Advertisement

ಬಿಜೆಪಿಗೆ ಜೆಡಿಯು ಬಿಟ್ಟು ಬೇರೆ ಉತ್ತಮ ಆಯ್ಕೆಯೇ ಇಲ್ಲ; ಜೆಡಿಯುಗೂ ಬಿಜೆಪಿಯೇ ಎಲ್ಲ !

07:09 PM Oct 13, 2020 | Karthik A |

ಮಣಿಪಾಲ: ಉತ್ತರ ಭಾರತದ ರಾಜಕೀಯದಲ್ಲಿ ಬಿಹಾರ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಪ್ರತಿ ಚುನಾವಣೆಯಲ್ಲೂ ಸದಾ ಕುತೂಹಲ ಮತ್ತು ರೋಚಕತೆಯನ್ನು ಹೊಂದಿರುವ ಅಲ್ಲಿನ ರಾಜಕೀಯಕ್ಕೆ ತನ್ನದೇ ಆದ ಇತಿಹಾಸ ಇದೆ. ಅಲ್ಲಿ ಬಿಜೆಪಿ ಮತ್ತು ಜೆಡಿಯು ಒಂದನೊಂದು ಬಿಟ್ಟು ಚುನಾವಣೆ ಎದುರಿಸಿದರೆ ವಿಪಕ್ಷಗಳಿಗೆ ಲಾಭ ಹೆಚ್ಚು. ಹೀಗಾಗಿ ಪ್ರತ್ಯೇಕ ಚುನಾವಣೆ ಎದುರಿಸುವುದು ಉಭಯ ಪಕ್ಷಗಳಿಗೆ ಸೋಲಿನ ಸಾಧ್ಯತೆಯನ್ನು ತೋರಿಸುತ್ತದೆ.

Advertisement

ಆದರೆ ಇವರಿಬ್ಬರ ಅನಿವಾರ್ಯತೆ ಜತೆಯಾಗಿದ್ದ ಸಂದರ್ಭ ಅರ್ಥವಾಗುವುದಿಲ್ಲ. ಅನೇಕ ಬಾರಿ ಏಕಾಂಗಿಯಾಗಿ ಚುನಾವಣೆ ಎದುರಿಸಿದ ಬಳಿಕ ಉಭಯ ಪಕ್ಷಗಳಿಗೆ ತಮ್ಮ ತಪ್ಪಿನ ಅರಿವಾಗಿತ್ತು. ಅದಕ್ಕಾಗಿಯೇ ಈ ಎರಡು ಪಕ್ಷಗಳು ಯಾವುದೇ ಸಂದರ್ಭದಲ್ಲೂ ಪರಸ್ಪರ ಬೇರೆ ಬೇರೆಯಾಗಲು ಬಯಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸೀಟು ಹಂಚಿಕೆ ಬಗ್ಗೆ ಸಾಕಷ್ಟು ತಿಕ್ಕಾಟಗಳು ನಡೆದಿದ್ದವು. ಈ ಸಂದರ್ಭ ಇದೇ ಪರಿಸ್ಥಿತಿ ಮುಂದುವರೆದರೆ ಮೈತ್ರಿ ಕಷ್ಟವಾದೀತು ಎಂದು ಎರಡೂ ಪಕ್ಷಗಳ ನಾಯಕರು ಹೇಳಿದ್ದೂ ಇದೆ. ಆದರೆ ಅನಂತರ ಪರಿಸ್ಥಿತಿಗಳು ಬದಲಾದವು.

ಬಿಜೆಪಿಗೆ ಜೆಡಿಯುನ ಸಹಾಯ ಇಲ್ಲದೇ ಬಿಹಾರ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ವಾಸ್ತವ. ಇದನ್ನು ಎರಡೂ ಪಕ್ಷಗಳ ದೊಡ್ಡ ಮಟ್ಟದ ನಾಯಕರು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದರು. ಹಾಗೆ ನೋಡುವುದಾದರೆ ಅವರ ಈ ತೀರ್ಮಾನಕ್ಕೆ ಕಾರಣವೂ ಇದೆ.

