ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಹೊರಬಂದಿದ್ದ ಮೂರು ಕಾಡಾನೆಗಳ ಹಿಂಡು ಜನರ ಕೂಗಾಟಕ್ಕೆ ಬೆದರಿ ಓಡುವ ವೇಳೆ ದನಗಾಹಿ ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.
ಸಾಮಾನ್ಯವಾಗಿ ರಾತ್ರಿ ವೇಳೆ ಕಾಡಿಗಟ್ಟುವುದು ವಾಡಿಕೆ. ಹರಳಹಳ್ಳಿ ಬಳಿಯ ಹದ್ವಾಳು ಕೆರೆ ಬಳಿ ಬೀಡು ಬಿಟ್ಟಿದ್ದ ಆನೆಗಳನ್ನು ಡಿಆರ್ ಎಫ್ ಓ ದ್ವಾರಕನಾಥ್ ನೇತೃತ್ವದಲ್ಲಿ ಸಿಬ್ಬಂದಿಗಳು ಕಾವಲು ಕಾಯುತ್ತಿದ್ದರು.
ಇದನ್ನೂ ಓದಿ:ಹುಣಸೂರು: ಕಾಡಿಗಟ್ಟುವ ವೇಳೆ ಊರೊಳಗೆ ಓಡಿದ ಕಾಡಾನೆಗಳು; ಗ್ರಾಮಸ್ಥರು ಹೈರಾಣು
ಮಂಗಳವಾರ ಮದ್ಯಾಹ್ನ ಕಾಡಾನೆಗಳನ್ನು ನೋಡಲು ಬಂದಿದ್ದ ಜನರು ಕೂಗಾಟ ನಡೆಸಿದ್ದರಿಂದ ಬೆದರಿ ಅತ್ತಿಂದಿತ್ತಬೋಡಲಾರಂಭಿಸಿದೆ. ಈ ವೇಳೆ ಪಕ್ಕದ ಜಮೀನಿನಲ್ಲಿ ದನಗಳನ್ನು ಮೇಯಿಸುತ್ತಿದ್ದ ವೃದ್ದೆ ಪುಟ್ಟಲಕ್ಷ್ಮಮ್ಮ ಕಾಡಾನೆಗಳನ್ನು ಕಂಡು ಹೆದರಿ ಕೂಗಿಕೊಂಡರಾದರೂ ಅದಾಗಲೇ ಒಂದು ಆನೆ ಸಮೀಪಕ್ಕೆ ಬಂದು ಪುಟ್ಟಲಕ್ಷ್ಮಮ್ಮರಿಗೆ ತಿವಿದು ಗಾಯಗೊಳಿಸಿದೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ತಕ್ಷಣವೇ ಆಕೆಯನ್ನು ಜೀಪಿನಲ್ಲಿ ಕರೆತಂದು ಹುಣಸೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.