Advertisement

ಒಂದೇ ದಿನ 30ಕ್ಕೂ ಹೆಚ್ಚು ಕಾಡಾನೆ ಪ್ರತ್ಯಕ್ಷ: ಜನರಲ್ಲಿ ಹೆಚ್ಚಿದ ಆತಂಕ

03:27 PM Jul 02, 2023 | Team Udayavani |

ಕನಕಪುರ: ಶನಿವಾರ ಒಂದೇ ದಿನದಲ್ಲಿ ಮೂವತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಚಾಕನಹಳ್ಳಿ ಸುತ್ತಮುತ್ತಲು ಕಾಣಿಸಿಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಆತಂಕ ಮೂಡಿಸುವೆ.

Advertisement

ತಾಲೂಕಿನ ಕಸಬಾ ಹೋಬಳಿಯ ಚಾಕನಹಳ್ಳಿ ಗೌಡಹಳ್ಳಿ ಕೆರಳಾಳುಸಂದ್ರ ಭಾಗದಲ್ಲಿ ಶನಿವಾರ ಮೂವತ್ತಕ್ಕೂ ಹೆಚ್ಚು ಕಾಡಾನೆಗಳು ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಜನರನ್ನು ಬೆಚ್ಚಿ ಬೀಳಿಸಿವೆ.

ಕಳೆದ ಮೂರು ತಿಂಗಳ ಹಿಂದೆಯಷ್ಟೆ ಕೋಡಿಹಳ್ಳಿ ಭಾಗದಲ್ಲಿ 60ಕ್ಕೂ ಹೆಚ್ಚು ಕಾಡಾನೆಗಳು ಕಾಣಿಸಿಕೊಂಡು ಆತಂಕ ಹುಟ್ಟಿಸಿದ್ದವು. ಅದಾದ ಬಳಿಕ ಈಗ 30ಕ್ಕೂ ಹೆಚ್ಚು ಕಾಡಾನೆಗಳು ಕಾಣಿಸಿಕೊಳ್ಳುವ ಮೂಲಕ ಮತ್ತಷ್ಟು ಆತಂಕ ಮೂಡಿಸಿವೆ.

ಶನಿವಾರ ಬೆಳ್ಳಂಬೆಳಗ್ಗೆ ಬನ್ನೇರುಘಟ್ಟ ಅರಣ್ಯ ಪ್ರದೇಶದ ಬಿಳಿಕಲ್ಲು ಬೆಟ್ಟ ಅರಣ್ಯ ಪ್ರದೇಶದ ಮೂಲಕ ಆಹಾರ ಅರಿಸಿ ಚಾಕನಹಳ್ಳಿ ಸಮೀಪಕ್ಕೆ ಬಂದಿದ್ದ ಕಾಡಾನೆಗಳು, ಬೆಳಗಾಗುವಷ್ಟರಲ್ಲಿ ಮತ್ತೆ ಕಾಡಿಗೆ ಹೋಗಲು ದಾರಿ ತಪ್ಪಿ ಗ್ರಾಮದಲ್ಲೇ ಓಡಾಡಲು ಆರಂಭಿಸಿದ್ದವು. ಈ ಭಾಗದ ಗ್ರಾಮಸ್ಥರು ಇದೇ ಮೋದಲ ಬಾರಿಗೆ ಇಷ್ಟು ದೊಡ್ಡಮಟ್ಟದ ಗಜಪಡೆಯನ್ನು ಕಂಡ ಭಯಭೀತರಾಗಿದ್ದು, ಕಾಡಾನೆಗಳ ಹಿಂಡಿನಿಂದ ಕೆಲಕಾಲ ಅವಾಂತರ ಸೃಷ್ಟಿಯಾಯಿತು.

ದಿಕ್ಕಾಪಾಲಾದ ರಾಸುಗಳು: ಚಾಕನಹಳ್ಳಿ, ಗೌಡಹಳ್ಳಿ ಕೆರಳಾಳುಸಂದ್ರ ಸುತ್ತಮುತ್ತಲು ಕಾಡಾನೆಗಳು ಚದುರಿ ಹೋದವು. ಇದರಿಂದ ಸಾಕುಪ್ರಾಣಿಗಳ ಮೇಲೆ ದಾಳಿ ಮಾಡುವ ಆತಂಕ ಸೃಷ್ಟಿಯಾಗಿತ್ತು. ಜಮೀನುಗಳಲ್ಲಿ ಮೇಯಲು ಕಟ್ಟಿ ಹಾಕಿದ್ದ ಕೆಲವು ರಾಸುಗಳು ಕಾಡಾನೆ ಹಿಂಡು ಕಂಡು ದಿಕ್ಕಾಪಾಲಾಗಿ ಓಡಿದವು.

