ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರ, ಮಂಗಳವಾರ ಸರ್ವಪಕ್ಷ ಸಭೆ ಕರೆದಿತ್ತು. ಸಭೆಯಲ್ಲಿ ಕರ್ನಾಟಕದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿ, ನಿರ್ಣಯ ಕೈಗೊಳ್ಳಲಾಯಿತು. ಜತೆಗೆ, ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನ್ಯಾಯಮಂಡಳಿ ತೀರ್ಪನ್ನು ಪಾಲಿಸುವಂತೆ ಕರ್ನಾಟಕಕ್ಕೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಒತ್ತಾಯಿಸುವ ನಿರ್ಣಯವನ್ನೂ ಸಭೆಯಲ್ಲಿ ಕೈಗೊಳ್ಳಲಾಯಿತು.
ಕಳೆದ ವರ್ಷ ಕೂಡ ಕರ್ನಾಟಕ ತಮಿಳುನಾಡಿಗೆ ಕಾವೇರಿ ನೀರು ಬಿಡಲಿಲ್ಲ ಎಂದು ಸಿಎಂ ಎಂ.ಕೆ.ಸ್ಟಾಲಿನ್ ಆರೋಪಿಸಿದ್ದಾರೆ. ಬಳಿಕ ಸುಪ್ರೀಂಕೋರ್ಟ್‌ಗೆ ಮೊರೆ ಸಲ್ಲಿಸಿದ ಬಳಿಕವೇ ನೀರು ಬಿಡುಗಡೆಯಾಗಿತ್ತು. ಹೀಗಾಗಿ ಈ ಬಾರಿಯೂ ಆದೇಶ ಪಾಲನೆ ಆಗದೇ ಇದ್ದರೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು ಎಂದರು.
ಕಾವೇರಿಗಾಗಿ ರೈಲ್ ರೋಕೋ ಪ್ರತಿಭಟನೆ: ಮತ್ತೂಂದೆಡೆ ಕಾವೇರಿ ನೀರಿಗಾಗಿ ತಮಿಳುನಾಡಿನ ತಿರುವರೂರ್ ಜಿಲ್ಲೆಯ ತಿರುತುರೈಪುಡಿಯಲ್ಲಿ ರೈತರು ಪ್ರತಿಭಟನೆ ನಡೆಸಿದರು. ಎಡಪಕ್ಷಗಳ ಕಾರ್ಯಕರ್ತರು ರೈಲ್ ರೋಕೋ ಚಳವಳಿ ಕೈಗೊಂಡರು. ತಮಿಳುನಾಡು ತನ್ನ ಪಾಲಿನ ನೀರು ಪಡೆಯಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ತಿರುಚಿರಾಪಳ್ಳಿಯಲ್ಲಿ ಕರ್ನಾಟಕ ಬ್ಯಾಂಕಿನ ಎದುರು ಪ್ರತಿಭಟನೆ ನಡೆಸಲಾಗಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿ ಇತ್ತೀಚೆಗೆ ಜು.12ರಿಂದ ಮಾಸಾಂತ್ಯದವರೆಗೆ ಪ್ರತಿ ದಿನ 1 ಟಿಎಂಸಿ ನೀರನ್ನು ಕೆ.ಆರ್.ಎಸ್. ಅಣೆಕಟ್ಟಿನಿಂದ ಬಿಡುಗಡೆ ಮಾಡಬೇಕು ಎಂದು ಕರ್ನಾಟಕಕ್ಕೆ ಸೂಚಿಸಿತ್ತು. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ 1 ಟಿಎಂಸಿಯ ಬದಲಾಗಿ ಪ್ರತಿ ದಿನ 8000 ಕ್ಯುಸೆಕ್ ನೀರು ಬಿಡುಗಡೆ ಮಾಡಲು ಸಾಧ್ಯ ಎಂದು ತೀರ್ಮಾನಿಸಲಾಗಿತ್ತು. ಅದಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜ್ಯದ ವಿರುದ್ಧ ಆಕ್ರೋಶ
– ಕಾವೇರಿ ನೀರು ಬಿಡದ್ದಕ್ಕೆ ಕರ್ನಾಟಕದ ವಿರುದ್ಧ ಖಂಡನಾ ನಿರ್ಣಯ
– ಆದೇಶ ಪಾಲಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಲು ಸುಪ್ರೀಂಕೋರ್ಟ್, ಸಿಡಬ್ಲೂéಆರ್‌ಸಿಗೆ ಒತ್ತಾಯ
– ತಿರವರೂರ್ ಜಿಲ್ಲೆಯಲ್ಲಿ ನೀರಿಗಾಗಿ ರೈತರ, ಎಡಪಕ್ಷಗಳ ಪ್ರತಿಭಟನೆ
– ತಿರುಚಿರಾಪಳ್ಳಿಯಲ್ಲಿ ಕರ್ನಾಟಕ ಬ್ಯಾಂಕ್ ಶಾಖೆ ಎದುರು ಸಂಘಟನೆಗಳ ಧರಣಿ