Advertisement
ಉತ್ತರಕನ್ನಡ ಜಿಲ್ಲೆಯ ಕಡಲ ತೀರದ ಗೋಕರ್ಣ ನನ್ನ ತವರೂರು. ಪ್ರಾಕೃತಿಕ ಸೌಂದರ್ಯ, ಹಸಿರ ಸೊಬಗು, ನೀಲ ಕಡಲು ಇವೆಲ್ಲದರ ಒಡಲು ನನ್ನ ತವರೂರು. ಹಸಿರು ಗದ್ದೆಗಳ, ಮಾವು, ತೆಂಗು ಮರಗಳ ಸೊಬಗು ಪ್ರಕೃತಿ ಮಾತೆಯ ಸೆರಗು. ಅರಬ್ಬೀ ಸಮುದ್ರದ ದಡದಲ್ಲಿರುವ ನನ್ನ ತವರುಮನೆಯ ಸುತ್ತ ಕಡಲ ಅಲೆಗಳ ನಿನಾದ, ತಂಪು ಗಾಳಿಯ ಓಲಾಟ. ನನ್ನ ತವರೂರು ಶಿವನ ಪಂಚ ಕ್ಷೇತ್ರಗಳಲ್ಲಿ ಒಂದಾಗಿದ್ದು ಸುಂದರ ಕಡಲತೀರಗಳಿಂದಾಗಿ ಮಾತ್ರವಲ್ಲದೆ ಧಾರ್ಮಿಕವಾಗಿಯೂ ಸಾಕಷ್ಟು ಮಹತ್ವ ಪಡೆದಿದೆ. ಕಳೆದ 20 ವರ್ಷಗಳಿಂದ ಮುಂಬಯಿಯಲ್ಲಿ ವಾಸವಾಗಿರುವ ನನಗೆ ತವರೂರು, ತವರುಮನೆಯ ನೆನಪು ಸದಾ ಹಸಿರು. ಬಿಳಿ ವರ್ಣದ ಮರಳಿನ ರಾಶಿ, ದಟ್ಟ ಹಸಿರಿನ ತೆಂಗಿನ ಮರಗಳ ಸಾಲು, ಹಸಿರು ಗದ್ದೆಗಳ ಪ್ರಾಕೃತಿಕ ಸೌಂದರ್ಯದಡಿಯಲ್ಲಿ ರಮಣೀಯ ಕಡಲ ಅಲೆಗಳ ನಿನಾದದಲ್ಲಿ ಸುಂದರ ನಿಸರ್ಗಧಾಮದ ಸಂಭ್ರಮದ ಸಿರಿಯಲ್ಲಿ ಜನಿಸಿದ ನಾನು, ನನ್ನ ತವರೂರು ಮತ್ತು ತವರುಮನೆ ಮರೆಯುವುದುಂಟೆ?
Related Articles
Advertisement
ಇತ್ತೀಚೆಗೆ ನನಗೆ ಅಮ್ಮನ ನೆನಪು ಬಹಳ ಕಾಡುತ್ತಿದೆ. ಪ್ರಪಂಚದಲ್ಲಿರೋ ಅಮ್ಮಂದಿರಲ್ಲಿ ನನ್ನಮ್ಮ ಬೆಸ್ಟ್ ! ನನ್ನಮ್ಮ ಎಲ್ಲರಿಗಿಂತ ತುಸು ಭಿನ್ನ . ಅಮ್ಮನ ಬಗ್ಗೆ ಯೋಚನೆ ಮಾಡುವಾಗಲೆಲ್ಲ ಅಮ್ಮ ಬೇರೆಯವರಿಗಿಂತ ತುಂಬ ಡಿಫರೆಂಟ್ ಅಂತ ಅನ್ನಿಸದೇ ಇರದು. ನನ್ನ ಜೀವನದಲ್ಲಿ ಅಪ್ಪ-ಅಮ್ಮ ಮಾಡಿದ ಎಲ್ಲವೂ ತುಂಬಾ ವಿಶೇಷವಾಗಿ ಕಾಣುತ್ತಿದೆ. ನನ್ನ ಉಸಿರಿನ ಪ್ರತಿಯೊಂದು ಏರಿಳಿತವನ್ನೂ ಚೆನ್ನಾಗಿ ತಿಳಿದಿರುವವಳು ನನ್ನಮ್ಮ ಮಾತ್ರ.