ಕೊಪ್ಪಳ: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಎಲ್ಲ ಹಗರಣಗಳನ್ನು ನಿಶ್ಚಿತವಾಗಿ ತನಿಖೆ ಮಾಡುತ್ತೇವೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ಹೇಳಿದರು.
ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.
ಚುನಾವಣಾ ಪೂರ್ವದಲ್ಲಿ ನಾವು ಹೇಳಿದಂತೆ, ಬಿಜೆಪಿಯ 40 ಪರ್ಸೆಂಟ್ ಹಗರಣ, ಕೋವಿಡ್ ಸಮಯದ ಹಗರಣ ಹಾಗೂ ಪಿಎಸ್‌ಐ ಹಗರಣವನ್ನು ನಿಶ್ಚಿತವಾಗಿ ತನಿಖೆ ಮಾಡುತ್ತೇವೆ. ಪ್ರಸ್ತುತ ಗ್ಯಾರಂಟಿ ಯೋಜನೆಗಳ ಬಗ್ಗೆ ಒತ್ತು ನೀಡಿದ್ದೇವೆ. ಇನ್ನು ಸಮಯವಿದೆ. ಅವರ ಎಲ್ಲ ಹಗರಣವನ್ನು ತನಿಖೆ ಮಾಡಲಿದ್ದೇವೆ ಎಂದರು.
ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರಿಗೆ ಪ್ರಹ್ಲಾದ್ ಜೋಶಿ ವಿರುದ್ದ ಲೋಕಸಭೆ ಟಿಕೆಟ್ ನೀಡುವ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು, ಶೆಟ್ಟರ್ ಸೇರಿದಂತೆ ಸವದಿ ಅವರಿಗೂ ಪಕ್ಷ ಸೂಕ್ತ ಸ್ಥಾನಮಾನ ಕೊಟ್ಟೇ ಕೊಡುತ್ತದೆ. ಅದರಲ್ಲಿ ಎರಡು ಮಾತಿಲ್ಲ. ಗ್ಯಾರಂಟಿ ಯೋಜನೆಗಳನ್ನು ಗ್ಯಾರಂಟಿಯಾಗಿ ಜಾರಿ ಮಾಡಲಿದ್ದೇವೆ. ವಾರ್ಷಿಕ ವಿದ್ಯುತ್ ಬಳಕೆ ಮಾಡುವ ಅದರ ಆಧಾರದಲ್ಲಿ ಅವರಿಗೆ 200 ಯುನಿಟ್ ಉಚಿತ ವಿದ್ಯುತ್ ಕೊಡುತ್ತಿದ್ದೇವೆ. ಇದನ್ನು ಕೆಲವರು ಗೊಂದಲ ಮಾಡುತ್ತಿದ್ದಾರೆ. ಇದರಿಂದ ಅವರಿಗೇನೂ ಪ್ರಯೋಜನವಾಗಲ್ಲ ಎಂದರು.
Related Articles
ಸಿಎಂ ಆಯ್ಕೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ಹೇಳಿದಂತೆ ಸಿದ್ದರಾಮಯ್ಯ ಅವರು ಸಿಎಂ, ಡಿ.ಕೆ. ಶಿವಕುಮಾರ್ ಅವರು ಡಿಸಿಎಂ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಅದನ್ನೇ ನಾನು ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದಿದ್ದೇನೆ ಅಷ್ಟೇ ಎಂದರು.
ಜಿಲ್ಲೆಯಲ್ಲಿ ಕೈಗಾರಿಕೆಗಳಿಂದ ಧೂಳೂ ಹೊರ ಸೂಸುವುದು ಹಾಗೂ ಜನರಿಗೆ, ಜಾನುವಾರುಗಳಿಗೆ ಹಾನಿಯ ಕುರಿತು ಅಧಿಕಾರಿಗಳ ಜೊತೆ ಮಾತನಾಡುವೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೂ ಈ ಬಗ್ಗೆ ಸೂಚನೆ ನೀಡುವೆ ಎಂದರಲ್ಲದೇ, ರಾಜ್ಯದಲ್ಲಿ ಯಾವ ಕೈಗಾರಿಕೆಗಳು ಭೂಮಿಯನ್ನು ಪಡೆದು ಬಳಕೆ ಮಾಡಿಲ್ಲವೋ ಅದೆಲ್ಲವನ್ನು ಮಾಹಿತಿ ತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮುಂದಿನ ಜೂ.10ರ ಒಳಗಾಗಿ ಮಾಹಿತಿ ತರಿಸಲು ಸೂಚನೆ ನೀಡಿದ್ದು, ಯಾರು ಭೂಮಿ ಬಳಕೆ ಮಾಡಿಲ್ಲ ಎನ್ನುವ ಕುರಿತು ಪ್ರತಿ ಕೇಸ್ ಬಗ್ಗೆ ಅಧ್ಯಯನ ಮಾಡಿ ಸೂಕ್ತ ಕ್ರಮ ಕೈಗೊಳ್ಳುವೆನು ಎಂದರು.
ಈ ವೇಳೆ ಶಾಸಕ ರಾಘವೇಂದ್ರ ಹಿಟ್ನಾಳ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.