ನವದೆಹಲಿ: ದೊಡ್ಡ ತಂತ್ರಜ್ಞಾನ ಕಂಪನಿಗಳು ಮಾಹಿತಿಯನ್ನು ತಮ್ಮ ಸರ್ಚ್ ಎಂಜಿನ್‌ನಲ್ಲಿ ಶೋಧ ಮಾಡುವಂತೆ ಮಾಡಿದ ಬಳಿಕ ಮಾಹಿತಿ ಪೂರೈಕೆದಾರರಿಗೆ ಸೂಕ್ತ ರೀತಿಯ ಸಂಭಾವನೆ ಕೊಡಬೇಕು.
ಪತ್ರಿಕೋದ್ಯಮದ ಮುಂದಿನ ಬೆಳವಣಿಗೆ ಹಾಗೂ ವಿತ್ತೀಯ ಕ್ಷೇತ್ರದ ಭದ್ರತೆಗೆ ಇದು ಅನಿವಾರ್ಯ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ಸಹಾಯಕ ಮತ್ತು ಉದ್ಯಮಶೀಲತೆ, ಕೌಶಲ್ಯಾಭಿವೃದ್ಧಿ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
ಡಿಜಿಟಲ್ ನ್ಯೂಸ್ ಪಬ್ಲಿಶರ್ ಅಸೋಸಿಯೇಶನ್(ಡಿಎನ್‌ಪಿಎ) ವತಿಯಿಂದ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ್ದ ಅವರು, “ಮಾಹಿತಿ ಪೂರೈಕೆದಾರರು ಮತ್ತು ದೊಡ್ಡ ತಂತ್ರಜ್ಞಾನ ಕಂಪನಿಗಳ ನಡುವಿನ ವ್ಯತ್ಯಾಸವನ್ನು ಸಮ ಸ್ಥಿತಿಗೆ ತರುವ ಅಗತ್ಯವಿದೆ,’ ಎಂದರು. ಸುದ್ದಿ ಕ್ಷೇತ್ರದ ಬೆಳವಣಿಗೆಗೆ ಇಂಥ ನಿಯಮ ಅಗತ್ಯವಾಗಿದೆ. ಮಾಹಿತಿಯನ್ನು ಒದಗಿಸುವವರ ಜತೆಗೆ ದೊಡ್ಡ ತಾಂತ್ರಿಕ ಸಂಸ್ಥೆಗಳು ಸೂಕ್ತ ರೀತಿಯಲ್ಲಿ ಆದಾಯದ ಹಂಚಿಕೆಯಾಗಬೇಕು ಎಂದರು.
“ಭಾರತ ತಂತ್ರಜ್ಞಾನದ ಉತ್ಪಾದನೆ ಮಾಡುವ ದೇಶವಾಗಿ ಹೊರಹೊಮ್ಮಬೇಕು. ನಮ್ಮ ದೇಶ ಕೇವಲ ಪ್ರತಿಭೆಗಳನ್ನು ಸೃಷ್ಟಿಸುವ ಸ್ಥಳ ಆಗಬಾರದು,’ ಎಂದು ಸಚಿವರು ಪ್ರತಿಪಾದಿಸಿದರು.
ಇದೇ ವೇಳೆ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ, “ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್ ಮತ್ತು ಐರೋಪ್ಯ ಒಕ್ಕೂಟದ ರಾಷ್ಟ್ರಗಳಲ್ಲಿ ನ್ಯೂಸ್ ಕಂಟೆಂಟ್ ಕ್ರಿಯೇಟರ್ ಮತ್ತು ಸಂಗ್ರಹಕಾರರ ನಡುವೆ ನ್ಯಾಯಯುತ ಆದಾಯ ಹಂಚಿಕೆ ಖಚಿತಪಡಿಸಿಕೊಳ್ಳಲು ಕಾನೂನು ತಂದಿದ್ದು, ಆಯೋಗಗಳನ್ನು ಬಲಪಡಿಸಿವೆ,’ ಎಂದು ಹೇಳಿದರು.