Advertisement

ತೆಂಗಿನಕೆರೆ ಹತ್ತಿರ ಬೀಡು ಬಿಟ್ಟ ಕಾಡಾನೆ: ಗ್ರಾಮಸ್ಥರಲ್ಲಿ ಆತಂಕ

03:03 PM Jun 25, 2022 | Team Udayavani |

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಮಾರುಕಟ್ಟೆ ಸಮೀಪವಿರುವ ತೆಂಗಿನಕೆರೆ ಹತ್ತಿರ ಒಂಟಿ ಸಲಗವೊಂದು ಶುಕ್ರವಾರ ಕಾಣಿಸಿಕೊಂಡಿದ್ದು, ಇದು ಜನರ ಆತಂಕಕ್ಕೆ ಕಾರಣವಾಗಿದೆ.

Advertisement

ಕಾಡಿನಿಂದ ನಾಡಿಗೆ ಆಹಾರ ಅರಸಿ ಬಂದಿದ್ದ ಕಾಡಾನೆಯು ಕಳೆದ ಎರಡು ದಿನದಿಂದ ದಾರಿತಪ್ಪಿ ಚಾಮರಾಜ ನಗರದ ಬೂದಿತಿಟ್ಟು ಹಾಗೂ ಯಡಬೆಟ್ಟದ ಬಳಿಯ ಎಣ್ಣೆಹೊಳೆ ಬಳಿ ಕಾಣಿಸಿಕೊಂಡಿತ್ತು. ಕಾಡಾನೆ ಗುರುವಾರ ರಾತ್ರೋರಾತ್ರಿ ಸಂಚರಿಸಿ ತೆರಕಣಾಂಬಿಯ ತೆಂಗಿನಕೆರೆ ಸಮೀಪಕ್ಕೆ ಶುಕ್ರವಾರ ಬಂದು ತಲುಪಿದೆ.

ಪಶ್ಚಿಮದ ಕೆರೆಯಂಗಳದಲ್ಲಿ ನೀರಿನಿಂದ ಆಚೆ ಆನೆ ಬೀಡು ಬಿಟ್ಟಿದ್ದು, ಮೇವು-ನೀರಿನ ಲಭ್ಯತೆ ಜತೆಗೆ ಜನರ ಗಲಾಟೆ ಹಿನ್ನೆಲೆಯಲ್ಲಿ ಸಲಗ ಅಲ್ಲಲ್ಲೇ ಓಡಾಡಿಕೊಂಡಿತ್ತು. ಬಳ್ಳಾರಿ ಜಾಲಿ ನಡುವೆ ಸಣ್ಣ ಕಾಲು ದಾರಿಯಲ್ಲಿ ಕೆರೆಯ ಪಶ್ಚಿಮ ಭಾಗಕ್ಕೆ ಹೋಗಲು ಮಾತ್ರ ಸ್ಥಳವಕಾಶ ಇತ್ತು. ಅಲ್ಲದೇ ಕೆರೆಯ ಸುತ್ತಲೂ ಬೆಳಗಿನಿಂದ ಸಂಜೆ ತನಕ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದ ಕಾರಣ ಆನೆಯನ್ನು ಕಾಡಿಗಟ್ಟುವ ಕಾರ್ಯ ಸಾಧ್ಯವಾಗಲಿಲ್ಲ.

ಕೆರೆಯಲ್ಲಿ ಕಾಡಾನೆ ಇರುವುದನ್ನು ನೋಡಿ ವಿಷಯ ತಿಳಿಸಿದ ಹಿನ್ನೆಲೆಯಲ್ಲಿ ಜನರು ನೂರಾರು ಸಂಖ್ಯೆಯಲ್ಲಿ ಗುಂಪು ಗೂಡಿದ್ದರು. ಮಾಹಿತಿ ಅರಿತ ಗುಂಡ್ಲುಪೇಟೆ ಮತ್ತು ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ ಡಾ.ಲೋಕೇಶ್‌, ಎನ್‌.ಪಿ.ನವೀನ್‌ಕುಮಾರ್‌ ಇತರೆ ಅಧಿಕಾರಿಗಳು, ನೌಕರರು, ವಿಶೇಷ ಹುಲಿ ಸಂರಕ್ಷಣಾ ದಳದ 80ರಷ್ಟು ಮಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.

ಎಪಿಎಂಸಿ ವಹಿವಾಟು ಸ್ಥಳಾಂತರ: ತೆರಕಣಾಂಬಿ ಮಾರುಕಟ್ಟೆ ಸಮೀಪವಿರುವ ತೆಂಗಿನಕೆರೆ ಹತ್ತಿರ ಒಂಟಿ ಸಲಗ ಬೀಟು ಬಿಟ್ಟಿರುವ ಹಿನ್ನೆಲೆ ಹಳೇ ಸಂತೇಮಾಳದಲ್ಲಿ ನಡೆಯುತ್ತಿದ್ದ ತರಕಾರಿ ವಹಿವಾಟನ್ನು ಸ್ಥಳಾಂತರಿಸಿ, ಗ್ರಾಮದ ವೆಂಕಟೇಶ್ವರ ಕಲ್ಯಾಣ ಮಂಟಪ ಮುಂದೆ, ಸಮುದಾಯ ಭವನದ ಬಳಿ ವಹಿವಾಟು ನಡೆಸಲಾಯಿತು.

Advertisement

ವೆಂಕಟರಮಣಸ್ವಾಮಿ ದೇವಾಲಯ ಸಂರಕ್ಷಿತ ಅರಣ್ಯದ ಮೂಲಕ ಹತ್ತಿರವಿರುವ ಕುಂದಕೆರೆ ಅರಣ್ಯ ವಲಯಕ್ಕೆ ಕಾಡಾನೆ ಹೋಗುವಂತೆ ಮಾಡಲು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯತಂತ್ರ ರೂಪಿಸಲಾಗಿದೆ. – ಡಾ.ಲೋಕೇಶ್‌, ಆರ್‌ಎಫ್ಒ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next