Advertisement

ಕಾಡಾನೆ ಓಡಿಸಲು ಪಳಗದ ಇಲಾಖೆ: ಹಳೆ ಕಾಲದ ಗರ್ನಾಲು, ತೋಟೆಯೇ ಗತಿ

11:47 PM Feb 20, 2023 | Team Udayavani |

ಪುತ್ತೂರು: ನಾಡಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳನ್ನು ಮರಳಿ ಕಾಡಿಗೆ ಅಟ್ಟಿಸುವ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಬಳಿ ಇರುವುದು ಹಳೆಯ ಕಾಲದ ಗರ್ನಾಲು ಹಾಗೂ ತೋಟೆ ಸದ್ದು ಮಾತ್ರ!

Advertisement

ಕೃಷಿ ತೋಟಕ್ಕೆ ಸೀಮಿತ ವಾಗಿದ್ದ ಕಾಡಾನೆ ದಾಳಿಯೀಗ ಮಾನವನ ಜೀವ ಬಲಿ ಪಡೆ ಯುವ ಹಂತಕ್ಕೆ ತಲುಪಿದ್ದರೂ ಸರಕಾರ ಮಾತ್ರ ಅರಣ್ಯ ಸಿಬಂದಿಗೆ ಸುಧಾರಿತ ಉಪಕರಣ ಒದಗಿಸದೆ ಜೀವದ ಜತೆ ಚೆಲ್ಲಾಟವಾಡುತ್ತಿದೆ.

ಗರ್ನಾಲೇ ಗತಿ
ಕಾಡಾನೆ ನಾಡಿಗೆ ಬಂತು ಎನ್ನುವ ಸುಳಿವು ಸಿಕ್ಕಿದ ಕೂಡಲೇ ಮರಳಿಗೆ ಕಾಡಿಗಟ್ಟಲು ಇಲಾಖೆಯ ಸಿಬಂದಿಗೆ ಇರುವ ಮೊದಲ ದಾರಿ ಗರ್ನಾಲು ಸ್ಫೋಟಿಸುವುದು. ಎರಡನೆಯದ್ದು ಬಂದೂಕಿನಿಂದ ತೋಟೆ ಸಿಡಿತ. ಮೂರನೇ ಆಯ್ಕೆಯೇ ಇಲ್ಲ. ಹಳೆ ಕಾಲ ಈ ಉಪಾಯಗಳಿಗೆ ಈಗಿನ ಕಾಡಾನೆಗಳು ಹೆದರುತ್ತಿಲ್ಲ. ಇವುಗಳ ಸದ್ದು ಆನೆಗಳ ಕಿವಿಗೆ ಕೇಳಿಸದೆ ದಶಕಗಳೇ ಕಳೆದಿವೆ.

ಸಿಬಂದಿಗೆ ಪ್ರಾಣ ಸಂಕಟ
ಕಾಡಾನೆ ಕೃಷಿ ತೋಟಕ್ಕೆ, ಜೀವಕ್ಕೆ ಹಾನಿ ಮಾಡಿದಾಗ ಜನರ ಮೊದಲ ಆಕ್ರೋಶ ವ್ಯಕ್ತವಾಗುವುದು ಅರಣ್ಯ ಸಿಬಂದಿ ಮೇಲೆ. ಆನೆ ಓಡಿಸಿ ಎಂದು ಮೇಲಾಧಿಕಾರಿಗಳಿಂದ ಒತ್ತಡ. ಆದರೆ ಅಗತ್ಯ ಸವಲತ್ತು ಇಲ್ಲವೆಂದು ಹೇಳಿಕೊಳ್ಳಲಾಗದ ಪರಿಸ್ಥಿತಿ ಸಿಬಂದಿಯದ್ದು. ಒತ್ತಡಕ್ಕೆ ಮಣಿದು ಕಾಡಿಗೆ ಇಳಿಯುವ ಸಿಬಂದಿಯ ಜೀವಕ್ಕೂ ರಕ್ಷಣೆ ಇಲ್ಲ. ಹಾಗಾಗಿ ಜನರ ಜತೆಗೆ ಅರಣ್ಯ ಸಿಬಂದಿ ದಿನ ನಿತ್ಯ ಆನೆ ದಾಳಿಯ ಭಯದಿಂದಲೇ ಸಂಚರಿಸಬೇಕಾದ ದುಸ್ಥಿತಿ ಇದೆ.