2015ರಲ್ಲಿ ಬಿಜೆಪಿಗೆ ಆಘಾತ
ಮೊದಲನೆಯದಾಗಿ ನಿತೀಶ್ ಕುಮಾರ್ ಬಿಜೆಪಿಗೆ ಯಾಕೆ ಇಷ್ಟವಾಗುತ್ತಾರೆ ಎಂಬುದಕ್ಕೆ ಕಳೆದ ವಿಧಾನಸಭಾ ಚುನಾವಣೆಯ ಸಮೀಕರಣವನ್ನು ಉದಾಹರಣೆಯಾಗಿ ನೋಡಬಹುದು. ಬಿಜೆಪಿ, ಎಲ್‌ಜೆಪಿ, ಆರ್‌ಎಲ್‌ಎಸ್‌ಪಿ ಒಟ್ಟಾಗಿ ಚುನಾವಣೆ ಎದುರಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಬಿರುಸಿನ ಚುನಾವಣಾ ಪ್ರಚಾರವನ್ನು ಮಾಡಿದ ಹೊರತಾಗಿಯೂ ಬಿಜೆಪಿಗೆ ಕೇವಲ 53 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು.

2015ರಲ್ಲಿ ಬಿಜೆಪಿಯು ಶೇ. 24.4ರ ಪ್ರಮಾಣದಲ್ಲಿ ಮತಗಳನ್ನು ಗಳಿಸಿತ್ತು. ಇಲ್ಲಿ ನಿತೀಶ್‌ ಅವರ ಮತಗಳು ಬಿಜೆಪಿಗೆ ಪರೋಕ್ಷವಾಗಿ ಸಂದಾಯವಾಗಿತ್ತು. ಏಕೆಂದರೆ ಅದು 157 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು. ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಲಾಲು ಪ್ರಸಾದ್ ಅವರ ಆರ್ಜೆಡಿ ಮತ್ತು ಕಾಂಗ್ರೆಸ್‌ ಜತೆಯಾಗಿ ಹೋರಾಡಿದ್ದವು. ಜೆಡಿಯು 71 ಮತ್ತು ಆರ್‌ಜೆಡಿ 80 ಸ್ಥಾನಗಳನ್ನು ಗೆದ್ದಿತ್ತು. ಜೆಡಿಯು ಶೇ. 16.8 ಮತ ಗಳಿಸಿದರೆ, ಆರ್‌ಜೆಡಿಯ ಶೇ. 18. 4 ಗಳಿಸಿತ್ತು. ಅದೇ ಮೈತ್ರಿಕೂಟದಲ್ಲಿ ಕಾಂಗ್ರೆಸ್ 41 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 27 ಸ್ಥಾನಗಳನ್ನು ಗೆದ್ದಿತ್ತು.

Advertisement

ಇಲ್ಲಿ ಬಿಜೆಪಿ ಸೋತಾಗ ನಿತೀಶ್ ಕುಮಾರ್‌ ಅವರ ಅನಿವಾರ್ಯತೆಯ ಅರಿವಾಗಿದೆ. ನಿತೀಶ್‌ ಅವರ ಜೆಡಿಯು, ಲಾಲೂ ಅವರ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಅನ್ನು ಮಣಿಸಲು ಬಿಜೆಪಿ ಭಾರೀ ಚುನಾವಣಾ ಪ್ರಚಾರ ಸಭೆಗಳನ್ನು ಮಾಡಿದ್ದರೂ ಸೋಲೊಪ್ಪಿಕೊಳ್ಳಬೇಕಾಯಿತು. ಎಲ್‌ಜೆಪಿ 41ರಲ್ಲಿ ಕೇವಲ ಎರಡು ಸ್ಥಾನಗಳನ್ನು ಗೆಲ್ಲಲಷ್ಟೇ ಶಕ್ತವಾಯಿತು.ಇದಕ್ಕೆ ನಿತೀಶ್‌ ಕುಮಾರ್‌ ಎನ್‌ಡಿಎ ಸೇರದೇ ಇದ್ದಿದ್ದು ಕಾರಣ ಎಂದು ವಿಶ್ಲೇಷಿಸಲಾಗಿತ್ತು.

