Advertisement

ಸ್ಥಳೀಯ ಶಾಸಕರ ನಿರ್ಲಕ್ಷ್ಯದಿಂದ ಕಾಡಾನೆ ಹಾವಳಿ ಹೆಚ್ಚಳ: ಕಾಂಗ್ರೆಸ್‌

04:13 PM May 17, 2022 | Team Udayavani |

ಹಾಸನ: ಆಲೂರು-ಸಕಲೇಶಪುರ ತಾಲೂಕುಗಳಲ್ಲಿ ಕಾಡಾನೆಗಳ ಸಮಸ್ಯೆ ಹೆಚ್ಚಾಗಲು ಸ್ಥಳೀಯ ಶಾಸಕ ಎಚ್‌.ಕೆ.ಕುಮಾರಸ್ವಾಮಿ ಅವರ ನಿರ್ಲಕ್ಷ್ಯವೇ ಕಾರಣ ಎಂದು ಕೆಪಿಸಿಸಿ ಮಹಿಳಾಧ್ಯಕ್ಷೆ ಪುಷ್ಪಾ ಅಮರನಾಥ್‌ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ದಿನೇ ದಿನೆ ಹೆಚ್ಚಾಗುತ್ತಿದ್ದು, ಸಾವು-ನೋವುಗಳೂ ಗಣನೀಯವಾಗಿ ಹೆಚ್ಚಾಗಿವೆ. 14 ವರ್ಷಗಳಿಂದ ಕುಂಭಕರ್ಣನಂತೆ ಮಲಗಿದ್ದ ಸಕಲೇಶಪುರ ಕ್ಷೇತ್ರದ ಶಾಸಕರು, ಚುನಾವಣೆಗೆ ಇನ್ನೊಂದು ವರ್ಷವಿರುವಾಗ ಗಾಢ ನಿದ್ದೆ ಯಿಂದೆದ್ದು ಕಾಡಾನೆ ಸಮಸ್ಯೆ ಬಗೆಹರಿಸಲು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಶಾಸಕರು ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸುವ ಬದಲು ಕ್ಷೇತ್ರದಲ್ಲೇ ಜನರೊಂದಿಗೆ ಪ್ರತಿಭಟನೆ ನಡೆಸಲು ಮುಂದಾಗಿರುವುದು ಹಾಸ್ಯಾಸ್ಪದ. ಹೋರಾಟದ ಮೂಲಕ ತಾತ್ಕಾಲಿಕವಾಗಿ ಜನರ ಕಣ್ಣೊರೆಸುವ ಪ್ರಯತ್ನ ಮಾಡುವ ಬದಲು ನಿಜವಾದ ಕಾಳಜಿ ಇದ್ದರೆವಿಧಾನಸೌಧದಲ್ಲಿ ಪ್ರತಿಭಟನೆ ನಡೆಸಿ, ಕಾಡಾನೆಗಳಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಿ ಎಂದು ಹೇಳಿದರು.

ಕ್ಷೇತ್ರದ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಸಂಸದರು ಜೆಡಿಎಸ್‌ ಪಕ್ಷದವರಾಗಿದ್ದರೂಸಕಲೇಶಪುರ ತಾಲೂಕಿನ ಜ್ವಲಂತ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಅವರಿಗೆ ಇಚ್ಛಾಶಕ್ತಿ ಇದ್ದಿದ್ದರೆ ರಾಜ್ಯದಲ್ಲಿಸಮ್ಮಿಶ್ರ ಸರ್ಕಾರ ಇದ್ದಾಗಲೇ ಕಾಡಾನೆ ಸಮಸ್ಯೆಗೆ ಶಾಶ್ವತಪರಿಹಾರ ಕಲ್ಪಿಸಬಹುದಿತ್ತು. ಆದರೆ, ಆಗ ತಾಳಿದ ನಿರ್ಲಕ್ಷ್ಯದಿಂದಾಗಿ ಕಾಡಾನೆಗಳ ಹಾವಳಿ ಹೆಚ್ಚುತ್ತ ಬಂದಿದೆ ಎಂದರು.

ಜನಪ್ರತಿನಿಧಿಗಳಷ್ಟೇ ಅಲ್ಲ, ಸಕಲೇಶಪುರ ಕ್ಷೇತ್ರವನ್ನು ಜಿಲ್ಲಾಡಳಿತ ಕೂಡ ನಿರ್ಲಕ್ಷಿಸಿದೆ. ಕಾಡಾನೆ ದಾಳಿಯಾದಾಗ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವುದಿಲ್ಲ. ಉಸ್ತುವಾರಿ ಸಚಿವರು ನಾಮ್‌ ಕೇವಾಸ್ತೆಗೆ ಭೇಟಿ, ಸುಳ್ಳು ಭರವಸೆ ನೀಡಿ ಹೋಗುತ್ತಿದ್ದಾರೆ ಹೊರತು, ಇದುವರೆಗೂ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ ಎಂದು ದೂರಿದರು.

Advertisement

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ತಾರಾ ಚಂದನ್‌, ಕೆಪಿಸಿಸಿ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ಸುಜಾತಾ, ಪಕ್ಷದ ಮುಖಂಡರಾದ ವಿಜಯಕುಮಾರ್‌, ವಿನೋದ್‌ ಕುಮಾರ್‌, ಮುಬೀನಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next