Advertisement

ಕಾಡಾನೆ ಸೆರೆ ಸಮಸ್ಯೆಗೆ ಪರಿಹಾರವೇ?

02:35 PM Jun 06, 2023 | Team Udayavani |

ರಾಮನಗರ: ರಾಜ್ಯದಲ್ಲಿ ವ್ಯಾಪಕವಾಗಿರುವ ಕಾಡಾನೆ- ಮಾನವ ಸಂಘರ್ಷಕ್ಕೆ ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡುವುದು ಶಾಶ್ವತ ಪರಿಹಾರವೇ..? ಪ್ರತಿ ಬಾರಿ ಕಾಡಾನೆಯಿಂದ ಜೀವ ಬಲಿಯಾದಾಗಲೆಲ್ಲಾ ಕಾಡಾನೆ ಸ್ಥಳಾಂತರ ಮಾಡುವ ಪ್ರಕಿಯೆಗೆ ಚಾಲನೆ ನೀಡಲಾಗುತ್ತದೆ. ಕಾಡಾನೆ ಸ್ಥಳಾಂತರದಿಂದ ಸಮಸ್ಯೆಗೆ ಪರಿಹಾರ ಸಿಗಲಿದೇಯೇ ಎಂಬ ಪ್ರಶ್ನೆಗೆ ಮಾತ್ರ ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಸ್ಪಷ್ಟ ಉತ್ತರ ಲಭ್ಯವಿಲ್ಲ.

Advertisement

ಇದುವರೆಗೆ ರಾಜ್ಯದಲ್ಲಿ ಕೋಟ್ಯಂತರ ರೂ. ಹಣ ಖರ್ಚು ಮಾಡಿ ನೂರಾರು ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿದೆ. ಆದರೆ, ಕಾಡಾನೆ ಸೆರೆ ಹಿಡಿದ ಬಳಿಕ ಆನೆಗಳ ಹಾವಳಿ ಇನ್ನೂ ಹೆಚ್ಚಾಗಿದೆ. ಕಾಡಾನೆ ಸೆರೆ ಕಾರ್ಯಚರಣೆ ಕಣ್ಣೊರೆಸುವ ತಂತ್ರ, ಇದರಿಂದ ಪರಿ ಹಾರ ಸಿಗುವುದಿಲ್ಲ ಎಂಬುದು ಪರಿಸರವಾದಿಗಳ ಅಭಿಪ್ರಾಯವಾಗಿದೆ.

ಈ ಎಲ್ಲಾ ಚರ್ಚೆಗಳ ನಡುವೆ ಆನೆ ಸ್ಥಳಾಂತರ ಕಾರ್ಯ ಮಾತ್ರ ಆಗಾಗ್ಗ ಸದ್ದು ಮಾಡುತ್ತಲೇ ಇರುತ್ತದೆ.

ಶಾಶ್ವತ ಪರಿಹಾರ ಸಿಕ್ಕಿಲ್ಲ: ಇನ್ನು ಆನೆಗಳನ್ನು ಸೆರೆ ಹಿಡಿದ ಬಳಿಕವೂ ಆನೆ ಹಾವಳಿಗೆ ಪೀಡಿತವಾಗಿರುವ ಪ್ರದೇಶದಲ್ಲಿ ಆನೆಗಳ ಹಾವಳಿ ಮತ್ತಷ್ಟು ಹೆಚ್ಚಳಗೊಂಡಿವೆ. ಆನೆಯನ್ನು ಸೆರೆ ಹಿಡಿದ ಬಳಿಕವೂ ಹೊಸ ಹೊಸ ಆನೆ ಹಿಂಡುಗಳು ನಾಡಿನತ್ತ ಧಾವಿಸುತ್ತಿವೆ. ಬೆಳೆ ಹಾನಿ, ಜೀವ ಹಾನಿ ತಪ್ಪಿಲ್ಲದಿರುವುದು ಆನೆ ಸ್ಥಳಾಂತರದಿಂದ ಮಾನವ- ಕಾಡಾನೆ ಸಂಘರ್ಷಕ್ಕೆ ಶಾಶ್ವತ ಪರಿಹಾರ ಸಿಗುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.

