Advertisement

Belthangady: ನೆರಿಯ ಬಯಲು ಎಂಬಲ್ಲಿ ಕಾರಿನ ಮೇಲೆ ಎರಗಿದ ಒಂಟಿ ಸಲಗ

09:13 AM Nov 28, 2023 | Team Udayavani |

ಬೆಳ್ತಂಗಡಿ: ತಾಲೂಕಿನ ನೆರಿಯ-ಕಕ್ಕಿಂಜೆ ರಸ್ತೆಯ ಬಯಲು ಬಸ್ತಿ ಎಂಬಲ್ಲಿ ಒಂಟಿ ಸಲಗವೊಂದು ಕಾರಿಗೆ ಹಾನಿ ಮಾಡಿ ಇಬ್ಬರಿಗೆ ಗಾಯಗೊಳಿಸಿದ ಘಟನೆ ನ.27ರ ಸೋಮವಾರ ರಾತ್ರಿ ನಡೆದಿದೆ.

Advertisement

ಪುತ್ತೂರು ತಾಲೂಕಿನ ಕಬಕ ಗ್ರಾಮದ ವಿದ್ಯಾಪುರ ಮನೆಯ ಅಬ್ದುಲ್ ರೆಹಮಾನ್(40) ತಲೆ ಹಾಗೂ ಕಾಲು, ನೆರಿಯ ಗ್ರಾಮದ ಹಿಟ್ಟಾಡಿ ಮನೆಯ ನಾಸಿಯಾ(30) ಕಾಲು ಮುರಿತಕ್ಕೊಳಗಾಗಿದ್ದಾರೆ.

ಉಳಿದಂತೆ ಕಾರಿನಲ್ಲಿದ್ದ ರೆಹಮಾನ್ ಪತ್ನಿ ಫೌಸಿಯಾ(35), ನಾಸಿಯಾ ತಾಯಿ ಜುಬೈದಾ (50), ನಾಸಿಯಾ ಚಿಕ್ಕಮ್ಮ ಅಯಿಷಾ (45), ನಾಸಿಯಾ ಮಕ್ಕಳಾದ ಫಾತಿಮಾ ಅಲ್ಫಾ(1), ಅಯಿಷಾ ವಾಫಾ(4), ರಹಮಾನ್ ಮಗಳು ಮಹಮ್ಮದ್ ಮೋಹಜ್(4) ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಪುತ್ತೂರಿನಿಂದ ನೆರಿಯಾಗೆ ಆಗಮಿಸುತ್ತಿದ್ದ ಕಾರಿನಲ್ಲಿದ್ದ ಕುಟುಂಬಕ್ಕೆ ನೆರಿಯ ಬಯಲು ಬಸದಿ ಸಮೀಪ ರಸ್ತೆ ಮಧ್ಯೆ ಆನೆ ಎದುರಾಗಿದೆ. ತಕ್ಷಣ ಆಲ್ಟೋ ಕಾರು ಚಲಾಯಿಸುತ್ತಿದ್ದ ಅಬ್ದುಲ್ ರೆಹಮಾನ್ ಆತಂಕಗೊಂಡು ಕಾರನ್ನು ತಕ್ಷಣ ಸಮೀಪದ ಮನೆಯೊಂದರ ಗಲ್ಲಿಯಲ್ಲಿ ನಿಲ್ಲಿಸಿದ್ದಾರೆ. ಈ ವೇಳೆ ಆನೆ ಸುತ್ತುವರಿದು ಬಂದು ಕಾರಿನ ಬಳಿಗೆ ಧಾವಿಸಿ, ಬಳಿಕ ತನ್ನ ದವಡೆ ಮೂಲಕ ಕಾರನ್ನು ಎತ್ತಿ ಹಾನಿ ಮಾಡಿದೆ. ಕಾರಿನಲ್ಲಿ ಮಗು ಸಹಿತ ಆರು ಮಂದಿ ಪ್ರಯಾಣಿಸುತ್ತಿದ್ದು, ಹಿಂಬದಿಯಲ್ಲಿ ಕುಳಿತಿದ್ದವರು ತಕ್ಷಣ ಪಾರಾಗಿ ಸಮೀಪದ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ಮುಂಬದಿಯಿದ್ದ ಇಬ್ಬರು ಆನೆ ಉಪಟಳದಿಂದ ಗಾಯಗೊಂಡಿದ್ದಾರೆ. ಆನೆ ಸ್ಥಳದಿಂದ ತೆರಳಿದ ಬಳಿಕ ಸ್ಥಳೀಯರ ಸಹಾಯದಿಂದ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ.

