Advertisement

ಕಾಡು ಪ್ರಾಣಿ ಹಾವಳಿ: ಶಾಶ್ವತ ಪರಿಹಾರಕ್ಕೆ ತಜ್ಞರ ಸಮಿತಿ ರಚಿಸಿ

03:44 PM Sep 23, 2022 | Team Udayavani |

ವಿಧಾನಸಭೆ: ಮಾನವ-ಪ್ರಾಣಿ ಸಂಘರ್ಷದಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಸದನದಲ್ಲಿ ಪ್ರಸ್ತಾಪವಾಗಿ ಶಾಸಕರು ಸಮಸ್ಯೆಗಳನ್ನು ಸದನದ ಮುಂದೆ ಬಿಚ್ಚಿಟ್ಟರು. ಸ್ವತಃ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿಯವರು ವಿಷಯದ ಗಂಭೀರತೆಯನ್ನು ಮನಗಾಣುವಂತೆ ಸರ್ಕಾರಕ್ಕೆ ಹೇಳಿದರು. “ಕಾಡು ಪ್ರಾಣಿಗಳ ಹಾವಳಿಯಿಂದ ರೈತರಿಗೆ ಬೆಳೆ ಹಾನಿ ನಿರೀಕ್ಷೆಗೂ ಮೀರಿ ಆಗುತ್ತಿದೆ. ಪ್ರಾಣ ಹಾನಿಯೂ ಸಂಭವಿಸುತ್ತಿದೆ.

Advertisement

ಸರ್ಕಾರ ಈ ವಿಚಾರವನ್ನು ಗಂಭೀರ ವಾಗಿ ಪರಿಗಣಿಸಬೇಕು. ಇದು ಇಡೀ ರಾಜ್ಯದ ಸಮಸ್ಯೆಯಾಗಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಉನ್ನತ ಮಟ್ಟದ ಸಮಿತಿ ರಚಿಸಿ, ಅದರಿಂದ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಿ’ ಎಂದು ಸ್ಪೀಕರ್‌ ಕಾಗೇರಿ ಸರ್ಕಾರಕ್ಕೆ ಸೂಚನೆ ನೀಡಿದರು.

ಪ್ರಶ್ನೋತ್ತರ ಅವಧಿಯಲ್ಲಿ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ, ಮೂಡಿಗೆರೆ ತಾಲೂಕಿನಲ್ಲಿ ಆನೆಗಳ ಹಾವಳಿ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಪೂರಕವಾಗಿ ಕೆಲವು ಶಾಸಕರು ಮಾತನಾಡಿ, ಕಾಡು ಪ್ರಾಣಿಗಳ ದಾಳಿಗಳಿಂದಾಗಿ ಆಗುತ್ತಿರುವ ಸಮಸ್ಯೆಗಳನ್ನು ವಿವರಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್‌ ಕಾಗೇರಿ, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಸರ್ಕಾರಕ್ಕೆ ಹೇಳಿದರು.

ಆನೆಗಳ ಭ್ರೂಣ ಹತ್ಯೆ ಮಾಡಿ: ಆನೆ ಹಾವಳಿ ವಿಚಾರದಲ್ಲಿ ಸರ್ಕಾರದ ಧೋರಣೆ “ನಾವು ಪರಿಹಾರ ಕೊಡ್ತೀವಿ-ನೀವು ಸಾಯಲಿಕ್ಕೆ ರೆಡಿ ಇರಿ’ ಎಂಬಂತಿದೆ. ನನ್ನ ಕ್ಷೇತ್ರದಲ್ಲಿ ಆನೆ ದಾಳಿಯಿಂದ 6 ಜನ ಸತ್ತಿದ್ದಾರೆ. ಇವತ್ತು ಪ್ರಾಣಿಗಳು ಜನರ ಮೇಲೆ ದಾಳಿ ನಡೆಸುತ್ತಿವೆ. ಚುನಾವಣೆ ಸಂದರ್ಭದಲ್ಲಿ ಜನ ನಮ್ಮ ಮೇಲೆ ದಾಳಿ ಮಾಡುತ್ತಾರೆ. ಸರ್ಕಾರಕ್ಕೆ-ನ್ಯಾಯಾಲಯಕ್ಕೆ ಆನೆಗಳು ಬೇಕಾಗಿವೆ. ಆನೆ ದಾಳಿಯಿಂದ ಮೃತಪಟ್ಟರೆ ಅವರು ಕುಟುಂಬದವರು ಶವ ಇಟ್ಟು ನಮ್ಮನ್ನು ಕರಿತಾರೆ. ಜನರಿಗೆ ಆನೆ ಬೇಕಿಲ್ಲ. ಆನೆಗಳಿಗೆ ಸ್ಥಳಾಂತರ ಮಾಡಿ, ಕಾರಿಡಾರ್‌ ನಿರ್ಮಿಸಿ ಇಲ್ಲವೇ ಆನೆಗಳ ಸಂಖ್ಯೆ ಕಡಿಮೆ ಮಾಡಲು ಆನೆಗಳ ಭ್ರೂಣ ಹತ್ಯೆಯಾದರೂ ಮಾಡಿ ಎಂದು ಎಂ.ಪಿ.ಕುಮಾರಸ್ವಾಮಿ ಸಲಹೆ ನೀಡಿದರು.

