Advertisement

ಸುಂದರಿ ಸಂಧ್ಯಾ “ತುಪ್ಪದ” ರೂಪದಲ್ಲಿ ಅಗ್ನಿಗೆ ಆಹುತಿಯಾಗಿದ್ದೇಕೆ?

09:06 AM Mar 12, 2019 | |

ಸೃಷ್ಟಿಯ ಆದಿಕಾಲದಲ್ಲಿ ಚತುರ್ಮುಖ ಬ್ರಹ್ಮದೇವರು ಶ್ರೀಮನ್ನಾರಾಯಣನನ್ನು ಧ್ಯಾನಿಸುತ್ತಾ, ಮನೋಸಂಕಲ್ಪಮಾತ್ರದಿಂದಲೇ  ಓರ್ವ ಕನ್ಯೆಯನ್ನು ಸೃಷ್ಟಿಸಿದರು. ಅವಳು ಮೈದಾಳಿ ಅವರೆದುರಿಗೆ ನಿಂತಳು. ಅವಳು ತಪಸ್ಸುಮಾಡಿ ಶ್ರೀಹರಿಯನ್ನು ಒಲಿಸಿಕೊಳ್ಳಲು ಕಾತುರಳಾಗಿದ್ದಳು.  ಬ್ರಹ್ಮದೇವರು ಗಾಢವಾದ ಧ್ಯಾನದಲ್ಲಿರುವಾಗ(ಸಂ-ಧ್ಯಾನದಲ್ಲಿ) ಸೃಷ್ಠಿಯಾದ ತಮ್ಮ ಮಾನಸ ಪುತ್ರಿಗೆ ಸಂಧ್ಯಾ ಎಂದು ಹೆಸರಿಟ್ಟರು. ಅವಳು ಸೌಂದರ್ಯ, ಮಾಧುರ್ಯ,ಅಂಗಸೌಷ್ಟವದಿಂದ ಕಂಗೊಳಿಸುತ್ತಿದ್ದಳು, ಅವಳ ಸೌಂದರ್ಯವನ್ನು ಕಂಡು ಬ್ರಹ್ಮದೇವರೂ ಎಂತಹ ಅದ್ಭುತ ಸೃಷ್ಠಿ ಎಂದು ದಿಗ್ಬ್ರಾಂತರಾಗಿ ಮೈಮರೆತರು. ಅವಳು ತಪ್ಪಸ್ಸಿನ ಬಗೆಯನ್ನು ಅರಿಯಲು ಪಿತನಿಗೆ ಕೈಮುಗಿದು ವಂದಿಸಿದಳು. ಆದರೆ ಬ್ರಹ್ಮದೇವರ ವಾತ್ಸಲ್ಯ ಪೂರಿತ ದೃಷ್ಟಿಯನ್ನು ಕಂಡು ಅವರೆದುರು ನಿಲ್ಲಲು ನಾಚಿಕೆಯಾಗಿ ಅಲ್ಲಿಂದ ಹೊರಟು ಚಂದ್ರಭಾಗ ನದಿಯ ತಟದ ಒಂದು ಪರ್ವತಕ್ಕೆ ಬಂದಳು. ಆದರೆ ಅವಳಿಗೆ ಅಲ್ಲಿ ತಪಸ್ಸನ್ನು ಹೇಗೆ ಮಾಡಬೇಕೆಂದು ತಿಳಿಯಲಿಲ್ಲ.

Advertisement

              ಆಗ ಅಪರೋಕ್ಷ ಜ್ಞಾನಿಗಳಾದ ವಸಿಷ್ಠರು ಅಲ್ಲಿಗೆ ಆಗಮಿಸಿದರು. ಬ್ರಹ್ಮ ವರ್ಚಸ್ವಿಯಾದ ಮಹಾಮುನಿಗಳನ್ನು ಕಂಡ ಸಂಧ್ಯೆಯು ಅವರನ್ನು ಆಧರಿಸಿ ಕೈಮುಗಿದು ನಿಂತುಕೊಂಡಳು. ಆಗ ವಸಿಷ್ಠರು ಎಲೈ ಕನ್ಯೆ ಯಾರು ನೀನು ? ಇಲ್ಲಿ ಏಕೆ ಒಬ್ಬೊಂಟಿಗಳಾಗಿ ತಿರುಗಾಡುತ್ತಿರುವೆ? ಎಂದು ಪ್ರಶ್ನಿಸಿದರು. ಅದಕ್ಕೆ ಸಂಧ್ಯೆಯು ” ಗುರುಗಳೇ ! ನಾನು ಬ್ರಹ್ಮನ ಮಾನಸ ಪುತ್ರಿ. ಅನುಷ್ಠಾನಕ್ಕೆಂದು ಇಲ್ಲಿಗೆ ಬಂದಿರುವೆ ಆದರೆ ತಪಸ್ಸನ್ನು ಮಾಡುವ ಕ್ರಮಗಳಾವುದೂ  ನನಗೆ ತಿಳಿದಿಲ್ಲ. ಮಹಾತೇಜಸ್ವಿಗಳಾದ ತಾವು ತಪಸ್ಸಿನ ವಿಧಿಯನ್ನು ನನಗೆ ಅನುಗ್ರಹಿಸಿ” ಎಂದು ಬೇಡಿಕೊಂಡಳು.

