ಚಿಕ್ಕಬಳ್ಳಾಪುರ: ಕಾಡಿನೊಳಗೆ ಜೇನು ತೆಗೆಯಲು ತೆರಳಿದ್ದ ವೇಳೆ ದಿಢೀರನೆ ಯಮರಾಯನಂತೆ ಎರಗಿ ಬಂದ ಕರಡಿಗೆ ಬೆಂಕಿ ತೋರಿಸುವ ಮೂಲಕ ಮಹಿಳೆ ತನ್ನ ಪತಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿರುವ ಘಟನೆ ಜಿಲ್ಲೆಯ ದಂಡಿಗಾನಹಳ್ಳಿ ಬೆಟ್ಟದ ತಪ್ಪಲಿನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕರಡಿ ದಾಳಿಗೆ ಒಳಗಾಗಿ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ ದಂಡಿಗಾನಹಳ್ಳಿಯ ವೆಂಕಟೇಶ್ (45). ಕರಡಿಗೆ ಬೆಂಕಿ ತೋರಿಸಿ ಪತಿಯನ್ನು ಬದುಕುಳಿಸಿಕೊಂಡಾಕೆಯ ಹೆಸರು ಧರ್ಮಕ್ಕ ಎಂದು ತಿಳಿದು ಬಂದಿದೆ.
ವೆಂಕಟೇಶ್ ಹಾಗೂ ಧರ್ಮಕ್ಕ ಬದುಕಿನ ಬಂಡಿ ಸಾಗಿಸಲು ಜೇನು ತೆಗೆಯುವ ಕಸಬು ಮಾಡಿಕೊಂಡಿದ್ದಾರೆ. ಫೆ.1ರಂದು (ಗುರುವಾರ) ಸಂಜೆ 6 ಗಂಟೆ ವೇಳೆಗೆ ಜೇನು ತೆಗೆಯಲು ದಂಪತಿ ದಂಡಿಗಾನಹಳ್ಳಿ ಬೆಟ್ಟಕ್ಕೆ ತೆರಳಿದ್ದರು. ಬೆಟ್ಟದ ತಪ್ಪಲಿನಲ್ಲಿದ್ದಾಗ ವೆಂಕಟೇಶ್ ಮೇಲೆ ಕರಡಿ ದಾಳಿ ಮಾಡಿತು. ಆತ ಕಿರುಚಿಕೊಂಡ. ಇದರಿಂದ ಆತಂಕಗೊಂಡ ಧರ್ಮಕ್ಕ, ಸಮಯಪ್ರಜ್ಞೆ ಮೆರೆದು ಅಲ್ಲಿಯೇ ಇದ್ದ ಒಣ ಹುಲ್ಲಿಗೆ ಬೆಂಕಿ ಇಟ್ಟು, ಕರಡಿಗೆ ಬೆಂಕಿಯ ಜ್ವಾಲೆ ತೋರಿಸಿದರು. ಜ್ವಾಲೆಗೆ ಹೆದರಿ ಕರಡಿ ಅಲ್ಲಿಂದ ಓಡಿ ಹೋಯಿತು. ಆ ವೇಳೆಗಾಗಲೇ ಕರಡಿ, ವೆಂಕಟೇಶಪ್ಪನ ಬಲಗಾಲಿನ ತೊಡೆಗೆ ಗಂಭೀರವಾಗಿ ಗಾಯ ಮಾಡಿತ್ತು.
ಇಡೀ ರಾತ್ರಿ ಬೆಟ್ಟದಲ್ಲಿ ಕಾಲ ಕಳೆದರು
ಕರಡಿ ದಾಳಿಯಿಂದ ವೆಂಕಟೇಶಪ್ಪ ನಡೆಯಲಾಗದ ಸ್ಥಿತಿಗೆ ತಲುಪಿದ್ದರು. ಹೀಗಾಗಿ, ಗುರುವಾರ ಇಡೀ ರಾತ್ರಿ ದಂಪತಿ ಬೆಟ್ಟದ ತಪ್ಪಲಿನಲ್ಲಿಯೆ ಊಟ, ತಿಂಡಿ ಇಲ್ಲದೆ ಕಾಲ ಕಳೆದಿದ್ದಾರೆ. ಗ್ರಾಮಸ್ಥರಿಗೆ ವಿಚಾರ ತಿಳಿಸಲು ಬೆಟ್ಟ ಇಳಿದರೆ ಎಲ್ಲಿ ಮತ್ತೆ ಕರಡಿ ದಾಳಿ ಮಾಡುತ್ತದೋ ಎಂಬ ಆತಂಕದಿಂದ ಧರ್ಮಕ್ಕ ಇಡೀ ರಾತ್ರಿ ಗಂಡನ ಜೊತೆಗೇ ಇದ್ದರು. ಶುಕ್ರವಾರ ಬೆಳಗ್ಗೆ ಧರ್ಮಕ್ಕ ಬೆಟ್ಟದಿಂದ ಇಳಿದು ಬಂದು ನಡೆದ ಘಟನೆ ಯನ್ನು ದಂಡಿಗಾನಹಳ್ಳಿ ಗ್ರಾಮಸ್ಥರಿಗೆ ತಿಳಿಸಿದರು. ವಿಷಯ ತಿಳಿದು ದಂಡಿಗಾನಹಳ್ಳಿ ಗ್ರಾಮಸ್ಥರು ಸ್ಥಳಕ್ಕೆ ತೆರಳಿ, ಸುಮಾರು ಆರೇಳು ಕಿ.ಮೀ. ಗಳಷ್ಟು ದೂರ ವೆಂಕಟೇಶಪ್ಪನನ್ನು ಬೆಟ್ಟದಿಂದ ಹೊತ್ತು ತಂದರು. ಅಲ್ಲಿಂದ ಚಿಕ್ಕಬಳ್ಳಾಪುರ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದರು. ಘಟನಾ ಸ್ಥಳಕ್ಕೆ ಮಂಚೇನಹಳ್ಳಿ ಗ್ರಾಮಾಂತರ ಠಾಣೆ ಪಿಎಸ್‌ಐ ಮಂಜುನಾಥ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿದರು.
ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಆಕ್ರೋಶ
ಎರಡು ತಿಂಗಳ ಹಿಂದೆಯಷ್ಟೆ ಕರಡಿ ದಾಳಿಗೆ ಮಂಚೇನಹಳ್ಳಿ ಹೋಬಳಿಯ ರಾಯನಕಲ್ಲು ನಿವಾಸಿ ಕೇಶವಮೂರ್ತಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಆ ಘಟನೆ ಮಾಸುವ ಮುನ್ನವೇ ಇದೀಗ ವೆಂಕಟೇಶಪ್ಪನ ಮೇಲೆ ಕರಡಿ ದಾಳಿ ಮಾಡಿರುವುದು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕರಡಿ ಪದೇ ಪದೇ ಜನರ ಮೇಲೆ ದಾಳಿ ಮಾಡುತ್ತಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರಡಿ ಭಯದಿಂದಾಗಿ ರೈತರು ಹೊಲಗದ್ದೆಗಳಿಗೆ ಹೋಗದ ಸ್ಥಿತಿ ನಿರ್ಮಾಣವಾಗಿದೆ.
ಕಾಗತಿ ನಾಗರಾಜಪ್ಪ