Advertisement

ಆನೇಕಲ್‌ನಲ್ಲಿ ಕಾಡಾನೆ ಹಿಂಡು ದಾಳಿ: ರಾಗಿ ಬೆಳೆ ನಾಶ

12:56 PM Dec 01, 2021 | Team Udayavani |

ಆನೇಕಲ್‌: ರಾಗಿ ತೆನೆ ವಾಸನೆ ಜಾಡು ಹಿಡಿದು ಕಾಡಿನಿಂದ ಹಳ್ಳಿಗಳತ್ತ ಬಂದ ಆರು ಕಾಡಾನೆಗಳ ಹಿಂಡು ಹಳ್ಳಿಯ ಕೆರೆಯೊಂದರಲ್ಲಿ ಉಳಿದ ಘಟನೆ ಆನೇಕಲ್‌ ತಾಲೂಕಿನ ತೆಲಗರಳ್ಳಿ ಬಳಿ ನಡೆದಿದೆ. ಸಹಜವಾಗಿ ಕಾಡಾನೆಗಳು ವರ್ಷದ ಕೊನೆ ಮತ್ತು ಆರಂಭದ ಮೂರು ತಿಂಗಳು ಆಹಾರ ಹರಸಿ ಹಳ್ಳಿಗಳತ್ತ ಬರುವುದು ಸಹಜ.

Advertisement

ಅಂತೆಯೇ ತಡ ರಾತ್ರಿ 4 ಗಂಡು, 2 ಹೆಣ್ಣು ಆನೆಗಳು ಗಡಿ ಅರಣ್ಯ ಭಾಗವಾಗದ ಮುತ್ತ್ಯಾಲಮಡುವು ಭಾಗದಿಂದ ಸೋಲೂರು ಬಳಿ ಆನೇಕಲ್‌ ಗುಮ್ಮಾಳಪುರ ರಸ್ತೆ ದಾಟಿ ವಣಕನಹಳ್ಳಿ ಸುತ್ತಮುತ್ತಲಿನ ರಾಗಿ ಬೆಳೆ ತಿಂದು ಸುತ್ತಾಡಿ ಬೆಳಗಾಗುತ್ತಲೇ ಅದೇ ರಸ್ತೆ ದಾಟುವ ವೇಳೆ ಜನ ಪಟಾಕಿ ಹಚ್ಚಿದ್ದರಿಂದ ಆನೆಗಳು ಗಾಬರಿಗೊಂಡು ಮತ್ತೇ ವಣಕನಹಳ್ಳಿ, ತೆಲಗರಲ್ಲಿ ಕಾಳನಾಯಕನಹಳ್ಳಿ ಭಾಗಗಲ್ಲಿ ಬೀಡು ಬಿಟ್ಟಿದ್ದವು.

ದೀಪಾವಳಿ ಪಟಾಕಿ: ಸುದ್ದಿ ತಿಳಿದ ಸುತ್ತಮುತ್ತಲಿನ ಜನರ ಗುಂಪು ಆನೆಗಳಿರುವ ನೀಲಗಿರಿ ತೋಪು ಸುತ್ತುವರೆದು ಎಲ್ಲೆಂದರಲ್ಲಿ ಪಟಾಕಿ ಹಚ್ಚಿ ಆನೆಗಳಿಗೆ ದಿಕ್ಕು ತೋಚದಂತೆ ಮಾಡಿದರು.

ಅರಣ್ಯ ಸಿಬ್ಬಂದಿ ಹರಸಾಹಸ: ಸುದ್ದಿ ತಿಳಿದ ಆನೇಕಲ್‌ ಪ್ರಾದೇಶಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ಕೃಷ್ಣ ನೇತೃತ್ವದ ತಂಡ ಇಡೀ ದಿನ ಕಾರ್ಯಚರಣೆ ನಡೆಸಿ ಸಂಜೆ 4.30ರಲ್ಲಿ ಆನೇಕಲ್‌ – ಗುಮ್ಮಾಳಪುರ ರಸ್ತೆ ದಾಟಿಸಿ ಸಂಜೆ 6ರ ಸುಮಾರಿಗೆ ಕಾಡಿಗಟ್ಟಲು ಯಶಸ್ವಿಯಾದರು.

ಬೆಳೆ ಹಾನಿ: ವಣಕನಹಳ್ಳಿ, ತೆಲಗರಳ್ಳಿ, ಕಾಳನಾಯಕನಳ್ಳಿ ಸುತ್ತ ಮುತ್ತಲಿನ ರಾಗಿ ಬೆಳೆ ,ಬದನೆ, ಟೊಮೆಟೋ ಬೆಳೆ ಹಾನಿಯಾಗಿದೆ. ನೀಲಗಿರಿ ತೋಪಿನಲ್ಲಿದ್ದ ಮರಗಳು ನೆಲಕ್ಕುರುಳಿದ್ದು ಅಪಾರ ನಷ್ಟವಾಗಿದೆ.

Advertisement

ತಮಿಳುನಾಡಿನಿಂದ ಬಂದ ಆನೆಗಳು: ಆನೇಕಲ್‌ ತಾಲೂಕಿನ ಹಳ್ಳಿಗಳು ಒಂದು ಭಾಗದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅರಣ್ಯ ಭಾಗ ಮತ್ತು ಕೆಲ ಭಾಗದಲ್ಲಿ ತಮಿಳು ನಾಡಿನ ಜವಳಗೆರೆ ಅರಣ್ಯ ಭಾಗ ಆವರಿಸಿದೆ. ಸದ್ಯ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅರಣ್ಯದಿಂದ ಆನೆಗಳು ಹಳ್ಳಿಗಳತ್ತ ಬಾರದಂತೆ ಅರಣ್ಯ ಸಿಬ್ಬಂದಿ ರಾತ್ರಿ ಹಗಲು ಕಾವಲು ಕಾಯುತ್ತಿದ್ದಾರೆ. ಜತೆಗೆ ರೈಲ್ವೆ ಹಳಿ ಬೇಲಿ ಹಾಕಿದ್ದಾರೆ.

ಈಗ, ಬಂದಿರುವ ಆನೆಗಳು ಜವಳಗೆರೆ ಅರಣ್ಯದಿಂದ ಗುಮ್ಮಾಳಪುರ ಮಾರ್ಗವಾಗಿ ಮುತ್ಯಾಲಮಡುನ ಬಳಿ ಇರುವ ಹ್ಯಾಪಿ ಹೋಮ್‌ ರೆಸಾರ್ಟ್‌ ಬಳಿಯಿಂದ ಸೋಲೂರು ಬಳಿ ಹೊಲಗಳತ್ತ ಕಾಡಾನೆಗಳು ಬಂದಿವೆ ಎಂದು ಆನೇಕಲ್‌ ಪ್ರಾದೇಶಿಕ ಅರಣ್ಯ ವಿಭಾಗದ ಉಪ ವಲಯಅರಣ್ಯಾಧಿಕಾರಿ ಬಾಲಕೃಷ್ಣ ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಬಿರಾದರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next