“ಮೂಡಿಗೆರೆ ಬೈರಾ’ ಕೈಗೆ ಸಿಗ್ತಿಲ್ಲ: ಎಂ.ಪಿ. ಕುಮಾರಸ್ವಾಮಿ ಪ್ರಶ್ನೆಗೆ ಮುಖ್ಯಮಂತ್ರಿಯವರ ಪರವಾಗಿ ಉತ್ತರಿಸಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌, 2000ದಿಂದ ಇಲ್ಲಿವರೆಗೆ ಮೂಡಿಗೆರೆಯಲ್ಲಿ 74 ಆನೆಗಳನ್ನು ಹಿಡಿದು ಬೇರೆ ಕಡೆ ಸ್ಥಳಾಂತರ ಮಾಡಲಾಗಿದೆ. ಒಂದು ಪ್ರಾಣ ಹಾನಿ ಸಂಭವಿಸಿದೆ.

Advertisement

ಆನೆಗಳ ಚಲನ-ವಲನಗಳ ಮೇಲೆ ನಿಗಾ ಇಡಲು ಅವುಗಳ ಕೊರಳಿಗೆ ರೇಡಿಯೋ ಕಾಲರ್‌ ಹಾಕಲಾಗುತ್ತಿದೆ. ಆನೆ ಹಾವಳಿ ತಡೆಗಟ್ಟಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಆದರೆ, ಭ್ರೂಣ ಹತ್ಯೆ ಪ್ರಸ್ತಾಪ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಮೂಡಿಗೆರೆ ತಾಲೂಕಿನಲ್ಲಿ ಜನರಿಗೆ ಉಪಟಳ ನೀಡುತ್ತಿರುವ ಒಂದು ಆನೆ ಕೈಗೆ ಸಿಗುತ್ತಿಲ್ಲ. ಅದರ ಹೆಸರು “ಮೂಡಿಗೆರೆ ಬೈರಾ’ ಎಂದು ಇಡಲಾಗಿದೆ. ಇದನ್ನು ಸೆರೆ ಹಿಡಿಯಲು ಸೆ.9ರಂದು ಸೂಚಿಸಲಾಗಿದ್ದು, ತಂಡ ರಚಿಸಲಾಗಿದೆ ಎಂದರು.

ಶಾಸಕ ಅಪ್ಪಚ್ಚು ರಂಜನ್‌, ಒಂದು ಕಡೆ ಉಪಟಳ ಮಾಡುವ ಆನೆಗಳನ್ನು ಸ್ಥಳಾಂತರ ಮಾಡುವುದು ಸರಿ. ಆದರೆ, ಆ ಆನೆಗಳನ್ನು ಎಲ್ಲಿಗೆ ಬಿಡುತ್ತಾರೆ? ಅವು ಹೋದ ಕಡೆಯೂ ಮತ್ತೆ ಕಾಟ ಕೊಡುತ್ತವೆ. ಅವುಗಳಿಗೆ ಆಹಾರ ಸಿಗುವ ಮರಗಳನ್ನು ಕಾಡಿನಲ್ಲಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ಶಾಸಕ ನರೇಂದ್ರ, ಚಾಮರಾಜನಗರ ಜಿಲ್ಲೆಯಲ್ಲಿ ಮೊದಲೇ ಆನೆ ಹಾವಳಿ ಹೆಚ್ಚಾಗಿದೆ. ಇಂತಹದ್ದರಲ್ಲಿ ಬೇರೆ ಕಡೆ ಪುಂಡಾಟ ನಡೆಸುವ ಆನೆಗಳನ್ನು ತಂದು ನಮ್ಮಲ್ಲಿ ಬಿಡುತ್ತಾರೆ. ಇತ್ತೀಚೆಗೆ 3 ಪುಂಡಾನೆಗಳನ್ನು ನಮ್ಮಲ್ಲಿ ತಂದು ಬಿಟ್ಟಿದ್ದಾರೆ. ಅದರಲ್ಲಿ 1 ಆನೆ ಊರು ಬಿಟ್ಟು ಹೋಗುತ್ತಿಲ್ಲ. ಬೇರೆ ಕಡೆ ಹಿಡಿದ ಆನೆಯನ್ನು ನಮ್ಮಲ್ಲಿ ಬಿಡಬಾರದು ಎಂದು ಒತ್ತಾಯಿಸಿದರು.

ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಇದು ಇಡೀ ರಾಜ್ಯದ ಸಮಸ್ಯೆಯಾಗಿದೆ. ಕಾಡಾನೆ, ಕಾಡುಕೋಣ, ನವಿಲು, ಚಿರತೆ, ಜಿಂಕೆ ಹೀಗೆ ಕಾಡು ಪ್ರಾಣಿಗಳಿಂದ ಬೆಳೆ ನಷ್ಟವಾಗುತ್ತಿದೆ. ಪರಿಹಾರವನ್ನು ಹೆಚ್ಚಿಸಬೇಕು ಎಂದು ಹೇಳಿದರು. ನಮ್ಮ ಕಡೆ ಮಂಗಗಳ ಹಾವಳಿಯೂ ಇದೆ. ಬೇರೆಡೆ ಹಿಡಿದ ಮಂಗಗಳನ್ನು ತಂದು ಬಿಡುತ್ತಿದ್ದಾರೆ. ಇದಕ್ಕೆಲ್ಲ ಶಾಶ್ವತ ಪರಿಹಾರ ಕಂಡು ಹಿಡಿಯಲು ತಜ್ಞರ ಸಮಿತಿಯನ್ನು ರಚಿಸಿ, ಈ ಬಗ್ಗೆ ಮುಖ್ಯಮಂತ್ರಿಗಳ
ಗಮನಕ್ಕೆ ತರುವುದಾಗಿಯೂ ಹೇಳಿದರು.

ಬೆಳೆ ನಷ್ಟ ಪರಿಹಾರ ದ್ವಿಗುಣ
ರಾಜ್ಯದಲ್ಲಿ ಆನೆ ಹಾವಳಿಯಿಂದ ಆಗುವ ಬೆಳೆ ನಷ್ಟ ಪರಿಹಾರವನ್ನು ದ್ವಿಗುಣ ಮಾಡಲಾಗಿದೆ. ಹಾಗೆಯೇ ಆನೆ ದಾಳಿಯಿಂದ ಮೃತಪಟ್ಟವರಿಗೆ ನೀಡುವ ಪರಿಹಾರವನ್ನು 7.5 ಲಕ್ಷದಿಂದ 15 ಲಕ್ಷದವರೆಗೆ ಏರಿಕೆ ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪರವಾಗಿ ಸಚಿವ
ಶಿವರಾಮ್‌ ಹೆಬ್ಬಾರ್‌ ತಿಳಿಸಿದರು.

ಆನೆ ಹಾವಳಿಯ ಬಗ್ಗೆ ಬುಧವಾರ ಸದನದಲ್ಲಿ ಚರ್ಚೆಯಾಗಿದೆ. ಮುಖ್ಯಮಂತ್ರಿಗಳು ಉತ್ತರ ನೀಡುವ ಸಂದರ್ಭದಲ್ಲಿ ಆನೆ ದಾಳಿಯಿಂದ ಮೃತಪಡುವವರಿಗೆ ನೀಡುವ ಪರಿಹಾರವನ್ನು 7.5 ಲಕ್ಷದಿಂದ 15 ಲಕ್ಷಕ್ಕೆ ಏರಿಸುವ ಪ್ರಕಟಣೆ ಮಾಡಿದ್ದಾರೆ. ಹಾಗೆಯೇ ಬೆಳೆ ಪರಿಹಾರ ಮೊತ್ತವನ್ನು ದ್ವಿಗುಣ ಮಾಡಲಾಗಿದೆ ಎಂದರು.ಆನೆ ಹಾವಳಿ ಹೆಚ್ಚಿರುವ ಕಡೆ ಆನೆಗಳನ್ನು ಹಿಡಿದು ಬೇರೆಡೆಗೆ ಬಿಡಲಾಗುತ್ತಿದೆ. ಜತೆಗೆ ರೈಲ್ವೆ ಹಳಿಗಳಿಗೆ ಫೆನ್ಸಿಂಗ್‌ ಹಾಕಲಾಗುತ್ತಿದೆ. ಇದಕ್ಕಾಗಿಯೇ 100 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿಗಳು ಒದಗಿಸಿದ್ದಾರೆ ಎಂದರು. ಆನೆ ದಾಳಿಗೆ ಹೆದರಿ ಬೆಳೆ ಬೆಳೆಯದ ರೈತರಿಗೆ ಪರಿಹಾರ ಒದಗಿಸುವ ವಿಚಾರ ಮುಖ್ಯಮಂತ್ರಿಯವರ ಗಮನಕ್ಕೆ ತರುವುದಾಗಿ ಹೆಬ್ಟಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next