Advertisement
ಸ್ಥಳೀಯ ನಿವಾಸಿ ಬಾಬಿ (58) ಕಾಡಾನೆ ದಾಳಿಗೆ ತುತ್ತಾಗಿರುವ ವ್ಯಕ್ತಿ. ಪಾಲಿಬೆಟ್ಟದ ಮಸ್ಕಲ್ ಕಾಫಿ ತೋಟದಲ್ಲಿ ಬಾಬಿ ಮತ್ತು ಇನ್ನಿತರ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸಂದರ್ಭ ಕಾಡಾನೆ ದಾಳಿ ಮಾಡಿತು. ಕಾಡಾನೆಯ ನೇರ ದಾಳಿಗೆ ಸಿಲುಕಿದ ಬಾಬಿ ಅವರ ಎದೆ ಮತ್ತು ಕೈಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಇವರನ್ನು ತತ್‌ಕ್ಷಣ ಸಮೀಪದ ಆರ್‌ಐಎಚ್‌ಪಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಾಬಿ ಅವರ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ. ಆನೆಗಳನ್ನು ಅಟ್ಟಲು ಆಗ್ರಹ
ಪಾಲಿಬೆಟ್ಟ ವ್ಯಾಪ್ತಿಯ ಹಲವೆಡೆ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದು, ಕಾರ್ಮಿಕರು ನಿರಂತರ ಅವುಗಳ ದಾಳಿಗೆ ಒಳಗಾಗುತ್ತಿದ್ದಾರೆ. ಇದರಿಂದ ತೊಟಗಳಲ್ಲಿ ಕಾರ್ಮಿಕರು ಕಾರ್ಯನಿರ್ವಹಿಸಲು ಹಿಂದೇಟು ಹಾಕುವ ಪರಿಸ್ಥಿತಿ ಇದೆ. ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಬೇಕೆಂದು ಹಲ ಗ್ರಾಮಸ್ಥರು ಆಗ್ರಹಿಸಿದರು.