ಪದೇ ಪೇದೆ ಹುಲಿ ಊರಿಗೆ ಬರುತ್ತಿದೆ, ಆನೆಗಳು ನಮ್ಮ ಬೆಳೆ ತುಳಿದು ಹಾಕಿವೆ, ನಮ್ಮ ಕಡೆ ಏಕೊ ಮಳೇನೇ ಇಲ್ಲ – ಇಂಥ ಮಾತುಗಳನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ಎಲ್ಲದಕ್ಕೂ ಮೂಲ ಕಾಡು. ಕಾಡನ್ನು ನಾವು ಉಳಿಸಿದರೆ, ಅದು ನಮ್ಮನ್ನು ಉಳಿಸುತ್ತದೆ ಅನ್ನೋದು ಈಗ ಎಲ್ಲರಿಗೂ ಅರ್ಥವಾಗುತ್ತಿದೆ. ಇಂಥ ಕಾಡನ್ನು, ಕಾಡಿನ ಅಂತರಂಗವನ್ನು ಅಧ್ಯಯನ ಮಾಡುವುದಕ್ಕಾಗಿಯೇ ಹಲವಾರು ಕೋರ್ಸ್‌ಗಳಿವೆ. ಅವುಗಳನ್ನು ಪೂರೈಸಿದ್ದೇ ಆದಲ್ಲಿ ಬದುಕಿನ ಹಾದಿಯೂ ಸುಗಮವಾಗುತ್ತದೆ.
ಸಂಪದ್ಭರಿತ ಕಾಡು ಮತ್ತು ವನ್ಯಜೀವಿ ಸಂಕುಲ ಇವತ್ತು ಅತೀವ ಒತ್ತಡ ಮತ್ತು ಅಪಾಯದಲ್ಲಿವೆ. ಇದಕ್ಕೆ ಅಭಿವೃದ್ಧಿಯೇ ಕಾರಣ. ದಿನೇ ದಿನೇ ಮಾನವ – ವನ್ಯ ಜೀವಿ ಸಂಘರ್ಷದ ಸುದ್ದಿ ಬರುತ್ತಲೇ ಇದೆ. ತಮ್ಮ ಆವಾಸಸ್ಥಾನ ಕಳೆದುಕೊಂಡು ಮಾನವ ನೆಲೆಯತ್ತ ಆಹಾರ – ನೀರು ಅರಸಿ ಬರುವ ವನ್ಯ ಮೃಗಗಳು ಮನುಷ್ಯನ ಆಕ್ರೋಶಕ್ಕೆ ಬಲಿಯಾಗುತ್ತಿವೆ. ಒಂದು ಮೂಲದ ಪ್ರಕಾರ ದಿನವೊಂದಕ್ಕೆ ಮೂರು ಪ್ರಾಣಿ ಮತ್ತು ಏಳು ಸಸ್ಯ ಪ್ರಬೇಧಗಳು ಶಾಶ್ವತವಾಗಿ ಅಂತ್ಯಕಾಣುತ್ತಿವೆ. ಸಮಗ್ರ ಅಧ್ಯಯನದ ಪ್ರಕಾರ ಕಳೆದ ಶತಮಾನದಿಂದೀಚೆಗೆ, ಇಪ್ಪತ್ತೆರಡು ಸಾವಿರ ಜೀವಜಾತಿಗಳು ವಿನಾಶದ ಅಂಚು ತಲುಪಿವೆ. ಲಕ್ಷಾಂತರ ಹೆಕ್ಟೇರ್ ಅರಣ್ಯ ಬರಿದಾಗುತ್ತಿದೆ. ಇದರ ಅಡ್ಡ ಪರಿಣಾಮವೆಂಬಂತೆ, ಭೂಮಿಯ ಬಿಸಿ ಏರಿ ಮಾನವ-ಪ್ರಾಣಿ ವಲಸೆ ನಿರಂತರವಾಗಿ ನಡೆಯುತ್ತಿದೆ.
