Advertisement

ಸೀತೆಯ ಸೆರಗು ಇಲ್ಲೇಕೆ ಬಂತು?

10:11 AM Jan 12, 2020 | mahesh |

ರಾಮನು ಅವತಾರ ಪುರುಷನಾದರೂ ಅತಿಮಾನುಷ ಶಕ್ತಿ ತೋರ್ಪಡಿಸದೇ, ಸಾಮಾನ್ಯರಂತಿದ್ದವನು. ಹನುಮನೋ ಕಾಮರೂಪಿ. ಪರ್ವತಾಕಾರವಾಗಿಯೂ ಬೆಳೆಯಬಲ್ಲ, ಮರುಕ್ಷಣ ಅಣುವಿನಾಕಾರವೂ ಆಗಬಲ್ಲ. ರಾಮ- ಲಕ್ಷ್ಮಣರಿಬ್ಬರನ್ನೂ ಭುಜದ ಮೇಲೆ ಕೂರಿಸಿಕೊಂಡು ಹಾರುತ್ತ, ಸುಗ್ರೀವನ ಬಳಿ ಕರೆದೊಯ್ಯುತ್ತಾನೆ. ರಾಮ- ಸುಗ್ರೀವರು ಭೇಟಿಯಾದ ಸ್ಥಳವೇ ಋಷ್ಯಮೂಕ ಪರ್ವತ.

Advertisement

ಇಬ್ಬರೂ ರಾಜ್ಯಭ್ರಷ್ಟರಾಗಿ, ಪತ್ನಿಯಿಂದ ಅಗಲಿದ ಸಮಾನದುಃಖೀಗಳು. ಪರಸ್ಪರರಿಗೆ ಸಹಾಯ ಮಾಡುವುದಾಗಿ ವಚನ ಕೊಡುತ್ತಾರೆ. ಅದರಂತೆ, ರಾಮನು ವಾಲಿಯನ್ನು ಸಂಹರಿಸಿ, ಸುಗ್ರೀವನಿಗೆ ರಾಜ್ಯವನ್ನೂ ಪತ್ನಿ ರುವೆ‌ುಯನ್ನೂ ಮರಳಿಸುತ್ತಾನೆ. ಋಷ್ಯಮೂಕ ಪರ್ವತದಲ್ಲಿಯೇ ಆತನಿಗೆ ಪಟ್ಟಾಭಿಷೇಕವನ್ನೂ ಮಾಡುತ್ತಾನೆ. ಅದರ ನೆನಪಿಗಾಗಿ, ಅದೇ ಸ್ಥಳದಲ್ಲಿ ನಿರ್ಮಾಣವಾದದ್ದೇ ಹಂಪಿಯ ಕೋದಂಡರಾಮನ ಗುಡಿ. ಇಲ್ಲಿ ಹನುಮನ ಸ್ಥಾನದಲ್ಲಿ ಸುಗ್ರೀವನಿದ್ದಾನೆ.

ರಘುನಾಥ ಮಂದಿರ
ರಾಮನೇನೋ ತನ್ನ ವಾಗ್ಧಾನ ಪೂರೈಸಿದ. ಸುಗ್ರೀವ ರಾಜ್ಯ, ಪತ್ನಿ ಮರಳಿ ದೊರೆತ ಖುಷಿಯಲ್ಲಿ ಸುಖಲೋಲುಪನಾಗಿ ಮೈಮರೆತುಬಿಟ್ಟ. ಪತ್ನಿಯನ್ನು ಆದಷ್ಟು ಬೇಗ ಕರೆತರಬೇಕೆಂಬ ಆತುರದಲ್ಲಿದ್ದ ರಾಮ, ಸುಗ್ರೀವನ ಈ ನಡತೆಯಿಂದ ವ್ಯಥೆ, ಚಿಂತೆಗೊಳಗಾದ. ಆಗಲೇ ಚಾತುರ್ಮಾಸವೂ ಆರಂಭವಾಯಿತು. ತನ್ನ ಮುಂದಿನ ಯೋಜನೆಗಳಿಗಾಗಿ ಈಶ್ವರನ ಆಶೀರ್ವಾದ ಬಯಸಿ, ರಾಮನು ಶಿವಪೂಜೆ ವ್ರತ ಕೈಗೊಂಡ. ಜಪ-ತಪಗಳಲ್ಲಿ ಮುಳುಗಿದ. ಈ ಸಂದರ್ಭದ ನೆನಪಿಗಾಗಿ ನಿರ್ಮಾಣವಾದ್ದದೇ ಮೌಲ್ಯವಂತ ರಘುನಾಥ ಮಂದಿರ.

ಇಲ್ಲಿ ರಾಮನ ಕೈಯಲ್ಲಿ ಜಪಮಾಲೆ ಇರುವುದು, ವಿಶೇಷ. ಬಳಿಯಲ್ಲೇ ಅಂದು ಆತ ಪೂಜಿಸಿದ ಶಿವಲಿಂಗವಿದೆ. ಲಕ್ಷ್ಮಣ ಬಾಣ ಹೊಡೆದು, ನೀರು ಚಿಮ್ಮಿಸಿ ಪೂಜೆಗೆ ನೀರು ತಂದಿದ್ದನಂತೆ. ಗುಡಿಯ ಹಿಂದಿರುವ ನೀರನ್ನು ರಾಮ- ಲಕ್ಷ್ಮಣರ ದೋಣಿ ಎಂದು ಕರೆಯುತ್ತಾರೆ. ಆಗಲೇ ರಾಮ ದಶರಥನ ಶ್ರಾದ್ಧ ಮಾಡಿದ್ದನಂತೆ. ಅದರ ಕುರುಹಾಗಿ ಕಲ್ಲಿನ ಪಿಂಡಗಳನ್ನೂ ಇಲ್ಲಿ ನೋಡಬಹುದು.

