Advertisement

ಪತ್ನಿ, ಮಕ್ಕಳಿಗೆ ಗುಂಡಿಟ್ಟ ಕ್ರೂರಿ ಸೆರೆ

11:38 AM Jun 23, 2018 | |

ಬೆಂಗಳೂರು: ಮನೆ ಮಾರಾಟ ಮಾಡಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಮೃಗದಂತೆ ವರ್ತಿಸಿ, ಪತ್ನಿಯನ್ನು ಗುಂಡಿಕ್ಕಿ ಕೊಂದಿದ್ದಲ್ಲದೆ, ತಾನೇ ಜನ್ಮ ನೀಡಿದ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ದತ್ತು ಪುತ್ರಿ ಮೇಲೆ ಗುಂಡು ಹಾರಿಸಿದ ರಿಯಲ್‌ ಎಸ್ಟೇಟ್‌ ಉದ್ಯಮಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಜಯನಗರ ನಿವಾಸಿ ಗಣೇಶ್‌ (49) ಬಂಧಿತ ಉದ್ಯಮಿ. ಗುರುವಾರ ಪತ್ನಿ ಸಹನಾ (42)ರನ್ನು ಗುಂಡಿಕ್ಕಿ ಕೊಂದಿರುವ ಆರೋಪಿ, ಶುಕ್ರವಾರ ಬೆಳಗ್ಗೆ ಪುತ್ರರಾದ ಸಮಿತ್‌ (12), ಸಿದ್ಧಾರ್ಥ್ (15) ಮತ್ತು ದತ್ತು ಮಗಳು ಸಾಕ್ಷಿ (9) ಮೇಲೂ ಗುಂಡು ಹಾರಿಸಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಮಕ್ಕಳಿಗೆ ಜಯನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹಾಸನ ಜಿಲ್ಲೆಯ ಸಕಲೇಶಪುರ ಮೂಲದ ಗಣೇಶ್‌, ಅಲ್ಲಿದ್ದ ಕಾಫಿ ತೋಟ ಮಾರಿ ಬೆಂಗಳೂರಿಗೆ ಬಂದು ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ತೊಡಗಿದ್ದರು. 17 ವರ್ಷಗಳ ಹಿಂದೆ ಸಹನಾರನ್ನು ಗಣೇಶ್‌ ವಿವಾಹವಾಗಿದ್ದು, ದಂಪತಿಗೆ ಸಿದ್ಧಾರ್ಥ ಮತ್ತು ಸುಮಂತ್‌ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಕೆಲ ವರ್ಷಗಳ ಹಿಂದೆ ಸಾಕ್ಷಿಯನ್ನು ದಂಪತಿ ದತ್ತು ಪಡೆದಿದ್ದರು.

ಆರೋಪಿ ಗಣೇಶ್‌, ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಜಯನಗರ 4ನೇ ಬ್ಲಾಕ್‌ನ ಸ್ವಂತ ಮನೆಯಲ್ಲಿ ವಾಸವಿದ್ದರು. ಸಂಬಂಧಿಕರು, ಸ್ನೇಹಿತರಿಂದ ಕೋಟ್ಯಂತರ ರೂ. ಸಾಲ ಪಡೆದಿದ್ದ ಗಣೇಶ್‌, ಕೆಲ ವರ್ಷಗಳ ಹಿಂದೆ ಕಗ್ಗಲಿಪುರದ ನೆಟ್ಟಿಗೆರೆಯಲ್ಲಿ ಹರ್ಬಲ್‌ವುಡ್‌ ಫಾರ್ಮಹೌಸ್‌ ಹೆಸರಿನ ರೆಸಾರ್ಟ್‌ ಖರೀದಿಸಿದ್ದ. ಆದರೆ, ಎರಡು ವರ್ಷಗಳಿಂದ ರೆಸಾರ್ಟ್‌ ನಷ್ಟದಲ್ಲಿತ್ತು.

ಈ ಹಿನ್ನೆಲೆಯಲ್ಲಿ ಜಯನಗರದ ಸ್ವಂತ ಮನೆಯನ್ನು ಮಾರಾಟ ಮಾಡಲು ಗಣೇಶ್‌ ನಿರ್ಧರಿಸಿದ್ದ. ಆದರೆ ಇದಕ್ಕೆ ಪತ್ನಿ ಸಹನಾ ವಿರೋಧಿಸಿದ್ದರು. “ಬೆಂಗಳೂರಿನಲ್ಲಿ ಸ್ವಂತ ಮನೆ ಮಾರಾಟ ಮಾಡಿದರೆ ಜೀವನ ಕಷ್ಟ. ಅಲ್ಲದೆ, ಇರುವ ಮನೆ ಮಾರಿದರೆ ಮಕ್ಕಳು ಬೀದಿಗೆ ಬರುತ್ತಾರೆ’ ಎಂದು ಮನೆ ಮಾರಾಲು ಬಿಡದೆ ಪಟ್ಟು ಹಿಡಿದಿದ್ದರು. ಇದರಿಂದ ಕೋಪಗೊಂಡಿದ್ದ ಆರೋಪಿ, ಇದೇ ವಿಚಾರವಾಗಿ ಪತ್ನಿ ಜತೆ ನಿತ್ಯ ಜಗಳ ತೆಗೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಮಾನವೀಯತೆ ಮರೆತು ಮೃಗದಂತೆ ವರ್ತಿಸಿದ: ಜೂ.21 ಗುರುವಾರ ಬೆಳಗ್ಗೆ 11 ಗಂಟೆಗೆ ಮತ್ತೆ ಮನೆ ಮಾರಾಟ ವಿಚಾರ ಕುರಿತು ದಂಪತಿ ನಡುವೆ ಜಗಳವಾಗಿದೆ. ಇದರಿಂದ ಕೋಪಗೊಂಡ ಆರೋಪಿ, ಮಧ್ಯಾಹ್ನ 12 ಗಂಟೆಗೆ ತನ್ನಲ್ಲಿದ್ದ ಪಿಸ್ತೂಲ್‌ನಿಂದ ಪತ್ನಿ ಸಹನಾರ ಎದೆ, ಭುಜ ಸೇರಿ ಮೂರು ಭಾಗಗಳಿಗೆ ಗುಂಡಿಕ್ಕಿ ಕೊಂದಿದ್ದಾನೆ.

ನಂತರ ಶಾಲೆಯಲ್ಲಿದ್ದ ತನ್ನ ಇಬ್ಬರು ಗಂಡು ಮಕ್ಕಳು ಮತ್ತು ಮನೆಯಲ್ಲಿದ್ದ ಪುತ್ರಿಯನ್ನು ರಾಮನಗರ ಜಿಲ್ಲೆಯ ಕಗ್ಗಲಿಪುರದಲ್ಲಿರುವ ರೆಸಾರ್ಟ್‌ಗೆ ಕರೆದೊಯ್ದ ಆರೋಪಿ, ಶುಕ್ರವಾರ ಬೆಳಗ್ಗೆ ಸಿದ್ಧಾರ್ಥ್ನ ತೊಡೆ ಮತ್ತು ಭುಜದ ಭಾಗಕ್ಕೆ, ಸಾಕ್ಷಿಯ ಹೊಟ್ಟೆ ಮತ್ತು ಕಾಲಿನ ಭಾಗಕ್ಕೆ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದ. ಮತ್ತೂಬ್ಬ ಪುತ್ರ ಸಮಿತ್‌ ವಿಶೇಷಚೇತನ ಬಾಲಕನಾಗಿದ್ದು, ಆತನನ್ನು ತಳ್ಳಾಡಿದ್ದ.

ಇದರಿಂದ ಆತನ ಕೈ ಹಾಗೂ ಇತರೆಡೆ ಗಾಯಗಳಾಗಿದ್ದವು. ನಂತರ ಅವರು ಮೃತಪಡುವುದನ್ನು ಖಾತ್ರಿಪಡಿಸಿಕೊಳ್ಳುವ ಉದ್ದೇಶದಿಂದ, ರಕ್ತಸ್ರಾವದಿಂದ ಬಳಲುತ್ತಿರುವುದನ್ನೂ ನೋಡದೆ ಮೂವರೂ ಮಕ್ಕಳನ್ನು ತನ್ನ ಎಸ್‌ಯುವಿ ಕಾರಿನಲ್ಲಿ ಹಾಕಿಕೊಂಡು ಸುತ್ತಾಡಿಸಿದ್ದಾನೆ.

