ನವದೆಹಲಿ: 1991ರ ಪ್ರಾರ್ಥನಾ ಸ್ಥಳಗಳ ಕಾಯ್ದೆಯ ಕೆಲ ನಿಬಂಧನೆಗಳ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಡಿ.12 ರೊಳಗೆ ವಿಸ್ತೃತ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಸಿಜೆಐ ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ಜೆ.ಬಿ.ಪಾರ್ದಿವಾಲಾ ಅವರಿದ್ದ ನ್ಯಾಯ ಪೀಠದ ವಿಚಾರಣೆ ವೇಳೆ, ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿ, “ಕೂಡಲೇ ಇದಕ್ಕೆ ಉತ್ತರಿಸಲಾಗದು. ಸರ್ಕಾರದ ಜತೆಗೆ ಚರ್ಚಿಸಿ, ನಂತರ ಪ್ರತಿಕ್ರಿಯಿಸಲಾಗುವುದು. ಅದಕ್ಕೆ ಸಮಯ ಬೇಕು,’ ಎಂದು ಕೋರಿದರು.
ಅರ್ಜಿ ಸಲ್ಲಿಸಿರುವ ರಾಜ್ಯಸಭೆ ಸದಸ್ಯ, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, “ಈ ಕಾಯಿದೆಯನ್ನೇ ರದ್ದುಪಡಿಸಬೇಕು ಎಂದು ನಾನು ಕೋರುತ್ತಿಲ್ಲ. ಬದಲಾಗಿ ಅಯೋಧ್ಯೆಯ ರಾಮಮಂದಿರದ ವಿವಾದಿತ ಸ್ಥಳದಂತೆ, ಕಾಶಿ ಮತ್ತು ಮಥುರಾ ವಿವಾದಿತ ಸ್ಥಳವನ್ನು ಕಾಯಿದೆಯಿಂದ ಹೊರಗಿಡಲಾಗಿದೆ. ಆದರೆ ಈ ಎರಡೂ ದೇವಸ್ಥಾನಗಳನ್ನು ಕಾಯಿದೆಯ ವ್ಯಾಪ್ತಿಗೆ ತರಬೇಕು,’ ಎಂದು ಮನವಿ ಮಾಡಿದರು.