Advertisement

ಪಶ್ಚಿಮಘಟ್ಟ,ಗುಡ್ಡಗಾಡುಗಳಿಗೆ ಕಾಳ್ಗಿಚ್ಚು ಭೀತಿ

02:41 PM Mar 07, 2023 | Team Udayavani |

ಮೈಸೂರು: ಎಲ್ಲೆಡೆ ಬಿಸಿಲಿನ ತಾಪ ಏರುತ್ತಿದ್ದು, ಅರಣ್ಯ ಪ್ರದೇಶ ಸೇರಿದಂತೆ ಗುಡ್ಡಗಾಡು, ಬೆಟ್ಟಗಳಲ್ಲಿ ಕಾಳ್ಗಿಚ್ಚಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕಾಳ್ಗಿಚ್ಚನ್ನು ಶೀಘ್ರದಲ್ಲೇ ನಿಯಂತ್ರಿಸಿ, ವನ್ಯ ಸಂಪತ್ತನ್ನು ಸಂರಕ್ಷಿಸಲು ಹೆಲಿಕಾಪ್ಟರ್‌ಗಳ ಅಗತ್ಯವಿದೆ.

Advertisement

ಬೇಸಿಗೆ ಹಿನ್ನೆಲೆ ಕಳೆದೊಂದು ತಿಂಗಳಲ್ಲಿ ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಬಿದ್ದು, ಸಾಕಷ್ಟು ಅರಣ್ಯ ನಾಶವಾಗಿದೆ. ಅದರಲ್ಲೂ ಮುಖ್ಯವಾಗಿ ಬೆಟ್ಟ ಮತ್ತು ಗುಡ್ಡಗಾಡಿನಿಂದ ಕೂಡಿದ ಅರಣ್ಯ ಪ್ರದೇಶಗಳಲ್ಲಿ ಕಾಳ್ಗಿಚ್ಚು ಕಂಡುಬಂದರೆ ತಕ್ಷಣವೇ ಬೆಂಕಿ ನಂದಿ ಸಲು ಅರಣ್ಯ ಇಲಾಖೆ ಮತ್ತು ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆಗೆ ಇಳಿಯಲು ತೊಡಕಾಗಿದೆ. ಪರಿಣಾಮ ಇಡೀ ಕಾಡೆ ಸುಟ್ಟು ಭಸ್ಮವಾಗುತ್ತಿದೆ. ಈ ಹಿನ್ನೆಲೆ ಕಡಿದಾದ ಪ್ರದೇಶ, ವಾಹನ ತೆರಳಲಾಗದ ಕಾಡು, ಬೆಟ್ಟ-ಗುಡ್ಡ ಪ್ರದೇಶಗಳಿಗೆ ಸುಲಭದಲ್ಲಿ ಕಾರ್ಯಾಚರಣೆ ನಡೆಸಲು ಹೆಲಿಕಾಪ್ಟರ್‌ ಸೂಕ್ತವಾಗಿದ್ದು, ಬೆಂಕಿಯನ್ನು ಆರಿಸಲು ಹೆಲಿಕಾಪ್ಟರ್‌ ಬಳಸುವ ಇಚ್ಛಾ ಶಕ್ತಿಯನ್ನು ಮುಖ್ಯಮಂತ್ರಿಗಳು ತೋರಬೇಕಾಗಿದೆ. ‌

ಅಸಹಾಯಕತೆಯಲ್ಲಿ ಅರಣ್ಯ ಇಲಾಖೆ: ಹಿಂದಿ ನಿಂದಲೂ ಹಳೇ ಮೈಸೂರು ಭಾಗದಲ್ಲಿ ಬೇಸಿಗೆ ಬಂದರೆ ಬಂಡೀಪುರ, ನಾಗರಹೊಳೆ, ಬಿಆರ್‌ಟಿ, ಎಂಎಂ ಹಿಲ್ಸ್ ಮುಂತಾದ ಪ್ರದೇಶಗಳಿಗೆ ಬೆಂಕಿ ಬೀಳುವುದು ಸಾಮಾನ್ಯವಾಗಿದೆ. ಆದರೆ ಕಾಡುಗಳು ಸಮತಟ್ಟು ಪ್ರದೇಶವಾಗಿದ್ದರೆ ಬೆಂಕಿ ಬಿದ್ದಾಗ ಆ ಪ್ರದೇಶಗಳಿಗೆ ತಕ್ಷಣವೇ ವಾಹನಗಳ ಮೂಲಕ ತಲುಪಿ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸಬಹುದಿತ್ತು. ಕಣಿವೆ, ಬೆಟ್ಟ, ಇಳಿಜಾರಿನಿಂದ ಕೂಡಿದ ಪ್ರದೇಶಗಳಿಗೆ ವಾಹನಗಳ ಮೂಲಕ ತೆರಳಿ ಬೆಂಕಿ ನಂದಿಸುವುದು ಕಷ್ಟ. ಜತೆಗೆ ಇಲಾಖೆ ಸಿಬ್ಬಂದಿ, ಸ್ವಯಂಸೇವಕರು ಕಾಲ್ನಡಿಗೆಯಲ್ಲಿ ತೆರಳಿ ಬೆಂಕಿ ನಂದಿಸಲು ಸಾಕಷ್ಟು ಸಮಯ ವ್ಯಯವಾಗಲಿದೆ.

