Advertisement

ವರುಣಾದಿಂದಲೇ ಸ್ಪರ್ಧಿಸುವರೇ ಮಾಜಿ ಸಿಎಂ ಸಿದ್ದರಾಮಯ್ಯ?

11:50 PM Dec 06, 2022 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಇನ್ನೂ ಸುರಕ್ಷಿತ ಕ್ಷೇತ್ರದ ತಲಾಷೆಯಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ವರುಣಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಬಹುತೇಕ ಇದ್ದು,ಹಾಗಾದಲ್ಲಿ ಅವರ ಪುತ್ರ ಡಾ| ಯತೀಂದ್ರ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಯಿದೆ.

Advertisement

ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಬಹುತೇಕ ನಿರ್ಧರಿಸಿದ್ದ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಬೇಕು ಎಂದು ಆಪ್ತರು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾರಣವೂ ಇದೆ. ಕೋಲಾರದಲ್ಲಿ ಕಾಂಗ್ರೆಸ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಬಣ ರಾಜಕೀಯ ಸಮಸ್ಯೆ ತಂದೊಡ್ಡಬಹುದು. ಇದು ಕೊನೆಯ ಚುನಾವಣೆ ಆದ ಕಾರಣ ವರುಣಾದಲ್ಲೇ ಸ್ಪರ್ಧೆ ಮಾಡುವುದು ಸೂಕ್ತ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ಗೆ ಮೈಸೂರು ಕ್ಷೇತ್ರದಿಂದ ಸಮರ್ಥ ಅಭ್ಯರ್ಥಿ ಕೊರತೆ ಇರುವ ಕಾರಣ ಡಾ| ಯತೀಂದ್ರ ಸ್ಪರ್ಧೆ ಮಾಡಲಿ ಎಂಬ ಅಭಿಪ್ರಾಯ ಆಪ್ತ ವಲಯದಲ್ಲಿ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ವರುಣವೇ ಸೂಕ್ತ
ಕೇಂದ್ರದ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ಹಾಗೂ ರಮೇಶ್‌ಕುಮಾರ್‌ ಬಣದ ನಡುವೆ ಒಮ್ಮತ ಮೂಡಿದರೆ ಮಾತ್ರ ಕೋಲಾರದಲ್ಲಿ ಸ್ಪರ್ಧೆ ಮಾಡುವುದು. ಇಲ್ಲವಾದರೆ ವರುಣಾ ಆಯ್ಕೆಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಸಿದ್ದರಾಮಯ್ಯ ಅವರು ಇತ್ತೀಚೆಗೆ ಕೋಲಾರದಿಂದ ಬಂದಿದ್ದ ಮುಖಂಡರ ನಿಯೋಗಕ್ಕೆ ಪಂಚಾಯತ್‌ ಮಟ್ಟದಲ್ಲಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಿ. ವಾಸ್ತವಾಂಶದ ವರದಿ ಕೊಡಿ, ಅನಂತರ ಸ್ಪರ್ಧೆಯ ಬಗ್ಗೆ ತೀರ್ಮಾನ ಮಾಡೋಣ ಎಂದು ಹೇಳಿ ಕಳುಹಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹಳ್ಳಿಹಕ್ಕಿ ಮರಳಿ ಗೂಡಿಗೆೆ
ಜಿ.ಟಿ. ದೇವೇಗೌಡರು ಕಾಂಗ್ರೆಸ್‌ಗೆ ಬರುವ ನಿರೀಕ್ಷೆ ಹುಸಿಯಾದ ಅನಂತರ ತವರು ಜಿಲ್ಲೆ ಮೈಸೂರಿನಲ್ಲಿ ಹಿಡಿತ ಸಾಧಿಸುವ ಪ್ರಯತ್ನವಾಗಿ ಮಾಜಿ ಸಚಿವ ಎಚ್‌. ವಿಶ್ವನಾಥ್‌ ಜತೆ ಹಳೆಯ ವೈಮನಸ್ಯ ಮರೆತು ಒಂದಾಗಲು ಮುಂದಾಗಿದ್ದಾರೆ. ಎಚ್‌. ವಿಶ್ವನಾಥ್‌ ಜತೆಗೂಡಿದರೆ ಹುಣಸೂರು, ಕೆ.ಆರ್‌.ನಗರ ಸೇರಿ ಮೈಸೂರಿನಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನ ಗೆಲ್ಲಲು ಸಹಕಾರಿಯಾಗುತ್ತದೆ. ಜತೆಗೆ, ಇಬ್ಬರೂ ಹಿರಿಯ ರಾಜಕಾರಣಿಗಳಾಗಿದ್ದು ಒಟ್ಟಿಗೆ ಇರಿ ಎಂದು ಸಮುದಾಯದ ಮುಖಂಡರೂ ಇಬ್ಬರ ಮೇಲೆ ಒತ್ತಡ ಹೇರಿದ್ದಾರೆ ಎಂದು ಹೇಳಲಾಗಿದೆ. ಎಚ್‌. ವಿಶ್ವನಾಥ್‌ ಆವರು ಕಾಂಗ್ರೆಸ್‌ ಬಿಟ್ಟು ಜೆಡಿಎಸ್‌ ಸೇರಿ ಸಮ್ಮಿಶ್ರ ಸರಕಾರ ಪತನದಲ್ಲಿ ಪ್ರಮುಖ ಪಾತ್ರ ವಹಿಸಿ ಬಿಜೆಪಿಗೆ ಸೇರಿದರೂ, ಸೂಕ್ತ ಸ್ಥಾನಮಾನ ಸಿಗದೆ ಅಸಮಾಧಾನಗೊಂಡಿದ್ದಾರೆ. ಪರಿಷತ್‌ಗೆ ನಾಮಕರಣ ಮಾಡಿದರೂ, ಸಚಿವ ಸ್ಥಾನ ಸಿಗದ ಕಾರಣ ಬಿಜೆಪಿ ಬಿಡಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಎಚ್‌.ಎಂ. ರೇವಣ್ಣ ಸಂಧಾನ
ಬಿಜೆಪಿಯಿಂದ ಮಾನಸಿಕವಾಗಿ ದೂರ ಸರಿಯುತ್ತಿರುವ ಮಾಜಿ ಸಚಿವ ಎಚ್‌. ವಿಶ್ವನಾಥ್‌ ಮತ್ತೆ ಕಾಂಗ್ರೆಸ್‌ ಸೇರಲು ಮುಂದಾಗಿದ್ದು, ಸಂಕ್ರಾಂತಿ ಅನಂತರ ಅಧಿಕೃತವಾಗಿ ಸೇರ್ಪಡೆಯಾಗುವ ಸಾಧ್ಯತೆಯಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿಶ್ವನಾಥ್‌ ಸೇರ್ಪಡೆಗೆ ಒಪ್ಪಿದ್ದು, ಸಿದ್ದರಾಮಯ್ಯ ಅವರನ್ನು ಒಪ್ಪಿಸಲು ಮಾಜಿ ಸಚಿವ ಎಚ್‌.ಎಂ. ರೇವಣ್ಣ ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನ ನಡೆದಿದೆ. ಇದರ ಭಾಗವಾಗಿಯೇ ಮಂಗಳವಾರ ಎಚ್‌. ವಿಶ್ವನಾಥ್‌ ಅವರು ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೂ ಮುನ್ನವೇ ವಿಶ್ವ ನಾಥ್‌ ದಿಲ್ಲಿ ಯಲ್ಲಿ ಖರ್ಗೆ ಅವ ರನ್ನು ಭೇಟಿ ಮಾಡಿ ಬಂದಿ ದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next