ಅಮ್ಮನಲ್ಲಿ ನಮಗೆ ಸಲುಗೆ ಹೆಚ್ಚು. ಅಂತೆಯೇ ಎಂದಿಗೂ ನನಗೆ ಇಂಥಾ¨ªೊಂದು ವಿಷಯ ಅಮ್ಮನಲ್ಲಿ ಹೇಳ್ಕೊಬಾರದು ಅಂತ ಅನಿಸಲೇ ಇಲ್ಲ. ನನ್ನ ಅಮ್ಮ ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಾರೆ. ನನ್ನಮ್ಮನಿಗೆ ಯಾವಾಗಲೂ ಹಬ್ಬದ ಅಡುಗೆ ತಯಾರಿಸುವುದೆಂದರೆ ತುಂಬಾ ಖುಷಿ. ಅವರು ಮಾಡುವ ಫಿಶ್ ಕರ್ರಿ ಸೂಪರ್ ಆಗಿರುತ್ತದೆ!
ಊರಲ್ಲಿ ಚಿಕ್ಕಂದಿನಿಂದಲೂ ಅಮ್ಮನ ಪ್ರೀತಿಯಲ್ಲೇ ಮುಳುಗಿಹೋದ ನಾನು ಮದುವೆಯಾಗಿ ಊರು ಬಿಟ್ಟು ಮುಂಬಯಿಗೆ ಬಂದ ಮೇಲೆ ಅವಳನ್ನು ಇನ್ನಷ್ಟು ಪ್ರೀತಿಸಬೇಕಿತ್ತು ಅಂತ ಅನ್ನಿಸುತ್ತದೆ. ಚಿಕ್ಕಂದಿನಲ್ಲಿ ಅತ್ತಾಗ ಮುದ್ದಾಡಿ, ಹಾಲುಣಿಸಿ, ತುತ್ತು ತಿನ್ನಲು ಹಠತೊಟ್ಟರೆ ಮುತ್ತು ನೀಡುವ ಅಮ್ಮ. ತಿಳಿನೀಲಿ ಆಕಾಶದಲ್ಲಿ ಕಾಣುತ್ತಿದ್ದ ಚಂದಮಾಮನ ತೋರಿಸಿ, ಬಣ್ಣ ಬಣ್ಣದ ಕಥೆ ಹೇಳಿ ನನ್ನ ಕಿಲ ಕಿಲ ನಗಿಸುತ್ತ ತುತ್ತು ತಿನ್ನಿಸಿ ಸಂತಸವ ಕಾಣುತ್ತಿದ್ದ ನನ್ನಮ್ಮ ತುಂಬಾ ಗ್ರೇಟ್.ಅವಳ ಕೈತುತ್ತು ಹೊಟ್ಟೆಗೆ ತಂಪು. ಅವಳ ಮಾತು ಕಿವಿಗಳಿಗೆ ತುಂಬಾ ಇಂಪು. ಆ ಸುಂದರ ಕ್ಷಣಗಳನ್ನು ನೆನೆದಾಗ ಅಮ್ಮನ ಅಪ್ಪುಗೆಯಲ್ಲಿ ಬೆಚ್ಚನೆ ಮಲಗುವಾಸೆ. ನನಗಾಗಿ ಎಲ್ಲವನ್ನು ಮಾಡಿದ ನನ್ನಮ್ಮ ತ್ಯಾಗಿ, ಸಹನಶೀಲೆ, ತಾಳ್ಮೆಯ ಪ್ರತಿರೂಪ. ಅವಳೊಂದು ಅದ್ಭುತ ಶಕ್ತಿ , ಮಾತೃತ್ವದ ಅಭಿವ್ಯಕ್ತಿ.
ಸೌಮ್ಯಾ ಪ್ರಕಾಶ ತದಡಿಕರ