ಇದರಿಂದ ಸಾವಿರಾರು ಎಕರೆ ಕಾಡಿಗೆ ಬೆಂಕಿಯ ಕೆನ್ನಾಲಿಗೆ ಹಬ್ಬಿ ಇಡೀ ಕಾಡೇ ನಾಶವಾಗುವ ಸಾಧ್ಯತೆ ಇದೆ. ಇತ್ತೀಚೆಗೆ ಪಶ್ಚಿಮ ಘಟ್ಟದ ಕಾಡುಗಳು ಮತ್ತು ಬೆಟ್ಟ, ಗುಡ್ಡಗಾಡುಗಳಿಗೆ ಬೆಂಕಿ ಬೀಳುತ್ತಿರುವುದರಿಂದ ಅರಣ್ಯ ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಟ್ಟ ಏರಿ ಕಡಿದಾದ ಪ್ರದೇಶವನ್ನು ತಲುಪಲು ಅಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಹೆಲಿಕಾಪ್ಟರ್‌ ಬಳಕೆ ಅನಿವಾರ್ಯವಾಗಿದೆ. ಹಾಗಾಗಿ ಹೆಲಿಕಾಪ್ಟರ್‌ ಸಹಾಯದಿಂದ ಮೇಲಿನಿಂದ ನೀರನ್ನು ಚಿಮುಕಿಸಿದರೆ ಮಾತ್ರ ಬೆಂಕಿಯನ್ನು ನಂದಿಸಲು ಸಾಧ್ಯವಾಗುತ್ತದೆ. ಇಲ್ಲವಾದರೆ ಅಪಾರ ಪ್ರಮಾಣದ ಕಾಡು ನಷ್ಟವಾಗಲಿದೆ.

ತಿಂಗಳಲ್ಲಿ 10 ಪ್ರಕರಣಗಳು: ಕಳೆದೊಂದು ತಿಂಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಆಕಸ್ಮಿಕ ಮತ್ತು ಕಿಡಿಗೇಡಿಗಳಿಂದ ಕಾಡು ಮತ್ತು ಬೆಟ್ಟಗಳಿಗೆ ಬೆಂಕಿ ಬಿದ್ದ ಪರಿಣಾಮ ಮೂರ್ನಾಲ್ಕು ದಿನಗಳ ಕಾಲ ನಿರಂತರವಾಗಿ ಹೊತ್ತಿ ಉರಿದ ಉದಾಹರಣೆಗಳು ಕಣ್ಣಮುಂದಿದೆ. ಫೆ.18ರಂದು ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ರೇಂಜ್‌ ವ್ಯಾಪ್ತಿಯ ಕೋಟೆ ಬೆಟ್ಟ ಹಾಗೂ ನಿಶಾನಿ ಬೆಟ್ಟ ಹಾಗೂ ಅದೇ ದಿನ ಸಕಲೇಶಪುರ ತಾಲೂಕಿನ ರಣಭಿಕ್ತಿ ರಕ್ಷಿತಾರಣ್ಯ ಬೆಂಕಿಗಾಹುತಿಯಾಯಿತು. ಫೆ.23ರಂದು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕುದುರೆಮುಖ ಕಡೆಯಿಂದ ಅಳದಂಗಡಿಯ ಊರ್ಜಾಲುಬೆಟ್ಟ, ಹೂವಿನಕೊಪ್ಪಲು ಅರಣ್ಯದ ಹುಲ್ಲುಗಾವಲು ಪ್ರದೇಶ ಸುಟ್ಟು ಭಸ್ಮವಾಯಿತು.

Advertisement

ಹಾಗೆಯೇ ಫೆ.25ರಂದು ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿರುವ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿನ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದು ಸತತ ನಾಲ್ಕುದಿನಗಳ ಕಾಲ ಹೊತ್ತಿ ಉರಿಯಿತು. ಮಾ.4ರಂದು ಬಂಡೀಪುರ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟ ವಲಯ ವ್ಯಾಪ್ತಿಯ ಮೊಗನಹಳ್ಳಿ ಬಳಿ ಬೆಟ್ಟಕ್ಕೆ ಬೆಂಕಿ ಬಿದ್ದು ಬಹಳಷ್ಟು ಅರಣ್ಯ ನಾಶವಾಯಿತು. ಅದೇ ದಿನ ಚಾಮುಂಡಿಬೆಟ್ಟದಲ್ಲಿ ಕಿಡಿಗೇಡಿಗಳು ಹೆಚ್ಚಿದ ಬೆಂಕಿಗೆ ಅಪಾರ ಪ್ರಮಾಣದ ಕಾಡು ನಾಶವಾಯಿತು. ಈ ವೇಳೆ ಬೆಂಕಿ ನಂದಿ ಸಲು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಈ ಎಲ್ಲ ಪ್ರದೇಶಗಳು ಗುಡ್ಡಗಾಡಿನಿಂದ ಕೂಡಿರುವುದರಿಂದ ಅರಣ್ಯ ಇಲಾಖೆ ಬೆಂಕಿಯನ್ನು ಹತೋಟಿಗೆ ತರಲು ಪರದಾಡಿದ ಪ್ರಸಂಗ ನಡೆಯಿತು.

