ಪುರುಷರಿಗಿಂತ ಮಹಿಳೆಯರಿಗೆ ನಿವೃತ್ತ ಬದುಕನ್ನು ಆರ್ಥಿಕವಾಗಿ ಸಮರ್ಥವಾಗಿ ನಿಭಾಯಿಸಲು ಹೆಚ್ಚು ಹಣದ ಅಗತ್ಯವಿರುತ್ತದೆ. ಅದಕ್ಕಾಗಿ ಮಹಿಳೆಯರು ಪುರುಷರಿಗಿಂತ ಕನಿಷ್ಠ ಶೇ.20ರಷ್ಟು ಹೆಚ್ಚು ಹಣವನ್ನು ಪ್ರತೀ ತಿಂಗಳೂ ಉಳಿಸುವ ಬದ್ಧತೆಯನ್ನು ಉದ್ಯೋಗಕ್ಕೆ ತೊಡಗಿದಂದಿನಿಂದಲೇ ರೂಢಿಸಿಕೊಳ್ಳಬೇಕಾಗುತ್ತದೆ.
ನಮ್ಮ ಬದುಕಿನಲ್ಲಿ ನಾವು ಆಹಾರ, ವಿಹಾರ, ನಿದ್ರೆ, ಸುಖಕ್ಕೆ ಎಷ್ಟು ಮಹತ್ವ ಕೊಡುತ್ತೇವೋ ಅಷ್ಟೇ ಮಹತ್ವವನ್ನು ಉಳಿತಾಯಕ್ಕೆ ಕೂಡ ಕೊಡಬೇಕಾಗುತ್ತದೆ. ಏಕೆಂದರೆ ನಮ್ಮ ಬದುಕು ರೂಪುಗೊಳ್ಳುವುದೇ ನಮ್ಮ ಆಶೋತ್ತರಗಳ ಮೇಲೆ. ಬದುಕಿನ ಹಲವು ಮಹತ್ತರ ಗುರಿಗಳನ್ನು ಸಾಧಿಸಲು ಹಣ ಅಗತ್ಯ; ಮತ್ತು ಈ ಅಗತ್ಯವನ್ನು ನಾವು ಉಳಿತಾಯದ ಮೂಲಕವೇ ಪೂರೈಸಲು ಯತ್ನಿಸಿದರೆ ಬದುಕಿಗೆ ಅತೀ ಅಗತ್ಯವಿರುವ ಆರ್ಥಿಕ ನೆಮ್ಮದಿ ನಮ್ಮದಾಗುತ್ತದೆ; ಅಂತೆಯೇ ಸಾಲದ ಶೂಲಕ್ಕೆ ಬೀಳುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ.
ಇಂದಿನ ದಿನಗಳಲ್ಲಿ ಬದುಕೆನ್ನುವುದು ಎಲ್ಲರಿಗೂ ಹಲವು ಸವಾಲುಗಳ, ನಿರಂತರ ಹೋರಾಟದ ಜೀವನವಾಗಿದೆ. ಈ ಸವಾಲುಗಳು ಪುರುಷರನ್ನೂ ಮಹಿಳೆಯರನ್ನೂ ಸರಿ ಸಮಾನವಾಗಿ ಕಾಡುತ್ತಿರುತ್ತವೆ. ಹಾಗಾಗಿ ಪುರುಷರಂತೆ ಮಹಿಳೆಯರು ಕೂಡ ಉದ್ಯೋಗಕ್ಕೆ ತೊಡಗಿ ಸಂಪಾದನೆಯನ್ನು ಆರಂಭಿಸಿದಾಕ್ಷಣವೇ ವಿವಿಧ ಬಗೆಯ ಮಾಧ್ಯಮಗಳಲ್ಲಿ ಹಣ ಉಳಿಸುವುದಕ್ಕೆ ಪ್ರಾಧಾನ್ಯ ನೀಡಬೇಕಾಗುತ್ತದೆ. ಮದುವೆ, ಸ್ವಂತ ಮನೆ, ಮಕ್ಕಳ ಉನ್ನತ ಶಿಕ್ಷಣ, ನಿವೃತ್ತಿ ಮುಂತಾದ ಸವಾಲುಗಳು ಬದುಕಿನಲ್ಲಿ ಪುರುಷರಿಗೂ ಮಹಿಳೆಯರಿಗೂ ಏಕಪ್ರಕಾರದಲ್ಲಿ ಎದುರಾಗುತ್ತವೆ.