ಇಷ್ಟೆಲ್ಲ ಪುರಾಣ ಏಕೆಂದರೆ, ವನ್ಯಜೀವಿ ಮತ್ತು ಕಾಡಿನ ಸಂರಕ್ಷಣೆಗಾಗಿ ಅಭಯಾರಣ್ಯ, ರಾಷ್ಟ್ರೀಯ ಉದ್ಯಾನವನ, ಸಂರಕ್ಷಿತ ಅರಣ್ಯಗಳನ್ನು ನಿರ್ಮಿಸಿ ವೈಜ್ಞಾನಿಕವಾಗಿ ಅವುಗಳನ್ನು ರಕ್ಷಿಸುವ ಕೆಲಸ ನಡೆಯ ಬೇಕಾದ ತುರ್ತು ಇದೆ. ಅದಕ್ಕೆ ಬೇಕಾದ ಮಾನವ ಸಂಪನ್ಮೂಲ, ಕೌಶಲ್ಯ, ತಂತ್ರಜ್ಞಾನದ ಅಭಿವೃದ್ಧಿ ಎಲ್ಲವೂ ತ್ವರಿತವಾಗಿ ಸಿದ್ಧವಾಗುತ್ತಿದೆ. ಹೀಗಾಗಿ, ವನ್ಯ ಜೀವಿ ಸಂರಕ್ಷಣೆಯ ಅಧ್ಯಯನಕ್ಕಾಗಿ ಹಲವು ಅವಕಾಶಗಳಿವೆ. ಕೋರ್ಸ್‌ಗಳು ಇವೆ. ಇದನ್ನು ಪೂರೈಸಿದರೆ ಉದ್ಯೋಗ ಅವಕಾಶ ಗ್ಯಾರಂಟಿ. ಈ ಮಹತ್ವ ಅರಿತೇ ಅಧ್ಯಯನ, ತರಬೇತಿ, ಸಂಶೋಧನೆ, ಕ್ಷೇತ್ರ ಕಾರ್ಯ ಎಲ್ಲವನ್ನೂ ಒಳಗೊಳ್ಳುವ ತುಂಬಾ ಗಂಭೀರವಾದ ಮತ್ತು ಅಷ್ಟೇ ಮೌಲೀಕವಾದ ಕೆಲಸಕ್ಕೆ ಒತ್ತು ನೀಡುವ ವೈಲ್ಡ್‌ಲೈಫ್ ಕನ್ಸರ್ವೆಶನ್ ಅಥವಾ ವನ್ಯಜೀವಿ ಸಂರಕ್ಷಣೆಯ ಕುರಿತು ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್, ಪದವಿ, ಸ್ನಾತಕೋತ್ತರ ಪದವಿ ಮತ್ತು ಡಾಕ್ಟ್ ರೇಟ್‌ವರೆಗಿನ ಅಧ್ಯಯನಕ್ಕೆ ಅನುಕೂಲ ಕಲ್ಪಿಸಿವೆ.
ಜೀವವೈವಿಧ್ಯ, ಸಂರಕ್ಷಣಾ ವಿಧಾನ, ಭೌಗೋಳಿಕ ವಿನ್ಯಾಸ, ಕಾಡಿನ ಸಂರಚನೆ, ಬೇಟೆ – ಬಲಿ ಪ್ರಾಣಿ ಸಾಂದ್ರತೆ, ಸಂತಾನೋತ್ಪತ್ತಿ ವಿಧಾನ, ಸರಹದ್ದಿಗಾಗಿ ನಡೆಯುವ ಆಂತರಿಕ ಹೋರಾಟ, ಸಾವು, ಕಾಡ್ಗಿಚ್ಚು, ನಿಯಂತ್ರಣ, ಬೇಟೆ, ರೋಗ, ಕಳ್ಳಸಾಗಣೆ, ಪ್ರಾಣಿ ಗಣತಿ, ಮಾನವ – ವನ್ಯಸಂಕುಲ ಸಂಘರ್ಷ, ಫೋಟೋಗ್ರಫಿ, ಡಿಎನ್‌ಎ ಅನಾಲಿಸಿಸ್, ಮೂವಿ ಮೇಕಿಂಗ್, ಪ್ರವಾಸೋದ್ಯಮ… ಹೀಗೆ, ಹತ್ತು ಹಲವು ವಿಷಯಗಳ ವಿಸ್ತೃತ ಅಧ್ಯಯನಕ್ಕೆ ಅವಕಾಶವಿದ್ದು ಸ್ಪೆಷಲೈಸೇಶನ್‌ಗೂ ಅವಕಾಶವಿದೆ. ವನ್ಯಜೀವಿಗಳ ಆಹಾರ ಕ್ರಮ, ವಾಸದ ನೆಲೆ, ಪೌಷ್ಟಿಕತೆ, ಪ್ರಾಣಿ ಚಲನವಲನ, ಬೇಟೆ ಮಾದರಿ, ಎಲ್ಲೆಲ್ಲಿ ವನ್ಯಜೀವಿ ಆವಾಸಕ್ಕೆ ಧಕ್ಕೆ ಬಂದಿದೆ, ಏನಿದ್ದರೆ ಅನುಕೂಲ, ಯಾವುದು ಅಪಾಯಕಾರಿ, ಕಳೆ ನಿಯಂತ್ರಣ, ನೀರಿನ ಅಭಾವ, ಪೂರಣ, ಸಾಮಾಜಿಕ ಅರಣ್ಯ ಯೋಜನೆ, ಆ್ಯಂಟಿ ಪೋಚಿಂಗ್ ಕ್ಯಾಂಪ್‌ಗ್ಳ ನಿರ್ವಹಣೆ, ವನ್ಯ ಪ್ರಾಣಿ ಸ್ಥಳಾಂತರ, ಬೇಸಿಗೆಯಲ್ಲಿ ಕಾಡ್ಗಿಚ್ಚು ತಡೆಯಲು ಬೇಕಾದ ಫೈರ್‌ಲೈನ್ ನಿರ್ಮಾಣ, ಚಾರಣಿಗರ ಚಲನವಲನ, ಸಂಶೋಧಕರು ನಡೆಸುವ ಅಧ್ಯಯನಕ್ಕೆ ಆಸರೆ, ಮಾರ್ಗದರ್ಶನ ಮುಂತಾದ ನೂರಾರು ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅವಕಾಶವಿರುತ್ತದೆ. ಭಾರತದಲ್ಲಿ ಇರುವ ಬೃಹತ್ ವನ್ಯ ಪ್ರದೇಶ ಮತ್ತು ಜೀವಿಗಳನ್ನು ಸಂರಕ್ಷಿಸಲು ಅಗತ್ಯ ಜ್ಞಾನ, ತಂತ್ರಜ್ಞಾನ, ಸಿಬ್ಬಂದಿ, ಸಂಶೋಧಕರುಗಳ ಅವಶ್ಯಕತೆ ತೀವ್ರವಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಭಾರತದಲ್ಲಿ, ವನ್ಯ ಜೀವಿ ಸಂರಕ್ಷಣೆಯ ಹಲವು ಆಗಾಧ ಸಮಸ್ಯೆಗಳಿವೆ. ಅಷ್ಟೇ ಸಂಖ್ಯೆಯ ಸರ್ಕಾರಿ ಹಾಗೂ ಖಾಸಗಿ ಉದ್ಯೋಗಾವಕಾಶಗಳೂ ಇವೆ.
Related Articles
ಯಾವ ಯಾವ ಕೋರ್ಸ್
ವನ್ಯ ಜೀವಿ ಸಂರಕ್ಷಣೆಯ ಶಾಸ್ತ್ರೀಯ ಅಧ್ಯಯನಕ್ಕೆ ತೊಡಗಲು ವಿಜ್ಞಾನ ವಿಷಯದ ಪಿಯುಸಿ ಪಾಸಾಗಿರಬೇಕು. ಅದನ್ನಾಧರಿಸಿ ಜೀವಶಾಸ್ತ್ರ ವಿಷಯದ ಪದವಿ ಅಧ್ಯಯನದ ನಂತರ ವನ್ಯ ಜೀವಿ ಸಂರಕ್ಷಣೆಯ ಸ್ನಾತಕೋತ್ತರ ಪದವಿ ಹೊಂದಬಹುದು. ಇಲ್ಲವೇ ಪಿಯುಸಿ ನಂತರ, ಪಶುಸಂಗೋಪನ ವಿಜ್ಞಾನ, ವ್ಯವಸಾಯ ವಿಜ್ಞಾನ, ಅರಣ್ಯ ವಿಜ್ಞಾನ, ತೋಟಗಾರಿಕಾ ವಿಜ್ಞಾನ, ಪರಿಸರ ವಿಜ್ಞಾನ, ಪ್ರಾಣಿ ಶಾಸ್ತ್ರ, ಸಸ್ಯಶಾಸ್ತ್ರ, ಪಿ ಜಿ ಡಿಪ್ಲೊಮಾ ಇನ್ ಅಡ್ವಾನ್ಸ್‌ಡ್ದ್ ವೈಲ್ಡ್‌ಲೈಫ್ ಮ್ಯಾನೇಜ್‌ಮೆಂಟ್, ಬಿ.