ಮುಂಬಯಿ: ಸತತವಾಗಿ ಸೋತು 9ನೇ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದಿರುವ ಮುಂಬೈ ಇಂಡಿಯನ್ಸ್ ಉಳಿದ ಪಂದ್ಯಗಳಲ್ಲಿ ತನ್ನ ಮೀಸಲು ಸಾಮರ್ಥ್ಯವನ್ನು ಬಳಸಿಕೊಂಡೀತೇ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರ ಪುತ್ರ ಅರ್ಜುನ್ ತೆಂಡುಲ್ಕರ್ ಐಪಿಎಲ್ ಪದಾರ್ಪಣೆ ಮಾಡಿಯಾರೇ? ಇದು ಅಭಿಮಾನಿಗಳ ಕುತೂಹಲ.
ಮುಂಬೈ ಪರ ಈ ಬಾರಿಯ ಐಪಿಎಲ್‌ನಲ್ಲಿ ಮಿಂಚಿ ರುವುದೆಲ್ಲ ಯುವ ಆಟಗಾರರೇ. ಡಿವಾಲ್ಡ್ ಬ್ರೇವಿಸ್, ತಿಲಕ್ ವರ್ಮ, ಹೃತಿಕ್ ಶೊಕೀನ್, ಕುಮಾರ ಕಾರ್ತಿಕೇಯ… ಇವರಲ್ಲಿ ಪ್ರಮುಖರು. ಈ ಸಾಲಿನಲ್ಲಿ ಅರ್ಜುನ್ ತೆಂಡುಲ್ಕರ್ ಕಾಣಿಸಿಕೊಳ್ಳುವರೇ?
ಶುಕ್ರವಾರ ಮುಂಬೈ ತನ್ನ 10ನೇ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೆಣಸಲಿದೆ. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಮುಂಬೈ ತಂಡದ ಮುಖ್ಯ ಕೋಚ್ ಮಾಹೇಲ ಜಯವರ್ಧನ, “ಎಲ್ಲರಿಗೂ ಆಯ್ಕೆಯ ಅವಕಾಶವಿದೆ, ಅರ್ಜುನ್ ತೆಂಡುಲ್ಕರ್‌ಗೂ…’ ಎಂದಿದ್ದಾರೆ.
“ಎಲ್ಲರಿಗೂ ಮುಂಬೈ ಪರ ಆಡುವ ಅವಕಾಶ ಇದೆ. ನಾವೀಗ ಗೆಲುವಿನ ಖಾತೆ ತೆರೆದಿದ್ದೇವೆ. ನಮ್ಮ ಮುಖ್ಯ ಯೋಜನೆಯೆಂದರೆ ಉಳಿದ ಪಂದ್ಯಗಳನ್ನೂ ಗೆಲ್ಲುವುದು. ಆಗ ತಂಡದ ಆತ್ಮವಿಶ್ವಾಸ ಸಹಜವಾಗಿಯೇ ಹೆಚ್ಚಲಿದೆ. ಇದಕ್ಕಾಗಿ ಉತ್ತಮ ಸಾಮರ್ಥ್ಯದ ಆಟಗಾರರನ್ನು ಆಡಿಸಬೇಕಾಗುತ್ತದೆ. ಅರ್ಜುನ್ ತೆಂಡುಲ್ಕರ್ ಈ ವ್ಯಾಪ್ತಿಯಲ್ಲಿದ್ದರೆ ಅವರಿಗೂ ಅವಕಾಶ ಸಿಗಲಿದೆ’ ಎಂದು ಜಯವರ್ಧನ ಹೇಳಿದ್ದಾರೆ.
ಎಡಗೈ ವೇಗಿ :
ಎಡಗೈ ವೇಗಿಯಾಗಿರುವ ಅರ್ಜುನ್ ತೆಂಡುಲ್ಕರ್ 2021ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಪ್ರವೇಶಿಸಿದ್ದರು. ಆದರೆ ಆಡುವ ಅವಕಾಶ ಈವರೆಗೆ ಸಿಕ್ಕಿಲ್ಲ. ಯುಎಇಯಲ್ಲಿ ಮುಂದುವರಿದ 2021ರ ದ್ವಿತೀಯಾರ್ಧದ ಐಪಿಎಲ್ ವೇಳೆ ಗಾಯಾಳಾದ ಕಾರಣ ಅರ್ಜುನ್ ತಂಡದಿಂದ ಬೇರ್ಪಟ್ಟಿದ್ದರು. ಹಾಗೆಯೇ 2021ರ ಜನವರಿ ಬಳಿಕ ಯಾವುದೇ ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಆಡಿಲ್ಲ.
ಕಳೆದ ಮೆಗಾ ಹರಾಜಿನಲ್ಲಿ 30 ಲಕ್ಷ ರೂ. ಮೂಲ ಬೆಲೆಗೆ ಅರ್ಜುನ್ ತೆಂಡುಲ್ಕರ್ ಮತ್ತೆ ಮುಂಬೈ ಪಾಲಾಗಿದ್ದರು. ಇವರಿಗಾಗಿ ಗುಜರಾತ್ ಟೈಟಾನ್ಸ್ 25 ಲಕ್ಷ ರೂ. ತನಕ ಬಿಡ್ ಸಲ್ಲಿಸಿತ್ತು!