ವಿಶೇಷವೆಂದರೆ ನಾವೆಲ್ಲ ಸಾಮಾನ್ಯವಾಗಿ ನಿವೃತ್ತ ಬದುಕಿನ ಸವಾಲುಗಳನ್ನು ಎದುರಿಸಲು ಅಗತ್ಯವಿರುವಷ್ಟು ಹಣವನ್ನು ಉಳಿಸುವ ಆಲೋಚನೆಯನ್ನೇ ಮಾಡುವುದಿಲ್ಲ. ಹಾಗಾಗಿ ನಿವೃತ್ತರಾಗಿ ಸಿಗುವ ಪಿಂಚಣಿ, ಗ್ರ್ಯಾಚುಯಿಟಿ, ಭವಿಷ್ಯ ನಿಧಿ ಹಣ ಇವನ್ನೇ ನಾವು ಆಧರಿಸಿ ಶೇಷಾಯುಷ್ಯವನ್ನು ಕಳೆಯುವುದು ಅನಿವಾರ್ಯವಾಗುತ್ತದೆ.
ನಿಜ ಹೇಳಬೇಕೆಂದರೆ ಪುರುಷರಿಗಿಂತ ಮಹಿಳೆಯರಿಗೆ ನಿವೃತ್ತ ಬದುಕನ್ನು ಆರ್ಥಿಕವಾಗಿ ಸಮರ್ಥವಾಗಿ ನಿಭಾಯಿಸಲು
ಹೆಚ್ಚು ಹಣದ ಅಗತ್ಯವಿರುತ್ತದೆ. ಅದಕ್ಕಾಗಿ ಮಹಿಳೆಯರು ಪುರುಷರಿಗಿಂತ ಕನಿಷ್ಠ ಶೇ.20ರಷ್ಟು ಹೆಚ್ಚು ಹಣವನ್ನು ಪ್ರತೀ ತಿಂಗಳೂ ಉಳಿಸುವ ಬದ್ಧತೆಯನ್ನು ಉದ್ಯೋಗಕ್ಕೆ ತೊಡಗಿದಂದಿನಿಂದಲೇ ರೂಢಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಮುಖ್ಯ ಕಾರಣವೇನೆಂದರೆ ನಮ್ಮ ದೇಶದಲ್ಲಿ ಪುರುಷರಿಗೆ ಸರಿ ಸಮಾನವಾಗಿ ದುಡಿಯುವ ಹೊರತಾಗಿಯೂ ಮಹಿಳೆಯರಿಗೆ ಪುರುಷರಿಗಿಂತ ಶೇ.20ರಷ್ಟು ಕಡಿಮೆ ಮಾಸಿಕ ವೇತನ ಇರುವುದು ಕಂಡು ಬರುತ್ತದೆ.
ನಮ್ಮ ಜೀವನ ಆಧುನಿಕತೆಯತ್ತ ಸಾಗುತ್ತಾ ಪಾಶ್ಚಾತ್ಯೀಕರಣ ಹೆಚ್ಚು ಹೆಚ್ಚಾಗಿ ನಡೆದಂತೆ ಮಹಿಳೆಯರು ತಮ್ಮ ಬದುಕಿನಲ್ಲಿ ಎದುರಿಸುವ ಸವಾಲುಗಳು ಹೆಚ್ಚುತ್ತಾ ಹೋಗತ್ತವೆ. ಇಂದಿನ ಆಧುನಿಕ ನಗರೀಕೃತ ಬದುಕಿನಲ್ಲಿ ಮಹಿಳೆಯರು ಒಂಟಿಯಾಗಿಯೇ ಉಳಿಯುವ ಸಾಧ್ಯತೆಗಳು ಹೆಚ್ಚುತ್ತಲೇ ಇವೆ. ಮದುವೆಯಾದರೂ ಹೊಂದಾಣಿಕೆಯ ವೈಫಲ್ಯದಿಂದಾಗಿ ವೈವಾಹಿಕ ಬದುಕು ಮುರಿದು ಬೀಳುವ ಉದಾಹರಣೆಗಳು ಬೇಕಾದಷ್ಟು ಇವೆ.
