Advertisement

ಡಾಕ್ಟರ್‌ ಆಗಿ ಸೈನ್ಯ ಸೇರಿ ಸೇವೆ ಮಾಡುತ್ತೇನಪ್ಪಾ…

11:37 PM Sep 10, 2022 | Team Udayavani |

ಉತ್ತರಾಖಂಡ ರಾಜ್ಯದ ಡೆಹ್ರಾಡೂನ್‌ಗೆ ಸಮೀಪದಲ್ಲಿರುವ ಪುಟ್ಟ ಹಳ್ಳಿ ನನ್ನ ಹುಟ್ಟೂರು. ನಮ್ಮದು ಮಧ್ಯಮ ವರ್ಗದ ಕುಟುಂಬ. ಭವಿಷ್ಯದಲ್ಲಿ ಉತ್ತಮ ಮಡದಿ, ಉತ್ತಮ ತಾಯಿ, ಉತ್ತಮ ಗೃಹಿಣಿಯಾಗಬೇಕು ಎಂಬುದಷ್ಟೇ ನನಗಿದ್ದ ಆಸೆ. ಭಾರತೀಯ ಸೇನೆಯಲ್ಲಿ ಯೋಧರಾಗಿದ್ದ ದೀಪಕ್‌ ನೈನ್ವಾಲ್‌ ಕುಟುಂಬದಿಂದ ಮದುವೆಯ ಪ್ರಸ್ತಾವ ಬಂದಾಗ ಖುಷಿಯಿಂದ ಒಪ್ಪಿಕೊಂಡೆ. ನಮ್ಮ ದಾಂಪತ್ಯಕ್ಕೆ ಇಬ್ಬರು ಮಕ್ಕಳೂ ಜತೆಯಾದಾಗ ಅವರಿಗೆ ಲಾವಣ್ಯ ಮತ್ತು ರೇಯಾನ್ಮ್ ಎಂದು ಹೆಸರಿಟ್ಟು ಸಂಭ್ರಮಿಸಿದೆ. ಗಂಡ, ಮನೆ, ಮಕ್ಕಳು ಎಲ್ಲವೂ ನಾನು ಬಯಸಿದಂತೆಯೇ ಸಿಕ್ಕಿಬಿಟ್ಟಿತ್ತು. ಲೈಫ್ ಈಸ್‌ ಬ್ಯೂಟಿಫುಲ್ ಎಂದು ಸಂಭ್ರಮಿಸುತ್ತಿದ್ದಾ ಗಲೇ ನಾನು ಕನಸಿನಲ್ಲೂ ಊಹಿಸದಿದ್ದ ಅನಾಹುತ ನಡೆದು ಹೋಯಿತು! ನನ್ನ ಪಾಲಿನ ಗೆಳೆಯ, ಗಂಡ, ಬಂಧು ಎಲ್ಲವೂ ಆಗಿದ್ದ ದೀಪಕ್‌ ಆಗಸದ ನಕ್ಷತ್ರ ವಾಗಿ ಹೋದ!

