ಪುಂಜಾಲಕಟ್ಟೆ: ಪತಿಗೆ ತಿಳಿಯದಂತೆ ಪತ್ನಿ ಎರಡನೇ ವಿವಾಹವಾದ ಬಗ್ಗೆ ಪತಿ ನ್ಯಾಯಾಲಯಕ್ಕೆ ದೂರು ನೀಡಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯ ಪೊಲೀಸ್ ಠಾಣೆಗೆ ಆದೇಶಿಸಿದ ಘಟನೆ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಪಣಕಜೆ, ಮಂಡಾಡಿ ನಿವಾಸಿ ಉದಯ ನಾಯಕ್ ಅವರು ಈ ಬಗ್ಗೆ ನ್ಯಾಯಾಲಯಕ್ಕೆ ದೂರು ನೀಡಿದ್ದು, ಬೆಳ್ತಂಗಡಿ ಸಿಜೆ ಮತ್ತು ಜೆಎಮ್‌ಎಫ್ಸಿ ನ್ಯಾಯಾಲಯ ಪ್ರಕರಣ ದಾಖಲಿಸಿ ವರದಿ ಸಲ್ಲಿಸುವಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಆದೇಶಿಸಿದೆ.
ಉದಯ ನಾಯಕ್ ಅವರು ಅನಿತಾ ನಾಯಕ್ ಅವರನ್ನು 2018ರಲ್ಲಿ ಮದುವೆಯಾಗಿದ್ದು, ಮದುವೆ ಬಳಿಕ ಜೂನ್ 2020ರ ತನಕ ಇಬ್ಬರೂ ಒಟ್ಟಿಗೆ ಇದ್ದರು. ಬಳಿಕ ಹಲವಾರು ಅಡೆತಡೆಗಳು ಬಂದಿದ್ದರಿಂದ ಉದಯ ನಾಯಕ್ ಡೈವೋರ್ಸ್ ಪಿಟಿಷನ್ ಸಲ್ಲಿಸಿದ್ದರು. ಈ ಪ್ರಕರಣವು ವಿಚಾರಣೆಯಲ್ಲಿರುವಾಗಲೇ ಅನಿತಾ ಅವರು ಹರಿಕೃಷ್ಣ ಗಣಪತ್ ರಾವ್ ಕೀಳು ಅವರ ಜತೆ ವಿವಾಹವಾಗಿರುವುದಾಗಿ ಉದಯ ನಾಯಕ್ ಆರೋಪಿಸಿದ್ದಾರೆ. ಈ ಮದುವೆಯು ಕಾನೂನು ಬಾಹಿರವಾಗಿದ್ದರಿಂದ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಕೋರಿದ್ದಾರೆ. ಪುಂಜಾಲಕಟ್ಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.