Advertisement

‌Loan App ಕಿರುಕುಳ:ಸಾಲ ಮರು ಪಾವತಿಸದ್ದಕ್ಕೆ ಪತ್ನಿ ಫೋಟೋ ಮಾರ್ಫ್:ನವ ವಿವಾಹಿತ ಆತ್ಮ*ಹತ್ಯೆ

06:03 PM Dec 11, 2024 | Team Udayavani |

ಹೈದರಾಬಾದ್:‌ ಲೋನ್ ಆ್ಯಪ್ ಏಜೆಂಟ್‌ಗಳ ಕಿರುಕುಳಕ್ಕೆ ಬೇಸತ್ತು ನವ ವಿವಾಹಿತನೊಬ್ಬ ತನ್ನ ಪ್ರಾಣವನ್ನು ಕಳೆದುಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿರುವುದು ವರದಿಯಾಗಿದೆ.

Advertisement

ನರೇಂದ್ರ (25) ಮೃತ ವ್ಯಕ್ತಿ.

ಏನಿದು ಘಟನೆ?: ಮೀನುಗಾರನಾಗಿದ್ದ ನರೇಂದ್ರ ಇದೇ ವರ್ಷದ ಅಕ್ಟೋಬರ್‌ 28 ರಂದು ಅಖಿಲಾ ಅವರೊಂದಿಗೆ ಅಂತರ್ಜಾತಿ ಪ್ರೇಮ ವಿವಾಹವಾಗಿದ್ದರು. ದಂಪತಿಗಳು ವಿಶಾಖಪಟ್ಟಣಂನಲ್ಲಿ ವಾಸಿಸುತ್ತಿದ್ದರು. ಕೆಲ ದಿನಗಳಿಂದ ಹವಾಮಾನ ವೈಪರೀತ್ಯದಿಂದಾಗಿ ನರೇಂದ್ರ ಅವರು ಮೀನುಗಾರಿಕೆಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ದಿನ ನಿತ್ಯ ಖರ್ಚು ವೆಚ್ಚಕ್ಕಾಗಿ ನರೇಂದ್ರ ಅವರು ಲೋನ್‌ ಆ್ಯಪ್ ವೊಂದರಿಂದ 2000 ರೂ. ಪಡೆದಿದ್ದರು.

ಲೋನ್ ಆ್ಯಪ್ ನಿಂದ ಸಾಲವಾಗಿ ಪಡೆದ 2000 ರೂಪಾಯಿಯ ಮರುಪಾವತಿಗಾಗಿ ಏಜೆಂಟ್‌ಗಳು ವಾರದೊಳಗೆಯೇ ಕಿರುಕುಳ ನೀಡಲು ಆರಂಭಿಸಿದ್ದಾರೆ. ಏಜೆಂಟರು ಸಾಲ ಮರುಪಾವತಿಸುವಂತೆ ಕಿರುಕುಳ, ನಿಂದನೀಯ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದ್ದಾರೆ.

ಸಾಲ ತೀರಿಸದ ನರೇಂದ್ರ ಅವರಿಗೆ ನಿಂದನೀಯ ಸಂದೇಶದೊಂದಿಗೆ ಅವರ ಪತ್ನಿಯ ಮಾರ್ಫ್‌ ಮಾಡಿದ ಫೋಟೋವನ್ನು ಕಳುಹಿಸಿದ್ದಾರೆ. ಏಜೆಂಟ್‌ಗಳು ಅವರ ಪತ್ನಿಯ ಮಾರ್ಫ್ ಮಾಡಿದ ಫೋಟೋಗಳಿಗೆ ಈಕೆಗೆ ಇಂತಿಷ್ಟು ಬೆಲೆ ಎಂದು ಬೆಲೆಯ ಟ್ಯಾಗ್‌ ಹಾಕಿ ನರೇಂದ್ರ ಅವರ ಫೋನ್‌ನಲ್ಲಿದ್ದ ಎಲ್ಲ ಸಂಖ್ಯೆಗೆ ವಾಟ್ಸಾಪ್‌ ಮಾಡಿದ್ದಾರೆ. ಇದು ನರೇಂದ್ರ ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಹೋಗಿದೆ.

Advertisement

ಅಖಿಲಾ ಅವರಿಗೂ ಈ ಫೋಟೋ ಬಂದಾಗ ಆಕೆ ಪತಿಯ ಬಳಿ ಇದನ್ನು ಹೇಳಿದ್ದಾಳೆ. ಹೇಗಾದರೂ ಮಾಡಿ ಪಡೆದುಕೊಂಡ ಸಾಲವನ್ನು ಮರುಪಾವತಿಸಲು ನಿರ್ಧರಿಸಿದ್ದಾರೆ. ಆದರೆ ಸಾಲ ಮರು ಪಾವತಿಸಿದ ಬಳಿಕವೂ ಏಜೆಂಟರು ಕಿರುಕುಳ ನೀಡುವುದನ್ನು ಮುಂದುವರೆಸಿದ್ದಾರೆ.

ಇದರ ಬಗ್ಗೆ ನರೇಂದ್ರ ಅವರ ಬಳಿ  ಪರಿಚಯಸ್ಥರು ಕೇಳಲು ಶುರು ಮಾಡಿದ್ದಾರೆ. ಎಲ್ಲರಿಗೂ ಇದನ್ನು ಹೇಳುವುದು ಸರಿಯಲ್ಲವೆಂದು ನರೇಂದ್ರ ಇದರಿಂದ ಕುಗ್ಗಿಹೋಗಿದ್ದಾರೆ. ಪರಿಣಾಮ ಅವಮಾನಕ್ಕೆ ಒಳಗಾಗಿ ಮಂಗಳವಾರ (ಡಿ.10 ರಂದು) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಲೋನ್ ಆ್ಯಪ್ ಏಜೆಂಟ್‌ ಗಳು ಕಿರುಕುಳದಿಂದ ಮದುವೆಯಾದ ಆರೇ ವಾರದಲ್ಲಿ ನರೇಂದ್ರ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಒಂದು ವಾರದಲ್ಲಿ ಆಂಧ್ರಪ್ರದೇಶದಲ್ಲಿ ವರದಿಯಾದ ಮೂರನೇ ಘಟನೆ ಇದಾಗಿದೆ. ಭಾನುವಾರ(ಡಿ.8 ರಂದು) ನಂದ್ಯಾಲ್ ಜಿಲ್ಲೆಯ ಯುವತಿಯೊಬ್ಬಳು ಸಾಲದ ಆ್ಯಪ್ ಏಜೆಂಟ್‌ಗಳ ಕಿರುಕುಳವನ್ನು ಸಹಿಸಲು ಆಗದೆ ಕಣಿವೆಗೆ ಹಾರಿ ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ದಳು. ಪೊಲೀಸರು ಅವರನ್ನು ರಕ್ಷಿಸಿ ಅಪಾಯದಿಂದ ಪಾರು ಮಾಡಿದ್ದಾರೆ.

ಆಂಧ್ರಪ್ರದೇಶದ ಗೃಹ ಸಚಿವೆ ಅನಿತಾ ಕಳೆದ ತಿಂಗಳು ರಾಜ್ಯ ವಿಧಾನಸಭೆಯಲ್ಲಿ ಸಾಲದ ಆ್ಯಪ್ ನಿಂದ ಆಗುವ ತೊಂದರೆಯ ಬಗ್ಗೆ ಧ್ವನಿ ಎತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next