Advertisement

ಗೃಹಿಣಿಯಾಗಿರಬೇಕಿದ್ದ ನಾನು ಸೇನೆ ಸೇರಿ ಅಧಿಕಾರಿ ಯಾದೆ! ಇಷ್ಟು ಹೇಳಿ ಕ್ಷಣ ಮೌನವಾಗುತ್ತಾರೆ ಜ್ಯೋತಿ ನೈನ್ವಾಲ್‌. ನಾಲ್ಕಾರು ನಿಮಿಷಗಳ ಅನಂತರ ಅವರ ಮಾತು ಹೀಗೆ ಮುಂದುವರಿಯುತ್ತದೆ: ದೀಪಕ್‌ ನೈನ್ವಾಲ್‌ ಕೂಡ ಉತ್ತರಾಖಂಡದ ಹಳ್ಳಿಯವರು. ಅವರದು ಅವಿಭಕ್ತ ಕುಟುಂಬ. ಧೈರ್ಯ-ಶೌರ್ಯಕ್ಕೆ ಹೆಸರಾಗಿದ್ದ ಮಹಾರ್‌ ರೆಜಿಮೆಂಟ್‌ನಲ್ಲಿ ಯೋಧರಾಗಿದ್ದ ದೀಪಕ್‌ ಬಗ್ಗೆ ಮನೆಯಲ್ಲಿ ಎಲ್ಲರಿಗೂ ಅಕ್ಕರೆ-ಗೌರವ. ದೀಪಕ್‌ ಜತೆ ನನ್ನದು 7 ವರ್ಷದ ದಾಂಪತ್ಯ. ಈ ಅವಧಿಯಲ್ಲಿ ನಾವು ಹನಿಮೂನ್‌, ಟ್ರಿಪ್‌ ಎಂದು ಎಲ್ಲಿಗೂ ಹೋಗ ಲಿಲ್ಲ. “ನನಗೆ ದೇಶ ಸೇವೆ ಮೊದಲು. ಉಳಿದದ್ದು ಆಮೇಲೆ. ಹಾಗಾಗಿ ನಾನು ಮಧ್ಯೆ ರಜೆ ತೆಗೆದುಕೊಳ್ಳುವುದಿಲ್ಲ. ವರ್ಷ, ಆರು ತಿಂಗಳಿಗೊಮ್ಮೆ ಬಂದಾಗ ಎಲ್ಲರ ಜತೆಯಲ್ಲಿದ್ದು ರಜೆ ಕಳೆಯಬೇಕು ಅಂತ ಆಸೆ. ನಾವು ಟೂರ್‌ ಹೋದರೆ ಉಳಿದವರಿಗೆ ಬೇಜಾರಾಗಬಹುದು. ಇದನ್ನೆಲ್ಲ ದಯ ವಿಟ್ಟು ಅರ್ಥ ಮಾಡಿಕೋ. ತಪ್ಪು ತಿಳಿಯಬೇಡ’- ಅನ್ನುತ್ತಿದ್ದರು ದೀಪಕ್‌.

ನಮ್ಮ ಪಾಲಿಗೆ ಕೆಟ್ಟ ದಿನಗಳು ಜತೆಯಾದದ್ದು 2018ರಲ್ಲಿ. ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯ ಮನೆಯೊಂದರಲ್ಲಿ ಉಗ್ರಗಾಮಿಗಳು ಅಡಗಿದ್ದಾ ರೆ ಎಂದು 2018ರ ಎಪ್ರಿಲ್‌ 10 ರಂದು ಸುದ್ದಿ ಬಂತು. ಉಗ್ರರ ನಿರ್ಮೂಲ ನಕ್ಕೆಂದು ಆಗ ಆರಂಭವಾದದ್ದೇ “ಆಪರೇಷನ್‌ ರಕ್ಷಕ್‌’. ಈ ವೇಳೆಗೆ ದೀಪಕ್‌ ರಾಷ್ಟ್ರೀಯ ರೈಫ‌ಲ್ಸ್‌ಗೆ ಸೇರ್ಪಡೆಯಾಗಿದ್ದರು. ಉಗ್ರರು ಮತ್ತು ಸೇನೆಯ ನಡುವೆ 14 ಗಂಟೆಗೂ ಹೆಚ್ಚು ಕಾಲ ಗುಂಡಿನ ಚಕಮಕಿ ನಡೆಯಿತು. ಉಗ್ರರ ಹುಟ್ಟಡಗಿಸುವಲ್ಲಿ ಭಾರತೀಯ ಯೋಧರು ಕಡೆಗೂ ಯಶ ಕಂಡರು. ಇದೇ ಸಂದರ್ಭದಲ್ಲಿ ದೀಪಕ್‌ ಅವರ ಎದೆಗೆ ಮತ್ತು ಬೆನ್ನಿಗೆ ಉಗ್ರರು ಹಾರಿಸಿದ ಗುಂಡು ಹೊಕ್ಕವು. “ತತ್‌ಕ್ಷಣವೇ ದಿಲ್ಲಿಯ ಸೇನಾ ಆಸ್ಪತ್ರೆಗೆ ಬನ್ನಿ…’ ಎಂಬ ಸಂದೇಶ ನನಗೆ ಬಂತು.