              ಸಣ್ಣ ವಯಸ್ಸಿನಲ್ಲಿಯೇ ಕಠೋರವಾದ ತಪಸ್ಸನ್ನು ಆಚರಿಸುವ ಆಸಕ್ತಿಯುಳ್ಳ ಸಂಧ್ಯೆಯನ್ನು ಕಂಡು ಅವರಿಗೆ ಆಶ್ಚರ್ಯವಾಯಿತು. ಅವಳ ಕೋಮಲ ಶರೀರ , ಮತ್ತೆ ಮತ್ತೆ ನೋಡಬೇಕೆನ್ನುವ ಸೌಂದರ್ಯ , ಲಾವಣ್ಯ- ತಾರುಣ್ಯಗಳನ್ನೂ, ವೀಣೆಯ ತಂತಿ ಮೀಟಿದಂತಿರುವ ಅವಳ ಸುಮಧುರ ಮಾತುಗಳನ್ನು ಕೇಳಿ ವಸಿಷ್ಠರಿಗೂ ಅವಳ ಬಗ್ಗೆ ಪ್ರೇಮಾದರಗಳು ಹುಟ್ಟಿದವು. ತಮ್ಮ ಪ್ರೇಮಾರ್ದ್ರವಾದ ದೃಷ್ಟಿಯಿಂದ ಸಂಧ್ಯೆಯನ್ನು ವಸಿಷ್ಠರು ನೋಡಲು ಸಂಧ್ಯೆಗೆ ಮೈಯೆಲ್ಲಾ ಮಿಂಚುಹರಿದ ಅನುಭವವಾಗಿ ಶರೀರವೆಲ್ಲ ರೋಮಾಂಚನವಾಯಿತು. ನಂತರ ವಸಿಷ್ಠರು ಅವಳಿಗೆ ದ್ವಾದಶಾಕ್ಷರ ಮಂತ್ರವನ್ನು ಸಾಂಗವಾಗಿ ಉಪದೇಶಿಸಿ, ಅದರ ವಿಧಿವಿಧಾನ ಹಾಗೂ ವ್ರತಾಚರಣೆಯೆಲ್ಲವನ್ನು ತಿಳಿಸಿಕೊಟ್ಟು ಭಗವಂತನ ಸಾಕ್ಷಾತ್ಕಾರವಾಗುವ ತನಕ ತಪಸ್ಸನ್ನಾಚರಿಸುವಂತೆ ಸೂಚಿಸಿ ತಮ್ಮ ತಪೋವನಕ್ಕೆ ಹೊರಟುಹೋದರು.

                  ಸಂಧ್ಯೆಗೆ ತನ್ನನ್ನು ಸೃಷ್ಟಿಸಿದ ಚತುರ್ಮುಖನ ಸ್ನಿಗ್ಧ ದೃಷ್ಟಿ , ವಸಿಷ್ಠರ ಪ್ರೇಮಾರ್ದ್ರ ದೃಷ್ಟಿ ಹಾಗೂ ಬೇರೆ ಕೆಲವರ ಕಾಮಪೂರಿತ ದೃಷ್ಟಿಯನ್ನು ಕಂಡು ತನ್ನ ದೇಹದಲ್ಲಿಯೇ ಏನೋ ಮಾದಕತೆ ಇದೆ ಎಂದು ಅನಿಸತೊಡಗಿತು. ಆದರೂ ಅವಳು ತನ್ನ ಕೋಮಲವಾದ ಶರೀರವನ್ನು ತಪಸ್ಸಾಧನವನ್ನಾಗಿ ಮಾಡಿ ವಸಿಷ್ಠರ ಉಪದೇಶದಂತೆ ತಪಸ್ಸಿನಲ್ಲಿ ತೊಡಗಿದಳು. ಮಳೆ – ಬಿಸಿಲಿಗೆ , ಚಳಿ-ಗಾಳಿಗೆ ಮಿಸುಕಾಡದೆ ಕಠೋರವಾಗಿ ನಾಲ್ಕುಯುಗಗಳ ಕಾಲ ತಪಸ್ಸನ್ನು ಆಚರಿಸಿದಳು.  ಘೋರವಾದ ಈ ತಪಸ್ಸನ್ನು ಕಂಡ ಋಷಿಮುನಿಗಳೂ, ದೇವತೆಗಳೂ ಅಚ್ಚರಿಪಟ್ಟರು. ಸಂಧ್ಯೆಯ ಧೃಢಭಕ್ತಿ, ತಪಸ್ಸು, ನಿಷ್ಠೆಗೆ ಒಲಿದ ಭಗವಂತನು ಅವಳೆದುರು ಸರ್ವಾಯುಧಧಾರಿಯಾಗಿ ಪ್ರತ್ಯಕ್ಷನಾದನು.