ಸಮಿತಿಗಷ್ಟೇ ಸೀಮಿತ
ಹಾಸನ, ಚಿಕ್ಕಮಗಳೂರು, ಮೈಸೂರು ಮತ್ತು ಕೊಡಗು ಜಿಲ್ಲೆಗ ಳಲ್ಲಿ ಕಾಡಾನೆ ಹಾವಳಿ ಹೆಚ್ಚಳ ಆಗಿರುವುದರಿಂದ ಅದನ್ನು ತಡೆಗಟ್ಟಲು ಪ್ರತೀ ಜಿಲ್ಲೆಗೊಂದರಂತೆ ಉಪಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲಿಫ‌ಂಟ್‌ ಟಾಸ್ಕ್ ಫೋರ್ಸ್‌ ರಚಿಸಲಾಗಿದೆ. ಅರಣ್ಯ, ಪ್ರದೇಶಗಳ ಒಳಗೆ ನೀರಿನ ಲಭ್ಯತೆ ಹೆಚ್ಚಿಸಲು ರಕ್ಷಿತಾರಣ್ಯಗಳಲ್ಲಿ ಕೆರೆಗಳ ನಿರ್ಮಾಣ, ಸೌರಬೇಲಿ ನಿರ್ಮಾಣ, ಕಾಡಾನೆಗಳ ಮಾಹಿತಿಯನ್ನು ಸಂಗ್ರಹಿಸಲು 24 ಗಂಟೆಯ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಇಷ್ಟಾದರೂ ಅಗತ್ಯ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಸರಕಾರ ಮೌನ ತಾಳಿದೆ.

Advertisement

ಕಾಡಾನೆಗಳು ತೋಟಕ್ಕೆ ನುಗ್ಗಿ ಅಪಾರ ಹಾನಿ ಉಂಟು ಮಾಡುತ್ತಿವೆ. ಈಗ ಮಾನವನ ಮೇಲೂ ದಾಳಿಯಾಗುತ್ತಿದೆ. ಆದರೆ ಅವುಗಳನ್ನು ಹಿಮ್ಮೆಟ್ಟಿಸಲು ಇಲಾಖೆಯ ಬಳಿ ಆಧುನಿಕ ಸಾಧನಗಳೇ ಇಲ್ಲ. ಹಳೆ ಕಾಲದ ತಂತ್ರಗಳಿಗೆ ಆನೆಗಳು ಬಗ್ಗುತ್ತಿಲ್ಲ. ಆನೆಗಳೇ ಅಪ್ಡೆàಟ್‌ ಆಗಿರುವಾಗ ಇಲಾಖೆ ಯಾಕೆ ಸುಧಾರಣೆ ಆಗಿಲ್ಲ ಅನ್ನುವುದೇ ಪ್ರಶ್ನೆ.

– ದಿನೇಶ್‌, ಸುಳ್ಯ

4 ವರ್ಷಗಳಲ್ಲಿ 95 ಸಾವು!
ಮಲೆನಾಡು, ಹಾಸನ, ದಕ್ಷಿಣ ಕನ್ನಡ ಸೇರಿದಂತೆ ಕಾಡಂಚಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಡಾನೆ ದಾಳಿ ನಿರಂತರವಾಗಿದ್ದು, ಸರಕಾರದ ಅಧಿಕೃತ ಅಂಕಿ-ಅಂಶ ಪ್ರಕಾರ 4 ವರ್ಷಗಳಲ್ಲಿ 95 ಜನರು ಬಲಿಯಾಗಿದ್ದಾರೆ.
2019-20ರಲ್ಲಿ 29 2020-21ರಲ್ಲಿ 23
2021-22ರಲ್ಲಿ 22 2022-23ರಲ್ಲಿ 21

Advertisement

Udayavani is now on Telegram. Click here to join our channel and stay updated with the latest news.

Next