Advertisement

ಆರ್ಥಿಕ ಮೀಸಲು ತಮಿಳುನಾಡಲ್ಲೇಕೆ ವಿರೋಧ? ಏನಿದು ರಾಜಕೀಯ? ಇಲ್ಲಿದೆ ಮಾಹಿತಿ…

11:35 PM Nov 11, 2022 | Team Udayavani |

ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಇದುವರೆಗೂ ಮೀಸಲಾತಿ ಪಡೆಯದ, ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಶೇ.10ರಷ್ಟು ಮೀಸಲಾತಿ ನೀಡುವ ಕೇಂದ್ರ ಸರಕಾರದ ನಿರ್ಧಾರವನ್ನು ಎತ್ತಿಹಿಡಿದಿದೆ. ಅಲ್ಲದೆ ಇದಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿದ 103ನೇ ವಿಧಿ ತಿದ್ದುಪಡಿಯನ್ನೂ ಸಮರ್ಥಿಸಿದೆ. ಬಿಜೆಪಿ, ಕಾಂಗ್ರೆಸ್‌ ಆದಿಯಾಗಿ ಬಹುತೇಕ ಪಕ್ಷಗಳು ಈ ತೀರ್ಪನ್ನು ಸ್ವಾಗತಿಸಿದ್ದರೆ ತಮಿಳುನಾಡು ಸರಕಾರ ಮಾತ್ರ ವಿರೋಧಿಸಿದೆ. ಹಾಗಿದ್ದರೆ ಏಕೆ ಈ ವಿರೋಧ? ಏನಿದು ರಾಜಕೀಯ? ಇಲ್ಲಿದೆ ಮಾಹಿತಿ.

Advertisement

ಇಡಬ್ಲ್ಯುಎಸ್‌ ಕೋಟಾಗೆ ಯಾರ ವಿರೋಧ?
2019ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ, ಸಂಸತ್‌ನಲ್ಲಿ 103ನೇ ವಿಧಿ ತಿದ್ದುಪಡಿ ಮಸೂದೆ ಅಂಗೀಕರಿಸಿ, ಒಪ್ಪಿಗೆ ಪಡೆದಿತ್ತು. ಇದಕ್ಕೆ ಡಿಎಂಕೆ, ವಿಸಿಕೆ, ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ), ಎಐಎಂಐಎಂ ಮತ್ತು ಯೂನಿಯನ್‌ ಮುಸ್ಲಿಂ ಲೀಗ್‌(ಐಯು ಎಂಎಲ್‌) ಮಾತ್ರ ವಿರೋಧ ವ್ಯಕ್ತಪಡಿಸಿದ್ದವು. ಆದರೂ ಇತರ ವಿಪಕ್ಷಗಳು ಶೇ.10ರಷ್ಟು ಮೀಸಲಾತಿ ಕೊಡುವುದಕ್ಕೆ ವಿರೋಧ ಮಾಡಿ ರಲಿಲ್ಲ. ಆದರೆ ಕೇಂದ್ರ ಸರಕಾರ ತುಂಬಾ ತರಾತುರಿಯಲ್ಲಿ ಇದನ್ನು ಮಂಡನೆ ಮಾಡಿ, ಒಪ್ಪಿಗೆ ಪಡೆದಿದೆ ಎಂದು ಆಕ್ಷೇಪಿಸಿದ್ದವು.

ಸುಪ್ರೀಂನಲ್ಲಿ ಕಾನೂನು ಸಮರ
ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ನೀಡುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಯಿತು. ಸುಮಾರು 40ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಅರ್ಜಿದಾರರ ಪ್ರಕಾರ, ಇದರಿಂದಾಗಿ ದೇಶದ ಮೀಸಲಾತಿಯ ಮೂಲ ಆಶಯಕ್ಕೇ ಧಕ್ಕೆ ಬರುತ್ತದೆ ಎಂದು ವಾದಿಸಿದರು. ಅಲ್ಲದೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಗಳಿಗೆ (ಒಬಿಸಿ) ನೀಡುವ ಮೀಸಲಾತಿಗೆ ಧಕ್ಕೆ ಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಡಿಎಂಕೆ ಸಮಸ್ಯೆ ಏನು?
ಇಡೀ ದೇಶದಲ್ಲೇ ಅತೀ ಹೆಚ್ಚು ಮೀಸಲಾತಿ ಹೊಂದಿರುವ ರಾಜ್ಯ ತಮಿಳುನಾಡು. ಇಲ್ಲಿ ಶೇ.69ರಷ್ಟು ಮೀಸಲಾತಿ ಇದ್ದರೆ ಉಳಿದೆಡೆ ಶೇ.50ರಷ್ಟು ಮೀಸಲಾತಿ ಇದೆ. 1992ರ ಮಂಡಲ್‌ ತೀರ್ಪನ್ನು ಆಧಾರವಾಗಿಟ್ಟುಕೊಂಡು ಈ ಮೀಸಲಾತಿ ನೀಡಲಾಗಿತ್ತು.

