Advertisement
ಫೋನಿನಲ್ಲಿ ಮಾತನಾಡಿಕೊಂಡು ಬರುತ್ತಾ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಈರುಳ್ಳಿ ಗಾಡಿಯನ್ನು ನೋಡಿದವಳಿಗೆ, ಮನೆಯಲ್ಲಿ ಈರುಳ್ಳಿ ಖಾಲಿಯಾಗಿದೆ ಎಂಬುದು ನೆನಪಾಯ್ತು. ತಕ್ಷಣವೇ ಫೋನ್ ಕಟ್ ಮಾಡಿ, ಗಾಡಿಯ ಬದಿ ನಿಂತು ಈರುಳ್ಳಿಯನ್ನು ಆರಿಸಲಾರಂಭಿಸಿದೆ. “ಆರ್ಸಂಗಿಲ್ಲಕ್ಕೋ’ ಎಂಬ ಗಾಡಿಯವನ ಮಾತು ಕೇಳಿ ಕಿರಿಕಿರಿಯಾಯಿತು. “ಕೊಡೋದೇ ಕಡಿಮೆಗೆ ಕೊಡ್ತಿವ್ನಿ … ನೀವು ಆರ್ಸದಾದ್ರೆ ಮೇಲಿಪ್ಪತ್ತು ಜಾಸ್ತಿ ಆಯ್ತದೆ’ ಎಂದವನ ಮಾತು ಮೈ ಉರಿಸಿತು.ಅಲ್ಲಿದ್ದುದು ಸಣ್ಣ ಸಣ್ಣ ಈರುಳ್ಳಿ ಬೇರೆ. “ಎಷ್ಟು ಕೆ.ಜಿಗೆ?’ ಸ್ವರದಲ್ಲಿದ್ದ ನನ್ನ ಅಸಹನೆಯನ್ನು ಅವನು ಲೆಕ್ಕಿಸದೆ, ನೂರು ರೂಪಾಯಿ ಎಂದಾಗ ಕೈಲಿದ್ದ ಈರುಳ್ಳಿ ಗಾಡಿಯೊಳಗೇ ಜಾರಿ ಬಿತ್ತು…
ಈರುಳ್ಳಿ ಇಲ್ದಿದ್ರೂ ನಂಗೆ ಯಥೇತ್ಛ ಬೇರೆ ಅಡುಗೆ ಮಾಡೋಕೆ ಬರುತ್ತೆ ಎಂದು ಕೊಚ್ಚಿಕೊಳ್ಳುತ್ತಿದ್ದ ನನಗೆ, ಮರುದಿನದ ತಿಂಡಿಯ ಬಗ್ಗೆ ಯೋಚಿಸಿದಂತೆಲ್ಲಾ ಈರುಳ್ಳಿ ಹಾಕುವ ತಿಂಡಿಗಳೇ ಕಣ್ಮುಂದೆ ಬರತೊಡಗಿದವು. ಇದೇನೂ ಗೊತ್ತಿಲ್ಲದೇ, ವಾರ ಇಟ್ರೂ ಹಾಳಾಗೋಲ್ಲ ಅಂತ ಆರೇಳು ಈರುಳ್ಳಿ ಹಾಕಿ ಚಟ್ನಿ ಮಾಡಿದ್ದರ ಬಗ್ಗೆ ಕೊರಗು ಕಾಡಿತು. ಬೆಳಗಿನಲ್ಲಿ ಎಣ್ಣೆ ರೊಟ್ಟಿಗೆಂದು ಒಂದೇ ಒಂದು ಈರುಳ್ಳಿಯ ಗೆಡ್ಡೆಯ ಸಿಪ್ಪೆ ಸುಲಿದೆ. ತುಸು ಕಪ್ಪುಕಪ್ಪು ಪುಡಿ ಅಂಟಿಕೊಂಡಿತ್ತು. ಮೊದಲಾಗಿದ್ದರೆ ಅದನ್ನು ನಿರ್ದಾಕ್ಷಿಣ್ಯವಾಗಿ ಕಿತ್ತೂಗೆಯುತ್ತಿದ್ದ ನಾನು, ಈಗ ಅದನ್ನೇ ನೀರಲ್ಲಿ ತಿಕ್ಕಿತಿಕ್ಕಿ ತೊಳೆದು ಸಣ್ಣಗೆ ಹೆಚ್ಚಿಕೊಂಡೆ. ಕೊತ್ತಂಬರಿ ಸೊಪ್ಪು, ಹಸಿಮೆಣಸು, ಕಾಯಿತುರಿ, ಕ್ಯಾರೆಟ್ ಎಲ್ಲವನ್ನೂ ಹಾಕಿದರೂ ಕಡಿಮೆ ಅನ್ನಿಸತೊಡಗಿತು. ಹಳಹಳಸಿಕೊಂಡೇ ರೊಟ್ಟಿ ತಟ್ಟಿದೆ..