ನಾನು ಆಸ್ಪತ್ರೆ ತಲುಪಿದಾಗ ದೀಪಕ್‌ ಗಾಢ ನಿದ್ರೆಯಲ್ಲಿದ್ದರು. ಅಲ್ಲಿದ್ದ ಹಿರಿಯ ಸೇನಾಧಿಕಾರಿಗಳು, ವೈದ್ಯರು ಸ್ಪಷ್ಟವಾಗಿ ಹೇಳಿಬಿಟ್ಟರು: “ದೀಪಕ್‌ ಅವರ ಎದೆಗೆ, ಬೆನ್ನುಹುರಿಗೆ ಗುಂಡೇಟು ಬಿದ್ದಿದೆ. ಸೊಂಟದ ಕೆಳಗಿನ ಭಾಗ ಸ್ವಾಧೀನ ಕಳೆದುಕೊಂಡಿದೆ. ಅವರನ್ನು ಉಳಿಸಿಕೊಳ್ಳಲು ಸರ್ವ ಪ್ರಯತ್ನವನ್ನೂ ಮಾಡುತ್ತೇವೆ. ಉಳಿದದ್ದು ದೈವೇಚ್ಛೆ. ರೋಗಿಯ ಜತೆ ಇರಬೇಕು ಅನ್ನುವುದಾದರೆ ಅಳಬಾರದು. ಏಕೆಂದರೆ ನಿಮ್ಮ ದುಃಖ ಅವರನ್ನು ಮಾನಸಿಕವಾಗಿ ದುರ್ಬಲರನ್ನಾಗಿ ಮಾಡಬಹುದು…’

ಸರಿ ಸರ್‌ ಎಂದು ತಲೆಯಾಡಿಸಿ ದೀಪಕ್‌ ಇದ್ದ ಬೆಡ್‌ನ‌ ಪಕ್ಕದಲ್ಲೇ ಕುಳಿತೆ. ದಿಢೀರ್‌ ಜತೆಯಾದ ಆಘಾತದಿಂದ ನನ್ನ ಮುಖ ಕಳೆಗುಂದಿತ್ತು. ಅತ್ತು ಅತ್ತು ಕಣ್ಣುಗಳು ಬಾತುಕೊಂಡಿದ್ದವು. ಅಕಸ್ಮಾತ್‌ ಏನಾದರೂ ಹೆಚ್ಚು ಕಡಿಮೆ ಆದರೆ ಎಂಬ ಆತಂಕದಲ್ಲಿ ಮನಸ್ಸು ಹಣ್ಣಾಗಿತ್ತು. ಇಂಥ ತಳಮಳ ದಲ್ಲಿ ನಾನಿದ್ದಾಗಲೇ ದೀಪಕ್‌ ಕಣ್ತೆರೆದರು. ಮರುಕ್ಷಣವೇ ಹೇಳಿದರು: “ಯಾಕೆ ಇಷ್ಟು ಹೆದರಿದ್ದೀ? ಎಂಥ ಸಂದರ್ಭದಲ್ಲೂ ಹೀಗೆ ಕಂಗಾಲಾಬಾರದು. ನೀನು ಯೋಧನ ಪತ್ನಿ ಅನ್ನುವುದು ನೆನಪಿರಲಿ…’