ವಿಶೇಷ ವಿಧಾನಸಭೆ ಅಧಿವೇಶನ
ಸುಪ್ರೀಂ ಕೋರ್ಟ್‌ನಲ್ಲಿ ಸೋಲಾದ ಮೇಲೆ ಜಯಲಲಿತಾ ಅವರು ವಿಶೇಷ ವಿಧಾನಸಭೆ ಅಧಿವೇಶನ ಕರೆದರು. ಆಗ ಆಡಳಿತ ಮತ್ತು ವಿಪಕ್ಷಗಳು ಒಂದಾಗಿ ಶೇ.69ರಷ್ಟು ಮೀಸಲಾತಿ ಯನ್ನೇ ಮುಂದುವರಿಸಬೇಕು ಎಂಬ ನಿರ್ಣಯ ಅಂಗೀಕರಿಸಲಾಯಿತು. ಹೊಸದಾಗಿ ಕಾಯ್ದೆ ಯೊಂದನ್ನು ಮಾಡಲಾಯಿತು. ಇದಕ್ಕೆ ರಾಷ್ಟ್ರಪತಿ ಗಳಿಂದ ಒಪ್ಪಿಗೆಯೂ ಸಿಕ್ಕಿತು. ಜಯಲಲಿತಾ ಅವರ ಲಾಬಿಯಿಂದಾಗಿ ಸಂಸತ್‌ನಲ್ಲಿ ಶೆಡ್ನೂಲ್‌ 9ಕ್ಕೆ ತಿದ್ದುಪಡಿ ತಂದು ವಿಶೇಷ ಪರಿಸ್ಥಿತಿಯಲ್ಲಿ ಶೇ.69ರಷ್ಟು ಮೀಸಲಾತಿ ನೀಡಲು ಒಪ್ಪಿಗೆ ಸಿಕ್ಕಿತು. ಅಲ್ಲದೆ ಇದನ್ನು ಕೋರ್ಟ್‌ನಲ್ಲಿ ಯಾರೂ ಪ್ರಶ್ನಿಸದಂತೆ ನೋಡಿಕೊಳ್ಳಲಾಯಿತು.

Advertisement

ಮತ್ತೆ ಕಾನೂನು ಹೋರಾಟ?
ಈಗ ಸುಪ್ರೀಂ ಕೋರ್ಟ್‌ನ ತೀರ್ಪಿನ ಅನಂತರ ತಮಿಳು ನಾಡಿನಲ್ಲಿ ರಾಜಕೀಯವಾಗಿ ತೀವ್ರ ಚಟುವಟಿಕೆಗಳು ಆರಂಭವಾಗಿವೆ. ಈ ಹಿಂದೆಯೇ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲು ನೀಡಲು ಸಾಧ್ಯವಿಲ್ಲ ಎಂದು ತಮಿಳುನಾಡಿನ ಡಿಎಂಕೆ ಸರಕಾರ ಹೇಳಿತ್ತು. ಈಗ ಅದೇ ಮಾತನ್ನು ಪುನರುತ್ಛರಿಸಿರುವ ಸಿಎಂ ಸ್ಟಾಲಿನ್‌ ಮತ್ತೆ ಸುಪ್ರೀಂ ಕೋರ್ಟ್‌ಗೇರುವ ಬಗ್ಗೆ ಮಾತ ನಾಡಿದ್ದಾರೆ. ಈ ಬಗ್ಗೆ ಕಾನೂನು ಸಲಹೆಯನ್ನೂ ಕೇಳಿದ್ದಾರೆ. ಜತೆಗೆ ಸದ್ಯದಲ್ಲೇ ಸರ್ವಪಕ್ಷ ಸಭೆ ನಡೆಸುವುದಾಗಿ ಹೇಳಿದ್ದಾರೆ. ಹೀಗಾಗಿ ಈ ವಿಚಾರ ಮತ್ತೆ ಸುಪ್ರೀಂ ಕೋರ್ಟ್‌ ಬಾಗಿಲು ಬಡಿಯುವ ಎಲ್ಲ ಸಾಧ್ಯತೆಗಳಿವೆ.

