Advertisement

ಪುಂಡಾನೆ ಸೆರೆಗೆ ಅರ್ಜುನ, ಅಭಿಮನ್ಯು ಸಾರಥ್ಯ!

03:43 PM Jun 05, 2023 | Team Udayavani |

ರಾಮನಗರ: ಎರಡು ಜೀವಗಳನ್ನು ಬಲಿ ಪಡೆದ ಒಂಟಿ ಸಲಗ ಸೇರಿದಂತೆ ಜಿಲ್ಲೆಯಲ್ಲಿ ಹಾವಳಿ ಎಬ್ಬಿಸುತ್ತಿರುವ 5 ಕಾಡಾನೆಗಳ ಸೆರೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ. ಇದಕ್ಕಾಗಿ ಪುಂಡಾನೆ ಸೆರೆ ಆಪರೇಷನ್‌ ಸ್ಪೆಷಲಿಸ್ಟ್‌ಗಳಾದ ಅಭಿಮನ್ಯು ಮತ್ತು ಅರ್ಜುನನ ನೇತೃತ್ವದಲ್ಲಿ 5 ಸಾಕಿದ ಆನೆಗಳನ್ನು ಕರೆಸಲಾಗಿದೆ.

Advertisement

ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತಿದ್ದ ಹಾಲಿ ಮತ್ತು ಮಾಜಿ ಆನೆಗಳಾದ ಅಭಿಮನ್ಯು, ಅರ್ಜುನನ ಜೊತೆ ಶ್ರೀಕಂಠ, ಭೀಮಾ, ಮಹೇಂದ್ರ ಎಂಬ ಪಳಗಿದ ಸಲಗಗಳನ್ನು ಕರೆಸಲಾಗಿದ್ದು, 10 ದಿನಗಳಲ್ಲಿ 5 ಕಾಡಾನೆಗಳನ್ನು ಸೆರೆ ಹಿಡಿಯುವ ವಿಶ್ವಾಸ ಕಾರ್ಯಪಡೆಯದ್ದಾಗಿದೆ.

ಮತ್ತೀಗೋಡಿನಿಂದ ಬಂದ ಆನೆಗಳು: ಅರ್ಜುನ, ಅಭಿಮನ್ಯುವಿನ ನೇತೃತ್ವದಲ್ಲಿ 5 ಕಾಡಾನೆಗಳನ್ನು ಶನಿವಾರ ರಾತ್ರಿಯೇ ಚನ್ನಪಟ್ಟಣಕ್ಕೆ ಕರೆಸಲಾಗಿದ್ದು, ಕಾಡಾನೆ ದಾಳಿಯಿಂದ ವ್ಯಕ್ತಿ ಸಾವಿಗೀಡಾಗಿದ್ದ ವಿರೂಪಸಂದ್ರ ಗ್ರಾಮದ ಪಕ್ಕದಲ್ಲಿರುವ ನರೀಕಲ್ಲು ಗುಡ್ಡ ಅರಣ್ಯ ಪ್ರದೇಶದಲ್ಲಿ ತಾತ್ಕಾಲಿಕ ಆನೆ ಕ್ಯಾಂಪ್‌ ತೆರೆದು ಇರಿಸಲಾಗಿದೆ. ಸದ್ಯಕ್ಕೆ ಎರಡು ದಿನಗಳ ಕಾಲ ಸಾಕಾನೆಗಳಿಗೆ ವಿಶ್ರಾಂತಿ ನೀಡಲಿದ್ದು, ಎಲ್ಲಾ ಸಿದ್ಧತೆಯೊಂದಿಗೆ ಕಾರ್ಯಾಚರಣೆ ಆರಂಭಿಸಲಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನರಹಂತಕ ಸಲಗದ ಸೆರೆಗೆ ಯತ್ನ: ರಾಮನಗರ, ಕನಕಪುರ ಮತ್ತು ಚನ್ನಪಟ್ಟಣ ತಾಲೂಕಿನ 50ಕ್ಕೂ ಹೆಚ್ಚು ಗ್ರಾಮಗಳಿಗೆ ಹೊಂದಿಕೊಂಡಂತೆ ಇರುವ ತೆಂಗಿನಕಲ್ಲು ಮತ್ತು ಚಿಕ್ಕಮಣ್ಣು ಗುಡ್ಡೆ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳು ಸಾಕಷ್ಟು ಹಾವಳಿ ಇಟ್ಟಿವೆ. ಇನ್ನು ಒಬ್ಬ ಮಹಿಳೆ ಸಾವಿಗೆ ಕಾರಣವಾಗುವ ಜೊತೆಗೆ, ಯುವಕನ ಮೇಲೆ ದಾಳಿ ಮಾಡಿ ಕಾಡಾನೆಗಳು ಜನರಲ್ಲೂ ಆತಂಕ ಮೂಡಿಸಿದ್ದು, ಎರಡು ಒಂಟಿ ಸಲಗಗಳ ಸೆರೆಗೆ ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಮಂಗಳವಾರದಿಂದ ಕಾರ್ಯಾಚರಣೆ: ಕಾಡಾನೆ ಸೆರೆ ಕಾರ್ಯಾಚರಣೆ ಮಂಗಳವಾರದಿಂದ ಆರಂಭಿಸಲು ಅರಣ್ಯ ಇಲಾಖೆ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಮೊದಲಿಗೆ ಎರಡು ಜೀವನಗಳನ್ನು ಬಲಿಪಡೆದಿರುವ ಒಂಟಿ ಸಲಗವನ್ನು ಹಿಡಿಯಲಿದ್ದು, ಮುಂದಿನ ದಿನಗಳಲ್ಲಿ ಉಳಿದ ನಾಲ್ಕು ಆನೆಗಳನ್ನು ಸೆರೆ ಹಿಡಿಯಲಾಗುವುದು. ಕಾಡಾನೆ ಅವಿತಿರುವ ಸ್ಥಳವನ್ನು ಗುರುತಿಸಿ ಬಳಿಕ ಆಪರೇಷನ್‌ ಆರಂಭಿಸಲಾಗುವುದು.