ಎಸ್ಸಿ. ಇನ್ ಫಾರೆಸ್ಟ್ರಿ, ವೈಲ್ಡ್‌ಲೈಫ್ ಸೈನ್ಸ್‌ಸ್, ಫಾರೆಸ್ಟ್ ಪ್ರಾಡಕ್ಟ್ ಅಂಡ್ ಯುಟಿಲೈಜೇಶನ್, ಡಿಪ್ಲೊಮಾ ಇನ್ ಲಾ ಅಂಡ್ ಅನಿಮಲ್ ಹೆಲ್ತ್, ಪಿಜಿ ಡಿಪ್ಲೊಮಾ ಇನ್ ವೈಲ್ಡ್ ಅನಿಮಲ್ ಡಿಸೀಸ್ ಮ್ಯಾನೇಜ್‌ಮೆಂಟ್, ಸರ್ಟಿಫಿಕೇಟ್ ಕೋರ್ಸ್ ಇನ್ ವೈಲ್ಡ್‌ಲೈಫ್ ಮ್ಯಾನೇಜ್ಮೆಂಟ್, ಸರ್ಟಿಫಿಕೇಟ್ ಇನ್ ಪಾರ್ಟಿಸಿಪೇಟರಿ ಫಾರೆಸ್ಟ್ ಮ್ಯಾನೇಜ್‌ಮೆಂಟ್, ಎಂ.ಬಿ.ಎ. ಇನ್ ಫಾರೆಸ್ಟ್ರಿ ಅಂಡ್ ಎನ್ವಿರಾನ್‌ಮೆಂಟ್ ಮ್ಯಾನೇಜ್ಮೆಂಟ್, ಎಂ.ಎಸ್ಸಿ ಇನ್ ವೈಲ್ಡ್‌ಲೈಫ್ ಬಯಾಲಜಿ ಅಂಡ್ ಕನ್ಸರ್‌ವೆಶನ್‌ಗಳಲ್ಲಿ ಪದವಿ ಸಂಪಾದಿಸಿ ಉದ್ಯೋಗ ಪಡೆಯಬಹುದು.
ಎಲ್ಲೆಲ್ಲಿ ಕೋರ್ಸ್?
ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು, ನ್ಯಾಷನಲ್ ಸೆಂಟರ್ ಫಾರ್ ಬಯಾಲಜಿಕಲ್ ಸೈನ್ಸ್, ಶಿವಮೊಗ್ಗದ ಕುವೆಂಪು ವಿವಿ , ಕೋಟಾದ ಯೂನಿವರ್ಸಿಟಿ ಆಫ್ ಕೋಟ, ಗುಜರಾತ್ , ಮುಂಬಯಿನ ಟಾಟಾ ಮೆಮೋರಿಯಲ್ ಹಾಸ್ಪಿಟಲ್, ಡೆಹ್ರಾಡೂನ್‌ನ ವೈಲ್ಡ್‌ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಗುವಾಹಟಿ ವಿವಿ, ಪುಣೆಯ ಫರ್ಗ್ಯುಸನ್ ಕಾಲೇಜು ಮುಂತಾದ ಕಾಲೇಜುಗಳು ವನ್ಯಜೀವಿ ಸಂರಕ್ಷಣೆಯ ಕೋರ್ಸ್‌ನ ಅಧ್ಯಯನಕ್ಕೆ ಅವಕಾಶ ಕಲ್ಪಿಸಿವೆ.
ಭಾರತವಷ್ಟೇ ಅಲ್ಲದೆ ವಿದೇಶಗಳಲ್ಲೂ ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದ ಹಲವು ಕೋರ್ಸ್‌ಗಳ ಅಧ್ಯಯನ ಕೈಗೊಳ್ಳಬಹುದು. ಇಂಗ್ಲೆಂಡ್‌ನ ಹಾರ್ಪರ್ ಆಡಮ್ಸ್ ಯುನಿವರ್ಸಿಟಿ, ನ್ಯೂಜಿಲ್ಯಾಂಡ್‌ನ ವಿಕ್ಟೋರಿಯಾ ಯೂನಿವರ್ಸಿಟಿ ಆಫ್ ವೆಲಿಂಗ್ಟನ್, ಅಮೆರಿಕಾದ ಫೋರಿಡಾ , ಯೂನಿವರ್ಸಿಟಿ ಆಫ್ ವೆರ್‌ಮೌಂಟ್, ಕೆನಡಾದ ಯೂನಿವರ್ಸಿಟಿ ಆಫ್ ಪ್ರಿನ್ಸ್ ಎಡ್ವರ್ಡ್ ಐಲ್ಯಾಂಡ್, ಬ್ರಿಟನ್‌ನ ಕೆಂಟ್ ಯುನಿವರ್ಸಿಟಿ, ಬ್ರಿಸ್ಟಲ್ ಗಳಲ್ಲಿಯೂ ವನ್ಯಜೀವಿ ಸಂರಕ್ಷಣೆಯ ಕುರಿತು ಕೋರ್ಸ್‌ಗಳನ್ನು ಕಲಿಯಬಹುದು.