ಒಂದು ವೇಳೆ ಮದುವೆ ಸಾಂಗವಾಗಿ ಮುಂದುವರಿದರೂ ಇಂದಿನ ಆಧುನಿಕ ಜೀವನ ಶೈಲಿಯಿಂದಾಗಿ ಬರುವ ರೋಗ ರುಜಿನಗಳಿಗೆ, ಆಘಾತ, ಅಪಘಾತ ಮುಂತಾದ ದುರಂತಗಳಿಗೆ ಜೀವನ ಸಂಗಾತಿ ಬಲಿಯಾದಾಗ ಮಹಿಳೆ ವೈಧವ್ಯಕ್ಕೆ ಗುರಿಯಾಗುತ್ತಾಳೆ.
2011ರ ಜನಗಣತಿಯ ಪ್ರಕಾರ ನಮ್ಮ ದೇಶದಲ್ಲಿ 7.40 ಕೋಟಿ ಮಹಿಳೆಯರು ಒಂಟಿ ಬಾಳನ್ನು ಬದುಕುತ್ತಿದ್ದಾರೆ. 2001 ಮತ್ತು 2011ರ ಜನಗಣತಿಯನ್ನು ಹೋಲಿಕೆಗೆ ತೆಗೆದುಕೊಂಡರೆ ನಮ್ಮ ದೇಶದಲ್ಲಿ ಒಂಟಿ ಜೀವನ ಸಾಗಿಸುತ್ತಿರುವ ಮಹಿಳೆಯರ ಪ್ರಮಾಣ ಶೇ.39ರಷ್ಟು ಏರಿದೆ.
ನಮ್ಮ ದೇಶದಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಶೇ.20 ರಷ್ಟು ಕಡಿಮೆ ಪಗಾರ ಇದೆ ಎಂದು ಈಗಾಗಲೇ ಅರಿತಿರುವ ನಮಗೆ, ಮಾನ್ಸ್ಟರ್ ಸ್ಯಾಲರಿ ಇಂಡೆಕ್ಸ್ (ಎಂಎಸ್ಐ) ಪ್ರಕಾರ ತಿಳಿದು ಬರುವುದೇನೆಂದರೆ ನಮ್ಮ ದೇಶದಲ್ಲಿ ಪುರುಷನು ಪ್ರತೀ ತಾಸಿಗೆ ಪಡೆಯುವ ಸರಾಸರಿ ಆದಾಯ 231 ರೂ.
ಮಹಿಳೆಯ ಸರಾಸರಿ ತಾಸಿನ ಆದಾಯ ಕೇವಲ 184.80 ರೂ. ಉದ್ಯೋಗದಲ್ಲಿರುವ ಮಹಿಳೆ ಮದುವೆಯಾಗಿ ಮಗುವನ್ನು ಪಡೆದಾಗ 7ರಿಂದ 8 ವರ್ಷದ ಮಟ್ಟಿಗೆ ಉದ್ಯೋಗ ತೊರೆಯುವುದು ನಮ್ಮ ದೇಶದಲ್ಲೀಗ ಸಾಮಾನ್ಯವಾಗಿ ಕಂಡು ಬರುತ್ತಿದೆ. ಇಂಥ ಮಹಿಳೆಯರು 7 – 8 ವರ್ಷದ ಬಳಿಕ ಮತ್ತೆ ಉದ್ಯೋಗಕ್ಕೆ ಸೇರಿಕೊಂಡಾಗ ಅವರು ತಾವು ಹಿಂದೆ ಪಡೆಯುತ್ತಿದ್ದ ವೇತನಕ್ಕಿಂತ ಶೇ.25ರಷ್ಟು ಕಡಿಮೆ ವೇತನ ಪಡೆಯುವುದು ಅನಿವಾರ್ಯವಾಗುತ್ತದೆ. ಹಾಗೆಂದು ಪುರುಷರಿಗೆ ಈ ಸಮಸ್ಯೆ ಎದುರಾಗುವುದಿಲ್ಲ .
