Advertisement

ಬಾಂಜಾರು ಮಲೆಯಲ್ಲಿ ಮತಗಟ್ಟೆ ವೀಕ್ಷಣೆಗೆ ತೆರಳಿದ ಅಧಿಕಾರಿಗಳಿಗೆ ಎದುರಾದ ಒಂಟಿ ಸಲಗ

04:54 AM Dec 13, 2020 | Team Udayavani |
ಬೆಳ್ತಂಗಡಿ: ಗ್ರಾ.ಪಂ. ಚುನಾವಣೆ ರಂಗೇರುತ್ತಿರುವ ಮಧ್ಯೆ ಚುನಾವಣಾ ಅಧಿಕಾರಿಗಳಿಗೆ ಗ್ರಾಮೀಣ ಪ್ರದೇಶದ ಮತಗಟ್ಟೆ ಭೇಟಿಯು ಸವಾಲಾಗಿದೆ. ಇದೇ ರೀತಿ ಕಳೆದೆರಡು ದಿನಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆ ಪ್ರದೇಶದ  ಚುನಾವಣೆಯ ಮತಗಟ್ಟೆ ಪರಿಶೀಲನೆಗೆ ತೆರಳಿದ ಅಧಿಕಾರಿಗಳಿಗೆ ಒಂಟಿ ಸಲಗ ಪ್ರತ್ಯಕ್ಷವಾಗಿ ಭಯಬೀತಿ ಉಂಟುಮಾಡಿದ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕು ಕೇಂದ್ರದಿಂದ 35 ಕಿಮೀ ದೂರದಲ್ಲಿರುವ ಬಾಂಜಾರುಮಲೆ ಪ್ರದೇಶ ನೆರಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ, ಚಾರ್ಮಾಡಿ ಘಾಟಿಯ 9ನೇ ತಿರುವಿನಿಂದ ಸುಮಾರು 15 ಕಿ.ಮೀ. ಒಳ ಭಾಗದಲ್ಲಿದೆ. ಕಾಡಿನಿಂದ ಆವೃತ್ತವಾಗಿರುವ ಈ ಪ್ರದೇಶದಲ್ಲಿ ಸುಮಾರು 45 ಮನೆಗಳ 260ರಷ್ಟು ಮತದಾರರಿಗೆ ಬಾಂಜಾರುಮಲೆ ಸಮುದಾಯಭವನದಲ್ಲಿ ಮತಗಟ್ಟೆ ಸಂಖ್ಯೆ 86ರಲ್ಲಿ ಅವಕಾಶಮಾಡಿಕೊಡಲಾಗುತ್ತದೆ. ಇದರ ಪರಿಶೀಲನೆಗಾಗಿ ಚುನಾವಣಾಧಿಕಾರಿ ರಘು, ಸಹಾಯಕ ಚುನಾವಣಾಧಿಕಾರಿ ಅಜಿತ್, ನೆರಿಯ ಗ್ರಾ.ಪಂ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ. ಹಾಗೂ ಸಿಬಂದಿಗಳು ಬಾಡಿಗೆ ವಾಹನ ಮೂಲಕ ತೆರಳಿದ್ದರು. ಮಧ್ಯಾಹ್ನ 1.35 ಕ್ಕೆ ಹೊರಟು ವಾಪಾಸಾಗುತ್ತಿದ್ದಾಗ, ಏನೆಪೋಯ ವಿದ್ಯುತ್ ಘಟಕದ ಡ್ಯಾಂ ಬಳಿ ಒಂಟಿ ಸಲಗ ಎದುರಾಗಿದೆ. ಒಂಟಿ ಸಲಗ ಕಂಡು ಸಮೀಪದ ಕಿರು ರಸ್ತೆಯಲ್ಲಿ ಚಾಲಕ ವಾಹನನ್ನು ತಿರುವು ಹಾಕಿದ್ದರು. ಸುಮಾರು 2.15ರಿಂದ 3.15 ರವರೆಗೆ ಆನೆ ಹಾದು ಹೋಗುವವರೆಗೆ ಸ್ಥಳದಲ್ಲೇ ಅಧಿಕಾರಿಗಳು ಉಳಿಯುವಂತಾಗಿತ್ತು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಪಿಡಿಒ ಗಾಯತ್ರಿ ಉದಯವಾಣಿಗೆ ತಿಳಿಸಿದ್ದಾರೆ
Advertisement

Udayavani is now on Telegram. Click here to join our channel and stay updated with the latest news.

Next