ಒಂದು ವೇಳೆ ರಾಜ್ಯದಲ್ಲಿ ಕಾಳ್ಗಿಚ್ಚು ನಿಯಂತ್ರಣಕ್ಕೆ ಹೆಲಿಕಾಪ್ಟರ್‌ ನಿಯೋಜಿಸಿದ್ದರೆ ಸಾವಿರಾರು ಹೆಕ್ಟೇರ್‌ ಪ್ರದೇಶದ ಅರಣ್ಯ ನಾಶವಾಗುವುದು ತಪ್ಪಿಸಿದಂತಾಗುತ್ತಿತ್ತು.

ಕಾಳ್ಗಿಚ್ಚಿಗೆ ಪ್ರಮುಖ ಕಾರಣಗಳು: ಇತ್ತೀಚಿನ ತಿಂಗಳುಗಳಲ್ಲಿ ವಾತಾವರಣದಲ್ಲಿ ಬದಲಾವಣೆ ಕಂಡುಬಂದಿದ್ದು, ಉಷ್ಣಾಂಶ ಪ್ರಮಾಣ ಏರಿಕೆ ಕಂಡಿದೆ. ಜತೆಗೆ ಅತಿಹೆಚ್ಚು ಗಾಳಿ ಬೀಸುತ್ತಿರುವುದಲ್ಲದೇ, ವಾತಾವರಣದಲ್ಲಿನ ಉಷ್ಣಾಂಶದಿಂದ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ನೂರಾರು ಎಕರೆಗೆ ವ್ಯಾಪಿಸಿಕೊಳ್ಳುತ್ತಿದೆ. ಕಾಳ್ಗಿಚ್ಚು ನಿಯಂತ್ರಿಸಲು ಆದಿವಾಸಿ ಜನರನ್ನು ಬಳಸಿಕೊಳ್ಳುವುದೇ ಸೂಕ್ತ ಎಂದು ವನ್ಯಜೀವಿ ತಜ್ಞ ಕೃಪಾಕರ ಸೇನಾನಿ ಉದಯವಾಣಿಗೆ ತಿಳಿಸಿದ್ದಾರೆ.

ಅರಣ್ಯ ಪ್ರದೇಶಕ್ಕೆ ದೊಡ್ಡಮಟ್ಟದ ಬೆಂಕಿಬಿದ್ದು, ನಮ್ಮಿಂದ ನಿಯಂತ್ರಣ ಸಾಧ್ಯವಾಗದೇ ಇದ್ದ ಸಂದರ್ಭ ಹೆಲಿಕಾಪ್ಟರ್‌ ಬಳಸಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದೇವೆ. ಈಗಾಗಲೇ ಬೆಂಗಳೂರಿನ ಯಲಹಂಕದಲ್ಲಿನ ವಾಯುಸೇನೆಯೊಂದಿಗೆ ಇಲಾಖೆ ಪಿಸಿಸಿಎಫ್ ಮಟ್ಟದಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. – ರಮೇಶ್‌ ಕುಮಾರ್‌, ಸಿಎಫ್ ಬಂಡೀಪುರ.

ಹುಲಿ ಸಂರಕ್ಷಿತಾರಣ್ಯಗಳಿಗೆ ಸಾಕಷ್ಟು ಸಾಕಷ್ಟು ಅನದಾನ ಇರುತ್ತದೆ. ಆದರೆ ಉಳಿದ ಇತರೆ ರಕ್ಷಿತಾರಣ್ಯಗಳಲ್ಲಿ ಅನುದಾನ ಸಮಸ್ಯೆ ಇದೆ. ಜತೆಗೆ ಈ ಕಾಡುಗಳಲ್ಲಿ ಸಿಬ್ಬಂದಿ ಕೊರತೆ. ಹಾಗಾಗಿ ಆನೆ ಟಾಸ್ಕ್ಫೋರ್ಸ್‌ನಂತೆ ಬೆಂಕಿ ನಿಗ್ರಹ ಪಡೆ ರಚಿಸಿ, ಸ್ಥಳೀಯರನ್ನು ನೇಮಿಸ ಬೇಕು. ಜನರು ಹೋಗದ ಸ್ಥಳಗಳಿಗೆ ಹೆಲಿಕಾಪ್ಟರ್‌ ಬಳಕೆ ಮಾಡಿಕೊಳ್ಳುವುದು ಅಗತ್ಯವಾಗಿದೆ. – ಜಿ. ವೀರೇಶ್‌, ಗೌರವ ವನ್ಯಜೀವಿ ಪರಿಪಾಲಕ ಚಿಕ್ಕಮಗಳೂರು.

-ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next