Advertisement

ಆನೆಗಳು ಪ್ರತ್ಯಕ್ಷವಾಗಲು ಕಾರಣಗಳೇನು?: ಕಳೆದ ಒಂದು ದಶಕದಿಂದ ಕಾಣಿಸಿಕೊಳ್ಳದೆ ಇರುವ ಇಷ್ಟು ದೊಡ್ಡಮಟ್ಟದ ಕಾಡಾನೆ ಹಿಂಡು ಜಿಲ್ಲೆಯಲ್ಲಿ ದಿಢೀರ್‌ ಎಂದು ಪ್ರತ್ಯಕ್ಷವಾಗಲು ಕಾರಣಗಳೇನು ಎಂಬ ಯಕ್ಷಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿಸಿದೆ. ಕಾಡಿನಲ್ಲಿ ಕಾಡಾನೆಗಳ ಸಂತತಿ ಹೆಚ್ಚಾಗಿದೆಯೇ ಅಥವಾ ಕಾಡಿನಲ್ಲಿ ಆನೆಗಳಿಗೆ ಆಹಾರ ಮತ್ತು ನೀರಿನ ಕೊರತೆ ಹೆಚ್ಚಾಗಿದೆಯೇ ಅಥವಾ ಅವುಗಳ ವಾಸ ಸ್ಥಳದಲ್ಲಿ ಧಕ್ಕೆ ಉಂಟಾಗಿದೆಯೇ?. ಇದರಿಂದ ಕಾಡಾನೆಗಳು ಕಾಡನ್ನು ಬಿಟ್ಟು ನಾಡಿಗೆ ಲಗ್ಗೆ ಇಡುತ್ತಿವೆಯೇ ಅಥವಾ ಮತ್ಯಾವ ಕಾರಣಕ್ಕೆ ಕಾಡಾನೆಗಳು ಇಷ್ಟು ದೊಡ್ಡಮಟ್ಟದಲ್ಲಿ ನಾಡಿನತ್ತ ಬರುತ್ತಿವೆ ಎಂಬ ಪ್ರಶ್ನೆ ಗ್ರಾಮೀಣ ಭಾಗದ ಜನರನ್ನು ಕಾಡುತ್ತಿದೆ.

ಕಾಡಾನೆ ಹಾವಳಿ ನಿಯಂತ್ರಿಸಿ: ಕನಕಪುರ ಭಾಗದಲ್ಲಿ ಹೆಚ್ಚಾಗುತ್ತಿರುವ ಕಾಡಾನೆಗಳ ಹಾವಳಿಯನ್ನು ಆನೆ ಕಾರ್ಯಪಡೆ ನಿಯಂತ್ರಿಸಲಿದೆ ಎಂಬ ನಿರೀಕ್ಷೆ ಕೂಡ ಜನರಲ್ಲಿ ಹೆಚ್ಚಾಗಿದೆ. ಕಾಡಾನೆ ಹಾವಳಿಗೆ ನಿಯಂತ್ರಣಕ್ಕೆ ಅರಣ್ಯ ಇಲಾಖೆ ರಚನೆ ಮಾಡುವ ಆನೆ ಕಾರ್ಯ ಪಡೆ ಜನರ ನೀರೀಕ್ಷೆಯಂತೆ ಕಾಡಾನೆಗಳ ಹಾವಳಿ ನಿಯಂತ್ರಿಸಿ ಗ್ರಾಮೀಣ ಭಾಗದ ಜನರಿಗೆ ನೆಮ್ಮದಿ ತರುವುದೇ ಕಾದು ನೋಡಬೇಕಿದೆ.

ಬಿಳಿಕಲ್ಲು ಅರಣ್ಯ ಪ್ರದೇಶಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿ : ಕಾಡಾನೆಗಳನ್ನು ನೋಡಲು ಬಂದಿದ್ದ ಸಾರ್ವಜನಿಕರನ್ನು ನಿಯಂತ್ರಿಸಿ ಕಾಡಾನೆಗಳನ್ನು ಕಾಡಿಗೆ ಅಟ್ಟುವುದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿತ್ತು. ಆರ್‌ಎಫ್ಒ ದಾಳೇಶ್‌ ಕೋಡಿಹಳ್ಳಿ ವನ್ಯ ಜೀವಿ ವಲಯಾರಣ್ಯಾಧಿಕಾರಿ ಪ್ರಶಾಂತ್‌ ಸೇರಿದಂತೆ ಸಿಬ್ಬಂದಿಗಳು ಕಾರ್ಯಾಚರಣೆ ವೇಳೆ 30ಕ್ಕೂ ಹೆಚ್ಚು ಕಾಡಾನೆಗಳಲ್ಲಿ ಮೂರು ಗುಂಪುಗಳಾಗಿ ಚದುರಿದ್ದವು. ಇದರಲ್ಲಿ ಎರಡು ಗುಂಪುಗಳನ್ನು ಮಧ್ಯಾಹ್ನದ ವೇಳೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬಿಳಿಕಲ್ಲು ಅರಣ್ಯ ಪ್ರದೇಶಕ್ಕೆ ಅಟ್ಟುವಲ್ಲಿ ಯಶಸ್ವಿಯಾದರು. ಚಾಕನಹಳ್ಳಿ ಬಳಿ ಬೀಡು ಬಿಟ್ಟಿರುವ ಮತ್ತೂಂದು ಗುಂಪನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿ ಸಂಜೆ ವೇಳೆಗೆ ಚಾಕನಹಳ್ಳಿ ಬಳಿ ಬೀಡುಬಿಟ್ಟಿದ್ದ ಕಾಡಾನೆಗಳ ಗುಂಪುನ್ನು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next