ಉಪ್ಪಿನಂಗಡಿ: ಕಾಡಾನೆಯೊಂದು ಮೊಗ್ರು, ಬೆದ್ರೋಡಿ, ನೀರಕಟ್ಟೆ ಪರಿಸರದಲ್ಲಿ ಕಾಣಿಸಿಕೊಂಡು ಜನರಲ್ಲಿ ಭೀತಿ ಮೂಡಿಸಿದ ಘಟನೆ ಮಂಗಳವಾರ ಸಂಭವಿಸಿದೆ.
ಮಂಗಳವಾರ ಬೆಳಗ್ಗೆ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದಲ್ಲಿ ಕಾಣಿಸಿಕೊಂಡ ಒಂಟಿ ಸಲಗವು ನೇತ್ರಾವತಿ ನದಿಯಲ್ಲಿ ವಿಹರಿಸುತ್ತಾ ಬೆದ್ರೋಡಿ, ವಳಾಲು, ನೀರಕಟ್ಟೆ ಪರಿಸರದಲ್ಲಿ ಸಂಚರಿಸಿತು. ನದಿ ಯಲ್ಲಿ ಸಂಚರಿಸುತ್ತಿದ್ದ ವೇಳೆ ನದಿಯ ನೀರನ್ನು ತನ್ನ ಸೊಂಡಿಲಿನಿಂದ ತನ್ನ ಮೈಗೆ ಸಿಂಪಡಿಸುತ್ತಾ ಬಿಸಿಲ ಝಳಕ್ಕೆ ತಂಪೆರೆಯುತ್ತಿತ್ತು.
ನದಿ ಪಾತ್ರದಲ್ಲಿದ್ದ ಒಂದು ಪಂಪು ಶೆಡ್ ಮತ್ತು ಕೆಲವು ಬಾಳೆ ಗಿಡಗಳಿಗೆ ಹಾನಿ ಮಾಡಿದೆ. ಗುಂಪಿನಿಂದ ಬೇರ್ಪಟ್ಟು ಈ ಆನೆ ಬಂದಂತಿದೆ. ಮಂಗಳವಾರ ಸಾಯಂಕಾಲ ಮತ್ತೆ ನೀರಕಟ್ಟೆಯಿಂದ ವಳಾಲಿನತ್ತ ತೆರಳಿ ರಾತ್ರಿ ವೇಳೆ ಕಾಡಿನೊಳಗೆ ಪ್ರವೇಶಿಸಿದೆ ಎಂದು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯ ಪ್ರಕಾಶ್ ತಿಳಿಸಿದ್ದಾರೆ.
ಕಾಡಿನೊಳಗೆ ದಿಕ್ಕು ತಪ್ಪಿ ಜನವಸತಿ ಪ್ರದೇಶದೊಳಗೆ ಬರುವ ಆನೆಯನ್ನು ಜನರು ಪಟಾಕಿ ಸಿಡಿಸಿ, ಭೀತಿ ಹುಟ್ಟಿಸಿ ಓಡಿಸುವ ಯತ್ನ ಮಾಡುವುದರಿಂದ ಅವುಗಳು ಎಲ್ಲೆಲ್ಲೋ ಅಲೆಯುವಂತಾಗುತ್ತದೆ. ಆನೆಗಳೊಂದಿಗೆ ಶಾಂತಚಿತ್ತವಾಗಿ ವರ್ತಿಸುವುದರಿಂದ ಅವುಗಳಿಗೆ ಒಮ್ಮೆ ದಿಕ್ಕು$R ತಪ್ಪಿದರೂ ಮತ್ತೆ ಅದರ ನೈಜ ಪಥವನ್ನು ಹಿಡಿದು ಮುಂದಕ್ಕೆ ಸಾಗುತ್ತವೆ. ಈ ಕಾರಣಕ್ಕಾಗಿಯೇ ಮಂಗಳವಾರದಂದು ಆನೆಯತ್ತ ಜನ ತೆರಳದಂತೆ ಪೊಲೀಸರ ಸಹಕಾರ ಪಡೆಯಲಾಗಿದೆ. ಅರಣ್ಯ ಇಲಾಖೆ ಸಿಬಂದಿ ಆನೆಯ ಚಲನವಲನದ ಬಗ್ಗೆ ನಿಗಾವಿರಿಸಿ ಆನೆಯನ್ನು ಕಾಡಿನತ್ತ ಸಾಗಲು ಪೂರಕ ವಾತಾವರಣವನ್ನು ಕಲ್ಪಿಸಿ ಕೊಟ್ಟಿದ್ದಾರೆ ಎಂದರು.
ಕಾಡಾನೆಯಿಂದ ಕೃಷಿ ಹಾನಿ
ಸುಬ್ರಹ್ಮಣ್ಯ: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ನಿಡ್ಡೋ ಪ್ರದೇಶದ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆ ಕೃಷಿ ಹಾನಿ ಮಾಡಿರುವ ಘಟನೆ ನಡೆದಿದೆ.
ಕಳೆದ ಕೆಲ ದಿನಗಳಿಂದ ನಿಡ್ಡೋ ಭಾಗದಲ್ಲಿ ಕಾಡಾನೆ ತೋಟಗಳಿಗೆ ದಾಳಿ ಇಡುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.