Advertisement

ಅಂದಿನಿಂದ 40 ದಿನ ಆಸ್ಪತ್ರೆಯಲ್ಲಿ ಅವರ ಜತೆಗಿದ್ದೆ. ಈ ಮಧ್ಯೆ ಹೆಚ್ಚಿನ ಚಿಕಿತ್ಸೆಗೆಂದು ಅವರನ್ನು ಪುಣೆಯಲ್ಲಿರುವ ಮಿಲಿಟರಿ ಆಸ್ಪತ್ರೆಗೆ ರವಾನಿಸಲಾಯಿತು. ಅವರ ಜತೆಗಿದ್ದ 40 ದಿನ ನನ್ನ ಬದುಕಿನ ಅಮೂಲ್ಯ ಕ್ಷಣಗಳು. ಮದುವೆಯ ಅನಂತರ ನಾವಿಬ್ಬರೇ ಇದ್ದಂಥ ಸಂದರ್ಭ ಅದು. ಅದು ಏಕಾಂತವೂ ಹೌದು, ಲೋಕಾಂತವೂ ಹೌದು. ಆಸ್ಪತ್ರೆಯಲ್ಲಿ ಇಡೀ ದಿನ ನಾವಿಬ್ಬರೇ. ದಿನವೂ ಅವರು ಧೈರ್ಯ ತುಂಬುತ್ತಿದ್ದರು. ಸಮಾಧಾನ ಹೇಳುತ್ತಿದ್ದರು. ಕಷ್ಟಗಳನ್ನು ಎದುರಿಸಲು ಟಿಪ್ಸ್ ಕೊಡುತ್ತಿದ್ದರು. ಕವಿತೆ ಬರೆಯುವ ಗೀಳಿದ್ದ ನಾನು ಅದನ್ನು ಮುಂದುವರಿಸಿದೆ. ನನ್ನ ಕಾವ್ಯವಾಚನವನ್ನು ದೀಪಕ್‌ ಆಸಕ್ತಿಯಿಂದ ಆಲಿಸುತ್ತಿದ್ದರು. ಆಗೊಮ್ಮೆ ನನ್ನನ್ನೇ ಮೆಚ್ಚುಗೆಯಿಂದ ನೋಡುತ್ತ ಹೇಳಿದರು: “ಸೇನಾಧಿಕಾರಿಗಳು, ವೈದ್ಯರು ನಿನ್ನನ್ನು ತುಂಬಾ ಹೊಗಳಿದರು. ನೀನು ಧೈರ್ಯವಂತೆ ಅಂತ ಗೊತ್ತಿತ್ತು. ಆದರೆ ಇಷ್ಟೊಂದು ಧೈರ್ಯವಂತೆ ಎಂದು ಗೊತ್ತಿರಲಿಲ್ಲ. ನಿನಗೆ ಒಂದು ಮಾತು ಹೇಳುತ್ತೇನೆ; ಅಕಸ್ಮಾತ್‌ ನಾನು ಹೋಗಿಬಿಟ್ಟರೆ ನೀನು ಸೈನ್ಯ ಸೇರು. ಆಫೀಸರ್‌ ಆಗಿ ದೇಶ ಸೇವೆ ಮಾಡು…’
ಯಾವ ಸಂದರ್ಭ ನನ್ನ ಬದುಕಲ್ಲಿ ಬರಬಾರದು ಎಂದುಕೊಂಡಿ ದ್ದೆನೋ ಅದು ಕಡೆಗೂ ಬಂದೇ ಬಿಟ್ಟಿತು. ಚಿಕಿತ್ಸೆ ಫ‌ಲಕಾರಿಯಾಗದೆ 2018ರ ಮೇ 20ರಂದು ದೀಪಕ್‌ ನಮ್ಮನ್ನು ಅಗಲಿದರು. ತಂದೆಯ ಪಾರ್ಥಿವ ಶರೀರದೆದುರು ನನ್ನ ಮಗಳು ಕಣ್ತುಂಬಿಕೊಂಡು ನಿಂತ ಕ್ಷಣವನ್ನು ದೇಶದ ಜನರೆಲ್ಲ ನೋಡಿದರು. ದೀಪಕ್‌ ಅಮರ್‌ ರಹೇ… ಎಂಬ ಉದ್ಘೋಷಕ್ಕೆ ಕಾರಣರಾದರು. ವರ್ಷಕ್ಕೆರಡು ಬಾರಿ ರಜೆಗೆ ಬರುತ್ತಿದ್ದ ದೀಪಕ್‌ ಇನ್ಯಾವತ್ತೂ ಮರಳಿ ಬರುವುದಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳುತ್ತಲೇ, ಅವರು ಹೇಳಿದ್ದ ಆದೇಶದಂಥ ಮಾತನ್ನು ಮಹಾರ್‌ ರೆಜಿಮೆಂಟ್‌ನ ಸೇನಾಧಿಕಾರಿಗಳಿಗೆ ಹೇಳಿದೆ. “ನನ್ನದು ಡಿಗ್ರಿ ಆಗಿದೆ ಸರ್‌. ಸೈನ್ಯ ಸೇರುತ್ತೇನೆ, ಗೈಡ್‌ ಮಾಡಿ…’ ಎಂದು ಪ್ರಾರ್ಥಿಸಿದೆ.