ಬಗೆಹರಿಯದ ಸಮಸ್ಯೆ: ಅತಿ ಹೆಚ್ಚು ಕಾಡಾನೆ ಪೀಡಿತ ಪ್ರದೇಶವೆನಿ ಸಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 78 ಆನೆಗಳನ್ನು ಸೆರೆ ಹಿಡಿಯಲಾಗಿದೆ. ಹಾಸನ ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ 32 ಆನೆಗಳನ್ನು ಸೆರೆ ಹಿಡಿಯಲಾಗಿತ್ತು. ರಾಮನಗರ ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ 5 ಕಾಡಾನೆಗಳನ್ನು ಸೆರೆ ಹಿಡಿಯಲಾಗಿದೆ. ಮಡಿಕೇರಿ, ಚಾಮರಾಜನಗರ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರಿಸಿದ್ದರೂ, ಕಾಡಾನೆ ಹಾವಳಿ ನಿಂತಿಲ್ಲ.

Advertisement

ಸೆರೆ ಹಿಡಿದ ಬಳಿಕ ಹೆಚ್ಚು ಹಾವಳಿ: ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡುವುದರಿಂದ ಕಾಡಾನೆ ಹಾವಳಿಗೆ ಪರಿಹಾರ. ಆನೆಗಳ ಗುಂಪನ್ನು ಮುನ್ನಡೆಸುವ ಆನೆಯನ್ನು ಹಿಡಿದು ಸ್ಥಳಾಂತರ ಮಾಡಿಸುವುದರಿಂದ ಉಳಿದ ಆನೆಗಳು ಭಯಬಿದ್ದು ವನ್ಯಜೀವಿ ವಲಯಕ್ಕೆ ಹಿಂದಿರುಗುತ್ತವೆ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ. ಆದರೆ, ವಾಸ್ತವ ವಾಗಿ ಕಾಡಾನೆ ಸೆರೆ ಬಳಿಕ ಗುಂಪಿನ ಉಳಿದ ಆನೆಗಳು ದಾಂಧಲೆ ಎಬ್ಬಿಸಿ ರೈತರ ಬೆಳೆ ಮತ್ತು ಮರ ಮುಟ್ಟು ಗಳನ್ನು ಹಾನಿ ಮಾಡಿರುವ ಉದಾಹರಣೆ ಸಾಕಷ್ಟಿದೆ.

ಸೆರೆ ಹಿಡಿದ ಆನೆ ಕೆಲವೇ ತಿಂಗಳಲ್ಲಿ ಸ್ವಸ್ಥಾನದಲ್ಲಿ ಪ್ರತ್ಯಕ್ಷ: ಚನ್ನಪಟ್ಟಣ ತಾಲೂಕಿನ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ 2022ರ ಆ.14ರಂದು ಸಾಕಷ್ಟು ಹಾವಳಿ ಎಬ್ಬಿಸುತ್ತಿದ್ದ ಮಕ್ನಾ ಆನೆಯನ್ನು ಸೆರೆ ಹಿಡಿದು ಕರ್ನಾಟಕ-ತಮಿಳುನಾಡು ಗಡಿಭಾಗದಲ್ಲಿರುವ ಮಲೈ ಮಹದೇಶ್ವರ ಅರಣ್ಯ ಪ್ರದೇಶಕ್ಕೆ ಬಿಟ್ಟು ಬರಲಾಗಿತ್ತು. ಸ್ಥಳಾಂತರಗೊಂಡಿದ್ದ ಆನೆ ಕೆಲವೇ ತಿಂಗಳಲ್ಲಿ ಕಾವೇರಿ ನದಿ ದಾಟಿ ಸೆರೆ ಹಿಡಿಯಲಾಗಿದ್ದ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಮತ್ತೆ ಪತ್ತೆಯಾಗಿತ್ತು. ಸೆರೆ ಹಿಡಿದಿದ್ದ ಆನೆಯೇ ಹಿಂದಿರುಗಿಸುವ ಸಂಗತಿ ರೇಡಿಯೋ ಕಾಲರ್‌ ಮೂಲಕ ಖಚಿತಪಟ್ಟಿದೆ. ಇದೇ ರೀತಿ ಸಾಕಷ್ಟು ಆನೆಗಳು ರಾಜ್ಯದಲ್ಲಿ ಸ್ಥಳಾಂತರಗೊಂಡ ಬಳಿಕ ಮೂಲಸ್ಥಳಕ್ಕೆ ಹಿಂದಿರುಗಿದ ಉದಾಹರಣೆ ಸಾಕಷ್ಟು ಇದೆ.

