Advertisement
ಎರಡು ದಿನಗಳ ಕಾಲ ಅರಣ್ಯ ಇಲಾಖೆಯ ತಂಡ ನಡೆಸಿದ ವ್ಯಾಪಕ ಕಾರ್ಯಾಚರಣೆ ಬುಧವಾರ ಬೆಳಗ್ಗೆ 10.30ರ ಸುಮಾರಿಗೆ ಪುಂಡಾನೆಯ ಸೆರೆಯೊಂದಿಗೆ ಮುಕ್ತಾಯವಾಗಿದೆ. ಸೆರೆಯಾಗಿರುವ ಆನೆಯ ವಯಸ್ಸು ಸುಮಾರು 22 ವರ್ಷ ಎಂದು ಅಂದಾಜಿಸಲಾಗಿದೆ.
ಬುಧವಾರ ಭುವನಳ್ಳಿ ಕಾಫಿ ತೋಟದಲ್ಲಿದ್ದ ಕಾಡಾನೆಗಳ ಹಿಂಡಿನಲ್ಲಿದ್ದ ಕರಡಿಗೋಡು ವ್ಯಾಪ್ತಿಯಲ್ಲಿ ದಾಂಧಲೆ ನಡೆಸುತ್ತಿದ್ದ ಪುಂಡಾನೆಯನ್ನು ಗುರುತಿಸಿ ಅದಕ್ಕೆ ಶೂಟರ್ ಅಕ್ರಂ ಅವರು ಅರಿವಳಿಕೆಯ ಗುಂಡನ್ನು ಹೊಡೆದರು. ಅರಿವಳಿಕೆಯ ಪ್ರಭಾವಕ್ಕೆ ಸಿಲುಕಿದ ಪುಂಡಾನೆಯನ್ನು ದುಬಾರೆ ಮತ್ತು ಮತ್ತಿಗೋಡು ಆನೆ ಶಿಬಿರದ ಸಾಕಾನೆಗಳ ಸಹಕಾರದಿಂದ ಬಂಧಿಸಲಾಯಿತು. ಹಗ್ಗಗಳಿಂದ ಕಟ್ಟಿ, ಕ್ರೇನ್ ಮೂಲಕ ಲಾರಿಗೇರಿಸಿ, ದುಬಾರೆ ಸಾಕಾನೆ ಶಿಬಿರಕ್ಕೆ ಕರೆದೊಯ್ಯಲಾಯಿತು. ಗ್ರಾಮಸ್ಥರ ನಿಟ್ಟುಸಿರು
ಕಳೆದ ಹಲವು ಸಮಯಗಳಿಂದ ಕರಡಿಗೋಡು ಸುತ್ತಮುತ್ತ ಪುಂಡಾನೆಗಳ ಹಾವಳಿಯಿಂದ ವ್ಯಾಪಕ ಕೃಷಿ ಹಾನಿಯಾಗಿದ್ದು, ಬೆಳೆಗಾರರು, ಕೃಷಿಕರು ತೋಟಗಳಿಗೆ ತೆರಳಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಪುಂಡಾನೆಯ ಸೆರೆಯಿಂದ ಗ್ರಾಮಸ್ಥರು ಒಂದಷ್ಟು ನಿಟ್ಟುಸಿರು ಬಿಡುವಂತಾಗಿದೆ.