ಸುಬ್ರಹ್ಮಣ್ಯ: ತೋಟಕ್ಕೆ ಕಾಡಾನೆ ಲಗ್ಗೆ ಇಟ್ಟು ಕೃಷಿಗೆ ಹಾನಿಗೈದಿರುವ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದಲ್ಲಿ ರವಿವಾರ ರಾತ್ರಿ ನಡೆದಿದೆ.
ಐನೆಕಿದು ಗ್ರಾಮದ ಜಯಪ್ರಕಾಶ್ ಕೂಜುಗೋಡು ಮತ್ತು ಸೋಮಸುಂದರ ಕೂಜುಗೋಡು ಅವರ ತೋಟಕ್ಕೆ ರಾತ್ರಿ ಆನೆ ಲಗ್ಗೆ ಇರಿಸಿ ಕೃಷಿಗೆ ಹಾನಿ ಉಂಟುಮಾಡಿದೆ. ಹಲವು ತೆಂಗು ಹಾಗೂ ಅಡಿಕೆ ಗಿಡ, ಬಾಳೆ ಗಿಡಗಳನ್ನು ನಾಶಗೊಳಿಸಿದೆ. ಎರಡು ದಿನಗಳ ಹಿಂದೆಯಷ್ಟೇ ಕೊಲ್ಲಮೊಗ್ರು ಭಾಗದಲ್ಲಿ ಕಾಡಾನೆ ಓಡಾಟ ನಡೆಸಿ ಜನರಲ್ಲಿ ಆತಂಕ ಸೃಷ್ಟಿಸಿತ್ತು.
ಇದೇವೇಳೆ ಸೋಮವಾರ ಸಂಜೆ ವೇಳೆ ಹರಿಹರ ಕೊಲ್ಲಮೊಗ್ರು ರಸ್ತೆಯ ಪಕ್ಕದಲ್ಲಿರುವ ತೋಡಿನಲ್ಲಿ ಕಾಡಾನೆ ನೀರು ಕುಡಿಯುತ್ತಿರುವುದನ್ನು ಸ್ಥಳೀಯರು ಕಂಡಿದ್ದಾರೆ. ಕಾಡಿನಿಂದ ಬಂದ ಕಾಡಾನೆ ತೋಡಿನಲ್ಲಿ ನೀರು ಕುಡಿದು ಬಳಿಕ ಕಾಡಿನತ್ತ ತೆರಳಿದೆ.