Advertisement

ಆನೆಯು ಘಟನೆಗೆ ಮೊದಲು ಈ ಪರಿಸರದ ಜನನಿಬಿಡ ಪ್ರದೇಶಗಳಲ್ಲಿ ಓಡಾಟ ನಡೆಸಿದ್ದು, ಒಬ್ಬರ ಮನೆಯಂಗಳಕ್ಕೂ ಹೋಗಿದೆ. ಅಲ್ಲದೆ ರಸ್ತೆ ಬದಿ ಇರುವ ಮನೆಯೊಂದರ ಗೇಟನ್ನು ಮುರಿಯಲು ಯತ್ನಿಸಿದೆ.

ಈ ವೇಳೆ ಸುತ್ತಮುತ್ತಲ ಮನೆಯವರು ಬೊಬ್ಬೆ ಹೊಡೆದಿದ್ದು, ಆನೆಯು ಮತ್ತೆ ರಸ್ತೆಗೆ ಬಂದಿತ್ತು. ಕಾರನ್ನು ಎತ್ತಿ ಹಾಕಿದ ಆನೆ ಬಳಿಕ ಸಮೀಪದ ರಬ್ಬರ್ ತೋಟದಲ್ಲಿ ಮತ್ತೆ ಕಂಡು ಬಂದಿದೆ. ಈ ವೇಳೆ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬಂದಿ ಪಟಾಕಿ ಸಿಡಿಸುವ ಮೂಲಕ ಆನೆಯನ್ನು ಅಟ್ಟಲು ಕ್ರಮಕೈಗೊಂಡಿದ್ದಾರೆ.

ಸ್ಥಳಕ್ಕೆ ವಲಯರಣ್ಯಧಿಕಾರಿ ಮೋಹನ್ ಕುಮಾರ್, ಉಪವಲಯ ಅರಣ್ಯಾಧಿಕಾರಿ ಯತೀಂದ್ರ ಮತ್ತು ರಾಜ್ ಶೇಖರ್, ಅರಣ್ಯ ಗಸ್ತು ಪಾಲಕ ಪಾಂಡುರಂಗ ಕಮತಿ ಮತ್ತು ಅಖಿಲೇಶ್, ಅರಣ್ಯ ಕವಾಲುಗಾರ ಕಿಟ್ಟಣ್ಣ, ವಿನಯಚಂದ್ರ ಭೇಟಿ ಬೀಡಿ ತಕ್ಷಣ ಕ್ರಮ ಕೈಗೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಹಲವು ಗ್ರಾಮಗಳಲ್ಲಿ ಕಾಡಾನೆಗಳಿಂದ ನಿರಂತರ ಕೃಷಿ ಹಾನಿ ಉಂಟಾಗುತ್ತಿದ್ದು, ಮೊದಲ ಬಾರಿಗೆ ವಾಹನದ ಮೇಲೆ ದಾಳಿ ನಡೆದಿದೆ.

ಇದರಿಂದ ತೋಟತ್ತಾಡಿ, ನೆರಿಯ, ಚಾರ್ಮಾಡಿ, ಚಿಬಿದ್ರೆ ಮುಂಡಾಜೆ ಮೊದಲಾದ ಭಾಗಗಳ ಜನರಲ್ಲಿ ಭೀತಿ ಆವರಿಸಿದೆ. ಈ ಒಂಟಿ ಸಲಗ ಇದೇ ಪ್ರದೇಶದಲ್ಲಿ ಹಲವು ವರ್ಷಗಳಿಂದ ಸುತ್ತಾಡುತ್ತಿದ್ದು, ಕೃಷಿ ಪ್ರದೇಶಗಳಿಗಷ್ಟೆ ಹಾನಿ ಮಾಡುತ್ತಿತ್ತು.  ಗಾಯಗೊಂಡವರು ಚೇತರಿಸಿಕೊಂಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next