“ದೀಪಕ್‌ ತೀರಿಕೊಂಡ ಅನಂತರ ನಮ್ಮ ಸುತ್ತಮುತ್ತಲಿನ ಜನರ ವರ್ತನೆ ಬದಲಾಯಿತು. ಅದುವರೆಗೂ ಚೆನ್ನಾಗಿ ಮಾತಾಡುತ್ತಿದ್ದವರು ಮಾತು ನಿಲ್ಲಿಸಿದರು. ಶುಭ ಕಾರ್ಯ ಗಳಿಂದ ನನ್ನನ್ನು ದೂರವಿಟ್ಟರು. ಹಿಂದಿನಿಂದ ಆಡಿಕೊಳ್ಳತೊಡಗಿದರು. ಚುಚ್ಚುಮಾತು ಕೇಳಿ ಕೇಳಿ ಡಿಪ್ರಶನ್‌ಗೆ ಹೋಗಿ ಬಿಟ್ಟೆ. ಅದನ್ನು ಗಮನಿಸಿದ ನನ್ನ ತಾಯಿ- “ನೀನು ಈಗ ಮಕ್ಕಳ ಪಾಲಿಗೆ ಅಮ್ಮನಷ್ಟೇ ಅಲ್ಲ, ಅಪ್ಪ ಕೂಡ ಹೌದು. ಎರಡೂ ಜವಾಬ್ದಾರಿ ನಿಭಾಯಿಸ ಬೇಕಿದೆ. ಆಡಿಕೊಳ್ಳುವ ಜನ ನಿನಗೆ ಅನ್ನ ಕೊಡುವುದಿಲ್ಲ ಅನ್ನುವುದು ನೆನಪಿರಲಿ. ನಿನ್ನ ಗಂಡನ ಕನಸು ನನಸಾಗಬೇಕು ಅನ್ನುವುದಾದರೆ ಟೀಕೆಗಳನ್ನು ನಿರ್ಲಕ್ಷಿಸಿ ಬದುಕಲು ಕಲಿ’ ಅಂದರು.

