Advertisement

ಪದವಿ ಕಾಲೇಜು ಅಭಿವೃದ್ಧಿಪಡಿಸುವೆ: ರೂಪಾಲಿ

04:12 PM May 08, 2022 | Team Udayavani |

ಕಾರವಾರ: ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಪದವಿ ಕಾಲೇಜು ಅತ್ಯಂತ ಪ್ರಮುಖ ಕಾಲೇಜಾಗಿದ್ದು, ಭವಿಷ್ಯದ ದೃಷ್ಟಿಯಿಂದ ಅಭಿವೃದ್ಧಿ ಪಡಿಸಬೇಕಾದ ಅವಶ್ಯಕತೆ ಇದೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.

Advertisement

ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಸಮಸ್ಯೆಗಳ ಕುರಿತು ಕಾಲೇಜಿನ ಪ್ರಭಾರಿ ಪ್ರಿನ್ಸಿಪಾಲರಿಗೆ ಹಾಗೂ ಆಡಳಿತ ಮಂಡಳಿ ಸದಸ್ಯರ ಜೊತೆ ಸಭೆ ನಡೆಸಿ ಮಾಹಿತಿ ಪಡೆದರು. ನಂತರ ಕಾಲೇಜಿನ ವಿವಿಧ ಕಟ್ಟಡಗಳ ವೀಕ್ಷಣೆ ಮಾಡಿದರು.

ಕಾಲೇಜಿನ ಹಿಂದಿನ ಆಡಳಿತ ಮಂಡಳಿಯವರು ಭವಿಷ್ಯದ ಅಗತ್ಯತೆ ಗಮನದಲ್ಲಿಟ್ಟುಕೊಳ್ಳದೆ ಕಾಮಗಾರಿಗಳನ್ನು ಮಾಡಿದ್ದಾರೆ. ಪಿಡಬ್ಲ್ಯೂಡಿ ಇಲಾಖೆ ರೂಪುರೇಷೆ ಇಲ್ಲದೆ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಈಗ ನಿರ್ಮಿಸಲಾಗುವ ಕಟ್ಟಡ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ಹಾಗೂ ನಗರದ ಅಂದ ಹೆಚ್ಚಿಸುವಂತೆ ನಿರ್ಮಿಸಲು ಹೊಸ ನೀಲನಕ್ಷೆ ತಯಾರಿಸಬೇಕು. ವಿದ್ಯಾರ್ಥಿಗಳಿಗೆ ಅವಶ್ಯಕವಾಗಿರುವ ಪ್ರಯೋಗಾಲಯ, ತರಗತಿ ಕೊಠಡಿ, ಉದ್ಯಾನವನ, ಮೇಲ್ಮಹಡಿಗೆ ತೆರಳಲು ಮೆಟ್ಟಿಲು ಮತ್ತು ಲಿಫ್ಟ್‌ ಎಲ್ಲವನ್ನು ಪರಿಗಣಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿದರು.

ಕಾಲೇಜು ನಗರದ ಕೇಂದ್ರದಲ್ಲಿದ್ದು ಭವಿಷ್ಯದಲ್ಲಿ ಜಾಗದ ಸಮಸ್ಯೆ ಕಾಡಬಹುದು. ಅದಕ್ಕಾಗಿ ಕಟ್ಟಡದ ಮೇಲೆ ಕೊಠಡಿ ನಿರ್ಮಿಸಬೇಕು. ವಿಶೇಷವಾಗಿ ನಮ್ಮ ಕರಾವಳಿ ಭಾಗಕ್ಕೆ ಅನುಕೂಲವಾಗುವಂತೆ ಕಟ್ಟಡದ ವಿನ್ಯಾಸ ಮಾಡುವಂತೆ ಸಂಬಂತ ಇಂಜಿನೀಯರಿಂಗ್‌ ಇಲಾಖೆಗೆ ಶಾಸಕಿ ಸೂಚನೆ ನೀಡಿದರು.

ಉಪನ್ಯಾಸಕರ ಕೊರತೆ: ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಬಗ್ಗೆ ಗಮನಕ್ಕೆ ಬಂದಿದೆ. ಕಾರವಾರದಲ್ಲಿ ಕೆಲಸ ಮಾಡಲು ಬಯಸುವ ಉಪನ್ಯಾಸಕರನ್ನು ಮರಳಿ ಇಲ್ಲಿಗೆ ತರಲಾಗುವುದು. ಈ ಸಮಸ್ಯೆ ಪರಿಹರಿಸಲು ಈಗಾಗಲೇ ಉನ್ನತ ಶಿಕ್ಷಣ ಇಲಾಖೆ ಜೊತೆ ಮಾತಾಡಿದ್ದೇನೆ. ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ಸದಸ್ಯರು ಹಾಗೂ ಇನ್‌ಚಾರ್ಜ್‌ ಪ್ರಿನ್ಸಿಪಾಲರಿಗೆ ತಿಳಿಸಿದರು. ಕಾಯಂ ಉಪನ್ಯಾಸಕರ ಕೊರತೆ ಹಾಗೂ ಸ್ವಾಯತ್ತ ಕಾಲೇಜಿಗೆ ಇರುವ ಹೊಣೆಗಾರಿಕೆ, ಪರೀಕ್ಷೆ ನಡೆಸುವ ದೊಡ್ಡ ಜವಾಬ್ದಾರಿಯನ್ನು, ಇದಕ್ಕೆ ಅಗತ್ಯವಿರುವ ಕಾಯಂ ಉಪನ್ಯಾಸಕರ ಅವಶ್ಯಕತೆಯನ್ನು ಕಾಲೇಜಿನ ಸುಪರಿಂಡೆಂಟ್‌ ವಿವರಿಸಿದರು.

Advertisement

ಸರ್ಕಾರಿ ಪ್ರೌಢಶಾಲೆ ವೀಕ್ಷಣೆ: ನಗರದ ಕೇಂದ್ರ ಭಾಗದಲ್ಲಿರುವ ಬ್ರಿಟಿಷರು ನಿರ್ಮಿಸಿದ್ದ, ಬ್ರಿಟಿಷ್‌ ಕಾಲ್‌ ಸರ್ಕಾರಿ ಶಾಲೆ ಕಟ್ಟಡದ ಅಭಿವೃದ್ಧಿ ಬಗ್ಗೆ ಸಹ ವೀಕ್ಷಣೆ ವೇಳೆ ಚರ್ಚಿಸಲಾಯಿತು. ಕಟ್ಟಡಗಳು ಹಳೆಯದಾಗಿದ್ದು, ಹೊಸದಾಗಿ ನಿರ್ಮಾಣ ಮಾಡುವುದು ಅವಶ್ಯಕವಾಗಿದೆ. ಹೊಸದಾಗಿ ವಿನ್ಯಾಸ ಮಾಡಿ ನಿರ್ಮಾಣ ಮಾಡುವ ಕುರಿತು ಡಿಡಿಪಿಐರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಚರ್ಚಿಸಿದರು. ಆಡಳಿತ ಮಂಡಳಿ ಸದಸ್ಯ ರಾಜೇಶ್‌ ನಾಯಕ್‌, ಜಗದೀಶ್‌ ಬಿರ್ಕೊಡಿಕರ್‌, ಅರುಣ ಸಾಳಂಕೆ, ಕಾಲೇಜಿನ ಸಿಬ್ಬಂದಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next