Advertisement

ಯುದ್ಧವೇಕೆ? ಚರ್ಚೆ ಮಾಡಿ ಉಕ್ರೇನ್‌ ಸಮಸ್ಯೆ ಬಗೆಹರಿಸಿ

11:35 PM Mar 03, 2023 | Team Udayavani |

ನ್ಯಾಟೋ ರಾಷ್ಟ್ರಗಳ ಜತೆಗೆ ಉಕ್ರೇನ್‌ ಹೆಚ್ಚಿನ ಸಾಮೀಪ್ಯ ಹೊಂದುತ್ತಿದೆ ಎಂಬ ಒಂದೇ ಕಾರಣಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುತಿನ್‌ ಆ ದೇಶದ ಮೇಲೆ ದಾಳಿ ನಡೆಸಲು ಶುರು ಮಾಡಿ ಒಂದು ವರ್ಷ ಕಳೆದಿದೆ. ಐರೋಪ್ಯ ಒಕ್ಕೂಟ, ಯು.ಕೆ. ಸೇರಿದಂತೆ ಹಲವು ರಾಷ್ಟ್ರಗಳಿಗೆ ನೇರವಾಗಿ ಅದರ ಬಿಸಿ ತಟ್ಟಿದೆ. ಇದರ ಹೊರತಾಗಿಯೂ ಕೂಡ ದಾಳಿಯನ್ನು ನಿಲ್ಲಿಸಲು ಪ್ರಾಮಾಣಿಕ ಪ್ರಯತ್ನ ನಡೆಯುತ್ತಿಲ್ಲವೆಂದು ವಿಷಾದದಿಂದಲೇ ಹೇಳಬೇಕಾಗಿದೆ.

Advertisement

ಪ್ರಧಾನಿ ನರೇಂದ್ರ ಮೋದಿಯವರು ಕೂಡ ರಷ್ಯಾ ಅಧ್ಯಕ್ಷ ಪುತಿನ್‌ ಅವರನ್ನು ಖುದ್ದಾಗಿ ಭೇಟಿಯಾಗಿದ್ದ ವೇಳೆ ಈಗಿನ ಕಾಲಮಾನ ಯುದ್ಧಕ್ಕೆ ಹೇಳಿಸಿದ್ದೇ ಅಲ್ಲ. ಯಾವ ಭಿನ್ನಾಭಿಪ್ರಾಯ ಇದ್ದರೂ ಮುಖಾಮುಖೀ ಕುಳಿತು, ಚರ್ಚೆ ನಡೆಸಿ ಪರಿಹಾರ ಮಾಡುವುದೇ ಅದಕ್ಕೆ ಇರುವ ಯೋಗ್ಯ ಪರಿಹಾರ ಎಂದು ತಿಳಿ ಹೇಳಿದ್ದರು. ಈ ಅಂಶಕ್ಕೆ ಎಲ್ಲ ರಾಷ್ಟ್ರಗಳೂ ಸಹಮತವನ್ನು ವ್ಯಕ್ತಪಡಿಸಿದವು ನಿಜ. ಆದರೆ ಅದು ಕೃತಿಯಲ್ಲಿ ಮಾತ್ರ ಅನುಷ್ಠಾನವಾಗಲೇ ಇಲ್ಲ. ಹೊಸದಿಲ್ಲಿಯಲ್ಲಿ ನಡೆಯುತ್ತಿರುವ “ರೈಸಿನಾ ಡೈಲಾಗ್ಸ್‌’ ಮತ್ತು ಕ್ವಾಡ್‌ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಕೂಡ ರಷ್ಯಾ-ಉಕ್ರೇನ್‌ ಬಿಕ್ಕಟ್ಟು ಚರ್ಚೆಯಾಗಿದೆ. ಆದರೆ ಯುದ್ಧ ನಿಲ್ಲಿಸುವ ಪ್ರಯತ್ನದ ಬಗ್ಗೆ ಮಾತುಗಳು ಭಾರತ ಹೊರತಾಗಿ ಯಾರಿಂದಲೂ ಬರಲಿಲ್ಲ.

“ರೈಸಿನಾ ಡೈಲಾಗ್ಸ್‌’ನಲ್ಲಿ ಭಾಗವಹಿಸಿದ ರಷ್ಯಾ ವಿದೇಶಾಂಗ ಸಚಿವ ಸರ್ಗೆ ಲಾರ್ವೋ ಪಾಶ್ಚಿಮಾತ್ಯ ರಾಷ್ಟ್ರಗಳು ಪದೇ ಪದೆ ತಮ್ಮ ದೇಶವೇ ಬಿಕ್ಕಟ್ಟಿಗೆ ಕಾರಣ ಎಂಬಂತೆ ಗೂಬೆ ಕೂರಿಸುತ್ತಿವೆ ಎಂದು ಹೇಳಿ ಕೊಂಡಿದ್ದಾರೆ. ಜತೆಗೆ ಉಕ್ರೇನ್‌ ಅಧ್ಯಕ್ಷ ವೊಲೊಡಿ ಮಿರ್‌ ಝೆಲೆನ್‌ಸ್ಕಿ ಅವರಿಗೆ ಸಂಧಾನದ ಅವಕಾಶಗಳನ್ನು ಕೊಟ್ಟಿದ್ದರೂ ಅದನ್ನು ಪಾಶ್ಚಿಮಾತ್ಯ ರಾಷ್ಟ್ರಗಳ ಕುಮ್ಮಕ್ಕಿನಿಂದ ಒಪ್ಪಿಲ್ಲ ಎಂದು ದೂರಿದ್ದಾರೆ. ಝೆಲೆನ್‌ಸ್ಕಿ ಅವರನ್ನೂ ಕಾರ್ಯಕ್ರಮಕ್ಕೆ ಕರೆಸಬೇಕಾಗಿತ್ತು ಎಂದೂ ಅವರು ವಾದಿಸಿದ್ದಾರೆ.