ಆನೆಗಳನ್ನು ಸ್ಥಳಾಂತರಗೊಳಿಸಿವುದೇ ಮಾನವ-ಕಾಡಾನೆ ಸಂಘರ್ಷಕ್ಕೆ ಪರಿಹಾರವಲ್ಲ. ಅರಣ್ಯ ಇಲಾಖೆಯ ಬಳಿ ಹಲವು ಪರಿಹಾರಗಳಿದ್ದು, ಅವುಗಳಲ್ಲಿ ಪುಂಡಾಟ ಮಾಡುವ, ಮಾನವರ ಮೇಲೆ ದಾಳಿ ಮಾಡುವ ಆನೆಗಳನ್ನು ಸೆರೆ ಹಿಡಿಯುವುದು ಹಾಗೂ ಕೆಲ ಆನೆಗಳನ್ನು ಸ್ಥಳಾಂತರಿಸುವುದು ಒಂದು ಪರಿಹಾರವಾಗಿದೆ. ಉಳಿದಂತೆ ರಕ್ಷಣಾ ಗೋಡೆ, ಸೋಲಾರ್‌ ಬೇಡಿ, ಆನೆ ತಡೆ ಬ್ಯಾರಿಕೇಡ್‌ ಹೀಗೆ ಹಲವು ಪರಿಹಾರೋಪಾಯಗಳಿದ್ದು ಅವುಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. – ದೇವರಾಜು, ಡಿಎಫ್‌ಒ, ರಾಮನಗರ

ಕಾಡಾನೆ ಸೆರೆ ಹಿಡಿಯುವ ರೈತರ ಕಣ್ಣೊರೆಸುವ ಕೆಲಸವಾಗಿದೆ. ಇದುವರೆಗೆ ಸಾಕಷ್ಟು ಬಾರಿ ಜಿಲ್ಲೆಯಲ್ಲಿ ಕಾಡಾನೆಗಳನ್ನು ಸೆರೆ ಹಿಡಿಯಲಾಗಿದೆ ಯಾದರೂ ಕಾಡಾನೆ ಹಾವಳಿಯಂತು ನಿಂತಿಲ್ಲ. ಕಾಡಾನೆ-ಮಾನವ ಸಂಘರ್ಷಕ್ಕೆ ವೈಜ್ಞಾನಿಕ ಕಾರಣ ಪತ್ತೆ ಮಾಡಿ, ಆನೆಗಳು ಅವುಗಳ ಮೂಲನೆಲೆಯಲ್ಲಿ ನೆಮ್ಮದಿಯಿಂದ ವಾಸಿಸುವ ವಾತಾವರಣ ನಿರ್ಮಾಣ ಮಾಡಬೇಕು. ಅದನ್ನು ಬಿಟ್ಟು ಆನೆ ಹಿಡಿಯುವುದನ್ನೇ ಪರಿಹಾರ ಎಂದು ಬಿಂಬಿಸುವುದು ಸರಿಯಲ್ಲ. – ಸಿ.ಪುಟ್ಟಸ್ವಾಮಿ, ಹಿರಿಯ ರೈತ ಹೋರಾಟಗಾರ, ಚನ್ನಪಟ್ಟಣ

-ಸು.ನಾ. ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next