ಕಾಳಗಿ: ಅತ್ಯಂತ ಇಕ್ಕಟ್ಟಿನಿಂದ ಕೂಡಿರುವ ಇಲ್ಲಿನ ಮುಖ್ಯ ಬಜಾರ್ ರಸ್ತೆ ಅಗಲೀಕರಣಕ್ಕೆ ಸ್ಥಳೀಯ ಆಡಳಿತ ಮುಂದಾಗಿದ್ದು, ಸಾರ್ವಜನಿಕರ ಬಹುದಿನಗಳ ಕನಸು ನನಸಾಗುವ ಕಾಲ ಕೂಡಿಬಂದಿದೆ.
ತಾಲೂಕು ಕೇಂದ್ರವಾಗಿರುವ ಪಟ್ಟಣದ ಪ್ರಮುಖ ಮಾರುಕಟ್ಟೆ ಇದಾಗಿದ್ದು, ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನ, ಸಾವಿರಾರು ಜನರು ಓಡಾಡುತ್ತಾರೆ. ಆದರೆ ಇಲ್ಲಿ ಓಡಾಡುವ ಜನತೆ ಹಾಗೂ ವಾಹನಗಳ ದಟ್ಟಣೆಗೆ ತಕ್ಕುದಾದ ರಸ್ತೆ ಇರಲಿಲ್ಲ. ವಾರದ ಸಂತೆಯೂ ಇಲ್ಲೇ ನಡೆಯುವುದರಿಂದ ಅದಕ್ಕೂ ಬಹಳಷ್ಟು ತೊಂದರೆಯಿದೆ. ಹೀಗಾಗಿ ಈ ರಸ್ತೆ ಅಗಲ ಮಾಡುವಂತೆ ಸಾರ್ವಜನಿಕರು ಹಲವು ವರ್ಷಗಳಿಂದ ಸ್ಥಳೀಯ ಆಡಳಿತಗಾರರ ಮೇಲೆ ಒತ್ತಡ ಹೇರುತ್ತಲೇ ಬರುತ್ತಿದ್ದರು.
ಕೆಲವು ಪ್ರಭಾವಿ ವ್ಯಾಪಾರಸ್ಥರ ವಿರೋಧ ಹಾಗೂ ಆಗಿನ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಮಾರುಕಟ್ಟೆಯ ರಸ್ತೆ ಅಗಲೀಕರಣ ನನೆಗುದಿಗೆ ಬೀಳುತ್ತಲೆ ಸಾಗಿತ್ತು. ಇದೀಗ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ಇದರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ಮೂರು ಕೋಟಿ ರೂ.ಗಳ ವಿಶೇಷ ಅನುದಾನ ಮಂಜೂರಾಗಿದ್ದು, ಅದರಲ್ಲಿ ಇಲ್ಲಿನ ಬಸ್ ನಿಲ್ದಾಣದಿಂದ ಚೆನ್ನಬಸಪ್ಪ ಮಾಕಪನೋರ ಅಂಗಡಿ ವರೆಗೆ 500 ಮೀ. ಉದ್ದ, 33 ಅಡಿ ಅಗಲದ ಸಿಸಿ ರಸ್ತೆ ಮತ್ತು ಎರಡೂ ಬದಿ ಆರ್.ಸಿಸಿ ಚರಂಡಿ ನಿರ್ಮಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ.
ಯೋಜನೆ ಜಾರಿಗೊಳಿಸುವ ಮೊದಲ ಹಂತವಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟೇಶ ತೆಲಾಂಗ್ ನೇತೃತ್ವದಲ್ಲಿ ರಸ್ತೆಯನ್ನು ಮೇಜರಿಂಗ್ ಟೇಪ್‌ನಿಂದ ಅಳತೆ ಮಾಡಿ ಕೆಂಪು ಬಣ್ಣದಿಂದ ಸ್ಥಳ ಗುರುತಿಸುವ ಕೆಲಸ ಕೈಗೊಳ್ಳಲಾಗಿದೆ. ರಸ್ತೆ ಪಕ್ಕದ ಸುಮಾರು 63 ಕಟ್ಟಡಗಳ ಮಾಲೀಕರಿಗೆ ಅತಿಕ್ರಮಿತ ಸ್ಥಳ ಖಾಲಿಮಾಡಿ ಕೊಡಲು ಸೂಚಿಸಲಾಗಿದೆ. ಪಪಂ ಹೆಚ್ಚುವರಿ ಮುಖ್ಯಾಧಿಕಾರಿ ಶೀಲಾಬಾಯಿ, ಕಿರಿಯ ಇಂಜಿನಿಯರ್ ದೇವಿಂದ್ರಪ್ಪ, ಆಕಾಶ ರಾಠೊಡ, ಆನಂದ ಕಾಶಿ, ದತ್ತಾತ್ರೇಯ ಕಲಾಲ ಹಾಗೂ ಪಪಂ, ಪೊಲೀಸ್ ಸಿಬ್ಬಂದಿ ಈ ಸಂದರ್ಭದಲ್ಲಿ ಇದ್ದರು.
ಈಗ ಮಾರ್ಕೌಟ್ ಕೆಲಸ ಮಾಡಿ ಮುಗಿಸಿದ್ದು, ರಸ್ತೆಯಲ್ಲಿ ಬರುವ ಎಲ್ಲ ಕಟ್ಟಡದ ಮಾಲೀಕರಿಗೂ ಡೆಮಾಲಿಶ್ ವಿಷಯ ತಿಳಿಸಲಾಗಿದೆ. ಅವರಿಗೆ ಒಂದು ವಾರದ ಅವಕಾಶ ನೀಡಿದ್ದು, ರಸ್ತೆ ನಿರ್ಮಾಣಕ್ಕೆ ಬೇಕಾಗುವ 33 ಅಡಿ ಜಾಗ ಖಾಲಿ ಮಾಡಿಕೊಡಬೇಕು. ಇಲ್ಲದಿದ್ದರೆ ಒಂದು ವಾರದ ಬಳಿಕ ನಾವೇ ಜೆಸಿಬಿ ಮೂಲಕ ಅತಿಕ್ರಮಣ ಜಾಗ ತೆರವುಗೊಳಿಸಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಪ್ರಾರಂಭಿಸುತ್ತೇವೆ. ಇದಕ್ಕೆ ಆಸ್ಪದ ಮಾಡಿಕೊಡದೇ ವ್ಯಾಪರಸ್ಥರು ಸಹಕರಿಸಿ ತಾವೇ ಮಾರ್ಕೌಟ್ ಮಾಡಿದ ಸ್ಥಳದ ವರೆಗೆ ಜಾಗ ತೆರವು ಮಾಡಬೇಕು.
-ವೆಂಕಟೇಶ ತೆಲಾಂಗ್, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