Advertisement

                 ಪರಮಾತ್ಮನ ಸುಂದರ ಮೂರ್ತಿಯನ್ನು ನೋಡಿದ ಸಂಧ್ಯೆಯು ಆನಂದ ಪರಾವಶಳಾಗಿ ಸ್ತುತಿಸಲು ಪ್ರಯತ್ನಿಸಿ, ಗಂಟಲು ತುಂಬಿದಂತಾಗಿ ಭಗವಂತನನ್ನು ಶಿರಸಾ ವಂದಿಸಿದಳು. ಆಗ ನಾರಾಯಣನು “ಕನ್ಯೆ ನಿನ್ನ ತಪಸ್ಸಿಗೆ ನಾನು ಮೆಚ್ಚಿದ್ದೇನೆ. ಇಷ್ಟವಾದ ವರವನ್ನು ಬೇಡು” ಎಂದು ಹೇಳಿದನು.

                ಆಗ ಸಂಧ್ಯೆಯು, ಪ್ರಭೋ! ಮಾನವನು ಹುಟ್ಟಿದಕೂಡಲೇ ಕಾಮವು ಅವನ ಜೊತೆಗೆ ಜನ್ಮ ತಾಳುವುದರಿಂದ  ನನ್ನನ್ನು ನೋಡಿದವರೆಲ್ಲರೂ ಕಾಮದೃಷ್ಟಿಯಿಂದಲೇ ವೀಕ್ಷಿಸುವರು. ಆದ್ದರಿಂದ ಇನ್ನು ಜಗತ್ತಿನಲ್ಲಿ ಹುಟ್ಟಿದಕೂಡಲೇ ಮಾನವರಿಗೆ ಕಾಮವು ಹುಟ್ಟದಂತೆ ಮಾಡು ಎಂದು ವರ ಬೇಡಿದಳು. ಆಗ ಪರಮಾತ್ಮನು ಹುಟ್ಟಿದ ಪ್ರಾಣಿಗಳ ಹೃದಯದಲ್ಲಿ ಕಾಮ ಉಂಟಾಗುವುದು ನಿಸರ್ಗದ ನಿಯಮ ಹಾಗೂ ನನ್ನ ಆಜ್ಞೆ ಆದರೆ ನಿನ್ನ ಮನೋಭೀಷ್ಟದಂತೆ ಹುಟ್ಟಿದ ಕೂಡಲೇ ಯಾರಿಗೂ ಕಾಮ ಉಂಟಾಗದಂತೆ ಮಾಡುತ್ತೇನೆ. ಮನುಷ್ಯ ಜೀವನದ ಬಾಲ್ಯ , ಕೌಮಾರ್ಯ, ತಾರುಣ್ಯ , ಜರ ಎಂಬ  ನಾಲ್ಕು ಅವಸ್ಥೆಗಳಲ್ಲಿ ಮೊದಲೆರಡು ಅವಸ್ಥೆಗಳಲ್ಲಿ ಕಾಮದ ವಾಸನೆಯೇ ಇರದಂತೆ ಮಾಡಿ ಕೊನೆಯ ಎರಡರಲ್ಲಿ ಕಾಮ ಅಂಕುರಿಸುವಂತೆ ಮಾಡುತ್ತೇನೆ ಎಂದು ಹೇಳಿದನು.