Advertisement

150ಕೂ ಹೆಚ್ಚು ಆನೆ ಸೆರೆ: 1970ರಲ್ಲಿ ಕೊಡಗಿನ ಹೆಬ್ಟಾಳ ಅರಣ್ಯ ಪ್ರದೇಶದಲ್ಲಿ ಸೆರೆ ಸಿಕ್ಕ ಅಭಿಮನ್ಯುವನ್ನು ಮತ್ತೀಗೋಡು ಆನೆ ಶಿಬಿರದಲ್ಲಿ ಪಳಗಿಸಲಾಯಿತು. ಇದುವರೆಗೆ 150ಕ್ಕೂ ಹೆಚ್ಚು ಕಾಡಾನೆ ಸೆರೆ, 50ಕ್ಕೂ ಹೆಚ್ಚು ಹುಲಿ, ಚಿರತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಅನುಭವ ಹೊಂದಿರುವ ಅಭಿಮನ್ಯು ಕರ್ನಾಟಕ ದಲ್ಲಿ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರದಲ್ಲೂ ಪುಂಡಾನೆ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಅನುಭವಪಡೆದಿದ್ದಾನೆ. ಇನ್ನು ಅರಣ್ಯದಲ್ಲಿ ಅವಿತಿರುವ ಪುಂಡಾನೆಗಳನ್ನು ವಾಸನೆಯಿಂದಲೇ ಗ್ರಹಿಸುವ ಅಭಿಮನ್ಯು, ಕಾಡಾನೆಗಳ ಜೊತೆ ಧೈರ್ಯವಾಗಿ ಕಾದಾಡುವ, ಎಂತಹುದೇ ಆನೆಯಾದರೂ ಮಣಿಸುವ ಬಲಾಡ್ಯ, ಅಭಿಮನ್ಯು ಕಾರ್ಯಾಚರಣೆಯಲ್ಲಿ ಇದ್ದಾನೆ ಎಂದರೆ, ಇಡೀ ತಂಡಕ್ಕೆ ಡಬ್ಬಲ್‌ ಧೈರ್ಯ ಎಂಬುದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ತಂಡದ ಮಾತಾಗಿದೆ.