ಅಮ್ಮನ ಮಾತು ಎಷ್ಟೊಂದು ನಿಜ ಅನ್ನಿಸಿತು. ಮರುದಿನವೇ ಮಕ್ಕಳನ್ನು ಎದುರು ಕುಳ್ಳಿರಿಸಿಕೊಂಡು ನಮಗೆ ಒದಗಿ ಬಂದ ಸ್ಥಿತಿಯನ್ನು ಅವರಿಗೆ ಅರ್ಥವಾಗುವಂತೆ ಹೇಳಿದೆ. “ನಿಮ್ಮ ಅಪ್ಪ ಈಗ ಸ್ಟಾರ್‌ ಆಗಿ¨ªಾರೆ. ಅವರು ಹೆಮ್ಮೆ ಪಡುವಂತೆ ನಾವೆಲ್ಲ ಬದುಕಬೇಕು…’ ನನ್ನ ಮಾತು ಮುಗಿಯುವ ಮುನ್ನವೇ ಮಗಳು ಲಾವಣ್ಯ ಹೇಳಿದಳು: “ಪಪ್ಪಾ ಇಲ್ಲ ಅಂತ ಒಪ್ಪಿಕೊಳ್ಳುವುದಕ್ಕೆ ಆಗುವುದಿಲ್ಲ ಅಮ್ಮಾ. ಇನ್ನು ನಿನ್ನನ್ನೇ ಪಪ್ಪಾ ಅಂತ ಕರೆಯುತ್ತೇವೆ. ನೀನೂ ಸೈನ್ಯ ಸೇರು. ಪಪ್ಪನ ಥರಾನೇ ಡ್ರೆಸ್‌ ಹಾಕಿಕೊಂಡು ಫೇಮಸ್‌ ಆಗಿಬಿಡು…’- ಸೇನೆಗೆ ಸೇರಬೇಕು ಎಂಬ ದೀಪಕ್‌ ಅವರ ಆಸೆಗೆ ಮಗಳು ಸಾಥ್‌ ಕೊಟ್ಟಿದ್ದು ಹಾಗೆ!

ಇಲ್ಲಿ ಒಂದು ಸಂಗತಿಯನ್ನು ಸ್ಪಷ್ಟ ಪಡಿಸಬೇಕು. ಸೇನೆಯಲ್ಲಿ ಅನುಕಂಪದ ಆಧಾರದಲ್ಲಿ ನೌಕರಿ ಸಿಗುವುದಿಲ್ಲ. ಹಾಗಾಗಿ ಸೇನೆ ಸೇರಲು ನಾನು ಪರೀಕ್ಷೆ ಬರೆಯಲೇಬೇಕಿತ್ತು. ದೈಹಿಕ ಸಾಮರ್ಥ್ಯದ ಪರೀಕ್ಷೆಯಲ್ಲೂ ತೇರ್ಗಡೆ ಹೊಂದಬೇಕಿತ್ತು. ಹಾಗಾಗಿ ಬೆಳಗಿನ ಜಾವ 4 ಗಂಟೆಗೇ ಎದ್ದು ಐದಾರು ಮೈಲಿ ಓಡುವುದನ್ನು ಅಭ್ಯಾಸ ಮಾಡಿದೆ. ಆಗಲೂ ಜನ ಸುಮ್ಮನಿರಲಿಲ್ಲ. ಅದನ್ನು ನಿರ್ಲಕ್ಷಿಸಿ ಮುಂದೆ ಸಾಗಿದೆ. ನನ್ನ ಇಂಗ್ಲಿಷ್‌ ಜ್ಞಾನ ಅಷ್ಟೇನೂ ಚೆನ್ನಾಗಿಲ್ಲ ಅನ್ನಿಸಿದಾಗ ಅದನ್ನೇ ಮಹಾರ್‌ ರೆಜಿಮೆಂಟ್‌ನ ಅಧಿಕಾರಿಗಳಿಗೂ ಹೇಳಿದೆ. ತತ್‌ಕ್ಷಣವೇ ಅವರು ಬ್ರಿಗೇಡಿಯರ್‌ ಚೀಮಾ ಮತ್ತು ಎಂ.ಪಿ. ಸಿಂಗ್‌ ಎಂಬ ಅಧಿಕಾರಿಗಳನ್ನು ಟ್ಯೂಟರ್‌ ಆಗಿ ನೇಮಿಸಿ ದರು. ದಿನವೂ ಇಂಗ್ಲಿಷ್‌ ಕಥೆ ಪುಸ್ತಕಗಳನ್ನು ಕೊಟ್ಟು ಓದಿಸಿ, ಅದರ ಬಗ್ಗೆ ಪ್ರಶ್ನೆ ಕೇಳಿ, ಉತ್ತರಿಸುವ ರೀತಿಯನ್ನೂ ಹೇಳಿಕೊಟ್ಟ ಆ ಇಬ್ಬರು ಮಹನೀಯರು ಸರಾಗವಾಗಿ ಇಂಗ್ಲಿಷ್‌ ಮಾತಾಡಲು ಕಲಿಸಿಕೊಟ್ಟರು. ಇಷ್ಟೆಲ್ಲ ತಯಾರಿಯೊಂದಿಗೆ ಪರೀಕ್ಷೆ ಬರೆದರೆ- ಫೇಲ್‌ ಎಂಬ ಫ‌ಲಿತಾಂಶ ಬಂತು.