ಈ ಎಲ್ಲ ಕಾರಣಗಳಿಂದಾಗಿ ಮಹಿಳೆಯು ತನ್ನ ನಿವೃತ್ತ ಜೀವನದಲ್ಲಿ ಆರ್ಥಿಕ ಭದ್ರತೆಯನ್ನು ಹೊಂದಬೇಕಾದರೆ ಆರಂಭದಿಂದಲೇ ಪುರುಷರಿಗಿಂತ ಶೇ.20ರಷ್ಟು ಹೆಚ್ಚಿನ ಮೊತ್ತವನ್ನು ಉಳಿತಾಯ ಮಾಡಬೇಕಾಗುತ್ತದೆ. ಇದನ್ನು ಒಂದು ಉದಾಹರಣೆಯ ಮೂಲಕ ಇಲ್ಲಿ ವಿವರಿಸಬಹುದು :
ಉದಾಹರಣೆ 1 (ಪುರುಷರ ಸಂದರ್ಭದಲ್ಲಿ) :
ಇವರ ಹೆಸರು ರಮೇಶ್; ಇವರು ತನ್ನ 25ನೇ ವಯಸ್ಸಿನಲ್ಲಿ ಉದ್ಯೋಗಕ್ಕೆ ತೊಡಗುತ್ತಾರೆ. ಅವರ ಆರಂಭದ ಮಾಸಿಕ ವೇತನ 40,000 ರೂ. ಇರುತ್ತದೆ. ಅವರ ಆದಾಯ ಪ್ರತೀ ವರ್ಷ ಶೇ.10ರಷ್ಟು ಏರುತ್ತಿರುತ್ತದೆ. ನಿವೃತ್ತ ಬದುಕಿಗಾಗಿ ಇವರು ತಮ್ಮ ಆದಾಯದ ಶೇ.10ರಷ್ಟು ಉಳಿತಾಯ ಮಾಡುತ್ತಿರುತ್ತಾರೆ. ಇವರು ಈ ಉದ್ದೇಶಕ್ಕೆ ಈಕ್ವಿಟಿ ಮತ್ತು ಡೆಟ್ ಮಾಧ್ಯಮಗಳಲ್ಲಿ (ನಿರಖು ಠೇವಣಿ, ಬಾಂಡ್ ಇತ್ಯಾದಿ) ಮಾಡುವ ಉಳಿತಾಯ ಶೇ.10ರ ಪ್ರಮಾಣದಲ್ಲಿ ಬೆಳೆಯುತ್ತಿರುತ್ತದೆ.
ರಮೇಶ್ ಅವರು ತಮ್ಮ 60ನೇ ವರ್ಷ ಪ್ರಾಯದಲ್ಲಿ ನಿವೃತ್ತರಾಗುತ್ತಾರೆ. ಆಗ ಅವರು ತಮ್ಮ ಈ ಉಳಿತಾಯದಿಂದಾಗಿ ಸಿಗುವ ಮೊತ್ತ 5.48 ಕೋಟಿ ರೂ.ಗಳಾಗಿರುತ್ತವೆ. ರಮೇಶ್ ಅವರು ಸಂಭಾವ್ಯ ಜೀವಿತಾವಧಿ 77 ವರ್ಷ ಎಂದಿಟ್ಟುಕೊಳ್ಳೋಣ (ಇದು ನಮ್ಮ ದೇಶದಲ್ಲಿ ಈಗಿರುವ ಪುರುಷ ಸರಾಸರಿ ಸಂಭಾವ್ಯ ಜೀವಿತಾವಧಿ).