ಇನ್ನು ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್‌ ನಿರ್ಭಯದಿಂದ ರಷ್ಯಾ ಮುಂದುವರಿಸಿರುವ ದಾಳಿ ಮುಂದಿನ ದಿನಗಳಲ್ಲಿ ಇಂಥ ಕೃತ್ಯವೆಸಗುವ ರಾಷ್ಟ್ರಗಳಿಗೆ ಸಂದೇಶ ನೀಡೀತು ಎಂದು ಹೇಳಿದ್ದಾರೆ. ಅಮೆರಿಕ ಸರಕಾರ ಶಾಂತಿಪ್ರಿಯವೇ ಆಗಿದ್ದರೆ, ನ್ಯಾಟೋ ವತಿಯಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನೀಡುವ ಉಸಾಬರಿಯಾದರೂ ಏಕೆ ಎಂದು ಪ್ರಶ್ನಿಸಬೇಕಾಗುತ್ತದೆ. ವಿವಿಧ ರಾಷ್ಟ್ರಗಳ ಒಕ್ಕೂಟದ ವಿವಿಧ ಮಟ್ಟದ ಸಭೆ-ಸಮಾವೇಶಗಳಲ್ಲಿ ಇಂಥ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲಾಗುತ್ತದೆ. ಆದರೆ ನಿರ್ಧಾರಾತ್ಮಕವಾಗಿ ಇರುವ ತಡೆಯುವ ಕ್ರಮಗಳು ನಡೆಯುತ್ತಿಲ್ಲ.

ಒಂದು ವೇಳೆ, ಉಕ್ರೇನ್‌ ನ್ಯಾಟೋ ಒಕ್ಕೂಟ ಸೇರಿದ್ದರೂ ರಷ್ಯಾ ಕಳೆದು ಕೊಳ್ಳುವುದು ಏನೂ ಇರುತ್ತಿರಲಿಲ್ಲ. ಹೇಗಿದ್ದರೂ ಅದೊಂದು ಸಾರ್ವಭೌಮತ್ವ ಹೊಂದಿರುವ ರಾಷ್ಟ್ರ. ಲುಗಾನ್ಸ್‌$R ಮತ್ತು ಡಾನೆಸ್ಕ್ ಪ್ರದೇಶವನ್ನು ಹೊರತು ಪಡಿಸಿದರೆ, ಉಳಿದಂತೆ ಇರುವ ಭೂ ಪ್ರದೇಶ ಝೆಲೆನ್‌ಸ್ಕಿ ಸರಕಾರದ ಹಿಡಿತದಲ್ಲಿಯೇ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ರಾಷ್ಟ್ರಗಳ ಆಡಳಿತದ ಚುಕ್ಕಾಣಿ ಹಿಡಿದವರ ಪ್ರತಿಷ್ಠೆಗಾಗಿ ಜನ ಸಾಮಾನ್ಯರು ತೊಂದರೆಗೆ ಒಳಗಾಗುತ್ತಾರೆ. ಸದ್ಯದ ದಾಳಿಯಿಂದಾಗಿ ಹಲವು ರಾಷ್ಟ್ರಗಳಲ್ಲಿ ಗೋಧಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯ ಸರಪಣಿಗೆ ವ್ಯತ್ಯಯ ಉಂಟಾಗುತ್ತಿದೆ. ನಮ್ಮ ದೇಶಕ್ಕೆ ಸಂಬಂಧಿಸಿದಂತೆ ನೋಡಿದಾಗ ನೇರವಾಗಿ ಅದರ ಪ್ರತಿಕೂಲ ಪರಿಣಾಮ ಉಂಟಾಗದೇ ಇದ್ದರೂ ಪರೋಕ್ಷ ಪರಿಣಾಮಗಳು ಉಂಟಾಗುತ್ತಿವೆ. ಈ ಹಿನ್ನೆಲೆಯಲ್ಲಿ ವಿವಿಧ ರಾಷ್ಟ್ರಗಳ ಒಕ್ಕೂಟಗಳು ಯುದ್ಧ ನಿಲ್ಲಿಸುವ ನಿಟ್ಟಿಲ್ಲಿ ರಂಗಕ್ಕೆ ಇಳಿದು, ಮತ್ತಷ್ಟು ಜೀವ ಹಾನಿ, ಆರ್ಥಿಕ ನಷ್ಟ ತಪ್ಪಿಸಲು ಮುಂದಾಗಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next