ಮಡಿಕೇರಿ: ನಾಪೋಕ್ಲುವಿನ ರಮ್ಯ ಸ್ಟುಡಿಯೋ ಮಾಲೀಕ, ಪತ್ರಕರ್ತ ದುಗ್ಗಳ ಸದಾನಂದ ಅವರು ಎಂದಿನಂತೆ ತಮ್ಮ ಸ್ಟುಡಿಯೋ ಬಾಗಿಲು ತೆರೆಯಲು ಬಂದಾಗ ಅಪರೂಪದ ಅತಿಥಿಯೊಬ್ಬರು ಕಾದು ಕುಳಿತಿದ್ದರು. ಅತ್ಯಂತ ಸಂಕೋಚ ಸ್ವಭಾವದ ಈ ಅತಿಥಿಯನ್ನು ಒಮ್ಮೆ ಮುದ್ದಿಸೋಣವೆಂದು ಹೊರಟ ಅವರ ಕೈಗೆ ಅದು ಕಚ್ಚಿಯೇ ಬಿಟ್ಟಿತು. ಪಾಪ ಸದಾನಂದ ಅವರನ್ನು ಅತಿಥಿಯಾಗಿ ಕಾಡಿದ್ದು ವನ್ಯಜೀವಿ “ಕಾಡುಪಾಪ”.
ಕುತೂಹಲ ಮೂಡಿಸಿದ “ಕಾಡುಪಾಪ”ವನ್ನು ಕಾರ್ಡ್‍ಬೋರ್ಡ್ ಪೆಟ್ಟಿಗೆಯೊಂದರಲ್ಲಿರಿಸಿದ ಸದಾನಂದ ಅವರು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಭಾಗಮಂಡಲದ ವಲಯ ಅರಣ್ಯಾಧಿಕಾರಿ ದೇವರಾಜ್ ಸ್ಥಳಕ್ಕೆ ಆಗಮಿಸಿ, ಕಾಡುಪಾಪವನ್ನು ವಶಕ್ಕೆ ಪಡೆದು ನಂತರ ಅರಣ್ಯ ಪ್ರದೇಶಕ್ಕೆ ಬಿಟ್ಟರು.
ವನಪಾಲಕ ಸುರೇಶ್, ಸೋಮಣ್ಣ ಗೌಡ, ಪ್ರವೀಣ್ ಮತ್ತಿತರರು ಈ ಸಂದರ್ಭ ಹಾಜರಿದ್ದರು.
ಕರ್ನಾಟಕದ ಮಲೆನಾಡ ಅರಣ್ಯ ಭಾಗ ಸೇರಿದಂತೆ, ಭಾರತ ಹಾಗೂ ಸಿಂಹಳದ ಅಭಯಾರಣ್ಯಗಳಲ್ಲಿ ಕಂಡು ಬರುವ “ಕಾಡುಪಾಪ” ಎಂಬ ಅಮಾಯಕ ಜೀವ ನಾಪೋಕ್ಲುವಿಗೆ ಹೇಗೆ ಬಂತೆಂಬುದೇ ಅಚ್ಚರಿ.
ಇದನ್ನೂ ಓದಿ :ಬೆತ್ತಲೆಯಾಗಿ ಪತ್ತೆಯಾದ ಉಪನ್ಯಾಸಕನ ಮೃತದೇಹ !
ಕಾಡುಪಾಪಕ್ಕೆ ಕೊಡವ ಭಾಷೆಯಲ್ಲಿ `ಚೀಂಗೆ ಕೂಳಿ’ ಮತ್ತು ತುಳುವಿನಲ್ಲಿ `ಉರಿಯೋಳು’ ಎನ್ನುತ್ತಾರೆ. ಅತ್ಯಂತ ಸಂಕೋಚದ ಸ್ವಭಾವದ ಈ ಜಿವಿಗಳು, ವೃಕ್ಷವಾಸಿಗಳು. ದೇಹದ ಉದ್ದ ಸುಮಾರು 175 ರಿಂದ 275 ಮಿಲಿ ಮೀಟರ್. ಹಳದಿ ಮಿಶ್ರಿತ ಬೂದು ಅಥವಾ ಕಡುಕಂದು ಬಣ್ಣದ ಉಣ್ಣೆಯಂಥ ಮೃದುವಾದ ಕೂದಲಿದೆ. ಬಾಲವಿಲ್ಲ, ಹೆಬ್ಬೆರಳಿದೆ, ದೊಡ್ಡ, ಗುಂಡಗಿನ ಕಣ್ಣು, ತಲೆಯ ಮೇಲೆ ಎದ್ದು ಕಾಣುವ ಕಿವಿಗಳಿವೆ.
ನಿಶಾಚರಿಯಾದ ಕಾಡುಪಾಪ, ಹಗಲಿನಲ್ಲಿ ಮರದ ಮೇಲೆ ನಿದ್ರಿಸುತ್ತ ಕಾಲ ಕಳೆಯುತ್ತದೆ. ಓಡಾಟ ಬಲು ನಿಧಾನ, ಕೀಟ, ಹಲ್ಲಿ, ಮರಗಪ್ಪೆ, ಹಕ್ಕಿಗಳು ಇದರ ಆಹಾರ. ವರ್ಷಕ್ಕೊಮ್ಮೆ ಗರ್ಭಧರಿಸುವ ಇವು ಎರಡು ಮರಿಗಳಿಗೆ ಜನ್ಮ ನೀಡುತ್ತವೆ.