ಮುಂಬಯಿ : ಪದ್ಮಶ್ರೀ ಹಾಗೂ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕ್ರಿಕೆಟ್ ಕೋಚ್ ದಿವಂಗತ ರಮಾಕಾಂತ ಆಚ್ರೇಕರ್ ಅವರ ಅಂತ್ಯ ಕ್ರಿಯೆಯನ್ನು ಏಕೆ ಸರಕಾರಿ ಗೌರವಗಳೊಂದಿಗೆ ನಡೆಸಲಾಗಿಲ್ಲ ಎಂದು ಶಿವ ಸೇನೆ ರಾಜ್ಯ ಸರಕಾರವನ್ನು ಪ್ರಶ್ನಿಸಿದ್ದಾರೆ.
ಆಚ್ರೇಕರ್ ಅಂತ್ಯಕ್ರಿಯೆಗೆ ಸರಕಾರಿ ಗೌರವ ದೊರಕದಿರುವ ಕಾರಣ ಅವರ ಶಿಷ್ಯರಾಗಿರುವ ವಿಶ್ವ ಕ್ರಿಕೆಟ್ ರಂಗದ ದಂತ ಕಥೆ ಸಚಿನ್ ತೆಂಡುಲ್ಕರ್ ಅವರು ಇನ್ನು ಮುಂದೆ ಎಲ್ಲ ಸರಕಾರಿ ಕಾರ್ಯಕ್ರಮಗಳನ್ನು ಬಹಿಷ್ಕರಿಸಬೇಕು ಎಂದು ಶಿವ ಸೇನೆಯ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಕ್ರಿಕೆಟ್ ಗುರು ಆಚ್ರೇಕರ್ ವಿಷಯದಲ್ಲಿ ರಾಜ್ಯ ಸರಕಾರ ಸಂಪೂರ್ಣ ನಿರ್ಲಕ್ಷ್ಯ ತೋರಿದ್ದು ಅದು ಅಕ್ಷಮ್ಯವಾಗಿದೆ ಎಂದು ರಾವತ್ ತಮ್ಮ ಟ್ವೀಟ್ ನಲ್ಲಿ ಬರೆದಿದ್ದಾರೆ.
87ರ ಹರೆಯದ ಆಚ್ರೇಕರ್ ಅವರು ವಯೋಸಂಬಂಧಿ ತೊಂದರೆಗಳಿಂದ ಎರಡು ದಿನಗಳ ಹಿಂದೆ ನಿಧನ ಹೊಂದಿದ್ದರು.
ಇದೇ ವೇಳೆ ಮಹಾರಾಷ್ಟ್ರ ಸರಕಾರದಲ್ಲಿ ಹಿರಿಯ ಸಚಿವರಾಗಿರುವ ಪ್ರಕಾಶ್ ಮೆಹ್ತಾ ಅವರು, ಆಚ್ರೇಕರ್ ಗೆ ಸರಕಾರಿ ಗೌರವ ಸಿಗದಿರಲು ಸರಕಾರಿ ಮಟ್ಟದಲ್ಲಿನ ಸಂಪರ್ಕ-ಸಂವಹನದ ಕೊರತೆಯೇ ಕಾರಣ; ಇದು ನಿಜಕ್ಕೂ ದುರದೃಷ್ಟಕರ ಎಂದು ದೂರಿದ್ದಾರೆ.
ಆಚ್ರೇಕರ್ ಅಂತ್ಯಕ್ರಿಯೆಯನ್ನು ಸರಕಾರಿ ಗೌರವಗಳೊಂದಿಗೆ ನಡೆಸದಿರುವ ರಾಜ್ಯ ಸರಕಾರದ ವಿರುದ್ಧ ಕಿಡಿ ಕಾರಿರುವ ಶಿವ ಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ, ಸರಕಾರದ ಹೊಣೆಗಾರಿಕೆಯಲ್ಲಿ ಇದೊಂದು ಘನ-ಗಂಭೀರ ಲೋಪವಾಗಿದ್ದು ಇದರಿಂದ ಎಲ್ಲರಿಗೂ ನೋವಾಗಿದೆ ಎಂದು ಹೇಳಿದೆ.