ಯಾವ ಯಾವ ಕೆಲಸ?
ವೈಲ್ಡ್‌ಲೈಫ್ ಮ್ಯಾನೇಜರ್, ವೈಲ್ಡ್‌ಲೈಫ್ ಬಯಾಲಜಿಸ್ಟ್, ವೈಲ್ಡ್‌ಲೈಫ್ ಎಜುಕೇಟರ್, ಪಬ್ಲಿಕ್ ಏಜುಕೇಟರ್ ಅಂಡ್ ಔಟ್‌ರೀಚ್ ಸ್ಪೆಷಲಿಸ್ಟ್, ವೈಲ್ಡ್‌ಲೈಫ್ ಲಾ ಎನ್‌ಫೋರ್ಸ್‌ಮೆಂಟ್ ಆಫೀಸರ್, ವೈಲ್ಡ್‌ಲೈಫ್ ಟಿಕ್ನೀಶಿಯನ್, ವೈಲ್ಡ್‌ಲೈಫ್ ಇನ್‌ಸ್ಪೆಕ್ಟರ್ ಅಂಡ್ ಫೋಲೆನ್ಸಿಕ್ ಸ್ಪೆಶಾಲಿಸ್ಟ್, ಕುಮ್ಯುನಿಕೇಶನ್ಸ್ ಅಂಡ್ ಪಬ್ಲಿಕ್ ರಿಲೇಶನ್ಸ್ ಸ್ಪೆಷಲಿಸ್ಟ್, ವೈಲ್ಡ್‌ಲೈಫ್ ಪಾಲಿಸಿ ಅನಾಲಿಸ್ಟ್, ವೈಲ್ಡ್‌ಲೈಫ್ ಎಕಾನಾುಸ್ಟ್, ವೈಲ್ಡ್‌ಲೈಫ್ ಅಡ್ಮಿನಿಸ್ಟ್ರೇಟರ್, ಜಿಐಎಸ್ ಸ್ಪೆಶಾಲಿಸ್ಟ್… ಹೀಗೆ , ಹತ್ತಾರು ಉದ್ಯೋಗಗಳಿಗೆ ತೊಡಗಿಕೊಳ್ಳಬಹುದು.
ಬೇರೆ ಉದ್ಯೋಗಗಳಿಗೆ ಹೋಲಿಸಿದರೆ ಸಂರಕ್ಷಣೆಯ ಕೆಲಸ ತುಸು ಸವಾಲಿನದ್ದೇ. ಪ್ರಾಣಿಗಳ ಆವಾಸಕ್ಕೆ ಹತ್ತಿರವಿದ್ದೇ ಕೆಲಸ ಮಾಡಬೇಕಾದ ಅನಿವಾರ್ಯತೆಯ ಜೊತೆಗೆ ಹಗಲಿರುಳೆನ್ನದೆ ಫೀಲ್ಡಿಗಿಳಿದು ಕೆಲಸ ಮಾಡಬೇಕಾಗುತ್ತದೆ. ಕೆಲಸದ ನಡುವೆ ಪ್ರಾಣಿದಾಳಿ, ನೈಸರ್ಗಿಕ ಕೋಪಗಳಿಗೂ ಈಡಾಗುವ ಸಂದರ್ಭಗಳಿರುತ್ತವೆ. ಪ್ರಾಣಿಗಳಿಂದ ಹಬ್ಬುವ ವೈರಸ್‌ಗಳಿಂದ ರಕ್ಷಣೆ ಪಡೆದು ಅವುಗಳನ್ನು ರಕ್ಷಿಸಬೇಕಾದ ಅಗತ್ಯವಿರುತ್ತದೆ. ಜೊತೆಗೆ, ವಿಸ್ತೃತ ಅಧ್ಯಯನ, ಕ್ಷೇತ್ರಕಾರ್ಯ, ನೀತಿನಿರೂಪಣೆ, ಅನುಷ್ಠಾನಗಳಿಂದ ಜಗತ್ತಿಗೇ ಮಾದರಿಯಾಗಿ ನಿಲ್ಲುವ ಮುಕ್ತ ಅವಕಾಶವಿರುತ್ತದೆ.
ಗುರುರಾಜ್ ಎಸ್.ದಾವಣಗೆರೆ