ಈ ಎರಡು ಗುಡಿಗಳೇನೋ ರಾಮಾಯಣದ ಸಂದರ್ಭ ಅನುಸರಿಸಿ ನಿರ್ಮಾಣಗೊಂಡವು. ಆದರೆ, ನಮ್ಮ ದೊರೆಗಳು ಹಂಪಿಯಲ್ಲಿ ಒಬ್ಬರಿಗಿಂತ ಮಿಗಿಲಾಗಿ ಇನ್ನೊಬ್ಬರು ಗುಡಿ ಕಟ್ಟಿ ತೊಡಗಿದ್ದರಷ್ಟೇ? ಹಾಗಾಗಿ, ಇಲ್ಲಿ ಮತ್ತೆ ಪಟ್ಟಾಭಿರಾಮನೂ ಬಂದ, ಹಜಾರ ರಾಮನೂ ಬಂದ. “ಎತ್ತೆತ್ತ ನೋಡಿದರತ್ತತ್ತ ರಾಮ’ ಎಂಬ ಉಡಿ ಹಂಪಿಗೆ ಸರಿಯಾಗಿ ಅನ್ವಯಿಸುತ್ತದೆ.

Advertisement

ಸೀತೆಯ ಸೆರಗು
ನೆರಿಗೆ, ನೆರಿಗೆಯಂತಿರುವ ಬಂಡೆಯ ದೊಡ್ಡ ಹಾಸುಗಲ್ಲು ಸ್ಥಳೀಯರ ಪ್ರಕಾರ “ಸೀತೆಯ ಸೆರಗು’. ಅರೇ! ಸೀತೆ ಎಲ್ಲಿ ಇಲ್ಲಿಗೆ ಬಂದಿದ್ದಳು ಎಂದು ನೀವು ತರ್ಕಿಸಬಹುದು. ಇಲ್ಲಿನವರ ಪ್ರಕಾರ ಸೀತೆಯ ಅಪಹರಣವಾದದ್ದು ಹಂಪಿಯಿಂದಲೇ.

ತಳ ಸಮುದಾಯದವರು ಹಾಡುವ, “ಕಾಗೆ ಹೊಡೆದವಗೆ ಮಗಳು’ ಎಂಬ ಹಾಡಿನ ಕೆಲ ನುಡಿಗಳನ್ನು ನೋಡಿ,

“ಮುಂದ್ಮುಂದೆ ರಾಮಣ್ಣ ಹಿಂಹಿಂದೆ ಲಕ್ಷ್ಮಣಾ
ನೆಟ್ಟಾ ನಡುವೀಲೊಬ್ಬ ಸೀತಮ್ಮಾನೆ ಣ ಮೂವರೂ
ಹಂಪೀಯ ದಾರೀಯ ಹಿಡಿದಾರಲ್ಲಾ ಣಣ

ನೆಡದೂ ನೆಡದೂ ಸೀತಮ್ಮ ಕಾಲೆರಡೂ ನೊಂದಾವೆ
ಹಂಗೂ ಕಾಲಿಗೆ ಗುರಳಿ ಎದ್ದಾವಲ್ಲಾ ಣಣ
ಅತ್ತಿಗೆ ಸೀತಮ್ಮ ಅನ್ಯಾಯದ ಮಾತೇಕೆ
ಹತ್ತು ಬಾರವ್ವಾ ನನ್ನ ಹೆಗಲ ಮ್ಯಾಲೆ ಣಣ

ಲಕ್ಷ್ಮಣನ ಸಹಾಯವನ್ನು ನಯವಾಗಿ ತಿರಸ್ಕರಿಸಿ, ಸೀತೆ ಕಾಲಿಗೆ ಗುಳ್ಳೆಗಳೆದ್ದಿದ್ದರೂ ನಡೆದೇ ಹಂಪಿಯ ಸೇರಿದಳೆಂದು ಹಾಡು ಮುಗಿಯುತ್ತದೆ.

ಹಜಾರ ರಾಮ

ಹಜಾರರಾಮ ಗುಡಿಯಲ್ಲಿ ವಿಗ್ರಹಗಳಿಲ್ಲದಿದ್ದರೇನು? ಹೊರಭಿತ್ತಿಯ ಮೇಲೆ ದಶರಥನ ಪುತ್ರಕಾಮೇಷ್ಟಿ ಯಾಗದಿಂದ ಮೊದಲ್ಗೊಂಡು ಇಡೀ ರಾಮಾಯಣದ ಪ್ರತಿ ದೃಶ್ಯವೂ ಮೂಡಿಬಂದಿದೆ. ಈ ರಾಮಶಿಲ್ಪಗಳು ಸಾವಿರ ಇದ್ದುದರಿಂದಲೋ ಏನೋ, ಈ ಗುಡಿಗೆ “ಹಜಾರ ರಾಮ’ ಎಂಬ ಹೆಸರು ಬಂದಿದೆ.

– ವಸುಂಧರಾ ದೇಸಾಯಿ

Advertisement

Udayavani is now on Telegram. Click here to join our channel and stay updated with the latest news.

Next