                   ಆಗ ಸಂಧ್ಯೆಯು, ದೇವಾ! ನನ್ನನ್ನು ಕಾಮುಕದೃಷ್ಟಿಯಿಂದ ನೋಡುವವರೆಲ್ಲರೂ ನಪುಂಸಕರಾಗಲಿ ಎಂದು ಇನ್ನೊಂದು ವರವನ್ನು ಬೇಡಿದಳು . ಆಗ ಭಗವಂತನು ” ನಿನ್ನ ಪತಿಯನ್ನು ಹೊರತುಪಡಿಸಿ ಬೇರೆ ಯಾರಾದರೂ ಕಾಮಾಂಧರಾಗಿ ನಿನ್ನನ್ನು ನೋಡಿದರೆ  ನಿರ್ವೀರ್ಯರಾಗುವರು ಎಂದು  ಅನುಗ್ರಹಿಸಿದನು.  ನಂತರ ಸಂಧ್ಯೆಯು , ಅನೇಕರು ಕಾಮ ದೃಷ್ಟಿಯಿಂದ  ನೋಡಿ ಕಲುಷಿತಕೊಂಡಿರುವ ತನ್ನ ಶರೀರವನ್ನು ಅಗ್ನಿಯಲ್ಲಿ ತ್ಯಾಗ ಮಾಡಲು ಭಗವಂತನಲ್ಲಿ ಅನುಜ್ಞೆಯನ್ನು ಪಡೆದುಕೊಂಡಳು.

             ಅದಕ್ಕೆ ಭಗವಂತನು ಸಮ್ಮತಿಸಿ, ಇಲ್ಲಿಯೇ ಸಮೀಪದಲ್ಲಿ ಚಂದ್ರಭಾಗ ನದಿಯ ದಂಡೆಮೇಲೆ ಓರ್ವ  ಮಹರ್ಷಿಗಳು , ವಿಶಿಷ್ಟವಾದ ಸತ್ರವಂದನ್ನು ಕೈಗೊಂಡಿದ್ದಾರೆ. ನೀನು ಅಲ್ಲಿಗೆ ಹೋಗಿ ಯಜ್ಞಾಗ್ನಿಗೇ ಆತ್ಮಸಮರ್ಪಣೆ ಮಾಡು. ಆದರೆ ನಿನ್ನ ನಿಜರೂಪದೊಂದಿಗೆ ಅಲ್ಲಿಗೆ ಹೋದರೆ ಅಲ್ಲಿ ನೆರೆದ ಮಹಾಮುನಿಗಳ ಮನಸ್ಸು ವಿಚಲಿತವಾಗಿ ಅವಾಂತರವಾಗಬಹುದು. ಆದಕಾರಣ, ಯಾರ ದೃಷ್ಟಿಗೂ  ಗೋಚರಿಸದಂತೆ ತುಪ್ಪದ ರೂಪವನ್ನು ಧರಿಸಿ ನೀನು ಮದುವೆಯಾಗ ಬಯಸುವವನನ್ನು ಮನಸ್ಸಿನಲ್ಲಿ ಚಿಂತಿಸುತ್ತ ಯಜ್ಞಾಗ್ನಿಯನ್ನು ಪ್ರವೇಶಿಸು . ಇದರಿಂದಾಗಿ ಮುಂದಿನ ಜನ್ಮದಲ್ಲಿ ಋಷಿಕನ್ಯೆಯಾಗಿ ಹುಟ್ಟಿ ಬ್ರಹ್ಮಋಷಿಯೊಬ್ಬರನ್ನು ಮದುವೆಯಾಗುವೆ ಎಂದು ಸೂಚಿಸಿ ಸಂಧ್ಯಾದೇವಿಯ ತಲೆಯನ್ನು ನೇವರಿಸಿ ಅಂತರ್ಧಾನನಾದನು. ಭಗವಂತನ ಸ್ಪರ್ಶದಿಂದ ಸಂಧ್ಯಾದೇವಿಯು ತುಪ್ಪವಾಗಿ ಮಾರ್ಪಟ್ಟು ಹೋಮಾಗ್ನಿಗೆ ಆಹುತಿಯಾದಳು. 

          ಆ ಸಮಯದಲ್ಲಿ ತನಗೆ ಮಂತ್ರೋಪದೇಶವನ್ನು ಮಾಡಿದ ವಸಿಷ್ಠರ ದಿವ್ಯ ರೂಪವನ್ನು ಧ್ಯಾನಿಸುತ್ತಿದ್ದುದರಿಂದ ಭಗವಂತನ ವರದಂತೆ ಜನ್ಮಾಂತರದಲ್ಲಿ ಅರುಂಧತಿಯಾಗಿ ವಸಿಷ್ಠರನ್ನು ವರಿಸಿ ಪ್ರಾತಃಸ್ಮರಣೀಯಳಾಗಿ ಸರ್ವದಾ ವಂದ್ಯಳೂ ಆದಳು.

ಪಲ್ಲವಿ

Advertisement

Udayavani is now on Telegram. Click here to join our channel and stay updated with the latest news.

Next