Related Articles
Advertisement
ಎಲ್ಲೆಲ್ಲೂ ಅಭಾವಮರುದಿನ ಈರುಳ್ಳಿ ಉಳಿಸಲು ಬೆಳಗ್ಗೆ ಹತ್ತಿರದ ಹೋಟೆಲಿನಲ್ಲಿ ಒಳ್ಳೆಯ ಮಸಾಲೆದೋಸೆ ಮಾಡ್ತಾರೆ ಎಂದು ಮನವೊಲಿಸಿ ಸಂಸಾರದೊಟ್ಟಿಗೆ ಹೋದೆ.. ಮಸಾಲೆ ದೋಸೆಯ ಪಲ್ಯದಲ್ಲಿ ಈರುಳ್ಳಿಯನ್ನೇ ಹಾಕಿಲ್ಲ. ಅಲ್ಲೊಂದು ಇಲ್ಲೊಂದು ಕಾಣುತ್ತಿದೆ ಎಂದು ಮಕ್ಕಳು ಗೊಣಗುತ್ತಿದ್ದಂತೆ ಪಕ್ಕದಲ್ಲಿ ತಿನ್ನುತ್ತಿದ್ದವರು, “ಅದೇ ನೋಡ್ರಿ, ಈರುಳ್ಳಿ ದುಡ್ಡಲ್ಲಿ ದೋಸೆನೇ ತಿನ್ನಬಹುದು ಅಂತ ಇಲ್ಲಿಗೆ ಬಂದ್ವಿ… ಈರುಳ್ಳಿಯೇ ಇಲ್ಲ’ ಎನ್ನುತ್ತಾ, ನಾವು ಅವರಿಗೆ ಸುಪರಿಚಿತರು ಎಂಬಂತೆ ತಮ್ಮ ಅಳಲನ್ನು ಹಂಚಿಕೊಂಡರು. ಸಕ್ಕರೆ ಕಾಯಿಲೆ ಬಂದವರಿಗೆ ಸಿಹಿ ತಿನ್ನೋ ಬಯಕೆ ಬಂದ ಹಾಗೆ ನನಗೆ ಕೂತರೂ ನಿಂತರೂ ಈರುಳ್ಳಿಯ ಯೋಚನೆ ಕಾಡತೊಡಗಿತು. ಸಂಜೆಯ ಮಳೆಗೆ ಮಗಳು ಪಾರ್ಕಿನ ಬಳಿ ಕ್ಯಾರೆಟ್ ತುರಿ, ಯಥೇತ್ಛವಾಗಿ ಈರುಳ್ಳಿ ಹಾಕಿ ಮಾಡುವ ಕ್ಯಾಪ್ಸಿಕಂ ಮಸಾಲಾ ಬೋಂಡಾ ತರಲು ಹೋದವಳು, ಹೋದ ವೇಗದಲ್ಲೇ ಹಿಂತಿರುಗಿದಳು. “ಈರುಳ್ಳಿಯನ್ನ ನೆಪಕ್ಕೆ ಹಾಕ್ತಿದ್ದಾನೆ ಅಲ್ಲಿ… ಪಾನೀಪುರಿಯವನ ಹತ್ರ ಕೂಡಾ ಹಿಡಿ ಈರುಳ್ಳಿ ಇದೆ. ತಿನ್ನೋಕೆ ಇಷ್ಟ ಆಗ್ಲಿಲ್ಲ. ನೀನೇ ಈಗ ಈರುಳ್ಳಿ ಬಜ್ಜಿ ಮಾಡಿಬಿಡು’ ಅಂದಳು. ನಾನು, ಉಳಿದಿದ್ದ ಎರಡೇ ಎರಡು ಈರುಳ್ಳಿ ನೋಡುತ್ತಾ ತಲೆ ಮೇಲೆ ಕೈ ಹೊತ್ತು ಕುಳಿತೆ. -ಮಾಲಿನಿ ಗುರುಪ್ರಸನ್ನ