ಶೇ.69 ಮೀಸಲಾತಿ ಉಳಿಸಿಕೊಂಡಿದ್ದು ಹೇಗೆ?
1992ರಲ್ಲಿ ಇಂದಿರಾ ಸಾಹಿ° ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿತ್ತು. ಇದರ ಪ್ರಕಾರ ದೇಶದ ಯಾವುದೇ ರಾಜ್ಯಗಳು ಶೇ.50ಕ್ಕಿಂತ ಹೆಚ್ಚು ಮೀಸಲಾತಿ ಮೀರುವಂತಿಲ್ಲ ಎಂದು ಸೂಚಿಸಿತು. ಆಗ ತಮಿಳುನಾಡಿನಲ್ಲಿ ಆಡಳಿತದಲ್ಲಿದ್ದ ಎಐಎಡಿಎಂಕೆ ಸರಕಾರ ಮದ್ರಾಸ್‌ ಹೈಕೋರ್ಟ್‌ಗೆ ಹೋಯಿತು. ಆ ವರ್ಷದ ಶೈಕ್ಷಣಿಕ ವರ್ಷದಲ್ಲಿ ಶೇ.69ರಷ್ಟು ಮೀಸಲಾತಿ ಮುಂದುವರಿಸುವಂತೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಮದ್ರಾಸ್‌ ಹೈಕೋರ್ಟ್‌ ಒಪ್ಪಿಗೆ ನೀಡಿತು. ಆದರೆ ಮುಂದಿನ ವರ್ಷದಿಂದ ಶೇ.50ರಷ್ಟು ಮೀಸಲಾತಿ ನಿಯಮವನ್ನೇ ಅನುಸರಿಸಬೇಕು ಎಂದು ಸೂಚಿಸಿತು. ಇದಾದ ಮೇಲೆ ಜಯಲಲಿತಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸ್ಪೆಷಲ್‌ ಲೀವ್‌ ಪೆಟಿಶನ್‌ ಅನ್ನು ಸಲ್ಲಿಸಿ, ಶೇ.69ರಷ್ಟು ಮುಂದುವರಿಸಬೇಕು ಎಂದು ಮನವಿ ಮಾಡಿದರು. ಆದರೆ ಶೇ.50ರಷ್ಟು ಮೀಸಲಾತಿ ನಿಯಮವನ್ನೇ ಪಾಲಿಸಬೇಕು ಎಂದು ಖಡಕ್ಕಾಗಿ ಸೂಚಿಸಿತು.

