ಸುಬ್ರಹ್ಮಣ್ಯ: ಸಲಗವೊಂದು ಊರಿನ ದಾರಿ ಹಿಡಿದಿದ್ದು, ಸ್ಥಳೀಯ ಜನತೆ, ಸಾರ್ವಜನಿಕರು ಎಚ್ಚರ ವಹಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಸುಳ್ಯ ತಾಲೂಕಿನಲ್ಲಿ ನಡೆಯುತ್ತಿದೆ.
ಪಂಬೆತ್ತಾಡಿ, ಪಂಜ ಭಾಗದಲ್ಲಿ ಬುಧವಾರ ರಾತ್ರಿ ಕಾಡಾನೆ ಸಂಚರಿಸಿ ಬಳಿಕ ಪುಳಿಕುಕ್ಕು ಕಡೆಯಲ್ಲಿ ಹಾಗೂ ಅರಣ್ಯ ಪ್ರದೇಶ ಕಾಣಿಸಿಕೊಂಡಿದೆ ಎನ್ನಲಾಗಿದೆ. ರಾತ್ರಿ ಆನೆ ಸಂಚರಿಸುತ್ತಿರುವ ವೀಡಿಯೋಗಳು ಕೂಡ ಹರಿದಾಡುತ್ತಿವೆ. ಕೆಲವು ವರ್ಷಗಳಿಂದ ನಿರ್ದಿಷ್ಟ ಅವಧಿಯಲ್ಲಿ ಈ ಆನೆ ಊರಿನತ್ತ ಬಂದು ಹೋಗುತ್ತಿದೆ ಎನ್ನಲಾಗುತ್ತಿದ್ದು, ಈ ವರ್ಷವೂ ಪಂಜ ಭಾಗದಿಂದ ಸಂಚಾರ ಆರಂಭಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇದೇ ಆನೆ 2021ರ ಫೆಬ್ರವರಿಯಲ್ಲಿ ಪಂಬೆತ್ತಾಡಿ, ಪಂಜದಲ್ಲಿ ಸಂಚರಿಸಿತ್ತು. ಬುಧವಾರ ರಾತ್ರಿ ಪಂಬೆತ್ತಾಡಿಯಿಂದ ಕರಿಕ್ಕಳದಲ್ಲಿ ರಾಜ್ಯ ಹೆದ್ದಾರಿ ದಾಟಿ ಚಿಂಗಾಣಿಗುಡ್ಡೆಯಲ್ಲಿ ಸಂಚರಿಸಿ ಎಣ್ಮೂರು ರಕ್ಷಿತಾರಣ್ಯದ ಪುಳಿಕುಕ್ಕು ಭಾಗಕ್ಕೆ ತೆರಳಿತ್ತು ಎಂದು ಪಂಜ ಅರಣ್ಯ ಇಲಾಖೆಯವರು ಮಾಹಿತಿ ನೀಡಿದ್ದಾರೆ.