2013ರಲ್ಲಿ ನಿತೀಶ್ ಕುಮಾರ್ ಎನ್‌ಡಿಎಯಿಂದ ಬೇರ್ಪಟ್ಟು 2014ರಲ್ಲಿ ಎಡ ಪಕ್ಷಗಳೊಂದಿಗೆ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ, 40 ಲೋಕಸಭಾ ಸ್ಥಾನಗಳಲ್ಲಿ ಎರಡು ಮಾತ್ರ ಗೆದ್ದಿದ್ದವು. ಆದರೆ ಬಿಜೆಪಿ, ಎಲ್‌ಜೆಪಿ ಮತ್ತು ಆರ್‌ಎಲ್‌ಎಸ್‌ಪಿ 31 ಸ್ಥಾನಗಳನ್ನು ಗೆದ್ದಿದ್ದವು.

2010ರಲ್ಲಿ ಜೆಡಿಯು-ಬಿಜೆಪಿ ಪ್ರದರ್ಶನ
ಜೆಡಿಯು-ಬಿಜೆಪಿ ಒಟ್ಟಾಗಿ ಚುನಾವಣೆ ಎದುರಿಸಿದಾಗ ಇಬ್ಬರ ಸಾಧನೆ ಉತ್ತಮವಾಗಿದೆ. ಉದಾಹರಣೆಗೆ 2010ರಲ್ಲಿ ಜೆಡಿಯು 141 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅದರಲ್ಲಿ 115 ಸ್ಥಾನಗಳನ್ನು ಗೆದ್ದಿದೆ. ಜೆಡಿಯು ಶೇ. 22.58 ಮತಗಳನ್ನು ಪಡೆದಿತ್ತು. ಅದೇ ಸಮಯದಲ್ಲಿ, 2010ರ ಚುನಾವಣೆಯಲ್ಲಿ ಬಿಜೆಪಿ 102 ಅಭ್ಯರ್ಥಿಗಳನ್ನು ಕಣಕ್ಕಿಳಿಸಿ 91 ಸ್ಥಾನಗಳನ್ನು ಗೆದ್ದುಕೊಂಡಿತು. ಬಿಜೆಪಿಯ ಮತ ಶೇ.16.49 ಆಗಿತ್ತು.

ಈ ಚುನಾವಣೆಯಲ್ಲಿ ಲಾಲು ಯಾದವ್ ಅವರೊಂದಿಗೆ ಎಲ್‌ಜೆಪಿ ಇತ್ತು. ಎಲ್‌ಜೆಪಿ 75 ಸ್ಥಾನಗಳಿಗೆ ಸ್ಪರ್ಧಿಸಿದರೂ ಕೇವಲ 3 ಅಭ್ಯರ್ಥಿಗಳು ಮಾತ್ರ ಶಾಸಕರಾಗಲು ಸಾಧ್ಯವಾಯಿತು. ಎಲ್‌ಜೆಪಿಯು ಶೇ. 6.74ರಷ್ಟು ಮತ ಪ್ರಮಾಣ ಗಳಿಸಿತ್ತು. 168 ಸ್ಥಾನಗಳಲ್ಲಿ ಸ್ಪರ್ಧಿಸಿದ್‌ ಆರ್‌ಜೆಡಿ 22 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಯಿತು. ಆರ್‌ಜೆಡಿಯು ಶೇ. 18.84 ಮತಗಳನ್ನು ಗಳಿಸಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next