ಇನ್ನೇನು ಸೂರ್ಯ ತನ್ನ ಮನೆಗೆ ಮರಳುವಾಗ, ಹಕ್ಕಿಗಳು ಗೂಡುಗಳನ್ನು ಸೇರುವಾಗ, ಆಕಾಶದಲ್ಲಿ ಚಂದ್ರ ಬರೋವಾಗ, ನೀಲಾಕಾಶ ಮರೆಯಾಗಿ ಸಣ್ಣಗೆ ಕತ್ತಲು ಆವರಿಸಲು ತವಕಿಸುವಾಗ, ನಾನು ನಿನ್ನ ಕೈ ಹಿಡಿದುಕೊಂಡು ದಾರಿಯುದ್ದಕ್ಕೂ ನಡೆಯುತ್ತಿರಬೇಕು. ಸುತ್ತುವರಿದ ಎಲ್ಲ ಜಂಜಡಗಳನ್ನೂ ಕಿತ್ತೆಸೆದು ನಾನು ನಾನಾಗಿರಬೇಕೆಂಬ ತವಕ. ಹಕ್ಕಿಗಳ ಚಿಲಿಪಿಲಿಯೊಂದಿಗೆ ಹಾಡದೇ ಉಳಿದ ಹಾಡನ್ನು ದನಿಗೂಡಿಸುವ ಚೈತನ್ಯ ನನ್ನದು. ಮುಂಜಾನೆಯೇ ಅರಳಿದರೂ, ಸಂಜೆಯಾದರೂ ಬಾಡದ ಹೂವಿನ ರೀತಿಯ ಪ್ರೀತಿ ಅದು. ಸೂರ್ಯ ಮುಳುಗುತ್ತಿದ್ದಂತೆ ತಮ್ಮ ಅಸ್ತಿತ್ವವನ್ನು ತೋರಲು ಹಾತೊರೆಯುವ ನಕ್ಷತ್ರಗಳಂತೆ ನನ್ನ ಮನದ ಭಾವ. ಇಂಥದ್ದೇ ಎಲ್ಲ ಲಕ್ಷಣಗಳನ್ನು ಹೊಂದಿದ ಒಂದು ಸಂಜೆ, ನಿನ್ನ ಜೊತೆ ಮನಸೋ ಇಚ್ಛೆ ಸುತ್ತಾಡಬೇಕೆಂಬ ಆಸೆಯಾಗಿದೆ ಕಣೋ.
ಆ ಸಂಜೆ ನಾವಿಬ್ಬರೂ ಹಾಗೆ ನಡೆಯುತ್ತಿರುವಾಗ ಮೌನಕ್ಕೆ ಜಾಸ್ತಿ ಪ್ರಾಶಸ್ತ್ಯ. ಸಾಮಾನ್ಯ ಪ್ರೇಮಿಗಳಂತೆ ವಟಗುಡದೇ ಹಾಗೇ ಇದ್ದು ಬಿಡುವಾಸೆ. ವರ್ತಮಾನ, ಭವಿಷ್ಯ ಅಂತೆಲ್ಲ ಹೇಳಿ ಏನೇನೋ ವಿಚಾರಗಳನ್ನು ತುಂಬಿಕೊಂಡು ಮುಂದೆ ಬರಲಿರುವ ದಿನಗಳ ಬಗ್ಗೆ ಕಿಂಚಿತ್ತೂ ಯೋಚಿಸದೇ, ಈಗ ಇದ್ದದ್ದನ್ನು ಸವಿಯುವ ಪ್ರಜ್ಞೆ ನಮ್ಮಿಬ್ಬರದು.
ಬೀಸುವ ತಂಗಾಳಿಯ ದಿನದ ಕೆಲಸ ಮಾಡಿ ಸುಸ್ತಾಗಿ ತನ್ನ ಮನೆಗೆ ಹೋಗುವ ಮುಂಚೆ, ಹೂವುಗಳ ಸುವಾಸನೆಯನ್ನು ಎಲ್ಲೆಲ್ಲೂ ಬೀರಿ ಅದು ನಮಗೂ ತಾಕಿ ಸುಮಧುರ ಕ್ಷಣವನ್ನು ಆಸ್ವಾದಿಸುವಂತೆ ಪ್ರೇರೇಪಿಸುತ್ತಿದೆ ಆ ಸಂಜೆ. ಈ ಗಳಿಗೆಯನ್ನು ಮರೆಯಲಾರದೆ ನೆನಪಿನಂಗಳಲ್ಲಿ ಅಚ್ಚಾಗಿಸಬೇಕು. ತುಸು ಹೊತ್ತು ಈ ಎಲ್ಲ ವಿದ್ಯಮಾನಗಳಿಗೆ ಸಾಕ್ಷಿಯಾಗಿ ನಮ್ಮನ್ನೇ ನಾವು ಮರೆಯಬೇಕು. ಕಡೇ ಪಕ್ಷ ಆ ಸಂಜೆ ನಾವಿಬ್ಬರೂ ಮೌನದೊಂದಿಗೆ ಮುಂದೆ ಸಾಗಲು ಪ್ರಯತ್ನಿಸಬಾರದೇಕೆ ?
ಮಾಲಾ ಮ ಅಕ್ಕಿಶೆಟ್ಟಿ.