Advertisement

ಉದ್ದೀಪನ ಸೇವಿಸಿಲ್ಲ ಓಕೆ, ಸಿರಿಂಜ್‌ ಬಳಸಿದ್ದು ಯಾಕೆ?

07:20 AM Apr 03, 2018 | Team Udayavani |

ಗೋಲ್ಡ್‌ಕೋಸ್ಟ್‌: 21ನೇ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯದ ಗೋಲ್ಡ್‌ಕೋಸ್ಟ್‌ಗೆ ತೆರಳಿರುವ ಭಾರತ ಆರಂಭದಲ್ಲೇ ಸಂಕಟಕ್ಕೆ ಸಿಲುಕಿದೆ. 

Advertisement

ಭಾರತದ ಪಾಳೆಯದಲ್ಲಿ ಒಂದೆರಡು ದಿನಗಳ ಹಿಂದೆ ಪತ್ತೆಯಾಗಿರುವ ಸಿರಿಂಜ್‌ಗಳ ಬಗ್ಗೆ ತನಿಖೆ ನಡೆಯುತ್ತಿದೆ. ಇದನ್ನು ಭಾರತದ ಬಾಕ್ಸರ್‌ಗಳು ಉಪಯೋಗಿಸಿರುವ ಸಾಧ್ಯತೆಯಿದ್ದು, ಒಂದು ವೇಳೆ ಸಾಬೀತಾದರೆ ಕಠಿನ ಶಿಕ್ಷೆಗೆ ಒಳಗಾಗುವ ಸಾಧ್ಯತೆಯಿದೆ. ನೆಮ್ಮದಿಯ ಸಂಗತಿಯೆಂದರೆ ಭಾರತೀಯರು ಉದ್ದೀಪನ ಸೇವಿಸಿಲ್ಲ ಎನ್ನುವುದು ಬಹುತೇಕ ಖಾತ್ರಿಯಾಗಿದೆ.

ಸಿರಿಂಜ್‌ಗಳನ್ನು ಉಪಯೋಗಿಸಬಾರದು ಎಂದು ಕೂಟದ ಸಂಘಟಕರು ಮೊದಲೇ ನಿರ್ಬಂಧಿಸಿದ್ದರು. ಒಂದು ವೇಳೆ ಉಪಯೋಗಿಸಲೇಬೇಕಾದರೆ ಅದಕ್ಕೆ ಪೂರ್ವಾನುಮತಿ ಪಡೆಯಬೇಕು. ಜೀವಸತ್ವಗಳನ್ನು ಇಂಜೆಕ್ಷನ್‌ ಮೂಲಕವೇ ತೆಗೆದುಕೊಳ್ಳಬೇಕಾದರೆ ಅಥವಾ ಔಷಧಗಳನ್ನು ಅನಿವಾರ್ಯವಾಗಿ ಸಿರಿಂಜ್‌ ಮೂಲಕವೇ ತೆಗೆದುಕೊಳ್ಳಬೇಕಾದರೆ ವೈದ್ಯಾಧಿಕಾರಿ ಸಮ್ಮುಖದಲ್ಲೇ ಅದನ್ನು ಮಾಡಬೇಕಾಗುತ್ತದೆ. ಈ ಎಲ್ಲ ನಿಯಮಗಳು ಪಾಲನೆಯಾಗಿವೆಯೇ ಎಂದು ಪರಿಶೀಲಿಸಿ ಪಾರದರ್ಶಕ ನಿರ್ಧಾರ ತೆಗೆದುಕೊಳ್ಳುತ್ತೇವೆಂದು ಕಾಮನ್‌ವೆಲ್ತ್‌ ಗೇಮ್ಸ್‌ ಒಕ್ಕೂಟದ ಸಿಇಒ ತಿಳಿಸಿದ್ದಾರೆ.

ಸಿಕ್ಕಿರುವ ಸಿರಿಂಜ್‌ ಭಾರತದ್ದೇ ಆಗಿರಬೇಕೆಂದಿಲ್ಲ. ಸಮೀಪದಲ್ಲೇ ಇರುವ ಅನ್ಯದೇಶಗಳ ಸ್ಪರ್ಧಿಗಳದ್ದೂ ಆಗಿರಬಹುದು. ಅಲ್ಲದೇ ಅದನ್ನು ಉದ್ದೀಪನ ಸೇವನೆಗೆ ಬಳಸಿರುವುದಕ್ಕೆ ಖಾತ್ರಿಯಿಲ್ಲ. ವಿಟಮಿನ್‌ಗಳಿಗೂ ಬಳಸಿರಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಈ ಬಗ್ಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸಂಘಟಕರು ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರೇ ಹೊರತು ನಿರ್ದಿಷ್ಟವಾಗಿ ಭಾರತೀಯ ತಂಡದ ಹೆಸರು ಹೇಳಲಿಲ್ಲ. ಪ್ರಕರಣದ ತನಿಖೆಯ ಫ‌ಲಿತಾಂಶ ಏನಾಗುತ್ತಿದೆ ಎಂದು ಈಗ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next