ವಿಧಾನಸಭೆ : ಹರ್ಷ ಕೊಲೆ ಸಂದರ್ಭದಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದಾಗಲೂ ಶಿವಮೊಗ್ಗದಲ್ಲಿ ಶವ ಮೆರವಣಿಗೆ ನಡೆಸಿದ್ದ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಏಕೆ ಬಂಧಿಸಿಲ್ಲ ? ಆಳಂದದಲ್ಲಿ ಮೆರವಣಿಗೆ ನಡೆಸಿದ ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಏಕೆ ಕ್ರಮ ತೆಗೆದುಕೊಂಡಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕಾನೂನು – ಸುವ್ಯವಸ್ಥೆ ಬಗ್ಗೆ ಸದನದಲ್ಲಿ ಮಾತನಾಡಿದ ಅವರು, ” ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇರುತ್ತದೆ ” ಎಂದು ಮುಖ್ಯಮಂತ್ರಿ ಗಳೇ ಹೇಳಿಕೆ ನೀಡಿದರೆ ಪೊಲೀಸರ ನೈತಿಕ ಸ್ಥೈರ್ಯ ಏನಾಗಬೇಡ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಹಿಂದೂ ಕಾರ್ಯಕರ್ತರ ಕೊಲೆಯಾದರೆ 25 ಲಕ್ಷ ಪರಿಹಾರ ನೀಡುತ್ತೀರಿ. ಆದರೆ ನರಗುಂದದ ಸಮೀರ್, ಬೆಳ್ತಂಗಡಿಯ ದಿನೇಶ್, ಹಿಮಪಾತದಲ್ಲಿ ಮೃತಪಟ್ಟ ಮಡಿಕೇರಿಯ ಯೋಧ ಅಲ್ತಾಫ್ ಅಹ್ಮದ್ ಅವರಿಗೆ ಸರಕಾರ 25 ಲಕ್ಷ ಪರಿಹಾರ ನೀಡಿಲ್ಲ. ಸತ್ತವರು ಯಾರು ಎಂಬುದಕ್ಕಿಂತ ಕೊಂದವರು ಯಾರು ? ಎಂಬುದರ ಮೇಲೆ ಸರಕಾರದ ಪರಿಹಾರ ನೀತಿ ನಿರ್ಧಾರವಾಗುತ್ತದೆ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಹರ್ಷ ಕೊಲೆಯಾದಾಗ ಈಶ್ವರಪ್ಪ ನವರೇ ಶಿವಮೊಗ್ಗದಲ್ಲಿ ಮೆರವಣಿಗೆ ನಡೆಸಿದರು. ಸಚಿವರಾಗಿ ಈ ರೀತಿ ಮಾಡುವುದು ಎಷ್ಟು ಸರಿ ? ಈ ಬಗ್ಗೆ ನಾನೇ ಡಿಜಿಪಿಗೆ ಕರೆ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದೆ. ಕಾನೂನು ಸುವ್ಯವಸ್ಥೆ ಕಾಪಾಡಲಾಗದ ನೀವು ಅಧಿಕಾರದಲ್ಲಿ ಮುಂದುವರಿಯಬೇಕೋ ಬೇಡವೋ ಎಂಬುದನ್ನು ನಿರ್ಧರಿಸಿ ಎಂದು ಹೇಳಿದರು.