ಸೆರೆ ಹಿಡಿವ ಕಮ್ಯಾಂಡೋ ಅಭಿಮನ್ಯು : ಪುಂಡಾನೆಗಳ ಸೆರೆ ಕಾರ್ಯಾಚರಣೆಯಲ್ಲಿ ರಾಜ್ಯ ಅರಣ್ಯ ಇಲಾಖೆಯಲ್ಲಿ ಅಭಿಮನ್ಯು ಅಧಿಕಾರಿಗಳು ಮತ್ತು ಆಪರೇಷನ್‌ ಟೀಂನ ಹಾಟ್‌ ಫೇವರಿಟ್‌. 2020ರಿಂದ ಮೈಸೂರು ದಸರಾ ಅಂಬಾರಿ ಹೊರುತ್ತಿರುವ ಅಭಿಮನ್ಯು ಪುಂಡಾನೆಗಳ ಸೆರೆ ಹಿಡಿಯುವ ಕಮ್ಯಾಂಡೋ ಎಂದೇ ಅರಣ್ಯ ಇಲಾಖೆ ಅಧಿಕಾರಿಗಳು ಪ್ರೀತಿಯಿಂದ ಕರೆಯುತ್ತಾರೆ. ಗುರಿ ತಪ್ಪದ ಎಕೆ-47 ಎಂದೇ ಕರೆಯುವ ಅಭಿಮನ್ಯು ನೇತೃತ್ವದಲ್ಲಿ ನಡೆಸಿರುವ ಯಾವುದೇ ಕಾಡಾನೆ ಸೆರೆ ಕಾರ್ಯಾಚರಣೆಯೂ ವಿಫಲಗೊಂಡಿಲ್ಲ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೆಮ್ಮೆಯಿಂದ ಹೇಳುತ್ತಾರೆ.

ಕಾಡಾನೆಗಳ ಕೂಂಬಿಂಗ್‌ ಜೊತೆಗೆ ಅವುಗಳನ್ನು ಸೆರೆ ಹಿಡಿದು ಸಂತೈಸಿ ತರುವಲ್ಲಿ ಅಭಿಮನ್ಯುವಿನ ಕಾರ್ಯವೈಖರಿ ಎಂತಹವರನ್ನಾದರೂ ರೋಮಾಂಚನಗೊಳಿಸುತ್ತದೆ. ದೊಡ್ಡ ಮೈಕಟ್ಟು, ರಾಜಠೀವಿ ಹೊಂದಿರುವ ಅಭಿಮನ್ಯು ತನ್ನ ನೋಟದಲ್ಲೇ ಎಂತವರನ್ನಾದರೂ ಮಂತ್ರ ಮುಗ್ದವಾಗಿಸುವ ಮೈಕಟ್ಟು ಹೊಂದಿದ್ದು, ಮಾಹುತನ ಆಜ್ಞಾಪಾಲಕನಾಗಿರುವ ಅಭಿಮನ್ಯು ಸೌಮ್ಯ ಸ್ವಭಾವದ ಆನೆಯಾಗಿದ್ದರೂ, ಕಾರ್ಯಾಚರಣೆಗೆ ಇಳಿದರೆ ಅಂಜುವ ಮಾತೇ ಇಲ್ಲ.

ಎದುರಿಗೆ ನಿಂತಿರುವ ಕಾಡಾನೆ ಎಂತಹ ದೈತ್ಯವಾಗಿರಲಿ, ಪುಂಡಾನೆಯಾಗಿರಲಿ ಅದನ್ನು ಮಣಿಸಿ, ಎಳೆದು ತಂದು ಲಾರಿಗೆ ಹತ್ತಿಸುವವರೆಗೆ ದಣಿಯದೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ಸಾಥ್‌ ನೀಡುವುದು ಅಭಿಮನ್ಯುವಿನ ವೈಶಿಷ್ಟ ಎಂಬುದು ಮಾಹುತರು ಮತ್ತು ಕಾವಾಡಿಗಳ ಮಾತಾಗಿದೆ.