ರಮೇಶ್ ಅವರು ತಮ್ಮ ನಿವೃತ್ತ ಜೀವನಕ್ಕೆಂದು ಉಳಿಸಿ ಬೆಳೆಸಿರುವ 5.48 ಕೋಟಿ ರೂ. ಮೊತ್ತ ವರ್ಷಕ್ಕೆ 20 ಲಕ್ಷ ರೂ. ಬಳಸುತ್ತಾ ಹೋಗುತ್ತಾರೆ; ಎಂದರೆ ಅವರಿಗೆ ಅವರ 5.48 ಕೋಟಿ ರೂ. ಗಳ ಉಳಿತಾಯ ನಿಧಿಯ ಬರೋಬ್ಬರಿ 39 ವರ್ಷಗಳಿಗೆ ಸಾಲುತ್ತವೆ.
ಉದಾಹರಣೆ 2 (ಮಹಿಳೆಯರ ಸಂದರ್ಭದಲ್ಲಿ) :
ಇವರ ಹೆಸರು ಗಾಯತ್ರಿ; ಈಕೆ ತನ್ನ 25ನೇ ವರ್ಷ ಪ್ರಾಯದಲ್ಲಿ ಉದ್ಯೋಗಕ್ಕೆ ತೊಡಗುತ್ತಾರೆ. ಇವರ ಮಾಸಿಕ ವೇತನ 32,000 ರೂ. ಆಗಿರುತ್ತದೆ (ಮೇಲೆ ಹೇಳಿದ ರಮೇಶ್ ಅವರಿಗಿಂತ ಶೇ.20 ಕಡಿಮೆ ವೇತನ). ಗಾಯತ್ರಿ ಅವರ ಮಾಸಿಕ ವೇತನ ಶೇ.10ರ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಏರುತ್ತಾ ಹೋಗುತ್ತದೆ.
ಗಾಯತ್ರಿ ಅವರು ತಮ್ಮ ವೇತನದಿಂದ ನಿವೃತ್ತಿಯ ಬದುಕಿಗೆಂದು ಪ್ರತ್ಯೇಕವಾಗಿ ಶೇ.10ರಷ್ಟು ಹಣವನ್ನು ಪ್ರತೀ ತಿಂಗಳು ಉಳಿಸುತ್ತಾರೆ. ಇವರು ಕೂಡ ಈಕ್ವಿಟಿ ಶೇರು ಮತ್ತು ಡೆಟ್ ಮಾಧ್ಯಮಗಳಲ್ಲಿ ತೊಡಗಿಸುವ ಹಣ ಶೇ.10ರ ಬೆಳವಣಿಗೆಯನ್ನು ಕಾಣುತ್ತಲೇ ಹೋಗುತ್ತದೆ.
ಆದರೆ ತಮ್ಮ 30ನೇ ವರ್ಷ ಪ್ರಾಯದಲ್ಲಿ ಇವರು ಹೆರಿಗೆ, ಮಗುವಿನ ಪಾಲನೆ ಪೋಷಣೆಗೆಂದು ಉದ್ಯೋಗದಿಂದ ಐದು ವರ್ಷಗಳ ಬ್ರೇಕ್ ಪಡೆಯುತ್ತಾರೆ. ತನ್ನ 35ನೇ ವರ್ಷ ಪ್ರಾಯದಲ್ಲಿ ಗಾಯತ್ರಿ ಅವರು ಮತ್ತೆ ಕೆಲಸಕ್ಕೆ ಸೇರಿಕೊಂಡಾಗ ಅವರ ಮಾಸಿಕ ವೇತನ 55,000 ರೂ.ಗಳಿಂದ ಆರಂಭವಾಗುತ್ತದೆ. 60ನೇ ವರ್ಷ ಪ್ರಾಯದಲ್ಲಿ ಇವರು ಉದ್ಯೋಗದಿಂದ ನಿವೃತ್ತರಾಗುತ್ತಾರೆ.
