Advertisement

ಅರಂತೋಡು: ಕೆರೆಗೆ ಬಿದ್ದ ನಾಲ್ಕು ಕಾಡನೆಗಳು ಕಾಡಿನತ್ತ; ಕಾರ್ಯಯೋಜನೆ ಯಶಸ್ವಿ !

12:36 PM Apr 13, 2023 | Team Udayavani |

ಅರಂತೋಡು: ತೋಟದ ಕೆರೆಗೆ ಬಿದ್ದಿದ್ದ ಕಾಡಾನೆ ಹಿಂಡನ್ನು ಯಶಸ್ವಿ ಕಾರ್ಯಾಚರಣೆ ಮೂಲಕ ಮತ್ತೆ ಕಾಡಿನತ್ತ ಓಡಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ನಡೆದಿದೆ.

Advertisement

ಅಜ್ಜಾವರ ಗ್ರಾಮದ ತುದಿಯಡ್ಕ ಎಂಬಲ್ಲಿ ತೋಟವೊಂದರ ಕೆರೆಗೆ  ಎ.12ರ ಬುಧವಾರ ರಾತ್ರಿ ಒಂದು ಮರಿ ಆನೆ ಸಹಿತ ನಾಲ್ಕು ಕಾಡಾನೆಗಳು ಬಿದ್ದಿದ್ದವು. ಆಹಾರ ಅರಸುತ್ತಾ ಬಂದಿದ್ದ ಕಾಡಾನೆಗಳು ತೋಟದಲ್ಲಿ ಕೆಲ ಕೃಷಿ ಪುಡಿಗೈದಿದ್ದು, ಬಳಿಕ ಆಯತಪ್ಪಿ ಬಿದ್ದಿವೆ.  ಕೆರೆಗೆ ಬಿದ್ದ ಆನೆಗಳಿಗೆ ಮೇಲೆ ಬರಲು ಸಾಧ್ಯವಾಗದೆ ಪರಿತಪಿಸುತ್ತಿದ್ದವು. ಅರಣ್ಯ ಇಲಾಖಾ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿದ್ದರು.

ಕೆರೆಯ ಒಂದು ಬದಿಯಲ್ಲಿ ಅಗೆತ ಮಾಡಿ ದಾರಿ ಮಾಡಿಕೊಟ್ಟು ಕಾಡಾನೆಗಳಿಗೆ ನಡೆದಾಡಲು ಸಹಕಾರಿಯಾಗುವಂತೆ ಮರಳು, ಕಲ್ಲು ಹಾಕಲಾಯಿತು. ಅದೇ ದಾರಿ ಮೂಲಕ ಮೂರು ಕಾಡಾನೆ ಮೇಲೆ ಬಂದರೆ, ಮರಿ ಆನೆಗೆ ಕಷ್ಟವಾಗಿತ್ತು. ಅದನ್ನು ಬಳ್ಳಿ ಸಹಾಯದಿಂದ ದೂಡಿ ಮೇಲಕ್ಕೆ ತರಲಾಯಿತು. ಮೇಲೆ ಬಂದ ಕಾಡಾನೆಗಳು ಕಾಡನತ್ತ ತೆರಳಿವೆ.

ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಅರಣ್ಯಾಧಿಕಾರಿ ಗಳ, ಸಿಬ್ಬಂದಿಗಳ ಜತೆಗೆ ಸ್ಥಳೀಯರು ಕಾರ್ಯಾಚರಣೆ ಯಲ್ಲಿ ಸಹಕರಿಸಿದ್ದರು. ಘಟನೆ ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next