ಆಪರೇಷನ್‌ ಸ್ಪೆಷಲಿಸ್ಟ್‌ ಅರ್ಜುನ : ಕಾಡಾನೆಗಳ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಅರ್ಜುನನಿಗೆ ತನ್ನದೇ ಆದ ಹೆಸರಿದೆ. ಇದುವರೆಗೆ ನೂರಕ್ಕೂ ಹೆಚ್ಚು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಅರ್ಜುನ ಪುಂಡಾನೆಗಳ ಆಟಾಟೋಪಕ್ಕೆ ಬ್ರೇಕ್‌ ಹಾಕಿ ಕರೆತರುವಲ್ಲಿ ಸಿದ್ಧಹಸ್ತನೆನಿಸಿದ್ದು, ಆಪರೇಷನ್‌ ತಂಡಕ್ಕೆ ಅರ್ಜುನನ ಮೇಲೆ ಅಪಾರ ಪ್ರೀತಿ ಇದೆ. ಇದರೊಂದಿಗೆ ಭೀಮಾ ಸಹ ಈ ಹಿಂದೆ ಚನ್ನಪಟ್ಟಣದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಿತ್ತು. ಇದೀಗ ಮತ್ತೆ ಅರ್ಜುನ, ಅಭಿಮನ್ಯುವಿನ ಜೊತೆ ಸಾಥ್‌ ನೀಡಲಿದೆ.

ಕಾಡಾನೆ ಸೆರೆ ಕಾರ್ಯಾಚರಣೆ ಹೇಗೆ ನಡೆಯುತ್ತೆ! :