ತಮಿಳುನಾಡಿನ ಮೀಸಲು ಇತಿಹಾಸ
ತಮಿಳುನಾಡಿನಲ್ಲಿ ಯಾವುದೇ ಸರಕಾರ ಬಂದರೂ ಮೀಸಲಾತಿ ವಿಚಾರದಲ್ಲಿ ಮಾತ್ರ ಒಗ್ಗಟ್ಟು ಪ್ರದರ್ಶಿಸುತ್ತವೆ. ಅಲ್ಲದೆ 1920ರಿಂದಲೂ ಈ ಮೀಸಲಾತಿ ವಿಚಾರದಲ್ಲಿ ತಮಿಳುನಾಡಿನಲ್ಲಿ ರಾಜಕೀಯ ಮಾಡಿಕೊಂಡು ಬರಲಾಗುತ್ತಿದೆ.
1921: ರಾಜಾ ಪಾನಗಲ್‌ ನೇತೃತ್ವದ ಜಸ್ಟೀಸ್‌ ಪಾರ್ಟಿ ಸರಕಾರದ ಅವಧಿಯಲ್ಲಿ ಮೊದಲ ಬಾರಿಗೆ ಮೀಸಲಾತಿಯನ್ನು ಜಾರಿಗೊಳಿಸಲಾಯಿತು. ಆಗ ಕಮ್ಯೂನಲ್‌ ಗವರ್ನಮೆಂಟ್‌ ಆರ್ಡರ್‌ ಮೂಲಕ ಇದನ್ನು ನೀಡಲಾಯಿತು. ಆಗ ಬ್ರಾಹ್ಮಣೇತರರಿಗೆ ಶೇ.44ರಷ್ಟು ಮೀಸಲಾತಿ ನೀಡಲಾಯಿತು. ಈ ಮೂಲಕ ಸರಕಾರಿ ಹುದ್ದೆಗಳಲ್ಲಿ ಬ್ರಾಹ್ಮಣರು ಸಾಧಿಸಿದ್ದ ಹಿಡಿತವನ್ನು ತಪ್ಪಿಸಿದ್ದರು.
1969: ಡಿಎಂಕೆ ನಾಯಕ ಎಂ. ಕರುಣಾನಿಧಿ ಅವರು ಎ.ಎನ್‌.ಸತ್ಯನಾಥನ್‌ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿದರು.
1970: ಸತ್ಯನಾಥನ್‌ ಆಯೋಗದ ವರದಿ ಆಧಾರದ ಮೇಲೆ ಕರುಣಾನಿಧಿಯವರು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇ.25ರಿಂದ 31ಕ್ಕೆ, ಎಸ್‌ಸಿ ಮತ್ತು ಎಸ್ಟಿ ಮೀಸಲಾತಿಯನ್ನು ಶೇ.16ರಿಂದ ಶೇ.18ಕ್ಕೆ ಏರಿಕೆ ಮಾಡಿದರು. ಈ ಮೂಲಕ ರಾಜ್ಯದ ಒಟ್ಟಾರೆ ಮೀಸಲಾತಿ ಶೇ.49ಕ್ಕೆ ಏರಿಕೆಯಾಯಿತು.
1980: ಎಐಎಡಿಎಂಕೆಯ ಎಂ.ಜಿ. ರಾಮಚಂದ್ರನ್‌ ಅವಧಿಯಲ್ಲಿ ಮೀಸಲಾತಿ ಪ್ರಮಾಣವನ್ನು ಮತ್ತಷ್ಟು ಏರಿಕೆ ಮಾಡಲಾಯಿತು. ಆಗ ಹಿಂದುಳಿದ ವರ್ಗಗಳ ಮೀಸಲಾತಿಯನ್ನೇ ಶೇ.31ರಿಂದ ಶೇ.50ಕ್ಕೆ ಏರಿಕೆ ಮಾಡಲಾಯಿತು. ಹೀಗಾಗಿ ಇಲ್ಲಿ ಒಟ್ಟಾರೆ ಮೀಸಲಾತಿ ಶೇ.68ಕ್ಕೆ ಏರಿಕೆಯಾಯಿತು.
1989: ಡಿಎಂಕೆ ಮತ್ತೆ ಅಧಿಕಾರಕ್ಕೆ ಬಂದಿತು. ಆಗ ಮುಖ್ಯಮಂತ್ರಿ ಕರುಣಾನಿಧಿ ಅವರು ಮತ್ತೆ ಮೀಸಲಾತಿ ವ್ಯವಸ್ಥೆಯಲ್ಲಿ ಬದಲಾವಣೆ ತಂದರು. ಅಂದರೆ ಹಿಂದುಳಿದ ವರ್ಗಗಳಿಗೆ ನೀಡಿದ್ದ ಮೀಸಲಾತಿಯನ್ನೇ ವಿಭಾಗಿಸಿದರು. ಇಲ್ಲಿ ಅತಿಯಾದ ಹಿಂದುಳಿದ ವರ್ಗ(ಎಂಬಿಸಿ)ವನ್ನು ಸೃಷ್ಟಿಸಿ, ಇದರಲ್ಲಿ ವಣ್ಣಿಯಾರ್ಸ್‌ ಅನ್ನು ಸೇರಿಸಲಾಯಿತು. ಇವರಿಗೆ ಶೇ.20ರಷ್ಟು ಮೀಸಲಾತಿಯನ್ನು ನಿಗದಿ ಪಡಿಸಲಾಯಿತು. ಉಳಿದ ಶೇ.30ರಷ್ಟನ್ನು ಇತರ ಹಿಂದುಳಿದವರಿಗೆ ಹಂಚಿಕೆ ಮಾಡಲಾಯಿತು.
1990: ಮದ್ರಾಸ್‌ ಹೈಕೋರ್ಟ್‌ನ ತೀರ್ಪಿನಂತೆ ಕರುಣಾನಿಧಿಯವರು ಎಸ್‌ಸಿ-ಎಸ್ಟಿಯವರಿಗೆ ನೀಡಿದ್ದ ಮೀಸಲಾತಿಯನ್ನು ವಿಭಾಗಿಸಿದರು. ಎಸ್‌ಟಿ ವರ್ಗದವರಿಗೆ ಶೇ.1ರಷ್ಟು ಮೀಸಲಾತಿ ನೀಡಲಾಯಿತು. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆ ಮೀಸಲಾತಿ ಶೇ.69ಕ್ಕೆ ಬಂದು ನಿಂತಿತು. ಈಗಲೂ ಇಷ್ಟೇ ಮೀಸಲಾತಿ ಚಾಲ್ತಿಯಲ್ಲಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next