ಮುಂದೇನು ಮಾಡುವುದು ಎಂದು ಯೋಚಿಸುತ್ತ ಕುಳಿತಿದ್ದಾಗ ಹೆಗಲು ತಟ್ಟಿದ ನಮ್ಮಣ್ಣ ನವೀನ ಖಂಡೂರಿ ಹೇಳಿದ: “ಆದದ್ದಾ ಯಿತು. ಚಿಂತೆ ಮಾಡಬೇಡ. ಗೆಲ್ಲುವ ತನಕ ಪರೀಕ್ಷೆ ಬರೆಯುತ್ತಿರು. ಮನೆ- ಮಕ್ಕಳ ಜವಾಬ್ದಾರಿ ನನಗಿರಲಿ. ಸಿಟಿಯಲ್ಲಿ ಮನೆ ಮಾಡಿಕೊಂಡು ಏಕಾಗ್ರತೆಯಿಂದ ತಯಾರಾಗು.’ ಅನಂತರದಲ್ಲಿ ಮತ್ತೆ ಮತ್ತೆ ಮತ್ತೆ ಪರೀಕ್ಷೆ ಬರೆದೆ. ಪ್ರತೀ ಸಲ ಫೇಲ್‌ ಆದಾಗಲೂ ಅದಕ್ಕೆ ಏನು ಕಾರಣ ಅಂತ ಗೊತ್ತಾಗುತ್ತಿತ್ತು! ಪ್ರತೀ ಸಲ ಸಂದರ್ಶನಕ್ಕೆ ಹೋದಾಗಲೂ ಒಂದೊಂದು ಪಾಠ ಕಲಿಯುತ್ತಿದ್ದೆ. ಆಗೆಲ್ಲ ದೀಪಕ್‌- ಬೆಟರ್‌ ಲಕ್‌ ನೆಕ್ಸ್ಟ್ ಟೈಮ್‌ ಎಂದಂತೆ ಭಾಸವಾಗುತ್ತಿತ್ತು. ಕಡೆಗೂ 4ನೇ ಪ್ರಯತ್ನದಲ್ಲಿ ಗೆಲುವು ನನ್ನದಾಯಿತು.