ಈ ಮಾಹಿತಿ ಸಂಗ್ರಹಿಸಿದ ಜಯನಗರ ಠಾಣೆ ಪೊಲೀಸರು, ಆರೋಪಿ ಕಗ್ಗಲಿಪುರದಿಂದ ಮೈಸೂರು ಕಡೆಗೆ ಹೋಗುತ್ತಿದ್ದಾಗ, ಬಿಡದಿ ಬಳಿ ಬಂಧಿಸಿದ್ದಾರೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡು ನರಳುತ್ತಿದ್ದ ಮಕ್ಕಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮೃತ ಸಹನಾ ಪೋಷಕರು ಪುತ್ರಿಯನ್ನು ನೋಡಲು ಆಗಾಗ ಜಯನಗರದ ಮನೆಗೆ ಬರುತ್ತಿದ್ದರು. ಗುರುವಾರ ಮಧ್ಯಾಹ್ನ ಕೂಡ ಪುತ್ರಿಗೆ ಕರೆ ಮಾಡಿದ್ದರು. ಆದರೆ, ಸಹನಾ ಪ್ರತಿಕ್ರಿಯಿಸಿರಲಿಲ್ಲ. ಇನ್ನು ಅಳಿಯ ಗಣೇಶ್‌ ಕೂಡ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಆತಂಕಗೊಂಡ ಸಹನಾ ತಂದೆ ಶಂಕರ್‌, ಗುರುವಾರ ಸಂಜೆ 6 ಗಂಟೆಗೆ ಸಹನಾ ನಿವಾಸಕ್ಕೆ ಬಂದು ನೋಡಿದಾಗ ಬಾಗಿಲು ತೆಗೆದಿತ್ತು.

ಇದೇ ವೇಳೆ ಬಾಗಿಲ ಬಳಿ ರಕ್ತದ ಕಲೆ ಕಂಡ ಶಂಕರ್‌, ಗಾಬರಿಗೊಂಡು ಒಳ ಹೋಗಿ ನೋಡಿದಾಗ ಪುತ್ರಿ ಸಹನಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸುವ ವೇಳೆಗೆ ಆಕೆ ಉಸಿರು ನಿಂತಿತ್ತು. ಈ ಸಂಬಂಧ ಶಂಕರ್‌ ಅವರು ಜಯನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಾತ್ರಿ 11 ಗಂಟೆ ಸುಮಾರಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಪತ್ತೆ ಹೇಗೆ?: ಕೃತ್ಯವೆಸಗಿದ ಬಳಿಕ ಆರೋಪಿ ಗಣೇಶ್‌ ತನ್ನ ಮೊಬೈಲ್‌ ಸ್ವಿಚ್‌ ಆಫ್ ಮಾಡಿಕೊಂಡಿದ್ದ. ಆದರೆ, ಪೊಲೀಸರು ಮಾತ್ರ ಆರೋಪಿಯ ಮೊಬೈಲ್‌ ನೆಟ್‌ವರ್ಕ್‌ ಸಂಪರ್ಕಕ್ಕಾಗಿ ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದರು. ಹೀಗಿರುವಾಗ ಶುಕ್ರವಾರ ಬೆಳಗ್ಗೆ ಮೊಬೈಲ್‌ ಆನ್‌ ಆಗುತ್ತಿದ್ದಂತೆ ಆರೋಪಿ ಮೊಬೈಲ್‌ನ ಟವರ್‌ ಲೊಕೇಶನ್‌ ಪತ್ತೆ ಹಚ್ಚಿದ್ದಾರೆ. ಬಳಿಕ ಕಾರಿನ ನಂಬರ್‌ ಆಧಾರದ ಮೇಲೆ ಬಿಡದಿ ಬಳಿ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಆರೋಪಿಯನ್ನು ಬಂಧಿಸಿದ್ದಾರೆ.

ಎರಡೆರಡು ಗುಂಡು: ಸಿದ್ಧಾರ್ಥ್ ಮತ್ತು ಸಾಕ್ಷಿಗೆ ತಲಾ ಎರಡು ಗುಂಡು ತಗುಲಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಗುಂಡುಗಳನ್ನು ಹೊರ ತೆಗೆದಿದ್ದಾರೆ. ಇಬ್ಬರು ಮಕ್ಕಳೂ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕೂ ಮೊದಲು ಆರೋಪಿಯು ಪತ್ನಿ ಸಹನಾ ಮೇಲೆ ಮೂರು ಗುಂಡು ಹಾರಿಸಿದ್ದಾನೆ. ಮರಣೋತ್ತರ ಪರೀಕ್ಷೆ ವೇಳೆ ಸಹನಾರ ದೇಹದಲ್ಲಿ ಎರಡು ಗುಂಡುಗಳು ಪತ್ತೆಯಾಗಿದ್ದು, ಮತ್ತೂಂದು ಗುಂಡು ಮನೆ ಆವರಣದಲ್ಲಿ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next