  • ಮೊದಲಿಗೆ ಸೆರೆ ಹಿಡಿಯ ಬೇಕಾದ ಕಾಡಾನೆಯನ್ನು ಅರಣ್ಯ ಇಲಾಖೆಯ ಕೂಂಬಿಂಗ್‌ ತಂಡ ಹುಡುಕಿ ಅರಣ್ಯದಲ್ಲಿ ಪುಂಡಾನೆ ಅವಿತಿರುವ ಸ್ಥಳವನ್ನು ಗುರುತು ಮಾಡುತ್ತಾರೆ.
  • ಬಳಿಕ ಸಾಕಿದ ಆನೆಗಳು, ಮತ್ತು ಅರವಳಿಕೆ ತಜ್ಞರು ಮತ್ತು ನೀರಿನ ಟ್ಯಾಂಕರ್‌ ಜೊತೆಗೆ ಆನೆ ಗುರುತು ಮಾಡಿರುವ ಸ್ಥಳಕ್ಕೆ ತೆರಳುತ್ತಾರೆ.
  • ಪುಂಡಾನೆ ಕಾಣಿಸುತ್ತಿದ್ದಂತೆ ಅದಕ್ಕೆ ಅರವಳಿಕೆ ತಜ್ಞರು ಅರವಳಿಕೆ ಮದ್ದು ತುಂಬಿದ ಸಿರೀಂಜ್‌ ಅನ್ನು ಗನ್‌ ಮೂಲಕ ಶೂಟ್‌ ಮಾಡಿ ಆನೆ ಪ್ರಜ್ಞೆ ತಪ್ಪುವಂತೆ ಮಾಡುತ್ತಾರೆ. ಆನೆ ಪ್ರಜ್ಞೆ ತಪ್ಪುವವರೆಗೆ ವಾಚರ್‌ಗಳು ಆನೆಯನ್ನು ಗುರುತಿಸುತ್ತಿರುತ್ತಾರೆ. ಆನೆಯ ದೈಹಿಕ ಸ್ಥಿತಿಯನ್ನು ಆದರಿಸಿ ಅದು ಇಂತಿಷ್ಟು ಸಮಯ ಎಂದು ತೆಗೆದುಕೊಂಡು ಪ್ರಜ್ಞೆ ತಪ್ಪುತ್ತದೆ.
  • ಆನೆ ಪ್ರಜ್ಞೆತಪ್ಪಿ ಬೀಳುತ್ತಿದ್ದಂತೆ ಅರಣ್ಯ ಇಲಾಖೆಯ ವನ್ಯಜೀವಿ ವೈದ್ಯರು, ಸಿಬ್ಬಂದಿಗಳು ಮತ್ತು ಸಾಕಾನೆಗಳು ಕಾಡಾನೆಯನ್ನು ಸುತ್ತುವರಿಯುತ್ತವೆ. ಆನೆಗೆ ತಕ್ಷಣ ಟ್ಯಾಂಕರ್‌ನಲ್ಲಿ ನೀರನ್ನು ಸುರಿದು ಮತ್ತು ಕಡಿಮೆಯಾಗುವಂತೆ ಮಾಡುತ್ತದೆ. ಈ ಕ್ಷಣವ ಪ್ರಮುಖವಾಗಿದ್ದು, ಆನೆಯ ಹೃದಯ ಬಡಿತ ಹಾಗೂ ದೈಹಿಕ ಸ್ಥಿತಿಯಲ್ಲಿ ಏರುಪೇರಾಗುವ ಸಾಧ್ಯತೆ ಇರುವ ಕಾರಣದಿಂದ ವೈದ್ಯರು ಎಚ್ಚರಿಕೆ ವಹಿಸುತ್ತಾರೆ.
  • ನೀರು ಸುರಿಯುತ್ತಿದ್ದಂತೆ ಆನೆ ಎಚ್ಚರಗೊಳ್ಳುವ ಮೊದಲು ಅದಕ್ಕೆ ದಪ್ಪನಾದ ಸೆಣಬಿನಹಗ್ಗವನ್ನು ಸುತ್ತಿ ಬಂಧಿಸಲಾಗುತ್ತದೆ. ಮತ್ತು ಕಡಿಮೆಯಾಗಿ ಆನೆ ಎಚ್ಚರಗೊಳ್ಳುತ್ತಿದ್ದಂತೆ ಕಾಡಾನೆ ಪ್ರತಿರೋಧ ತೋರುತ್ತದೆ. ಆದರೆ, ಮೊದಲೇ ಹಗ್ಗದಿಂದ ಬಂದಿಸಿರುವ ಕಾರಣ ಅದು ಎಲ್ಲಿಗೂ ಹೋಗಲು ಸಾಧ್ಯವಾಗುವುದಿಲ್ಲ.
  • ಆನೆ ಎಚ್ಚೆತ್ತುಕೊಳ್ಳುತ್ತಿದ್ದಂತೆ ಅದನ್ನು ನಿಭಾಯಿಸಿ ಲಾರಿಯ ವರೆಗೆ ಕರೆತರುವ ಜವಾಬ್ದಾರಿ ಸಾಕಾನೆಗಳದ್ದು, ತಂಡವನ್ನು ಮುನ್ನಡೆಸುವ ಸಾಕಾನೆ ನೇತೃತ್ವದಲ್ಲಿ ಉಳಿದ ಸಾಕಾನೆಗಳು ಸೆರೆ ಸಿಕ್ಕ ಪುಂಡಾನೆಯನ್ನು ಸುತ್ತುವರಿಯುತ್ತವೆ. ಜೊತೆಗೆ ಬರಲು ನಖರಾ ಮಾಡುವ ಕಾಡಾನೆಗೆ ದಂತದಿಂದ ತಿವಿದು, ಸೊಂಡಲಿನಿಂದ ಸಂತೈಸಿ ಶಿಬಿರಕ್ಕೆ ಕರೆತರುತ್ತವೆ.
  • ಶಿಬಿರದ ಬಳಿ ಕಾಡಾನೆಯನ್ನು ಸಾಗಾಣಿಕೆ ಮಾಡಲು ದೊಡ್ಡ ಬೋನು ಮತ್ತು ಅದನ್ನು ಲಾರಿಗೆ ಹತ್ತಿಸಲು ಕ್ರೇನ್‌ ವ್ಯವಸ್ಥೆ ಮಾಡಲಾಗಿರುತ್ತದೆ. ಬಳಿಕ ಸೆರೆ ಹಿಡಿದ ಆನೆಯನ್ನು ನಿಗದಿತ ಸ್ಥಳಕ್ಕೆ ಕರೆದೊಯ್ದು ಕಾಡಿಗೆ ಬಿಡಲಾಗುತ್ತದೆ.

– ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next