ಲೆಫ್ಟಿನೆಂಟ್‌ ಹುದ್ದೆಗೆ ಸೇರ್ಪಡೆಯಾಗುವ ಮುನ್ನ ದೀಪಕ್‌ ಅವರ ಭಾವಚಿತ್ರದ ಎದುರು ನಿಂತು ಹೇಳಿದೆ: “ನಿಮಗೆ ಮಾತು ಕೊಟ್ಟಂತೆ ನಡೆ ದುಕೊಂಡಿದ್ದೇನೆ. ಆಶೀರ್ವದಿಸಿ…’ ನನ್ನ ಮಾತು ಮುಗಿಯುತ್ತಿದ್ದಂತೆಯೇ ಮಗಳು ಲಾವಣ್ಯ ಹೇಳಿದಳು: “ಮುಂದೆ ನಾನು ಡಾಕ್ಟರ್‌ ಆಗಿ ಸೈನ್ಯ ಸೇರಿ ಸೇವೆ ಮಾಡುತ್ತೇಪ್ಪಾ… ಬೆಸ್ಟ್ ವಿಷಸ್‌ ಹೇಳಪ್ಪಾ…’ ಇದೇ ಮಾತನ್ನು ಅವಳು ದೀಪಕ್‌ ಅವರ ಪಾರ್ಥಿವ ಶರೀರದ ಎದುರು ನಿಂತಾಗಲೂ ಹೇಳಿದ್ದಳು! ನನಗೀಗ ಲೆಫ್ಟಿನೆಂಟ್‌ ಜ್ಯೋತಿ ನೈನ್ವಾಲ್‌ ಎಂಬ ಗುರುತಿದೆ. ಮಕ್ಕಳು ಚೆನ್ನಾಗಿ ಓದುತ್ತಿದ್ದಾರೆ. ಈ ಮೊದಲು ಆಡಿಕೊಂಡ ಜನರೇ ಈಗ ಹಾಡಿ ಹೊಗಳುತ್ತಿದ್ದಾರೆ. ನಡೆದು ಬಂದ ದಾರಿಯನ್ನೊಮ್ಮೆ ಹಿಂದಿರುಗಿ ನೋಡಿದಾಗ- ನೀನು ಧೈರ್ಯವಂತೆ ಅಂತ ಗೊತ್ತಿತ್ತು. ಆದರೆ ಇಷ್ಟೊಂದು ಧೈರ್ಯವಂತೆ ಎಂದು ಗೊತ್ತಿರಲಿಲ್ಲ ಎಂದು ದೀಪಕ್‌ ಮೆಚ್ಚುಗೆಯಿಂದ ಹೇಳಿದಂತೆ ಭಾಸವಾಗುತ್ತದೆ. ಹಿಂದೆಯೇ ಕಣ್ತುಂಬಿ ಬರುತ್ತದೆ…
*****
ಹೀಗೆ ಮುಗಿಯುತ್ತದೆ ಜ್ಯೋತಿ ನೈನ್ವಾಲ್‌ ಅವರ ಮಾತು. ಈ ವೀರವನಿತೆಯನ್ನು ಒಮ್ಮೆ ಮಾತಾಡಿಸಬೇಕು. ಅವರ ಧೈರ್ಯ-ಸಾಹಸಕ್ಕೆ ಶರಣು ಹೇಳ ಬೇಕೆಂದು 4 ತಿಂಗಳುಗಳಿಂದ ಪ್ರಯತ್ನಿಸಿದ್ದಾಯಿತು. “ಜ್ಯೋತಿ ಅವರು ಈಗ ಮಹತ್ವದ ಹುದ್ದೆಯಲ್ಲಿದ್ದಾರೆ. ಅವರು ಮಾತಿಗೆ ಸಿಗುವುದು ಕಷ್ಟ. ಅವರ ಬದುಕಿನ ಕಥೆ ಹೇಳುವ ಮೂಲಕ ಜನರಿಗೆ ಒಂದು ಪಾಸಿಟಿವ್‌ ಮೆಸೇಜ್‌ ಕೊಡಬೇಕು ಅನ್ನುವ ನಿಮ್ಮ ಪ್ರಯತ್ನಕ್ಕೆ ಯಶ ಸಿಗಲಿ’ ಎಂಬ ಉತ್ತರ ಸಂಬಂಧಪಟ್ಟವರಿಂದ ಬಂದಾಗ- ಇದಿಷ್ಟನ್ನೂ ಬರೆದೆ…

– ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next