ಗಾಯತ್ರಿ ಅವರು ನಿವೃತ್ತರಾದಾಗ ಅವರು ನಿವೃತ್ತ ಬದುಕಿಗೆಂದು ಉಳಿಸಿ ಬೆಳೆಸಿದ ಹಣ 2.86 ಕೋಟಿ ರೂ.ಗಳಾಗಿರುತ್ತದೆ. ಗಾಯತ್ರಿ ಅವರಿಗೆ 79 ವರ್ಷಗಳ ಸಂಭಾವ್ಯ ಜೀವಿತಾವಧಿ (ನಮ್ಮ ದೇಶದಲ್ಲಿನ ಮಹಿಳೆಯರ ಸರಾಸರಿ ಸಂಭವನೀಯ ಜೀವಿತಾವಧಿ) ಇರುತ್ತದೆ.
ಈಗ ನಿವೃತ್ತರಾಗಿರುವ ಗಾಯತ್ರಿ ಅವರು ತಾವು ಕೂಡಿಟ್ಟು ಬೆಳೆಸಿರುವ 2.86 ಕೋಟಿ ರೂ.ಗಳನ್ನು ವರ್ಷಕ್ಕೆ 20 ಲಕ್ಷ ರೂ. ಪ್ರಮಾಣದಲ್ಲಿ ಬಳಸುತ್ತಾ ಹೋಗುತ್ತಾರೆ; ಎಂದರೆ ಅವರಿಗೆ ಈ 2.86 ಕೋಟಿ ರೂ. ಮೊತ್ತವು ಕೇವಲ 16 ವರ್ಷಗಳ ಅವಧಿಗೆ ಬರುತ್ತದೆ. ಆಗ ಅವರ ವಯಸ್ಸು (60+16) 76 ಆಗಿರುತ್ತದೆ. ಮಹಿಳಾ ಸರಾಸರಿ ಸಂಭವನೀಯ ಜೀವಿತಾವಧಿಯ ಪ್ರಕಾರ ಗಾಯತ್ರಿ ಅವರು 79 ವರ್ಷ ಕಾಲ ಬದುಕಿರುತ್ತಾರೆ; ಎಂದರೆ ಅವರು ತಮ್ಮ ಕೊನೆಗಾಲದ ಮೂರು ವರ್ಷಗಳನ್ನು ಬೇರೆಯವರ ಹಣಕ್ಕೆ ಅವಲಂಬಿತರಾಗಿ ಕಳೆಯಬೇಕಾಗುತ್ತದೆ !
ಹಾಗಿರುವಾಗ ಉದಾಹರಣೆ 1ರಲ್ಲಿನ ಮಹೇಶ್ ಅವರಂತೆ ಉದಾಹರಣೆ 2ರಲ್ಲಿನ ಗಾಯತ್ರಿ ಅವರು 79 ವರ್ಷ ಪ್ರಾಯದ ವರೆಗೆ (ಎಂದರೆ ಸಾಯುವ ತನಕದ ಅವಧಿಗೆ) ಸಾಕಾಗುವಷ್ಟು ಹಣವನ್ನು ಹೊಂದಿರಬೇಕೆಂದರೆ ಅವರು ತಾವು ಉದ್ಯೋಗಕ್ಕೆ ತೊಡಗಿಕೊಂಡಾಗಿನಿಂದಲೇ ಶೇ.10ರ ಬದಲು ಶೇ.20.3ರಷ್ಟು ಹಣವನ್ನು ನಿವೃತ್ತಿ ನಿಧಿಗೆಂದು ಉಳಿತಾಯ ಮಾಡಬೇಕಾಗಿರುತ್ತದೆ.
ಅಂದ ಹಾಗೆ ಈ ಲೆಕ್ಕಾಚಾರವನ್ನು ನಿವೃತ್ತಿ ನಂತರದ ಶೇ.1.88ರ ಹಣದುಬ್ಬರಕ್ಕೆ ಹೊಂದಿಸಿ ಮಾಡಲಾಗಿದೆ ಮತ್ತು ಶೇ.6 ಹಣದುಬ್ಬರ ಇರುತ್ತಾ ಶೇ.8ರ ಸಾಮಾನ್ಯ ಇಳುವರಿಯನ್ನು ದೃಷ್ಟಿಯಲ್ಲಿರಿಸಿಕೊಳ್ಳಲಾಗಿದೆ.